ರಶ್ಮಿಕಾ ಅಭಿನಯದ ಎರಡು ಚಿತ್ರಗಳು ಬ್ಯಾಕ್ ಟು ಬ್ಯಾಕ್ ಬಿಡುಗಡೆಯಾಗಿವೆ. ಅವರ ಮುಂದಿನ ಕನ್ನಡ ಚಿತ್ರ ಯಾವುದು? ಈ ವಿಷಯವನ್ನು ರಶ್ಮಿಕಾ ಅಪ್ಪಿತಪ್ಪಿಯೂ ಹೇಳುವುದಿಲ್ಲ. “ಒಂದು ದೊಡ್ಡ ಚಿತ್ರದಲ್ಲಿ ಹಳ್ಳಿಹುಡುಗಿ ಪಾತ್ರವನ್ನು ಮಾಡುತ್ತಿದ್ದೇನೆ. ಆ ಬಗ್ಗೆ ಚಿತ್ರತಂಡದವರೇ ಅಧಿಕೃತವಾಗಿ ಹೇಳುತ್ತಾರೆ. ಸದ್ಯದಲ್ಲೇ ಚಿತ್ರತಂಡದ ಕಡೆಯಿಂದಲೇ ಎಲ್ಲವೂ ಗೊತ್ತಾಗಲಿದೆ’ ಎಂದಷ್ಟೇ ಹೇಳುತ್ತಾರೆ. ಹಾಗಾದರೆ, ರಶ್ಮಿಕಾ ಅಭಿನಯದ ಮುಂದಿನ ಚಿತ್ರ ಯಾವುದು? ಅವರು ಯಾರ ಜೊತೆಗೆ ನಟಿಸಲಿದ್ದಾರೆ?
“ಪೈಲ್ವಾನ್’ನಲ್ಲಿ ಸುದೀಪ್ ಅವರಿಗೆ ನಾಯಕಿಯಾಗಿಯೋ ಅಥವಾ ದರ್ಶನ್ ಅವರ 51ನೇ ಚಿತ್ರದಲ್ಲೋ ಎಂಬ ಪ್ರಶ್ನೆ ಬರುವುದು ಸಹಜ. ಏಕೆಂದರೆ, ರಶ್ಮಿಕಾ ದೊಡ್ಡ ಹೀರೋ ಜೊತೆಗೆ ಆಪರ್ ಬಂದಿದೆ ಎಂದು ಹೇಳಿಕೊಂಡಿದ್ದಾರೆ. “ಪೈಲ್ವಾನ್’ ಮತ್ತು ದರ್ಶನ್ ಅಭಿನಯದ ಹೊಸ ಚಿತ್ರಗಳೆರಡೂ ಜನವರಿ ಕೊನೆ ಅಥವಾ ಫೆಬ್ರವರಿಯಲ್ಲಿ ಪ್ರಾರಂಭವಾಗಿರುವುದರಿಂದ, ಈ ಎರಡು ಚಿತ್ರಗಳಲ್ಲಿ ಯಾವ ಚಿತ್ರದಲ್ಲಿ ಅವರು ನಟಿಸಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ. ಇವೆರಡೂ ಚಿತ್ರ ಬಿಟ್ಟು ಇನ್ನೊಂದು ಬಿಗ್ ಚಿತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡರೆ ಅದರಲ್ಲಿ ಆಶ್ಚರ್ಯವಿಲ್ಲ.
ಇನ್ನು ಕೆಲವು ದಿನಗಳಿಂದ ಖಾಲಿ ಕುಳಿತಿರುವುದರಿಂದ ಭಯ ಆಗುತ್ತಿದೆಯಂತೆ ರಶ್ಮಿಕಾಗೆ. “ನಾನು ಯಾವತ್ತೂ ಸುಮ್ಮನೆ ಕೂತಿಲ್ಲ. ಕಳೆದ ಒಂದು ವರ್ಷ ಬಿಝಿಯಾಗಿದ್ದೆ. ಮೂರು ಚಿತ್ರಗಳಲ್ಲಿ ನಟಿಸಿದೆ. ಈಗ ಒಂದು ವಾರ ಬ್ರೇಕ್ ಸಿಕ್ಕಿದೆ. ಸುಮ್ಮನೆ ಇರುವುದರಿಂದ ಭಯ ಆಗುತ್ತಿದೆ’ ಎಂದು ನಗುತ್ತಾರೆ ಅವರು. ತೆಲುಗಿನಲ್ಲಿ ವಿಜಯ್ ದೇವರಕೊಂಡ ಚಿತ್ರದಲ್ಲಿ ನಟಿಸುತ್ತಿರುವುದು ಬಿಟ್ಟರೆ, ರಶ್ಮಿಕಾ ಸದ್ಯಕ್ಕೆ ಯಾವುದೇ ಚಿತ್ರ ಇಲ್ಲ. “ಪೊಗರು’ನಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಇತ್ತಾದರೂ, ಆ ಚಿತ್ರದಲ್ಲಿ ನಟಿಸುತ್ತಿಲ್ಲವಂತೆ. “ಇನ್ನೊಂದಿಷ್ಟು ಚಿತ್ರಗಳ ಮಾತುಕತೆಯಾಗುತ್ತಿದೆಯಾದರೂ, ಅವೆಲ್ಲಾ ಪಕ್ಕಾ ಆದಮೇಲಷ್ಟೇ ಹೇಳ್ಳೋದಕ್ಕೆ ಸಾಧ್ಯ’ ಎನ್ನುತ್ತಾರೆ ಅವರು.
