Advertisement

ಕೇಳಿದ್ದನ್ನು ಕರುಣಿಸೋ ಕಾಮಧೇನು ವಶಕ್ಕೆ ವಿಶ್ವಾಮಿತ್ರನ ತಂತ್ರ ಏನು?

08:09 AM Mar 19, 2019 | |

ಹಿಂದೆ ಕುಶಾನಭಾ ನೆಂಬ ರಾಜನಿಗೆ ಗಾದಿ ಎಂಬ ವಿಖ್ಯಾತ ಪುತ್ರನಿದ್ದನು, ಅವನ ಮಹಾತೇಜಸ್ವಿ ಪುತ್ರನೇ ಕೌಶಿಕ. ಈ ಕೌಶಿಕನು ಒಬ್ಬ ಧರ್ಮಾತ್ಮನಾದ ರಾಜನಾಗಿದ್ದನು. ಇವನು ವಿಶ್ವವನ್ನು ಶತ್ರುಗಳಿಂದ ಪರಾಜಯಗೊಳಿಸಿ ಬಹಳ ಸ್ನೇಹದಿಂದ ದೀರ್ಘಕಾಲದವರೆಗೆ ರಾಜ್ಯವಾಳಿದ್ದನು. ಆದ್ದರಿಂದ ಇವನಿಗೆ ವಿಶ್ವಾಮಿತ್ರನೆಂದು ಹೆಸರಾಯಿತು. ಇವರು ಧರ್ಮಜ್ಞರೂ, ವಿದ್ವಾಂಸರೂ ಆಗಿದ್ದು ಜೊತೆಗೆ ಪ್ರಜೆಯ ಹಿತಾಸಕ್ತಿಯಲ್ಲಿ ತತ್ಪರರಾಗಿ ಅನೇಕ ಸಾವಿರ ವರ್ಷಗಳು ಈ ಪೃಥ್ವಿಯನ್ನು ಪಾಲಿಸುತ್ತಾ ರಾಜ್ಯವಾಳಿದರು .

Advertisement

           ಒಮ್ಮೆ ಮಹಾತೇಜಸ್ವಿ ವಿಶ್ವಾಮಿತ್ರರು ಒಂದು ಅಕ್ಷೌಹಿಣಿ ಸೈನ್ಯದೊಂದಿಗೆ ಅನೇಕ ನಗರ, ರಾಷ್ಟ್ರಗಳನ್ನು ದೊಡ್ಡ ದೊಡ್ಡ ಪರ್ವತ  ಮತ್ತು ಆಶ್ರಮಗಳನ್ನು  ಭೇಟಿ ನೀಡುತ್ತಾ ಮಹರ್ಷಿ ವಸಿಷ್ಠರ  ಆಶ್ರಮಕ್ಕೆ ಬಂದು ತಲುಪಿದರು. ಆ ಆಶ್ರಮವು ನಾನಾ ವಿಧದ ಫಲ-ಪುಷ್ಪಗಳಿಂದ, ಪಶು-ಪಕ್ಷಿಗಳಿಂದ ಶೋಭಿಸುತ್ತಿತ್ತು .   ತಪಸ್ಸಿನಿಂದ ಸಿದ್ಧರಾದ ಯಜ್ಞೇಶ್ವರನಂತೆ ತೇಜಸ್ವೀ ಮಹಾತ್ಮರು, ಬ್ರಹ್ಮನಿಗೆ ಸಮಾನರಾದ ಮಹಾತ್ಮರು ಸದಾಕಾಲ ಆಶ್ರಮದಲ್ಲಿ ನೆರೆದು ಜಪ-ಹೋಮಗಳಲ್ಲಿ ತೊಡಗುತ್ತಿದ್ದರು ಹಾಗಾಗಿ ಆಶ್ರಮದ ಶೋಭೆಯು ಹೆಚ್ಚಾಗಿತ್ತು .ಇದರಿಂದಾಗಿ ವಸಿಷ್ಠರ ಆಶ್ರಮವು ಮತ್ತೊಂದು ಬ್ರಹ್ಮಲೋಕದಂತಾಗಿತ್ತು. 

