ಕೆಟ್ಟು ನಿಂತ ಗಡಿಯಾರವೂ ದಿನಕ್ಕೆ ಎರಡು ಬಾರಿ ಸರಿಯಾದ ಸಮಯ ತೋರುವಂತೆ ಇರುವ ಮಿತಿಯಲ್ಲಿಯೇ ಉಪಕಾರಿಯಾಗಿ ಬಾಳಬೇಕು..
ಬದುಕಿನಲ್ಲಿ ಸಾಧನೆಗೆ ಪ್ರೇರಣೆ ಅಗತ್ಯವೂ ಹೌದು. ಅದು ಯಾವ ರೀತಿಯಲ್ಲಿ ದಕ್ಕುತ್ತದೆ ಎಂಬುದು ಗಂಭೀರ ವಿಚಾರವೇ. ಒಬ್ಬನ ಮೇಲಿನ ದ್ವೇಷ, ಅಸೂಯೆಯಿಂದ ಹುಟ್ಟಿದ ಪ್ರೇರಣೆ ಸಾಧನೆಯನ್ನೇನೋ ಮಾಡಿಸೀತು. ಆದರೆ ವಾಮಮಾರ್ಗ ಹಿಡಿಯಲು ಪ್ರೇರೇಪಿಸೀತು. ಕೆಲವೊಮ್ಮೆ ಸಾತ್ವಿಕ ರೂಪದ ಸಾಧನೆಯೂ ಸಿದ್ಧಿಸೀತು. ಬದುಕು ಹೀಗೇ ಎಂದು ಹೇಳುವುದು ಕಷ್ಟ.
ಸಾತ್ವಿಕ ರೂಪದ ಪ್ರೇರಣೆ ಸದಾ ಉತ್ತಮ ಫಲವನ್ನೇ ನೀಡುತ್ತದೆ. ಏಕೆಂದರೆ ಕಷ್ಟಗಳನ್ನು ಅನುಭವಿಸಿದ ಜೀವಕ್ಕೆ ಇತರರ ಕಷ್ಟಗಳ ಅರಿವಿರುತ್ತದೆ. ತಾನು ತನ್ನವರಿಗೆ,ಸಮಾಜಕ್ಕೆ ಮಾಡಬೇಕಾದ ಕರ್ತವ್ಯಗಳ ಅರಿವಿರುತ್ತದೆ. ಮಹತ್ವಾಕಾಂಕ್ಷೆಯೂ ಒಳ್ಳೆಯದೇ. ಆದರೆ ಅದರಲ್ಲೂ ಎರಡು ವಿಧಗಳಿವೆ. ಒಬ್ಬನನ್ನು ತುಳಿದು ತಾನು ಮೇಲೆ ಹೋಗಬೇಕು ಎಂಬ ಮಹತ್ವಾಕಾಂಕ್ಷೆ ಅತ್ಯಂತ ಅಪಾಯಕಾರಿ. ಇದರಲ್ಲಿ ಸಿಗುವ ಸಾಧನೆಯು ವೈಯಕ್ತಿಕವಾಗಿ ಲಾಭಕರವಾಗಿರಬಹುದು ಹೊರತು, ವ್ಯಕ್ತಿತ್ವಕ್ಕೆ ಭೂಷಣವಾಗಲಾರದು. ಸಮಾಜಕ್ಕೂ ಪ್ರಯೋಜನವಾಗಲಾರದು. ತಾನೂ ಬೆಳೆದು ಜತೆಗಿರುವವರನ್ನೂ ಬೆಳೆಸುವ, ಆ ಮೂಲಕ ಮಹತ್ತರವಾದುದನ್ನು ಸಾಧಿಸುವ ಮಹತ್ವಾಕಾಂಕ್ಷೆಯು ಘನವಾದದ್ದು.
ಬದುಕಿನಲ್ಲಿ ಪ್ರಭಾವ ನೋಡಿ ಬಳಿ ಬರುವವರಿಗಿಂತ ಸ್ವಭಾವ ನೋಡಿ ಬರುವವರು ನಮ್ಮ ಹಿತೈಷಿಗಳಂತೆ. ಎಂದು ಬೇಕಾದರೂ ಹಾರಿ ಹೋಗುವ ಜೀವವನ್ನು ಹೊತ್ತ ಈ ದೇಹ ಪರರಿಗೆ ಉಪಕಾರಿಯಾಗಿರಬೇಕು. ಸಾಧನೆಯನ್ನು ಮಾಡದಿದ್ದರೂ ಅಪಕಾರಿಯಾಗಿ ಬದುಕಬಾರದು. ಕೆಟ್ಟು ನಿಂತ ಗಡಿಯಾರವೂ ದಿನಕ್ಕೆ ಎರಡು ಬಾರಿ ಸರಿಯಾದ ಸಮಯ ತೋರುವಂತೆ ಇರುವ ಮಿತಿಯಲ್ಲಿಯೇ ಉಪಕಾರಿಯಾಗಿ ಬಾಳಬೇಕು ಎಂಬುದು ಬಲ್ಲವರ ಮಾತು. ನಮ್ಮ ಹಿತೈಷಿಗಳು ಯಾರು, ತುಳಿಯುವವರು ಯಾರು, ಹಿತೈಷಿಗಳಂತೆ ಇದ್ದು ಹಳ್ಳ ತೋಡುವವರು ಯಾರು ಎಂಬುದನ್ನು ಅರಿತುಕೊಳ್ಳಬೇಕು. ಅಂಥವರ ಮಹತ್ವಾಕಾಂಕ್ಷೆಗೆ ಬಲಿಯಾಗದೇ, ನಮ್ಮೊಳಗೆ ಸಾತ್ವಿಕ ಮಹತ್ವಾಕಾಂಕ್ಷೆಯನ್ನು ಉದ್ದೀಪಿಸಿ ಸಾಧಿಸಿ ಜೀವನ ಸಾರ್ಥಕಪಡಿಸಿ ಕೊಳ್ಳುವುದರಲ್ಲಿ ಬದುಕಿನ ಅರ್ಥ ಇದೆ.
-ಕುದ್ಯಾಡಿ ಸಂದೇಶ್ ಸಾಲ್ಯಾನ್