Advertisement
ನಾವು ಕೂಡ ಜೂನಿಯರ್‌ಗಳಾಗಿದ್ದ ಅನುಭವವನ್ನು ಪಡೆದವರು. ಆಗ ನಮ್ಮ ನಮ್ಮ ಸೀನಿಯರ್‌ಗಳು ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತಿದ್ದರೋ ಹಾಗೆಯೇ ನಮಗಿಂತ ಕಿರಿಯರನ್ನು ನಡೆಸಿಕೊಳ್ಳಬೇಕೆಂಬ ಕನಸು ಕಾಣುತ್ತಿದ್ದೇವೆ. ಹಾಗಾಗಿ, ಕಾಲೇಜು ಎಂಬುದು ನಮಗೆ ಪರಿಚಿತ ಸ್ಥಳವಾಗಿ ಈ ವಲಯಕ್ಕೆ ನಾವೇ ಕೇಳುವವರು ಎಂಬ ಭಾವನೆಯನ್ನು ತಳೆದಿದ್ದೇವೆ. ಹೊಸದಾಗಿ ಬಂದವರು ತಮ್ಮ ತರಗತಿಯನ್ನು ಹುಡುಕುತ್ತ ಅಡ್ಡಾದಿಡ್ಡಿ ಹುಡುಕುತ್ತಿರುವಾಗ ನಾವು ನಮ್ಮಲ್ಲಿಯೇ ನಗುತ್ತೇವೆ.
Related Articles
Advertisement
ಅನೇಕ ಬಾರಿ ಬಣ್ಣದ ಕನಸುಗಳನ್ನು ಕಟ್ಟಿಕೊಂಡು ಬರುವ ಕಿರಿಯರಿಗೆ ಕಾಲೇಜಿನ ಸ್ಥಿತಿಯನ್ನು ನೋಡಿದ ಕೂಡಲೇ ಅವರ ಕನಸುಗಳು ಕಮರಿ ಹೋಗುತ್ತವೆ. ಕಳೆದ ಬಾರಿ ನಾವು ಇದೇ ಕಾಲೇಜಿಗೆ ಬಂದಿದ್ದಾಗ ನಮ್ಮ ಹಿರಿಯರು ನಮ್ಮನ್ನು ಪ್ರೀತಿಯಿಂದ ಬರಮಾಡಿಕೊಂಡುದರಿಂದ ನಮ್ಮ ಕನಸುಗಳು ಅರಳಿದ್ದವು.
ಕಾಲೇಜು ಲೈಫ್ ಎಂದರೆ ಲವಲವಿಕೆ ಸಮಯ. ಪ್ರಾಯ ಸಹಜವಾದ ಭಾವನೆಗಳು ಅರಳಿರುತ್ತವೆ. ಪ್ರೀತಿ-ಜಗಳಗಳು ಸಾಮಾನ್ಯ. ಆದರೆ, ಜಗಳ ಎಂಬುದು ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಕಾಲೇಜಿನ ಜೀವನ ಪ್ರೇರಣೆಯಾಗಬಾರದು.
ಮನೆಯಲ್ಲಿ ಅಣ್ಣ-ತಮ್ಮ, ಅಕ್ಕ-ತಮ್ಮ, ಅಣ್ಣ-ತಂಗಿ ಇಂಥ ಸಂಬಂಧಗಳು ಹೇಗೆ ಇರುತ್ತವೆಯೋ ಹಾಗೆಯೇ ಕಾಲೇಜಿನಲ್ಲಿ ಸೀನಿಯರ್-ಜೂನಿಯರ್‌ಗಳ ಸಂಬಂಧ. ಮನೆಯಲ್ಲಿ ಅಕ್ಕನ ಪುಸ್ತಕವನ್ನು ತಮ್ಮ ಬಳಸುತ್ತಾನೆ. ಯಾವುದಾದರೂ ಪಾಠ ಅರ್ಥವಾಗದಿದ್ದರೆ ಆಗ ತಂಗಿ, ಅಣ್ಣನೊಂದಿಗೆ ಆ ಪಾಠದ ವಿವರವನ್ನು ಹೇಳಿಕೊಡುವಂತೆ ಕೇಳುತ್ತಾಳೆ. “ಸುಮ್ಮನೆ ಟ್ಯೂಶನ್‌ಗೆ ಹೋಗುವುದು ಎಂತಕ್ಕೆ ? ಅಣ್ಣನಲ್ಲಿ ಕೇಳಬಾರದೆ?’ ಎಂದು ಅಮ್ಮನೂ ಹೇಳುತ್ತಾರೆ. ಮನೆಯಲ್ಲಿಯೂ ಸಣ್ಣಪುಟ್ಟ ಜಗಳಗಳು ಸಾಮಾನ್ಯ. ಆಮೇಲೆ, ತಂದೆ-ತಾಯಿಗೆ ದೂರು ಕೊಡುವ ಸಂಪ್ರದಾಯವೂ ಇದೆ. ಇವು ಯಾವುದೂ ತಪ್ಪಲ್ಲ. ಆದರೆ, ಇಂಥ ಕಹಿ ಭಾವನೆಗಳು ತಾತ್ಕಾಲಿಕ ಮಾತ್ರ. ಇವು ಮತ್ತೂಂದು ಕ್ಷಣದಲ್ಲಿ ಮರೆತೇ ಹೋಗುತ್ತವೆ.
ಮನೆಯಲ್ಲಿ ನಾವು ಹಿರಿಯರಾಗಿ ಕಿರಿಯರನ್ನು ಹೇಗೆ ನಡೆಸುತ್ತೇವೆಯೋ ಹಾಗೆ, ಕಿರಿಯರನ್ನು ಕಾಲೇಜಿನಲ್ಲಿಯೂ ನಡೆಸಿಕೊಳ್ಳಬೇಕು. ನಮ್ಮ ಕಿರಿಯ ತರಗತಿಯಲ್ಲಿ ನಮ್ಮ ತಮ್ಮನೂ ಇರಬಹುದು, ತಂಗಿಯೂ ಇರಬಹುದು. ಇರದಿದ್ದರೆ, ಅಲ್ಲಿ ಇರುವವರನ್ನೇ ತಮ್ಮ-ತಂಗಿಯರೆಂದು ಭಾವಿಸುವುದು ಉತ್ತಮ.
ಬನ್ನಿ ಜೂನಿಯರ್ , ನಿಮ್ಮೊಂದಿಗೆ ನಾವೂ ಇದ್ದೇವೆ.
– ಅಕ್ಷಯ್ ಕುಮಾರ್, ಪಲ್ಲಮಜಲುಪ್ರಥಮ ಸ್ನಾತಕೋತ್ತರ ಪತ್ರಿಕೋದ್ಯಮ
ವಿವೇಕಾನಂದ ಕಾಲೇಜ್, ಪುತ್ತೂರು