       ವಿಶ್ವಾಮಿತ್ರರು ಆಶ್ರಮವನ್ನು ಪ್ರವೇಶಿಸಲು , ಅಲ್ಲೇ ಸೂರ್ಯ ಪ್ರಕಾಶದಂತೆ ಹೊಳೆಯುತ್ತ ಜಪ ಮಾಡುವುದರಲ್ಲಿ ನಿರತರಾಗಿದ್ದ ಮಹರ್ಷಿ ವಸಿಷ್ಠರ ದರ್ಶನ ಪಡೆದು ಅವರ ಚಾರಗಳಲ್ಲಿ ತಲೆಯಿಟ್ಟು ನಮಸ್ಕರಿಸಿದನು.  ವಸಿಷ್ಠರು ವಿಶ್ವಾಮಿತ್ರರನ್ನು ಸ್ವಾಗತಿಸಿ ಆದರಾತಿಥ್ಯ ಮಾಡಿ, ಪರಸ್ಪರ ಕ್ಷೇಮ-ಕುಶಲೋಪರಿಯನ್ನು ವಿಚಾರಿಸಿದರು.  ಅನಂತರ ಆವರಿಬ್ಬರು ಬಹಳ ಹೊತ್ತು ಪರಸ್ಪರ ಮಾತಾಡುತ್ತಾ ಇದ್ದರು. ಮಧ್ಯಾಹ್ನದ ಸಮಯವಾದ್ದರಿಂದ ವಸಿಷ್ಠರು ರಾಜನಲ್ಲಿ ಭೋಜನವನ್ನು ಸ್ವೀಕರಿಸುವಂತೆ ವಿನಂತಿಸಿದರು. ಆದರೆ ವಿಶ್ವಾಮಿತ್ರರು ಒಬ್ಬರೇ ಅಲ್ಲಿಗೆ ಬಂದಿರಲಿಲ್ಲ ಸಾವಿರ ಅಕ್ಷೌಹಿಣಿ ಸೈನ್ಯದೊಂದಿಗೆ ಅಲ್ಲಿಗೆ ಬಂದಿದ್ದರು.  ಅಷ್ಟು ಜನರನ್ನು ಸತ್ಕರಿಸಲು ಋಷಿಮುನಿಗಳಲ್ಲಿ ಸಾಧ್ಯವಿಲ್ಲ ಎಂದು ಯೋಚಿಸಿ ಬುದ್ದಿವಂತಿಕೆಯಿಂದ ವಿಶ್ವಾಮಿತ್ರರು ” ಪೂಜ್ಯರೇ! ಈಗಾಗಲೇ ನಮ್ಮನ್ನು  ನೀವು ಆದರದಿಂದ ಸತ್ಕರಿಸಿದ್ದೀರಿ. ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮ ದರ್ಶನವಾಯಿತು ಇದರಿಂದಲೇ ನಾನು ಸಂತೃಪ್ತನಾಗಿದ್ದೇನೆ. ನಿಮ್ಮ ಸತ್ಕಾರಪೂರ್ಣ ವಚನಗಳಿಂದ ನನ್ನ ಹೃದಯವು ತುಂಬಿ ಹೋಗಿದೆ. ನೀವು ಸರ್ವಥಾ ನನಗೆ ಪೂಜನೀಯರಾಗಿದ್ದೀರಿ. ಹೀಗಿದ್ದರೂ ನೀವು ನನ್ನನ್ನು ಪೂಜಿಸಿದ್ದೀರಿ . ನಿಮಗೆ ವಂದನೆಗಳು ; ಈಗ ನಾನು ಇಲ್ಲಿಂದ ಹೋರಾಡುವೆನು ನನಗೆ ಅಪ್ಪಣೆ ನೀಡಿ” ಎಂದು ವಿನಂತಿಸಿಕೊಂಡನು.

