Advertisement

ಲೋಡ್‌ ಶೆಡ್ಡಿಂಗ್‌ ಜಾರಿಗೆ ಕಾರಣ ಏನು?ವಿದ್ಯುತ್‌ ಸಮಸ್ಯೆ

10:55 AM Nov 10, 2017 | |

ವಿದ್ಯುತ್‌ ಕೊರತೆ ಎನ್ನುವುದು ಕರ್ನಾಟಕದ ಪಾಲಿಗೆ ವಾರ್ಷಿಕ ಸಮಸ್ಯೆ ಯಾಗಿದೆ. ಪ್ರತೀ ವರ್ಷ ಬೇಸಿಗೆಯಲ್ಲಿ ಲೋಡ್‌ಶೆಡ್ಡಿಂಗ್‌ ಮತ್ತು ಪವರ್‌ ಕಟ್‌ ಸಾಮಾನ್ಯ ವಿಷಯ. ಕಳೆದ ವರ್ಷವಂತೂ ಭೀಕರ ಬರದ ಪರಿಣಾಮವಾಗಿ ಅನಧಿಕೃತವಾಗಿ ತಾಸುಗಟ್ಟಲೆ ಲೋಡ್‌ಶೆಡ್‌ ಹೇರಲಾಗಿತ್ತು. ಬೇಸಿಗೆಯಲ್ಲಿ ಲೋಡ್‌ಶೆಡ್ಡಿಂಗ್‌ ಹೇರುವುದು ಮಾಮೂಲು ಎಂದು ಹೇಳಬಹುದು. ಆದರೆ ಈ ಸಲ ಮಳೆಗಾಲ ಪೂರ್ತಿ ಮುಗಿಯುವ ಮೊದಲೇ ವಿದ್ಯುತ್‌ ಕಣ್ಣುಮುಚ್ಚಾಲೆ ಆರಂಭವಾಗಿರುವುದು ಆಶ್ಚರ್ಯ ವುಂಟು ಮಾಡಿದೆ. ಬೆಂಗಳೂರು ಹೊರತುಪಡಿಸಿದರೆ ರಾಜ್ಯದ ಉಳಿದೆಡೆ 3ರಿಂದ 6 ತಾಸು ವಿದ್ಯುತ್‌ ಕಣ್ಮರೆಯಾಗುತ್ತದೆ. ಗ್ರಾಮೀಣ ಭಾಗಗಳಲ್ಲಿ ಕೆಲವೊಮ್ಮೆ ಬೆಳಗ್ಗೆ ಹೋದ ಕರೆಂಟ್‌ ಬರುವುದು ರಾತ್ರಿಯೇ. ವಿಶೇಷವೆಂದರೆ ಸತತ ಆರು ವರ್ಷ ಬರಗಾಲ ಪೀಡಿಸಿದ್ದರೂ ಕಳೆದ ವರ್ಷ ಮಳೆಗಾಲ ಮುಗಿಯುವ ಮುನ್ನವೇ ಲೋಡ್‌ಶೆಡ್ಡಿಂಗ್‌ ಪ್ರಾರಂಭವಾಗಿ ರಲಿಲ್ಲ. ಈ ಸಲ ತಡವಾಗಿಯಾದರೂ ಧಾರಾಳ ಮಳೆ ಸುರಿದು ಹೆಚ್ಚಿನೆಲ್ಲ ಅಣೆಕಟ್ಟುಗಳು ಭರ್ತಿಯಾಗಿವೆ. ಹೀಗಾಗಿ ವಿದ್ಯುತ್‌ ಸಮಸ್ಯೆ ಎದುರಾಗದು ಎಂದು ಜನತೆ ನೆಮ್ಮದಿಯಿಂದಿತ್ತು. ಆದರೆ ಈ ನೆಮ್ಮದಿ ಬೇಸಿಗೆ ಕಾಲಿಡುವ ಮೊದಲೇ ದೂರವಾಗಿದೆ. ಈಗಲೇ ಲೋಡ್‌ಶೆಡ್ಡಿಂಗ್‌ ಜಾರಿಯಾಗಲು ಕಾರಣ ಏನು ಎನ್ನುವುದನ್ನು ಸರಕಾರ ತಿಳಿಸಬೇಕು. 