ಜನರ ಧ್ವನಿಯಾಗಿ ನಿಲ್ಲುವ ಪಾತ್ರ: “ಚಮಕ್’ನಲ್ಲಿ ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ಮೆಚ್ಚುಗೆ ಬಂದಿರುವುದರಿಂದ, ರಶ್ಮಿಕಾಗೆ ಧೈರ್ಯ ಬಂದಿದೆಯಂತೆ. “ಜನ ಒಪ್ಪುತ್ತಾರೋ ಇಲ್ಲವೋ ಎಂಬ ಭಯ ಇತ್ತು. ಈಗ ಮೆಚ್ಚಿಕೊಂಡಿರುವುದರಿಂದ, ಇನ್ನಷ್ಟು ಪ್ರಯೋಗ ಮಾಡಬಹುದು ಎಂಬ ಧೈರ್ಯ ಬಂದಿದೆ. ಇನ್ನಷ್ಟು ಬೇರೆ ತರಹದ ಪ್ರಯತ್ನ ಮಾಡಬೇಕೆಂಬ ಆಸೆ ಇದೆ. ಆದರೆ, ನನ್ನ ಪರಿಚಯ ಅಷ್ಟಾಗಿ ಇರಲಿಲ್ಲ. ಇದೀಗ ಮೂರು ಚಿತ್ರಗಳಾದ್ದರಿಂದ, ಜನರಿಗೆ ನನ್ನ ಪರಿಚಯವಾಗಿರುತ್ತದೆ. ಈಗ ಒಂದಿಷ್ಟು ಟ್ರೆ„ ಮಾಡಬಹುದು. ಜನರ ಧ್ವನಿಯಾಗಿ ನಿಲ್ಲುವಂತಹ ಪಾತ್ರಗಳು ಸಿಕ್ಕರೆ ಖಂಡಿತಾ ಒಪ್ಪುತ್ತೇನೆ’ ಎನ್ನುತ್ತಾರೆ ರಶ್ಮಿಕಾ.
ರಶ್ಮಿಕಾ ಆ್ಯಂಡ್ ಸೆವೆನ್ ಆಡ್ಸ್: ಇನ್ನು ರಕ್ಷಿತ್ ಅವರ ಜೊತೆಗೆ ಸೆವೆನ್ ಆಡ್ಸ್ ಇರುವಂತೆಯೇ, ರಶ್ಮಿಕಾ ಜೊತೆಗೂ ಸೆವೆನ್ ಆಡ್ಸ್ ಇದ್ದಾರಂತೆ. ಅವರು ಕಥೆ ಒಪ್ಪಿದರೆ, ತಾವು ಒಂದು ಚಿತ್ರ ಒಪ್ಪುವುದಾಗಿ ಹೇಳುತ್ತಾರೆ. “ನನಗೆ ಅಮ್ಮ ಸೇರಿದಂತೆ ಏಳು ಸ್ನೇಹಿತರಿದ್ದಾರೆ. ಅವರ ಜೊತೆಗೆ ಚರ್ಚೆ ಮಾಡುತ್ತೇನೆ. ಅವರಲ್ಲಿ ಮೆಜಾರಿಟಿ ಒಪ್ಪಿದರೆ, ನಾನು ಚಿತ್ರ ಮಾಡುತ್ತೇನೆ. ಇಲ್ಲವಾದರೆ ಇಲ್ಲ’ ಎನ್ನುತ್ತಾರೆ ರಶ್ಮಿಕಾ.
ಕಥೆ ಅಲ್ಲ ಐಡಿಯಾ: ರಶ್ಮಿಕಾ ಚೆನ್ನಾಗಿ ಕಥೆ ಬರೆಯುತ್ತಾರೆ ಎಂದು ರಕ್ಷಿತ್ ಹೇಳಿಕೊಂಡಿದ್ದರು. ಈ ಕುರಿತು ರಶ್ಮಿಕಾ ಅವರನ್ನು ಕೇಳಿದರೆ, “ಕಥೆ ಅಂತಲ್ಲ ಐಡಿಯಾ ಅಷ್ಟೇ. ಐಡಿಯಾ ಬಂತು, ಹೇಳಿದೆ. ಅದನ್ನು ಕೇಳಿ ಮುಂದುವರೆಸು ಅಂತ ಹೇಳಿದರು. ಸದ್ಯಕ್ಕೆ ಏನೂ ಬರೆದಿಲ್ಲ. ಮುಂದಿನ ದಿನಗಳಲ್ಲಿ ಏನಾದರೂ ಬರೆಯಬಹುದು. ನಾವು ಉಳಿಯಬೇಕು ಅಂದರೆ ನಾವೇ ಏನಾದರೂ ಮಾಡಿಕೊಳ್ಳಬೇಕು’ ಎಂಬುದು ರಶ್ಮಿಕಾ ಅಭಿಪ್ರಾಯ.