ನವದೆಹಲಿ: ದೇಶದ ಅತೀ ದೊಡ್ಡ ಕಾರು ಉತ್ಪಾದಕ ಕಂಪನಿ ಹುಂಡೈ ಇಂಡಿಯಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ವಿಷಯವಾಗಿದೆ. ಹುಂಡೈ ಕಂಪನಿಯ ಪಾಕಿಸ್ತಾನ ಘಟಕ ಟ್ವೀಟರ್ ಮತ್ತು ಫೇಸ್ ಬುಕ್ ನಲ್ಲಿ ಕಾಶ್ಮೀರ ಒಗ್ಗಟ್ಟು ಕುರಿತು ಮಾಡಿರುವ ಪೋಸ್ಟ್ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿರುವುದಾಗಿ ವರದಿ ತಿಳಿಸಿದೆ.
ಏನಿದು ಹುಂಡೈ ವಿವಾದ:
ಹುಂಡೈ ಪಾಕಿಸ್ತಾನ ಘಟಕ ತನ್ನ ಟ್ವೀಟರ್ ಅಧಿಕೃತ ಖಾತೆಯಲ್ಲಿ, “ ನಮ್ಮ ಕಾಶ್ಮೀರಿ ಸಹೋದರರ ತ್ಯಾಗವನ್ನು ನೆನಪಿಸಿಕೊಳ್ಳಬೇಕಾಗಿದೆ. ಅಲ್ಲದೇ ಕಾಶ್ಮೀರ ನಿವಾಸಿಗಳ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ನೀಡಬೇಕಾಗಿದೆ” ಎಂದು ಟ್ವೀಟ್ ಮಾಡಿರುವುದು ಭಾರತದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಹಿಜಾಬ್ ಒಂದು ವಿವಾದದ ವಿಷಯವೇ ಅಲ್ಲ,ಬೇಕಂತಲೇ ಷಡ್ಯಂತ್ರವನ್ನಾಗಿ ಮಾಡಲಾಗುತ್ತಿದೆ-ಆಸಿಫ್ ಶೇಖ್
ಟ್ವೀಟ್ ಜತೆಗೆ ದಲಾಲ್ ಲೇಕ್ ನಲ್ಲಿ ಬೋಟ್ ಚಿತ್ರದೊಂದಿಗೆ ಕಾಶ್ಮೀರ ಎಂದು ಬರೆದು ಅದಕ್ಕೆ ತಂತಿ ಬೇಲಿಯ ಚಿತ್ರವನ್ನು ಪೋಸ್ಟ್ ಮಾಡಲಾಗಿತ್ತು. ಹುಂಡೈ ಟ್ವೀಟ್ ಗೆ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಟ್ವೀಟ್ ಅನ್ನು ಡಿಲೀಟ್ ಮಾಡಿರುವುದಾಗಿ ವರದಿ ವಿವರಿಸಿದೆ.
ಏತನ್ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಹುಂಡೈ ಕಂಪನಿಗೆ ಬಹಿಷ್ಕಾರ ಹಾಕುವಂತೆ ಮನವಿ ಮಾಡಿಕೊಂಡಿದ್ದು, ಹುಂಡೈ ಕಾರು ಬುಕ್ಕಿಂಗ್ ಅನ್ನು ರದ್ದುಗೊಳಿಸುವಂತೆ ಕರೆ ನೀಡಲಾಗಿತ್ತು ಎಂದು ವರದಿ ಹೇಳಿದೆ.
ಕನ್ಸಾರಾ ಎಂಬ ಟ್ವೀಟರ್ ಬಳಕೆದಾರರೊಬ್ಬರು, ಹಲೋ ಹುಂಡೈ ನಿಮಗೆ ಇದು ಯಾವ ಸಹಾಯವನ್ನು ಮಾಡುವುದಿಲ್ಲ. ಭಾರತದಲ್ಲಿರುವ ಹಾಗೂ ಇತರ ದೇಶಗಳಲ್ಲಿರುವ ನಿಮ್ಮ(ಹುಂಡೈ) ಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿ. ಹುಂಡೈ ಪಾಕಿಸ್ತಾನ್ ಪೋಸ್ಟ್ ನಲ್ಲಿ ಅಖಂಡ ಭಾರತ್ ಎಂದು ಪೋಸ್ಟ್ ಹಾಕುವಂತೆ ಅಧಿಕೃತ ಹುಂಡೈ ಟ್ವೀಟರ್ ಹ್ಯಾಂಡಲ್ ಗೆ ಟ್ಯಾಗ್ ಮಾಡಿದ್ದರು. ಆದರೆ ಅವರ ಪೋಸ್ಟ್ ಅನ್ನು ಹುಂಡೈ ಇಂಡಿಯಾ ಬ್ಲಾಕ್ ಮಾಡಿತ್ತು ಎಂದು ವರದಿ ತಿಳಿಸಿದೆ.
ಎಚ್ಚೆತ್ತ ಹುಂಡೈ:
ವಿವಾದದ ಬಗ್ಗೆ ಭಾನುವಾರ ಪ್ರಕಟಣೆ ಬಿಡುಗಡೆ ಮಾಡಿದ್ದ ಹುಂಡೈ, ನಾವು 25 ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಭಾರತದ ರಾಷ್ಟ್ರೀಯತೆಯನ್ನು ನಾವು ಗೌರವಿಸುತ್ತೇವೆ. ಗೌರವಾನ್ವಿತ ದೇಶದಲ್ಲಿ ನಾವು ನಮ್ಮ ಸೇವೆ ನೀಡಲು ಬದ್ಧರಾಗಿದ್ದೇವೆ. ಹುಂಡೈ ಬ್ರ್ಯಾಂಡ್ ಗೆ ಭಾರತ ಎರಡನೇ ಮನೆಯಾಗಿದೆ. ಇಂತಹ ಅಸೂಕ್ಷ್ಮತೆಯ ನಿಲುವನ್ನು ಕಠಿಣವಾಗಿ ಖಂಡಿಸುವುದಾಗಿ ತಿಳಿಸಿತ್ತು.