Advertisement
ಈ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಸಿದ್ದರಾಮಯ್ಯ, ಮೋದಿ ಹಸಿಸುಳ್ಳು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಮುಸ್ಲಿಮರಿಗೆ 30 ವರ್ಷಗಳಿಂದಲೂ ಮೀಸಲಾತಿ ಇದ್ದು, ಒಬಿಸಿ ಮೀಸಲನ್ನು ಕಿತ್ತುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
Related Articles
Advertisement
1977ರಲ್ಲಿ ಎಲ್.ಜಿ. ಹಾವನೂರು ಆಯೋಗ ರಾಜ್ಯದ ಮೀಸಲಾತಿ ವರದಿಯನ್ನು ಸಲ್ಲಿಸಿದ್ದು, ಇದರಲ್ಲಿ ಮುಸ್ಲಿಮರಿಗೆ ಮೀಸಲಾತಿ ಬಗ್ಗೆ ಪ್ರಸ್ತಾವಿಸಿರಲಿಲ್ಲ. ಆದಾಗ್ಯೂ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಬಿಸಿಎಂ (ಹಿಂದುಳಿದ ವರ್ಗ ಗಳು) ಪಟ್ಟಿಯಲ್ಲಿ ಮುಸ್ಲಿಮರನ್ನು ಸೇರಿಸುತ್ತಾರೆ. ನಂತರದಲ್ಲಿ ರಾಮಕೃಷ್ಣ ಹೆಗಡೆ ಅವರ ಅಧಿಕಾರಾವಧಿಯಲ್ಲೂ ಐದು ಪ್ರವರ್ಗಗಳನ್ನು ಮಾಡಿ (ಎ, ಬಿ, ಸಿ, ಡಿ, ಇ) ಮುಸ್ಲಿಂ ಸಹಿತ ರಾಜ್ಯದ ಬಹುತೇಕ ಎಲ್ಲ ಸಮುದಾಯಗಳನ್ನೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗೆ ಅನುಗುಣವಾಗಿ ಪಟ್ಟಿ ಯಲ್ಲಿ ಸೇರಿಸಿದ್ದರು. ಇದೆಲ್ಲದರ ಹೊರತಾಗಿ ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಹಿಂದುಳಿದವರ ಮೀಸಲಾತಿಗೆ 1989-90ರಲ್ಲಿ ಸಲ್ಲಿಸಿದ್ದ ನ್ಯಾಯಮೂರ್ತಿ ಚಿನ್ನಪ್ಪರೆಡ್ಡಿ ಆಯೋಗದ ವರದಿಯೇ ಆಧಾರ ಎಂದರೆ ತಪ್ಪಾಗದು.
ಮೊಯ್ಲಿ ಅವಧಿಯಲ್ಲಿ ಸೇರ್ಪಡೆ:
1994ರಲ್ಲಿ ಚಿನ್ನಪ್ಪರೆಡ್ಡಿ ವರದಿಯ ಶಿಫಾರಸುಗಳನ್ನು ಸರಕಾರ ಜಾರಿ ಗೊಳಿಸುತ್ತದೆ. ಆಗ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್.ಎಂ. ವೀರಪ್ಪ ಮೊಲಿ ಮುಖ್ಯಮಂತ್ರಿ ಆಗಿದ್ದರು. ಅದರಂತೆ ಪ್ರವರ್ಗ “2ಎ’ಯಲ್ಲಿ ಶೇ. 15ರಷ್ಟು ಮೀಸಲಾತಿ ಕಲ್ಪಿಸಲಾಗುತ್ತದೆ. ಇದರಲ್ಲಿ ಕುರುಬ, ಗಾಣಿಗ, ವಿಶ್ವಕರ್ಮ ಸಹಿತ 102 ಪ್ರಮುಖ ಜಾತಿಗಳು ಬರುತ್ತವೆ. ಇದರ ಜತೆಗೆ ಪ್ರವರ್ಗ “2ಬಿ’ ಅನ್ನು ಸೃಷ್ಟಿಸಿ ಅಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ. 4ರಷ್ಟು ಮೀಸಲಾತಿ ಕಲ್ಪಿಸಲಾಗುತ್ತದೆ ಎಂದು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆ.ಎನ್.ಲಿಂಗಪ್ಪ ತಿಳಿಸುತ್ತಾರೆ.
