Advertisement

ಆಯುಕ್ತರ ಬಳಿ ಅಂಥ “ರಹಸ್ಯ’ಏನಿದೆ?

12:30 AM Feb 05, 2019 | Team Udayavani |

ಹೊಸದಿಲ್ಲಿ: “ಕೋಲ್ಕತಾ ಪೊಲೀಸ್‌ ಆಯುಕ್ತ ರಾಜೀವ್‌ ಕುಮಾರ್‌ ಬಳಿ ಇರುವಂತಹ ಯಾವ “ರಹಸ್ಯಗಳು’, ಅವರನ್ನು ರಕ್ಷಿಸಲೇಬೇಕಾದ ಅನಿವಾರ್ಯತೆಗೆ ಮಮತಾ ಬ್ಯಾನರ್ಜಿ ಅವರನ್ನು ತಳ್ಳಿದೆ?’  ಇಂತಹುದೊಂದು ಖಡಕ್‌ ಪ್ರಶ್ನೆಯನ್ನು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮುಂದಿಟ್ಟಿರುವುದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌. ಸಿಬಿಐ ವರ್ಸಸ್‌ ಮಮತಾ ಬ್ಯಾನರ್ಜಿ ಜಗಳವು ತಾರಕಕ್ಕೇರಿ, ಪೊಲೀಸ್‌ ಆಯುಕ್ತರ ಪರವಾಗಿ ಮಮತಾ ಧರಣಿ ಕುಳಿತ ಬೆಳವಣಿಗೆಗೆ ಸಂಬಂಧಿಸಿ ಸೋಮವಾರ ಆಕ್ರೋಶಭರಿತರಾಗಿ ಮಾತನಾಡಿದ ಸಚಿವ ಪ್ರಸಾದ್‌, ದೀದಿ ವಿರುದ್ಧ ಕೆಂಡಕಾರಿದ್ದಾರೆ.

Advertisement

ಪೊಲೀಸ್‌ ಆಯುಕ್ತರನ್ನು ಸಿಬಿಐ ವಿಚಾರಣೆ ನಡೆಸುವುದು ಒಕ್ಕೂಟ ವ್ಯವಸ್ಥೆ ಮೇಲಿನ ದಾಳಿ ಎಂಬ ವಿಪಕ್ಷಗಳ ಆರೋಪವನ್ನು ತಳ್ಳಿಹಾಕಿದ ಪ್ರಸಾದ್‌, ಭ್ರಷ್ಟರನ್ನು ರಕ್ಷಿಸಲು ಇಂಥ ಹೇಳಿಕೆಗಳನ್ನು ಗುರಾಣಿಯಾಗಿ ಬಳಸಿಕೊಳ್ಳುವುದು ಬೇಡ. ವಿಪಕ್ಷಗಳೆಲ್ಲವೂ ಭ್ರಷ್ಟರ ಕೂಟ. ಬಿಹಾರದಿಂದ ಉತ್ತರ ಪ್ರದೇಶದವರೆಗೆ, ರಾಹುಲ್‌ ಗಾಂಧಿಯನ್ನೂ ಒಳಗೊಂಡಂತೆ ಅದರಲ್ಲಿರುವ “ಸೈನಿಕ’ರೆಲ್ಲರೂ ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸುತ್ತಿರುವವರೆ. ತೃಣಮೂಲ ಕಾಂಗ್ರೆಸ್‌ನ ಹಲವು ನಾಯಕರ ಬಂಧನವಾದಾಗ ಸುಮ್ಮನಿದ್ದ ಮಮತಾ, ಪೊಲೀಸ್‌ ಅಧಿಕಾರಿಯ ಬೆಂಬಲಕ್ಕೆ ನಿಂತು ಧರಣಿ ಆರಂಭಿಸಿದ್ದಾರೆ. ಇದನ್ನು ನೋಡಿದರೆ, ಆ ಅಧಿಕಾರಿಯ ಬಳಿ ಬಹಳಷ್ಟು ರಹಸ್ಯ ಮಾಹಿತಿಗಳಿವೆ ಎಂಬುದು ಸ್ಪಷ್ಟವಾಗುತ್ತದೆ ಎಂದಿದ್ದಾರೆ. ಇದೇ ವೇಳೆ, ಧರಣಿ ಸ್ಥಳಕ್ಕೆ ಆಯುಕ್ತ ರಾಜೀವ್‌ ಕುಮಾರ್‌ ಆಗಮಿಸಿರುವುದು ಪೊಲೀಸ್‌ ಅಧಿಕಾರಿಗಳ ವರ್ತನೆಗೆ ಸಂಬಂಧಿಸಿದ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದೂ ಸಚಿವ ಪ್ರಸಾದ್‌ ಆರೋಪಿಸಿದ್ದಾರೆ.

