ಉಡುಪಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಪಕ್ಷಕ್ಕೆ ಗುಡ್‌ಬೈ ಹೇಳಿ ಬಿಜೆಪಿ ಸೇರಿದ್ದಾರೆ. ಪ್ರಮೋದರಿಗೆ ಬಿಜೆಪಿಯಲ್ಲಿ ಯಾವ ಸ್ಥಾನ ಸಿಗಬಹುದು? ಅವರ ರಾಜಕೀಯ ಭವಿಷ್ಯವೇನಾಗಬಹುದು ಎಂಬ ಚರ್ಚೆ ಆರಂಭಗೊಂಡಿದೆ.
1962ರಿಂದ ಮಧ್ವರಾಜರ ಮನೆಯ ಸದಸ್ಯರು ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯರು. ಇದುವರೆಗೆ 12 ಚುನಾವಣೆಗಳಲ್ಲಿ ಈ ಕುಟುಂಬ ಸ್ಪರ್ಧಿಸಿದ್ದು ಬಹುತೇಕ ಸಂದರ್ಭ ಗೆಲುವು ಸಾಧಿಸಿತ್ತು.
1962ರಲ್ಲಿ ಮಲ್ಪೆ ಮಧ್ವರಾಜರು ಉಡುಪಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 1967ರಿಂದ ಮನೋರಮಾ ಮಧ್ವರಾಜ್ 6 ಬಾರಿ ಸ್ಪರ್ಧಿಸಿ 4 ಬಾರಿ ಚುನಾಯಿತರಾಗಿದ್ದರು. ಪ್ರಮೋದ್ 4 ಬಾರಿ ಸ್ಪರ್ಧಿಸಿ ಒಮ್ಮೆ ಗೆದ್ದಿದ್ದರು.
ಮನೋರಮಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾಗಿದ್ದರೆ (1974-83; 1989-94), 1999ರಲ್ಲಿ ಎಸ್.ಎಂ. ಕೃಷ್ಣ ಸರಕಾರದಲ್ಲಿ ರಾಜ್ಯ ಪ್ರವಾಸೋದ್ಯಮ ನಿಗಮದ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ ಮನೋರಮಾ ಅವರು ಉಡುಪಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ 2004-08ರ ಅವಧಿಗೆ ಲೋಕಸಭಾ ಸದಸ್ಯರಾದರು. 2013ರಲ್ಲಿ ಗೆಲುವು ಸಾಧಿಸಿದ್ದ ಪ್ರಮೋದ್ ಮಧ್ವರಾಜ್, ಸಿದ್ದರಾಮಯ್ಯನವರ ಸರಕಾರದಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ಮೀನುಗಾರಿಕಾ ಸಚಿವರಾದರು. ಇದಕ್ಕೂ ಮುನ್ನ ಸಂಪುಟ ದರ್ಜೆಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾಗಿದ್ದರು.
ಕಾಂಗ್ರೆಸ್‌ನಲ್ಲಿ ಪ್ರಮೋದ್ ಮಧ್ವರಾಜ್ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ಎನ್‌ಎಸ್‌ಯುಐ ಪದಾಧಿಕಾರಿಯಾಗಿ, ಬಳಿಕ ರಾಜ್ಯ ಯುವ ಕಾಂಗ್ರೆಸ್ ಸಂಘಟನ ಕಾರ್ಯದರ್ಶಿಯಾಗಿದ್ದರು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಇತ್ತೀಚೆಗೆ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು. 2018ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಚಿಹ್ನೆಯಲ್ಲಿ ಜೆಡಿಎಸ್- ಕಾಂಗ್ರೆಸ್ ಜಂಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಸದ್ಯದಲ್ಲಿ ಬರುವ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿರಿಸಿಕೊಂಡು ಪಕ್ಷಾಂತರ ನಡೆಯುತ್ತಿದೆ. ಬಹು ಹಿಂದಿನಿಂದಲೇ ಪ್ರಮೋದ್ ಅವರು ಬಿಜೆಪಿಗೆ ಸೇರುತ್ತಾರೆನ್ನುವ ಸುದ್ದಿ ದಟ್ಟವಾಗಿ ಕೇಳಿಬರುತ್ತಿತ್ತು. ಆದರೆ ಪ್ರಮೋದ್ ಅವರೇ ಇದನ್ನು ಖಡಾಖಂಡಿತವಾಗಿ ನಿರಾಕರಿಸಲೂ ಇಲ್ಲ, ಹೌದೆಂದು ಸ್ಪಷ್ಟಪಡಿಸುತ್ತಲೂ ಇರುತ್ತಿರಲಿಲ್ಲ. ಶುಕ್ರವಾರವಷ್ಟೆ, ಜಿಲ್ಲಾ ಬಿಜೆಪಿ ನಾಯಕರು ತಮ್ಮ ಆಕ್ಷೇಪಣೆ ಏನೂ ಇಲ್ಲ ಎಂದಿದ್ದರು. ಶನಿವಾರ ಪ್ರಮೋದ್ ಬಿಜೆಪಿಗೆ ಸೇರಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪ್ರಮೋದ್ ಅವರಿಗೆ ಬಿಜೆಪಿ ಟಿಕೆಟ್ ಕೊಡಬಹುದೆ? ಉಡುಪಿ ಜಿಲ್ಲೆಯ ಮಟ್ಟಿಗೆ ಎಲ್ಲ ಐದು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಪ್ರಮೋದರಿಗೆ ಟಿಕೆಟ್ ಕೊಡುವುದಾದರೆ ಯಾವ ಕ್ಷೇತ್ರದಲ್ಲಿ ಎಂಬ ಕುತೂಹಲ ಮೂಡಿಯೇ ಮೂಡುತ್ತದೆ. ಎರಡು-ಮೂರು ಕ್ಷೇತ್ರಗಳ ಹೆಸರು ಕೇಳಿಬರುತ್ತಿದೆ. ಇಲ್ಲವಾದರೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ಗೆ ಪ್ರಯತ್ನಿಸಬಹುದು. ಇವೆಲ್ಲ ಆಗದಿದ್ದರೆ ವಿಧಾನ ಪರಿಷತ್, ರಾಜ್ಯಸಭಾ ಟಿಕೆಟ್ ಸಿಗಬಹುದು ಎಂಬುದು ಕೊನೆಯ ಸಾಧ್ಯತೆಯಾಗುತ್ತದೆ.