      ಧರ್ಮಾತ್ಮಾರಾದ ವಸಿಷ್ಠರು “ಶತ್ರುದಮನನೇ ! ನಿನ್ನ ಪ್ರಭಾವ ಅಸೀಮವಾಗಿದ್ದು. ನಾನು ನಿನ್ನ ಮತ್ತು ಸೈನದ ಯಥಾಯೋಗ್ಯ ಆತಿಥ್ಯ ಸತ್ಕಾರ ಮಾಡಲು ಇಚ್ಛಿಸಿರುವೆನು. ನೀನು ನನ್ನ ವಿನಂತಿಯನ್ನು ಸ್ವೀಕರಿಸು. ರಾಜನು ಅತಿಥಿಗಳಲ್ಲಿ ಶ್ರೇಷ್ಠನಾಗಿರುವನು. ಅದಕ್ಕಾಗಿ ಪ್ರಯತ್ನಪೂರ್ವಕ ನಿನ್ನನ್ನು ಸತ್ಕರಿಸುವುದು ನನ್ನ ಕರ್ತವ್ಯವಾಗಿದೆ. ಆದ್ದರಿಂದ ನಾನು ಮಾಡುವ ಸತ್ಕಾರವನ್ನು ಸ್ವೀಕರಿಸಬೇಕು” ಎಂದು ಪದೇ ಪದೇ ಒತ್ತಾಯಪಡಿಸಿದರು. ಗಾದಿನಂದನ ವಿಶ್ವಾಮಿತ್ರರು ಬೇರೆ ಉಪಾಯವಿಲ್ಲದೆ ವಸಿಷ್ಠರ ಮಾತಿಗೆ ಸಮ್ಮತಿಸಿದರು.

Advertisement

      ರಾಜನು ಒಪ್ಪಿದಕೂಡಲೇ ವಸಿಷ್ಠರಿಗೆ ಬಹಳ ಸಂತಸವಾಯಿತು. ಅವರು ಪಾಪ ರಹಿತಳಾಗಿದ್ದ ವಿಚಿತ್ರವರ್ಣದಿಂದ ಕೂಡಿದ್ದ ತಮ್ಮ ಹೋಮಧೇನುವಾದ (ಕಾಮಧೇನು) ಶಬಲೆಯನ್ನು ಆದರದಿಂದ ಕರೆದು ಪೂಜಿಸಿ ವಿನಯ ಪೂರ್ವಕವಾಗಿ ಕಾಮಧೇನುವಿನಲ್ಲಿ “ಶಬಲೆಯೇ ! ಇಂದು ನಾನು ಸೈನ್ಯ ಸಹಿತ ಈ ಮಹಾರಾಜನನ್ನು ಯೋಗ್ಯವಾದ ಉತ್ತಮ ಭೋಜನಾದಿಗಳಿಂದ ಸತ್ಕರಿಸಲು ನಿಶ್ಚಯಿಸಿರುವೆನು. ನೀನು ನನ್ನ ಮನೋರಥವನ್ನು ಸಫಲಗೊಳಿಸು. ಷಡ್ರಸ ಭೋಜನದಲ್ಲಿ ಯಾರಿಗೆ ಯಾವುದು ಪ್ರಿಯವೂ, ಅವರಿಗೆ ಅದೆಲ್ಲವನ್ನು ಪ್ರಸ್ತುತಪಡಿಸು. ಈ ಅಥಿತಿಗಳಿಗೆ ಬೇಕಾದ ವಸ್ತುಗಳನ್ನು ಮಳೆಗರೆ. ಭೋಜನಕ್ಕೆ ಬೇಕಾದ ಅವಶ್ಯ ವಸ್ತುಗಳನ್ನು ಬೇಗನೆ ಸೃಷ್ಟಿಮಾಡು, ವಿಳಂಬಿಸಬೇಡ” ಎಂದು ವಿಜ್ಞಾಪಿಸಿದರು.

       ಮಹರ್ಷಿ ವಸಿಷ್ಠರು ಹೀಗೆ ಹೇಳಿದಾಗ ಆ ಶಬಲೆಯಿಂದ (ಕಾಮಧೇನು) ಬೇಕಾದಂತ ಎಲ್ಲ ಭಕ್ಷಭೋಜ್ಯಗಳು  , ಭೋಜನ ಮಾಡಲು ಸಾವಿರಾರು ಬೆಳ್ಳಿಯ ತಟ್ಟೆ-ಲೋಟಗಳು ಕ್ಷಣಮಾತ್ರದಲ್ಲಿ ಅಣಿಗೊಂಡವು. ಇದರಿಂದ ವಸಿಷ್ಠರು ವಿಶ್ವಾಮಿತ್ರರರೊಡಗೂಡಿ ಅವನ ಎಲ್ಲ ಸೈನ್ಯವನ್ನು ಭೋಜನದಿಂದ ಸಂತೋಷಪಡಿಸಿದರು. ಸಂಚಾರಕ್ಕೆಂದು ಹೊರಟಾಗಿನಿಂದ ಇಂತಹ ಭೋಜನವು ಮಾಡಿರಲಿಲ್ಲ ಅದರಿಂದ ಎಲ್ಲರೂ ಸಂತೃಪ್ತರಾದರು.  ವಿಶ್ವಾಮಿತ್ರರಿಗೆ ಇದನ್ನೆಲ್ಲ ನೋಡಿ ಬಹಳ ಆಶ್ಚರ್ಯವಾಯಿತು ಹಾಗೆ ಆ ಕಾಮಧೇನುವು ತನ್ನ ಬಳಿ ಇದ್ದರೆ ಎಷ್ಟು ಸಂಪತ್ತು ಬೇಕಾದರೂ ಪಡೆಯಬಹುದೆಂಬ ದುರಾಲೋಚನೆಯೂ ಮೂಡಿತು.