Advertisement

ರಾಜ್ಯದ ಒಟ್ಟು ವಿದ್ಯುತ್‌ ಉತ್ಪಾದನೆಯಲ್ಲಿ ಶೇ.40 ಜಲ ವಿದ್ಯುತ್‌ ಸ್ಥಾವರಗಳಿಂದ ಆಗುತ್ತಿದೆ. ಉಳಿದ ಶೇ.60 ವಿದ್ಯುತ್ತನ್ನು ಕಲ್ಲಿದ್ದಲು, ಸೌರ ಮತ್ತು ಪವನ ಮೂಲದಿಂದ ಪಡೆದುಕೊಳ್ಳಲಾಗುತ್ತದೆ. ಜಲವಿದ್ಯುತ್‌ ಸ್ಥಾವರಗಳಿಗೆ ಈ ಸಲ ಹೆಚ್ಚಿನ ಸಮಸ್ಯೆ ಇಲ್ಲದಿದ್ದರೂ ಕೆಲವು ಘಟಕಗಳನ್ನು ವಾರ್ಷಿಕ ದುರಸ್ತಿಗಾಗಿ ಮುಚ್ಚಲಾಗಿದೆ. ಆದರೆ ಸಮಸ್ಯೆ ಎದುರಾಗಿರುವುದು ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ. ರಾಯಚೂರು, ಬಳ್ಳಾರಿ ಮತ್ತು ಉಡುಪಿ -ಈ ಮೂರೂ ಸ್ಥಾವರಗಳು ಕಲ್ಲಿದ್ದಲು ಕೊರತೆ ಎದುರಿಸುತ್ತಿವೆ. ಮಳೆಗಾಲದಲ್ಲಿ ಕಲ್ಲಿದ್ದಲು ಉತ್ಪಾದನೆ ಕಡಿಮೆಯಾಗು ವುದರಿಂದ ಪ್ರತಿ ವರ್ಷ ಸ್ವಲ್ಪಮಟ್ಟಿಗಿನ ಕೊರತೆಯಾಗುವ ಸಾಮಾನ್ಯ. ಆದರೆ ಈ ಸಲ ಭಾರೀ ಪ್ರಮಾಣದಲ್ಲಿ ಕೊರತೆ ಉಂಟಾಗಲು ಕಾರಣ ಏನು ಎನ್ನುವುದನ್ನು ಸರಕಾರ ಬಹಿರಂಗಪಡಿಸಿಲ್ಲ. ಕೇಂದ್ರೀಯ ವಿದ್ಯುತ್‌ ಪ್ರಾಧಿಕಾರದ ಮಾರ್ಗಸೂಚಿಯ ಪ್ರಕಾರ ಪ್ರತಿ ಸ್ಥಾವರದಲ್ಲಿ ಒಂದು ತಿಂಗಳಿಗಾಗುವಷ್ಟು ಕಲ್ಲಿದ್ದಲು ದಾಸ್ತಾನು ಇರಬೇಕು. ಕನಿಷ್ಠ 10 ದಿನಗಳ ಕಲ್ಲಿದ್ದಲು ಸಂಗ್ರಹ ಇದ್ದರೆ ಅದನ್ನು ತೃಪ್ತಿಕರ ಎಂದು ಪರಿಗಣಿಸಲಾಗುತ್ತದೆ. ಆದರೆ ಕರ್ನಾಟಕದ ಸ್ಥಾವರಗಳಲ್ಲಿರುವುದು ಬರೀ ಒಂದು ದಿನದ ದಾಸ್ತಾನು ಎನ್ನುವುದು ಇತ್ತೀಚೆಗಷ್ಟೇ ಬಹಿರಂಗಗೊಂಡಿದೆ. ಕಲ್ಲಿದ್ದಲು ದಾಸ್ತಾನು ಈ ಪ್ರಮಾಣದಲ್ಲಿ ಕಡಿಮೆಯಾಗುತ್ತಿದ್ದರೂ ಸರಕಾರ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ? ಇದ್ದುದರಲ್ಲಿ ತುಸು ದಕ್ಷವಾಗಿ ನಡೆಯುತ್ತಿ ರುವುದು ಖಾಸಗಿ ಮಾಲಕತ್ವದಲ್ಲಿರುವ ಉಡುಪಿಯ ಸ್ಥಾವರ. ಆದರೆ ಎಸ್ಕಾಂಗಳು ಈ ಸ್ಥಾವರಕ್ಕೂ ಕೋಟಿಗಟ್ಟಲೆ ಹಣ ಬಾಕಿಯಿಟ್ಟು ಅದು ಕೂಡ ಸರಿಯಾಗಿ ಕಾರ್ಯನಿರ್ವಹಿಸದಂತೆ ಮಾಡಿದೆ. ಎಸ್ಕಾಂಗಳಿಂದ 700 ಕೋ. ರೂ. ಬಾಕಿಯಿದ್ದು ಈ ಹಣ ಸಂದಾಯವಾದರೆ ತತ್‌ಕ್ಷಣವೇ ಕಲ್ಲಿದ್ದಲು ಪೂರೈಕೆ ಶುರುವಾಗುತ್ತದೆ ಎಂದು ಇಲ್ಲಿನ ಅಧಿಕಾರಿಗಳು ಹೇಳುತ್ತಿದ್ದಾರೆ. ಜನರಿಂದ ತಪ್ಪದೇ ಬಿಲ್‌ ವಸೂಲು ಮಾಡುವ ಎಸ್ಕಾಂಗಳು ವಿದ್ಯುತ್‌ ಕಂಪೆನಿಗಳಿಗೆ ಹಣ ಪಾವತಿಸಲು ಮೀನಾಮೇಷ ಎಣಿಸುವುದೇಕೆ? 

