ಬೆಂಗಳೂರು: ಆರ್‌ಎಸ್‌ಎಸ್ ಸಮನ್ವಯ ಸಭೆಯಲ್ಲಿ ಭಿನ್ನಮತ ಸ್ಫೋಟಗೊಂಡ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದಿಲ್ಲಿಗೆ ಪ್ರಯಾಣ ಬೆಳೆಸಿದ್ದು, ಈ ಬೆಳವಣಿಗೆ ಯಡಿಯೂರಪ್ಪ ಬಣದಲ್ಲಿ ಆಕ್ರೋಶ ಮಡುಗಟ್ಟುವುದಕ್ಕೆ ಕಾರಣವಾಗಿದೆ.
ವಿಜಯೇಂದ್ರ ಅವರ ಹಠಾತ್ ದಿಲ್ಲಿ ಭೇಟಿಯ ಉದ್ದೇಶ ಏನೆಂಬುದು ಇನ್ನೂ ದೃಢಪಟ್ಟಿಲ್ಲ. ದಿಲ್ಲಿಯಿಂದ ವಾಪಸಾಗುವುದಕ್ಕೆ ಮುನ್ನ ಅವರು ಅಮಿತ್ ಶಾ ಭೇಟಿಗೆ ಪ್ರಯತ್ನ ನಡೆಸುವರು ಎಂದು ಹೇಳಲಾಗುತ್ತಿದೆ. ವಿಜಯೇಂದ್ರ ವಿರೋಧಿ ಬಣದ ಪ್ರಸ್ತಾವ ಆಧರಿಸಿ ಬಿಜೆಪಿ ಹೈಕಮಾಂಡ್ ವಾಲ್ಮೀಕಿ ಪಾದಯಾತ್ರೆಗೂ ಅನುಮತಿ ನೀಡಿದೆ.
ಜತೆಗೆ ಆರ್‌ಎಸ್‌ಎಸ್ ನಾಯಕರ ಸಮ್ಮುಖದಲ್ಲೇ ಅತೃಪ್ತರು ದೊಡ್ಡ ಧ್ವನಿ ಎತ್ತಿರುವುದು ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರಿಗೆ ಆದ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಪಕ್ಷವನ್ನು ಕಟ್ಟಿ ನಿಲ್ಲಿಸಿದ ಮಾಸ್ ಲೀಡರ್ ವಿರುದ್ಧ ಮಾತನಾಡುವ ಜತೆಗೆ ಯಡಿಯೂರಪ್ಪನವರನ್ನು ಪಕ್ಷದ ವೇದಿಕೆಗೆ ಕರೆದರೆ ಅವಮಾನವಾಗುತ್ತದೆ ಎಂದು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಸಭೆಯಲ್ಲಿ ಹೇಳಿರುವುದು ಅವರ ಆಪ್ತರಲ್ಲಿ ತೀವ್ರ ಬೇಸರ ಸೃಷ್ಟಿಸಿದೆ.
ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಸಭೆ ನಡೆಸಿ ಇದಕ್ಕೆ ಸೂಕ್ತ ತಿರುಗೇಟು ನೀಡಬೇಕೆಂಬ ಪ್ರಸ್ತಾಪ ವ್ಯಕ್ತವಾಗಿದೆಯಾದರೂ ಸದ್ಯಕ್ಕೆ ಇಂಥ ಯಾವುದೇ ಪ್ರಯತ್ನ ಬೇಡ ಎಂದು ಸೂಚನೆ ನೀಡಲಾಗಿದೆ.
ಸುಮಾರು ನಾಲ್ಕೂವರೆ ಗಂಟೆಗಳ ಕಾಲ ನಡೆದ ಈ ಸಭೆಯ ಬಳಿಕ ಸಂಸದ ಜಗದೀಶ್ ಶೆಟ್ಟರ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು ಎಂದು ಹೇಳಲಾಗುತ್ತಿದೆ. ಸಭೆಯಲ್ಲಿ ಒಂದೂ ಮಾತನಾಡದ ಶೆಟ್ಟರ್, ಬಳಿಕ ಯಡಿಯೂರಪ್ಪ ಭೇಟಿ ಮಾಡಿರುವುದು ಕೂಡ ಚರ್ಚೆಗೆ ಕಾರಣವಾಗಿದೆ.
ಈ ಮಧ್ಯೆ ಅರವಿಂದ ಲಿಂಬಾವಳಿ ನೇತೃತ್ವದ ನಿಯೋಗದಲ್ಲಿ ಯಡಿಯೂರಪ್ಪ ಬಣದ ಸದಸ್ಯರಾಗಲಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಸಂಘಟನಾತ್ಮಕ ಜವಾಬ್ದಾರಿ ಇರುವವರಾಗಲಿ ಇರಲಿಲ್ಲ. ಸಂಘದ ಸಭೆಯ ಬಳಿಕವೂ ಸಮನ್ವಯ ಕಾಣಿಸಿಕೊಂಡಿಲ್ಲ.