      ವಸಿಷ್ಠರಲ್ಲಿಗೆ ಬಂದು “ ಬ್ರಹ್ಮರ್ಷಿಗಳೇ! ತಾವು ಸ್ವತಃ ನನಗೆ ಪೂಜನೀಯರಾಗಿರುವಿರಿ, ಹಾಗಿದ್ದರೂ ನೀವೇ ನನ್ನನ್ನು ಪೂಜಿಸಿದ್ದಿರಿ , ಬಗೆ ಬಗೆಯ ಸ್ವಾಗತ-ಸತ್ಕಾರ ಮಾಡಿರುವಿರಿ ಆದರೂ ನಾನು ಈಗ ನಿಮ್ಮಲ್ಲಿ ಒಂದು ಮಾತನ್ನು ಹೇಳುವೆನು. ನೀವು ನನಗೆ ಈ ವರ್ಣಮಯ ಕಾಮಧೇನುವನ್ನು ನನಗೆ ಕೊಡಬೇಕೆಂದು” ವಿಶ್ವಾಮಿತ್ರರು ಬಹಳ ವಿನಯದಿಂದ ವಿನಂತಿಸಿಕೊಂಡರು”

     ಇದಕ್ಕೆ ವಸಿಷ್ಠರು “ ರಾಜನ್! ಈ ಶಬಲ ಗೋವು ನನ್ನಿಂದ ಬೇರೆಯಾಗಿ ಇರಲಾರಳು, ನನ್ನ ಹವ್ಯ-ಕವ್ಯ ಮತ್ತು ಜೀವನ ನಿರ್ವಹಣೆಗೆ ಈಕೆಯನ್ನೇ ಅವಲಂಬಿಸಿದ್ದು, ನನ್ನ ಅಗ್ನಿಹೋತ್ರಾದಿ ವಿವಿಧ ವಿದ್ಯೆಗಳೂ, ನನ್ನ ಸಂಪೂರ್ಣ ಶಕಿಯೆಲ್ಲವೂ ಈ ಕಾಮಧೇನುವಿನ ಅಧೀನವಾಗಿವೆ. ಈ ಹಸುವೇ ನನ್ನ ಸರ್ವಸ್ವವಾಗಿದೆ. ಆದ್ದರಿಂದ ಈ ಕಾಮಧೇನುವನ್ನು ನಾನು ನಿನಗೆ ಕೊಡಲು ಸಾಧ್ಯವಿಲ್ಲ” ಎಂದು ಹೇಳಿಬಿಟ್ಟರು.