ಜಾಬ್ಡೇಕರ್‌ ಕಿಡಿ: ಸಚಿವ ರವಿಶಂಕರ್‌ ಪ್ರಸಾದ್‌ ಮಾತ್ರವಲ್ಲದೆ, ಕೇಂದ್ರ ಸಚಿವ ಪ್ರಕಾಶ್‌ ಜಾಬ್ಡೇಕರ್‌, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸಹಿತ ಬಿಜೆಪಿಯ ಅನೇಕ ನಾಯಕರು ಮಮತಾ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಬಂಗಾಲದಲ್ಲಿ ಇರುವುದು ನರೇಂದ್ರ ಮೋದಿ ಅವರ ತುರ್ತು ಪರಿಸ್ಥಿತಿಯಲ್ಲ, ಮಮತಾ ಅವರ ತುರ್ತು ಪರಿಸ್ಥಿತಿ. ಅವರು ಧರಣಿ ಕುಳಿತಿರುವುದು ಸಿಬಿಐಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಕ್ಕೇ ಹೊರತು ಬೇರಾವ ಕಾರಣಕ್ಕೂ ಅಲ್ಲ ಎಂದು ಜಾಬ್ಡೇಕರ್‌ ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದೂ ನಿಜ, ಮಮತಾ ಅವರ ನಡೆ ಪ್ರಜಾಪ್ರಭುತ್ವ ವಿರೋಧಿ ಎಂಬುವುದೂ ನಿಜ. ಒಟ್ಟಿನಲ್ಲಿ ಬಿಜೆಪಿ ಮತ್ತು ಟಿಎಂಸಿ ಚಿಟ್‌ ಫ‌ಂಡ್‌ ಪ್ರಕರಣವನ್ನೇ ನಾಶ ಮಾಡಲು ಹೊರಟಿವೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಆರೋಪಿಸಿದ್ದಾರೆ.