ಪ್ರಧಾನಿ ಪ್ರಸ್ತಾವ:
ಇದೇ ಮೀಸಲಾತಿಯನ್ನು ಈಗ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾವಿಸಿ, ಹಿಂದುಳಿದ ವರ್ಗಗಳ ಓಲೈಕೆಗೆ ಮುಂದಾಗಿದ್ದಾರೆ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಕಾಂಗ್ರೆಸ್ ಮುಸ್ಲಿಮರಿಗೆ ಮೀಸಲಾತಿ ನೀಡುವ ಮೂಲಕ ಒಬಿಸಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಲಾಗುತ್ತಿದೆ.
ಒಬಿಸಿ ಕೆಟಗರಿಗೆ ಶೇ. 32ರಷ್ಟು ಮೀಸಲಾಗಿದ್ದು, ಇದರಲ್ಲಿ 36 ಮುಸ್ಲಿಂ ಸಮುದಾಯಗಳನ್ನೂ ಸೇರಿಸಲಾಗುತ್ತದೆ. 1, 2ಎ ಎಂದು ವರ್ಗೀಕರಿಸಿ ಹಿಂದುಳಿದ ವರ್ಗದ ಸ್ಥಾನಮಾನ ನೀಡಲಾಗಿತ್ತು.
3 ದಶಕಗಳ ಬಳಿಕ ವಾಪಸ್! :
ಇನ್ನು ಈ ಮೀಸಲಾತಿ ಹುತ್ತಕ್ಕೆ 28 ವರ್ಷಗಳ ಬಳಿಕ ಅಂದರೆ 2022-23ರಲ್ಲಿ ಬಿಜೆಪಿ ಕೈಹಾಕುತ್ತದೆ. ಪಂಚಮಸಾಲಿ 2ಎ ಮೀಸಲಾತಿ ಬೇಡಿಕೆ ಹೋರಾಟ ತಾರಕಕ್ಕೇರಿದಾಗ, ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವು ಈ ಹಿಂದೆ ಕಾಂಗ್ರೆಸ್ ಸರಕಾರ ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಶೇ.4 ಮೀಸಲಾತಿಯನ್ನು ಹಿಂಪಡೆದು, ಒಕ್ಕಲಿಗ ಮತ್ತು ವೀರಶೈವ ಲಿಂಗಾಯತರಿಗೆ ತಲಾ ಶೇ.2ರಷ್ಟು ಹಂಚಿಕೆ ಮಾಡುತ್ತದೆ. ಇದನ್ನು ಪ್ರಶ್ನಿಸಿ ಕೆಲವರು ಸುಪ್ರೀಂ ಮೊರೆಹೋಗುತ್ತಾರೆ. ಅಲ್ಲಿ ಈ ಕ್ರಮಕ್ಕೆ ತಡೆಯಾಜ್ಞೆ ಸಿಗುತ್ತದೆ. ಅಷ್ಟೇ ಅಲ್ಲ, ನ್ಯಾಯಾಲಯದ ಸೂಚನೆ ಮೇರೆಗೆ ಮೀಸಲಾತಿ ಮುಂದುವರಿಸುವ ಮುಚ್ಚಳಿಕೆಯನ್ನೂ ಬರೆದುಕೊಡುತ್ತದೆ. ಇದೇ ವಿಚಾರವನ್ನು ಕಾಂಗ್ರೆಸ್ ಪ್ರತ್ಯಸ್ತ್ರವಾಗಿ ಬಿಜೆಪಿ ಮೇಲೆ ಪ್ರಯೋಗಿಸುತ್ತಿದೆ. ಅದೇನೇ ಇರಲಿ, ರಾಜ್ಯದಲ್ಲಿ ಮತದಾನಕ್ಕೆ ಕೇವಲ ಎರಡು ದಿನಗಳು ಬಾಕಿ ಇರುವಾಗ ಮೀಸಲಾತಿ ಅಸ್ತ್ರದ ಪ್ರಯೋಗ ಆಗುತ್ತಿದ್ದು, ಈ ಸಂಬಂಧದ ಆರೋಪ-ಪ್ರತ್ಯಾರೋಪಗಳಿಂದ ಮೀಸಲಾತಿ ಮೇಲಾಟ ತಾರಕಕ್ಕೇರಿದೆ. ಇದು ಯಾವ ಪಕ್ಷಕ್ಕೆ ಎಷ್ಟು ಲಾಭ ತಂದುಕೊಡುತ್ತದೆ ಎಂಬುದು ಕಾದುನೋಡಬೇಕು.