      ವಸಿಷ್ಠರ ಮಾತಿನಿಂದ ಸ್ವಲ್ಪ ಗರ್ವಿತರಾದ ವಿಶ್ವಾಮಿತ್ರರು ಆಮಿಷಯೊಡ್ಡಿಯಾದರು  ಕಾಮಧೇನುವನ್ನು ಪಡೆಯಬೇಕೆಂದು ” ಈ ಕಾಮಧೇನುವಿನ ಬದಲಿಗೆ ಒಂದು ಲಕ್ಷ ಬಂಗಾರದಿಂದ ಅಲಂಕೃತವಾಗಿರುವ ಗೋವುಗಳನ್ನೂ  ನಾನು ನಿಮಗೆ ನೀಡುವೆನು ಅದು ಸಾಲದೆಂದರೆ ಹದಿನಾಲ್ಕು ಸಾವಿರ ಆನೆಗಳನ್ನು ಅದಕ್ಕೆ  ಕೊರಳ ಆಭರಣಾದಿ ಚಿನ್ನದ ಹಗ್ಗ ಅಂಕುಶಗಳನ್ನೂ ಕೊಡುವೆನು ಇಷ್ಟಲ್ಲದೆ ಎಂಟುನೂರು ಸುವರ್ಣಮಯ ರಥಗಳನ್ನು ಕುದುರೆಗಳನ್ನು ಹಾಗೂ ನೀವು ಬಯಸಿದಷ್ಟು ರತ್ನಾಭರಣಗಳನ್ನು ಕೊಡುವೆನು. ಆದರೆ ಈ ಶಬಲ ಗೋವನ್ನು ನನಗೆ ನೀಡಿರಿ” ಎಂದು ಆಜ್ಞಾಪಿಸಿದನು.

     ಇದನ್ನು ಕೇಳಿದ ವಸಿಷ್ಠರು ಸಮಾಧಾನದಿಂದಲೇ ” ರಾಜನೇ ! ನಾನು ಈ ವರ್ಣಮಯ ಗೋವನ್ನು ಯಾವ ಕಾರಣಕ್ಕಾಗಿಯೂ ಯಾರಿಗೂ ಕೊಡಲಾರೆ. ಇದೆ ನನ್ನ ರತ್ನವಾಗಿದೆ, ನನ್ನ ಧನವಾಗಿದೆ, ಇದು ನನ್ನ ಜೀವನವಾಗಿದೆ, ಇದರಮೇಲೆ ನನ್ನದೆಲ್ಲ ಕರ್ಮವೂ ಅವಲಂಬಿಸಿದೆ. ಇದು ನನ್ನ ಎಲ್ಲ ಶುಭ ಕರ್ಮಗಳ ಮೂಲವೆ ಆಗಿದೆ. ಇದರ ಬಗ್ಗೆ ಮಾತಾಡುವುದು ವ್ಯರ್ಥವಾಗಿದೆ. ಈ ಕಾಮಧೇನುವನ್ನು ನಾನು ಎಂದಿಗೂ ಕೊಡಲಾರೆ” ಎಂದು ನಿಷ್ಠುರವಾಗಿ  ಹೇಳಿಬಿಟ್ಟರು. 

      ವಿಶ್ವಾಮಿತ್ರರು ಬಹಳ ಕೋಪದಿಂದ ” ಈ ವರ್ಣಮಯ ಗೋವು ಧರ್ಮತಃ ನನ್ನ ಸ್ವತ್ತಾಗಿದೆ ಏಕೆಂದರೆ ಈ ಗೋವು ರತ್ನರೂಪವಾಗಿದೆ. ಹಾಗಾಗಿ ರತ್ನಗಳನ್ನು ಪಡೆಯುವ ಅಧಿಕಾರಿ ರಾಜನಾಗಿರುತ್ತಾನೆ. ವಸಿಷ್ಠರೇ ! ನಾನು ಹೇಳಿದುದರ ಕಡೆಗೆ ಗಮನ ಕೊಟ್ಟು ನನಗೆ ಈ ಕಾಮಧೇನುವನ್ನು ಕೊಟ್ಟುಬಿಡಿ ಇಲ್ಲವಾದರೆ ಇದರ ಪರಿಣಾಮವು ಬಲು ಭೀಕರವಾಗಿರುತ್ತದೆ” ಎಂದು ಎಚ್ಚರಿಸಿದನು.

     ವಸಿಷ್ಠರು ಯಾವುದೇ ರೀತಿಯಲ್ಲೂ ಆ ಕಾಮಧೇನು ಗೋವನ್ನು ಕೊಡಲು ಒಪ್ಪದಿದ್ದಾಗ ವಿಶ್ವಾಮಿತ್ರನು ಆ ವರ್ಣಮಯ ಶಬಲಧೇನುವನ್ನು ಬಲವಂತವಾಗಿ ಸೆಳೆದುಕೊಂಡು ಹೊರಟನು.

ಮುಂದುವರೆಯುವುದು……..

ಪಲ್ಲವಿ

Advertisement

Udayavani is now on Telegram. Click here to join our channel and stay updated with the latest news.

Next