ಭೂಮಿಯ ಮೇಲೆ ಜನ್ಮ ತಾಳಿದ ಪ್ರತಿಯೊಂದು ಜೀವಿಯೂ ಸಹ , ತಾನು ಅಡ್ಡಿ ಆತಂಕ ಗಳಿಲ್ಲದೇ ನೆಮ್ಮದಿಯಿಂದ ಜೀವನ ನಡೆಸ ಬೇಕೆಂದು ಬಯಸುತ್ತದೆ. ಮನುಷ್ಯನ ವರಸೆ ಇಲ್ಲಿಯೂ ಭಿನ್ನ. ಆತ ನೆಮ್ಮದಿಯ ಜೊತೆಜೊತೆಗೇ ಮತ್ತೂಬ್ಬರನ್ನು ಸಂತೋಷಪಡಿಸಲು, ಅವರನ್ನು ಮೆಚ್ಚಿಸಿ ಏನಾದರೂ ಲಾಭ ಪಡೆಯಲು ಯೋಚಿಸುತ್ತಾನೆ. ದಿನಬೆಳಗಾದರೆ ಸಾಕು; ನನ್ನ ಬಗ್ಗೆ ಜನ ಏನೆನ್ನುತ್ತಾರೆ? ಹೆಚ್ಚು ಗೌರವ, ಮರ್ಯಾದೆ, ಶ್ರೀಮಂತಿಕೆಯನ್ನು ಪಡೆಯುವುದು ಹೇಗೆ ಎಂದೆಲ್ಲಾ ಯೋಚಿಸಿ ಯೋಚಿಸಿ ಹಣ್ಣಾಗುತ್ತಾನೆ.
ಅಷ್ಟು ಮಾತ್ರವಲ್ಲ, ಸಣ್ಣದೊಂದು ಸೋಲಿಗೂ ಕಂಗಾಲಾಗುತ್ತಾನೆ. ಒಳ್ಳೆಯ ದಿನಗಳು ವರ್ಷದ ನಂತರ ಬರಬಹುದು. ಅಲ್ಲಿಯವರೆಗೂ ಏನಾಗುವುದೋ ನೋಡೋಣ. ಗೆಲುವಿಗಾಗಿ ಮರಳಿ ಯತ್ನವ ಮಾಡೋಣ ಎಂದು ಯೋಚಿಸುವುದೇ ಇಲ್ಲ.
ಹೌದು. ಒಂದರ ಹಿಂದೊಂದು ಸೋಲು ಜೊತೆಯಾದರೆ, ಅಷ್ಟಕ್ಕೇ ತಮ್ಮ ಬದುಕೇ ಮುಗಿದು ಹೋಯಿತೆಂದು ಭಾವಿಸುವ ಜನರೇ ನಮ್ಮ ಸುತ್ತಲೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇದನ್ನೆಲ್ಲಾ ನೋಡುವಾಗಲೇ ಅಧ್ಯಾಪಕರೊಬ್ಬರು ಹೇಳಿದ್ದ ಮಾತುಗಳು ನೆನಪಾಗುತ್ತವೆ. ಅವರು ಹೇಳಿದ್ದರು: “ಪರೀಕ್ಷೆಯಲ್ಲಿ ಪಾಸ್ ಆದ್ರೆ ಉತ್ತಮ, ಒಂದು ವೇಳೆ ಫೇಲ್ ಆದ್ರೆ ಇನ್ನೂ ಉತ್ತಮ!’
ಇದರ ಅರ್ಥ- ಪಾಸ್ ಆದ್ರೆ ಮುಂದಿನ ತರಗತಿಗಳಿಗೆ ಹೋಗಬಹುದು. ಒಂದು ವೇಳೆ ಫೇಲ್ ಆದ್ರೆ, ಈ ಹಿಂದೆ ನಾವು ಆ ವಿಷಯದಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಂಡು ಮುಂದಿನ ಸಾರಿ ಚೆನ್ನಾಗಿ ಬರೆದು ಪಾಸಾಗಬಹುದು ಎಂದು. ಜೀವನದ ಪ್ರತಿಯೊಂದು ಘಟ್ಟವೂಒಂದರ್ಥದಲ್ಲಿಪರೀಕ್ಷೆಯೇ.ಅದನ್ನು,ಹೇಗೆಬರುತ್ತದೆಯೋ ಹಾಗೆ ಸ್ವೀಕರಿಸಬೇಕು. ಒಬ್ಬ ಹಾಡುಗಾರ ಕೋಗಿಲೆಗೆ ಕೇಳಿದನಂತೆ: ನಿನ್ನ ಮಧುರವಾದ ಧ್ವನಿಗೆ ಮನಸೋತಿದ್ದೇನೆ. ನೀನು ಯಾರಿಗೂ ಕಾಣದಂಥ ಈ ಮರದ ಕೊಂಬೆಗಳ ಮಧ್ಯೆ ಅಡಗಿ ಕುಳಿತು ಹಾಡುವೆಯಲ್ಲ,ಅದರಿಂದ ಉಪಯೋಗವಿದೆಯಾ? ಹೀಗಾದರೆ, ನಿನ್ನ ಧ್ವನಿಯನ್ನು ಯಾರು ಗುರುತಿಸುತ್ತಾರೆ? ಯಾರು ನಿನ್ನನ್ನು ಸನ್ಮಾನಿಸುತ್ತಾರೆ? ಯಾರು ಗೌರವಿಸುತ್ತಾರೆ?’
ಅದಕ್ಕೆ ಕೋಗಿಲೆ ಹೇಳಿತಂತೆ:
ನಾನು ಹಾಡುವುದು ನನ್ನಖುಷಿಗಾಗಿ. ಯಾರನ್ನೋ ಮೆಚ್ಚಿಸಲು ಹಾಡಿದರೆ ನನಗೆ ತೃಪ್ತಿಯಾಗಲಿ, ನೆಮ್ಮದಿಯಾಗಲಿ ಸಿಗುವುದಿಲ್ಲ. ನನಗೊಂದು ಬದುಕನ್ನೂ, ಆಹ್ಲಾದಕರವಾದ ಪ್ರಕೃತಿತಾಣವನ್ನೂ ಕೊಡುಗೆಯಾಗಿ ನೀಡಿದನಲ್ಲ;
ಆ ದೇವರಿಗೆ ಕೃತಜ್ಞತೆ ಅರ್ಪಿಸಲು, ಅವನಿಗೆ ಧನ್ಯವಾದ ಹೇಳಲು ನಾನು ಹಾಡುತ್ತೇನೆ. ಇಲ್ಲೆಲ್ಲೋ ದೇವನಿರಬಹುದು ಎಂಬ ಭಾವನೆಯೇ ನನಗೆ ಧೈರ್ಯ, ನೆಮ್ಮದಿ, ಸಂತೃಪ್ತಿ ಮತ್ತು ಸಾರ್ಥಕತೆಯನ್ನು ಕೊಡುತ್ತದೆ…’ ಕೋಗಿಲೆಯ ರೀತಿಯಲ್ಲಿ ಮನುಷ್ಯನೂ ಯೋಚಿಸಬೇಕಲ್ಲವೇ?
ಎಲ್ ಪಿ. ಕುಲಕರ್ಣಿ, ಬಾದಾಮಿ