ಹುಣಸೂರು: ಜೆಡಿಎಸ್ ಅಭ್ಯರ್ಥಿ ಎಚ್.ವಿಶ್ವನಾಥ್ ಸುಳ್ಳನ್ನೇ ಸತ್ಯ ಮಾಡುವ ಜಾಯಮಾನದ ವ್ಯಕ್ತಿ, ಹಿಂದೆ ದೇವೇಗೌಡರು-ಕುಮಾರಸ್ವಾಮಿಯನ್ನು ವಾಮಾಗೋಚರ ಬೈದು ಮತ್ತವರ ಪಕ್ಷದ ಅಭ್ಯರ್ಥಿಯಾಗಿದ್ದು, ಸ್ವಾಭಿಮಾನವೆಂಬುದೇ ಇಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜರಿದರು.
ತಾಲೂಕಿನ ಕೊಯಮುತ್ತೂರು ಕಾಲೋನಿಯಲ್ಲಿ ಶಾಸಕ ಮಂಜುನಾಥ್ ಪರ ಚುನಾವಣಾ ಪ್ರಚಾರದ ಸಭೆಯಲ್ಲಿ ಮಾತನಾಡಿದ ಅವರು, ಎಚ್.ವಿಶ್ವನಾಥ್ ಎಂಎಲ್‌ಎ ಆಗಲು ಅರ್ಹರಲ್ಲ, ಈ ಇಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿರುವ ಮಂಜುನಾಥ್‌ರನ್ನು ಗೆಲ್ಲಿಸಿದರೆ, ನನ್ನನ್ನು ಗೆಲ್ಲಿಸಿದಂತೆ, ನಾನು ಸಿಎಂ ಆಗುತ್ತೇನೆ,
ವಿಶ್ವನಾಥ್ ಗೆದ್ದರೆ ಕುಮಾರಸ್ವಾಮಿ ಸಿಎಂ ಆಗಲ್ಲ, ತನಗಿಂತ ರಾಜಕೀಯದಲ್ಲಿ ಜೂನಿಯರ್ ಆದ ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡ್ತೀನಂತಾರೆ, ಇದು ಸಾಧ್ಯವಾ? ಆಪಕ್ಷ ಮೈಸೂರು ಭಾಗಕ್ಕೆ ಮಾತ್ರ ಸೀಮಿತವಾಗಿದೆ. ಈತ ಮಂತ್ರಿ, ಎಂಪಿಯಾಗಿದ್ದಾಗ ಏನೇನೂ ಕೆಲಸ ಮಾಡಲಿಲ್ಲ ಎಂದು ಆಶಿಸಿದರು.
ಚಿಕ್ಕಣ್ಣಗೆ ಟಿಕೆಟ್ ಕೊಡಿಸಿದ್ದು ಇವರೆ: ನಾಯಕ ಜನಾಂಗದ ನಾಯಕರಾಗಿದ್ದ ಚಿಕ್ಕಮಾದು ನಿಧನ ನಂತರ ಅವರ ಮಗ ಅನಿಲ್‌ಚಿಕ್ಕಮಾದುಗೆ ಟಿಕೆಟ್ ಕೊಡಿಸುವ ಬದಲು, ಚಿಕ್ಕಣ್ಣರನ್ನು ದೇವೇಗೌಡರು- ಕುಮಾರಸ್ವಾಮಿ ಬಳಿ ಕರೆದೊಯ್ದು ಟಿಕೆಟ್ ಕೊಡಿಸಿದವರು ಈ ವಿಶ್ವನಾಥ್ ಎಂದ ಸಿದ್ದರಾಮಯ್ಯ, ಟಿಕೆಟ್ ವಂಚಿತ ಅನಿಲ್ ಚಿಕ್ಕಮಾದುನನ್ನು ನಾವು ಕರೆದು ಎಚ್.ಡಿ.ಕೋಟೆಯಲ್ಲಿ ಅಭ್ಯರ್ಥಿ ಮಾಡಿದ್ದೇವೆ.
ತಮ್ಮ ಅಧಿಕಾರವಧಿಯಲ್ಲಿ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದು, ಹಲವಾರು ಭಾಗ್ಯಗಳನ್ನು ಕಲ್ಪಿಸಿದ್ದೇನೆ. ಸಾಲಮನ್ನಾ ಮಾಡಿದ್ದೇವೆ, ಕಾಂಗ್ರೆಸ್ ಸರಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಶಾಸಕ ಮಂಜುನಾಥ್ ಮಾತನಾಡಿ, ತಾಲೂಕಿನ ಕೋಟ್ಯಂತರ ರೂ. ಅನುದಾನದಡಿ ಅಭಿವೃದ್ಧಿ ಪರ್ವ ನಡೆಸಲು ಸಿದ್ದರಾಮಯ್ಯನವರ ಸಹಕಾರದಿಂದ ಸಾಧ್ಯವಾಗಿದೆ.
ವಿಶ್ವನಾಥರು ತಮ್ಮ ಸಾಧನೆಯನ್ನು ಬಿಂಬಿಸದೆ ತಮ್ಮ ವಿರುದ್ಧ ಅಪ ಪ್ರಚಾರ ನಡೆಸುತ್ತಿದ್ದಾರೆಂದು ಟೀಕಿಸಿ ನಾನು ಇಲ್ಲೇ ಹುಟ್ಟಿ ಬೆಳೆದವನು, ಇಲ್ಲಿಯೇ ಮಣ್ಣಾಗುವವನು. ಆದರೆ ಅವರು ಬಾಡಿಗೆ ಮನೆಯಲ್ಲಿದ್ದು, ಅವಧಿ ಮೇ 15ಕ್ಕೆ ಮುಗಿಯಲಿದೆ ಎಂದು ಹೇಳಿ, ತಮಗೆ ಮತ್ತೂಮ್ಮೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ವೀಕ್ಷಕ ರಾಘವನ್, ಚುನಾವಣಾ ಉಸ್ತುವಾರಿ ಡಾ.ತಿಮ್ಮಯ್ಯ, ಜಿಲ್ಲಾಧ್ಯಕ್ಷ ಡಾ.ವಿಜಯಕುಮಾರ್, ಜಿಪಂ ಸದಸ್ಯರಾದ ಪುಷ್ಪ, ಸಾವಿತ್ರಿ, ಮಾಜಿ ಸದಸ್ಯೆ ಶಿವಗಾಮಿ, .ರಾಜಣ್ಣ, ಮಂಜು, ತಾಪಂ ಅಧ್ಯಕ್ಷೆ ಪದ್ಮಮ್ಮ, ಹಂದನಹಳ್ಳಿ ಸೋಮಶೇಖರ್, ಸಾಹುಕಾರ್ ರಾಮಸ್ವಾಮಿ ಮತ್ತಿತರರಿದ್ದರು.