ಇನ್ನು ವಿದ್ಯುತ್‌ ಪ್ರಸರಣದ ಸಮಸ್ಯೆ ಅನಾದಿ ಕಾಲದಿಂದ ಇರುವಂಥದ್ದು, ಈಗಲೂ ನಮ್ಮ ವಿತರಣೆ ವ್ಯವಸ್ಥೆ ನಾಲ್ಕೈದು ದಶಕಗಳಷ್ಟು ಹಿಂದಿದೆ. ಪ್ರಸರಣದ ಸಂದರ್ಭದಲ್ಲಾಗುವ ವಿದ್ಯುತ್‌ ಸೋರಿಕೆಯನ್ನು ತಡೆಗಟ್ಟಲು ಇನ್ನೂ ಸಾಧ್ಯವಾಗಿಲ್ಲ. ಜೋರಾಗಿ ಗಾಳಿ ಬೀಸಿದರೆ ಕಡಿದು ಬೀಳುವ ತಂತಿಗಳನ್ನೇ ಬದಲಾಯಿಸಲು ಸಾಧ್ಯವಾಗದಿರುವಾಗ ಉಳಿದ ಮೂಲ ಭೂತ ವ್ಯವಸ್ಥೆಗಳನ್ನು ಸುಧಾರಿಸುವ ಕುರಿತು ಯೋಚಿಸುವುದು ಕೂಡ ಅಸಾಧ್ಯ. ಪ್ರತಿ ಎಸ್ಕಾಂ ಪ್ರತೀ ವರ್ಷ ಬರೀ ದುರಸ್ತಿಗೆಂದು ವಾರ್ಷಿಕ ಸರಾಸರಿ 3 ಕೋ. ರೂ.ಯನ್ನು ವ್ಯಯಿಸುತ್ತಿವೆ. ಒಂದು ವೇಳೆ ಪ್ರಸರಣ ವ್ಯವಸ್ಥೆ ಹಾಗೂ ಇತರ ಮೂಲಸೌಕರ್ಯಗಳನ್ನು ಸುಧಾರಿಸಿದರೆ ಭಾರೀ ಪ್ರಮಾಣದ ವಿದ್ಯುತ್‌ ಉಳಿತಾಯವಾಗುವುದು ಮಾತ್ರವಲ್ಲದೆ ವಿದ್ಯುತ್‌ ಇಲಾಖೆಯ ಆದಾಯವೂ ಹೆಚ್ಚಳವಾಗುತ್ತದೆ ಎನ್ನುವುದನ್ನು ಸ್ವತಃ ಎಂಜಿನಿಯರ್‌ಗಳೇ ಹೇಳುತ್ತಿದ್ದಾರೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಹೆಚ್ಚುವರಿ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಆದರೆ ಉತ್ತರವನ್ನು ದಕ್ಷಿಣಕ್ಕೆ ಜೋಡಿಸುವ ಗ್ರಿಡ್‌ ಇಲ್ಲದಿರುವುದರಿಂದ ಆ ರಾಜ್ಯಗಳಿಂದ ವಿದ್ಯುತ್‌ ತರಲು ಸಾಧ್ಯವಾಗುತ್ತಿಲ್ಲ. ಅಸಾಂಪ್ರದಾಯಿಕ ವಿದ್ಯುತ್‌ ಮೂಲಗಳಿಂದ ಸ್ವಲ್ಪಮಟ್ಟಿಗೆ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಸಾಧ್ಯವಿದೆ. ಆದರೆ ಈ ಮೂಲಗಳಿಗೆ ಸರಕಾರ ನೀಡುತ್ತಿರುವ ಉತ್ತೇಜನ ಏನೇನೂ ಸಾಲದು. ಸೋಲಾರ್‌, ವಿಂಡ್‌ ಮುಂತಾದ ಅಸಂಪ್ರಾದಾಯಿಕ ಮೂಲಗಳಲ್ಲಿ ಪಕ್ಕದ ಕೇರಳ ಮತ್ತು ತಮಿಳುನಾಡು ರಾಜ್ಯಗಳು ನಮ್ಮಿಂದ ಎಷ್ಟೋ ಮುಂದಿವೆ. 2020ಕ್ಕಾಗುವಾಗ ಕರ್ನಾಟಕವೂ ಮಿಗತೆ ವಿದ್ಯುತ್‌ ಉತ್ಪಾದಿಸುವ ರಾಜ್ಯವಾಗಲಿದೆ ಎಂದು ಕೆಲ ತಿಂಗಳ ಹಿಂದೆಯಷ್ಟೇ ಸಚಿವ ಡಿ. ಕೆ. ಶಿವಕುಮಾರ್‌ ಹೇಳಿದ್ದರು. ಆದರೆ ಈ ವ್ಯವಸ್ಥೆಯನ್ನಿಟ್ಟುಕೊಂಡು ಗುರಿಯನ್ನು ಸಾಧಿಸಲು ಸಾಧ್ಯವೇ?

Advertisement

Udayavani is now on Telegram. Click here to join our channel and stay updated with the latest news.

Next