Advertisement

ಪ್ರೀತಿಯ ನಿಜವಾದ ಅರ್ಥ ಹುಡುಕಿದಾಗ..

12:23 PM Feb 14, 2023 | Team Udayavani |

ಪ್ರೀತಿ ಎಂಬುದು ಕೇವಲ ಎರಡೇ ಎರಡು ಅಕ್ಷರಗಳ ಪದವಲ್ಲ. ಬದಲಿಗೆ, ಪ್ರೀತಿ ಎಂಬ ಪದವು ಅನೇಕ ಅರ್ಥಗಳಿಂದ ಕೂಡಿದೆ. ಇದು ಅತಿ ಹೆಚ್ಚು ಪ್ರಭಾವಶಾಲಿಯೂ ಕೂಡ ಹೌದು. ಪ್ರೀತಿಯಿಂದ ಇಡೀ ಜಗತ್ತನ್ನೇ ಜಯಿಸಬಹುದು ಅಂತೆ. ಪ್ರೀತಿ ಎನ್ನುವುದು ಕೇವಲ ಮಾನವ ಕುಲಕ್ಕೆ ಮಾತ್ರ ಸೀಮಿತವಾದುದಲ್ಲ. ಸರಿಯಾಗಿ ನಾವು ಅವುಗಳನ್ನು ಗಮನಿಸಿದರೆ, ಅದು ಎಲ್ಲರಲ್ಲೂ ಕಾಣ ಸಿಗುತ್ತದೆ. ಮುಗ್ದ ಮೂಕ ಪ್ರಾಣಿಗಳಿಗೆ ನಾವು ಸಾಸಿವೆಯಷ್ಟು ಪ್ರೀತಿ ತೋರಿದರೆ, ಅವು ನಮಗೆ ಬೆಟ್ಟದಷ್ಟು ಪ್ರೀತಿಸುತ್ತದೆ.

Advertisement

ಹೀಗೆ ಪ್ರೀತಿಗೆ ಎಲ್ಲರನ್ನು-ಎಲ್ಲವನ್ನೂ ಜಯಿಸುವಂತಹ ನಿಗೂಢವಾದ ಶಕ್ತಿಯೂ ಇದೆ. ಹೀಗೆ ಪ್ರತಿಯೊಂದು ಧರ್ಮದಲ್ಲಿಯೂ ಪ್ರೀತಿಯ ಪರಿಕಲ್ಪನೆಗೆ ಅಪಾರವಾದ ಆದ್ಯತೆಯನ್ನು ನೀಡುತ್ತಾರೆ. ನಿಜವಾಗಿಯೂ ಪ್ರೀತಿಯ ಮೂಲಕ್ಕೆ ಇಳಿದು ನೋಡಿದಾಗ, ಅದರ ಅರ್ಥ ಹುಡುಕುತ್ತಾ ಹೋದಾಗ ತಿಳಿಯುವುದೇನೆಂದರೆ, ಈ ಪ್ರೀತಿ ಎಂಬುವುದು ಮನಸ್ಸಿನಿಂದ ಮೂಡಬೇಕೇ ಹೊರತು ಆ ಪ್ರೀತಿ ಒತ್ತಾಯ ಪೂರ್ವಕವಾಗಿರಬಾರದು.

ಆದರೆ ಇಂದು, ಇಂದಿನ ಯುವ ಜನತೆಯಲ್ಲಿ ಪ್ರೀತಿ ಎಂಬ ವಿಷಯಕ್ಕೆ ಅರ್ಥವಿಲ್ಲದಂತಾಗಿದೆ. ಅಷ್ಟೇ ಅಲ್ಲ ಇನ್ನೂ ಕೆಲವರನ್ನು ನೋಡಿದಾಗ ಪ್ರೀತಿ ಎಂಬುದು ಮರೆಯಾಗಿದೆ ಎನಿಸುತ್ತದೆ. ಅದಕ್ಕೆ ಕಾರಣ ಕೆಲಸದ ಒತ್ತಡವಿದ್ದಿರಬಹುದು. ಕುಟುಂಬದ ನಾನಾ ಕಾರಣಗಳಿಂದಲೂ ಆಗಿರಬಹುದು. ಇಲ್ಲವೇ ಸಮಾಜದ ಮೇಲ್ನೋಟದಿಂದಲೂ ಆಗಿರಬಹುದು.