ಸದನದಲ್ಲೂ ಕೋಲಾಹಲ: ಕಲಾಪ ಮುಂದೂಡಿಕೆ
ಸಿಬಿಐ-ದೀದಿ ಜಗಳ್‌ಬಂದಿಯು ಸೋಮವಾರ ಸಂಸತ್‌ನ ಎರಡೂ ಸದನಗಳಲ್ಲೂ ಪ್ರತಿಧ್ವನಿಸಿದೆ. ಕೇಂದ್ರ ಸರಕಾರವು ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಟಿಎಂಸಿ ಹಾಗೂ ಇತರೆ ವಿಪಕ್ಷಗಳು ತೀವ್ರ ಗದ್ದಲ ಎಬ್ಬಿಸಿವೆ. ಇದೇ ವಿಚಾರಕ್ಕೆ ಸಂಬಂಧಿಸಿ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಕೋಲಾಹಲವೇ ಉಂಟಾಗಿದೆ. ಕೊನೆಗೆ, ಪಶ್ಚಿಮ ಬಂಗಾಲದಲ್ಲಿನ ಬೆಳವಣಿಗೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ಇದು ದೇಶದ ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಸತ್ತೆಯ ಆಶಯಕ್ಕೆ ಅತ್ಯಂತ ಅಪಾಯಕಾರಿ. ಈ ಪ್ರಕರಣವು ಸಾಂವಿಧಾನಿಕ ಬಿಕ್ಕಟ್ಟಿನತ್ತ ಹೊರಳುತ್ತಿದ್ದು, ಸಂವಿಧಾನದ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರ ಕೇಂದ್ರ ಸರಕಾರಕ್ಕಿದೆ ಎಂದು ಎಚ್ಚರಿಕೆ ನೀಡಿದರೂ ವಿಪಕ್ಷಗಳು ಸುಮ್ಮನಾಗಲಿಲ್ಲ. “ಸಿಬಿಐ ತೋತಾ ಹೈ, ಚೌಕಿದಾರ್‌ ಚೋರ್‌ ಹೆ’ (ಸಿಬಿಐ ಪಂಜರದ ಗಿಣಿಯಾಗಿದೆ, ಕಾವಲುಗಾರ ಕಳ್ಳನಾಗಿದ್ದಾನೆ) ಎಂದು ಒಂದೇ ಸಮನೆ ಘೋಷಣೆ ಕೂಗಿದ್ದರಿಂದ, ಕಲಾಪ ನಡೆಸಲು ಸಾಧ್ಯವಾಗದೇ ಎರಡೂ ಸದನಗಳ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಬೇಕಾಯಿತು. ಇದಕ್ಕೂ ಮುನ್ನ ಮಾತನಾಡಿದ ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ, “ಸರಕಾರವು ಸಿಬಿಐ ಅನ್ನು ವಿಪಕ್ಷಗಳನ್ನು ಎದುರಿಸುವ ಅಸ್ತ್ರವನ್ನಾಗಿಸಿಕೊಂಡಿದೆ. ಸಿಬಿಐ ಅನ್ನು ಕೇವಲ ಪ.ಬಂಗಾಲದಲ್ಲಿ ಮಾತ್ರವಲ್ಲ, ಕರ್ನಾಟಕ, ಉತ್ತರಪ್ರದೇಶ, ತಮಿಳುನಾಡಿನಲ್ಲೂ ದುರ್ಬಳಕೆ ಮಾಡಿಕೊಳ್ಳಲಾಗಿದೆ’ ಎಂದು ಆರೋಪಿಸಿದ್ದರು.

Advertisement

ಪಟೇಲ್‌ ಅವಧಿಯಲ್ಲಿ ನಿಯಮ ಬದಲು
ಸಿಬಿಐ ಅನ್ನು ಕೇಂದ್ರ ಸರಕಾರ ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸಿ 2018ರಲ್ಲಿಯೇ ಪಶ್ಚಿಮ ಬಂಗಾಲ ಸಹಿತ ವಿಪಕ್ಷಗಳಿರುವ ಹಲವು ರಾಜ್ಯಗಳು ತನಿಖೆಗೆ ಅನುಮತಿ ನಿರಾಕರಿಸಿದ್ದವು. ಆದರೆ ಕರ್ನಾಟಕದಲ್ಲಿ ದಿ| ಜೆ.ಎಚ್‌.ಪಟೇಲ್‌ ನೇತೃತ್ವದ ಸರಕಾರದ ಅವಧಿ (1996-1999)ಯಲ್ಲಿಯೇ ಅನುಮತಿ ಕೋರಿ ತನಿಖೆೆಗೆ ಬರುವಂತೆ ನಿಯಮ ಜಾರಿ ಮಾಡಲಾಗಿತ್ತು.

ಸಿಬಿಐ ಮತ್ತು ಮಮತಾ ಅವರ ಕ್ರಮಗಳು ಕೇವಲ ನಾಟಕ. ಚಿಟ್‌ಫ‌ಂಡ್‌ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಬೃಂದಾ ಕಾರಟ್‌, ಸಿಪಿಎಂ ನಾಯಕಿ

ಸ್ವತಂತ್ರ ತನಿಖಾ ಸಂಸ್ಥೆ ಆದ ಸಿಬಿಐ ಅನ್ನು ಅದರಷ್ಟಕ್ಕೇ ಬಿಡಿ. ನನ್ನ ವಿರುದ್ಧದ ಆರೋಪ ಸಾಬೀತುಮಾಡಲು ಸಿಬಿಐ ವಿಫ‌ಲವಾಗಿದೆ.
ಮುಕುಲ್‌ ರಾಯ್‌, ಬಿಜೆಪಿ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next