ಯುವಕ-ಯುವತಿ ಒಬ್ಬಂಟಿಯಾಗಿರಲು ಇಚ್ಛಿಸುತ್ತಾರೆ. ಆದರೆ ಇದರಿಂದ ಅವರಿಗೆ ತಂದೆ-ತಾಯಿಯ, ಗೆಳಯ-ಗೆಳತಿಯ, ಸಂಬಂಧಿಕರ, ಪ್ರೀತಿಯ ಮೌಲ್ಯವನ್ನರಿತಾಗ, ಅದರ ಬಗ್ಗೆ ಯೋಚಿಸುತ್ತಾ ದಿನೇ ದಿನೇ ಒಂದಲ್ಲ ಒಂದು ರೀತಿಯಲ್ಲಿ ಕೊರಗುತ್ತಾರೆ.

ನಮ್ಮ ಯುವ ಜನತೆಯಲ್ಲಿಯೂ ಸಹ, ಪ್ರೀತಿ ಕಣ್ಮರೆಯಾಗಿದೆ. ಪ್ರೀತಿ ಎಂಬುವುದು ನಾನ ಆಯಾಮಗಳನ್ನು ಪಡೆಯುತ್ತಿದೆ. ಪ್ರೀತಿ ಎಂಬ ಅಮೂಲ್ಯ ಪದವನ್ನು ಅರ್ಥೈಸಿಕೊಳ್ಳದೆ, ನಮ್ಮ ಯುವಕ ಯುವತಿಯರು ನಾನಾ ರೀತಿಯಲ್ಲಿ ತಮಗೇ ಅರಿವಿಲ್ಲದಂತೆ ಮೋಸ ಹೋಗುತ್ತಿದ್ದಾರೆ.

Advertisement

ಇಂದಿನ ಟೈಮ್‌-ಪಾಸ್‌ ಯುಗದಲ್ಲಿ ಪ್ರೀತಿಯೂ ಒಂದು ಪಾಲು ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. ಅರಿಷಡ್ವರ್ಗಗಳಲ್ಲಿ ಒಂದಾದ ಕಾಮವೂ ಪ್ರೀತಿಯಲ್ಲ ತಾತ್ಕಲಿಕ ಭಾಗದಂತಾಗಿದೆ.

ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳದೆ ತಮ್ಮ ಅಮೂಲ್ಯವಾದ ಜೀವನವನ್ನು ಸರ್ವನಾಶ ಮಾಡಿಕೊಳ್ಳುತ್ತಿದ್ದಾರೆ. ಪ್ರೀತಿ ಎಂಬುದು ಮಾನವನಿರ್ಮಿತವಾದದಲ್ಲ. ಬದಲಿಗೆ ದೇವರಿಂದಲೇ ನಿರ್ಮಿತವಾದದ್ದು. ನಾವು ಯಾವುದೇ ವ್ಯಕ್ತಿಯನ್ನು ಮನಸ್ಸಾರೆ ಇಷ್ಟಪಟ್ಟು ಪ್ರೀತಿ ಮಾಡುತ್ತಿದ್ದರೇ ಮೊದಲು ಅವರೊಂದಿಗೆ ಅವರು ನಮ್ಮಲ್ಲಿ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಮತ್ತು ನಂಬಿಗಸ್ಥರಾಗಿದ್ದು ಪ್ರಾಮಾಣಿಕರಾಗಿರಬೇಕು. ಅವರನ್ನು ಅರ್ಥೈಸಿಕೊಳ್ಳಬೇಕು, ಅವರೊಂದಿಗೆ ಬೆರೆಯುತ್ತಾ ತಮ್ಮ ಸಮಯದಲ್ಲಿ ಒಂದಿಷ್ಟು ಸಮಯವನ್ನಾದರೂ ಅವರಿಗೆಂದೇ ಮೀಸಲಿಡಬೇಕು.

ಹಾಗೆಯೇ ಯಾವಾಗ ಅವರೊಂದಿಗೆ ತಮ್ಮ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುತ್ತೇವೆ ಅದೇ ನಿಷ್ಕಲ್ಮಶ ಪ್ರೀತಿ. ಈ ಕಾರಣದಿಂದಲೇ ಪ್ರೀತಿಯನ್ನು ದೇವರ ಸ್ವರೂಪ ಎಂದು ಹೇಳುತ್ತಾರೆ. ನಾವು ಯಾವಾಗ ಪ್ರೀತಿಯನ್ನು ನಮ್ಮ ಜೀವನದಲ್ಲಿ ಒಳ್ಳೆಯ ರೀತಿಯಲ್ಲಿ ಅಳವಡಿಸಿಕೊಳ್ಳುತ್ತೇವೆಯೋ ಆವಾಗ ಸ್ವತಃ ದೇವರೇ ನಮ್ಮೊಳಗೆ ಬಂದು, ನಮ್ಮೊಳಗಿನ ಪ್ರೀತಿಯು ಅಮರವಾಗುತ್ತದೆ.

ಸಂಜಯ್ ಸಿರಿಲ್ ಐ

ಸಂತ ಅಲೋಶಿಯಸ್‌ ಕಾಲೇಜು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next