Advertisement

ಸಾಲಮನ್ನಾದಿಂದ ಯಾರಿಗಿದೆ ಲಾಭ?

03:45 AM Jun 27, 2017 | Team Udayavani |

ಆರ್ಥಿಕ ಶಿಸ್ತಿನ ಬಗ್ಗೆ ಮಾತನಾಡುತ್ತಾ ಕುಳಿತು ಸಾಲ ಮನ್ನಾ ಮಾಡದೇ ಇದ್ದರೆ ಪ್ರತಿಪಕ್ಷಗಳಿಗೆ ಲಾಭವಾಗುತ್ತದೆ ಎಂಬುದು ಎಲ್ಲಾ ರಾಜ್ಯಗಳ ಅಭಿಪ್ರಾಯ. “”ಇಂದು ನಾವು ಮಾಡದಿದ್ದರೆ, ನಾಳೆ ಅವರು ಮಾಡುತ್ತಾರೆ” ಇದು ಈ ರಾಜ್ಯಗಳ ಒಕ್ಕೊರಲ ಹೇಳಿಕೆ. ಅಲ್ಲದೆ ಕೇಂದ್ರ ಸರ್ಕಾರ ಕೂಡ ಸಾಲ ಮನ್ನಾ ಮಾಡಲು ಸುತಾರಾಂ ಒಪ್ಪುತ್ತಿಲ್ಲ. ಆದರೆ ಎನ್‌ಡಿಎ ಸರ್ಕಾರಗಳೇ ಇರುವ ಕಡೆಗಳಲ್ಲಿ ಸಾಲ ಮನ್ನಾ ಮಾಡಲಾಗುತ್ತಿದೆ. 

Advertisement

“”ಹೇಗೂ ಮುಂದೆ ಚುನಾವಣೆ ಬರುತ್ತಲ್ಲ, ಆಗ ಆಳುವ ಸರ್ಕಾರಗಳೇ ನಮ್ಮ ಸಾಲ ಮನ್ನಾ ಮಾಡುತ್ತವೆ, ಹೀಗಾಗಿ ಸಾಲ ಕಟ್ಟದಿದ್ದರೂ ಪರ್ವಾಗಿಲ್ಲ,” ಇದು ಎಸ್‌ಬಿಐ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಅವರ ಆತಂಕದ ಹೇಳಿಕೆ. ಹೀಗೆ ಸರ್ಕಾರಗಳು ಪ್ರತಿ ಬಾರಿಯೂ ರೈತರ ಸಾಲ ಮನ್ನಾ ಮಾಡುತ್ತಾ ಹೋದರೆ, ಕ್ರೆಡಿಟ್‌ ಡಿಸಿಪ್ಲೀನ್‌ ಅಥವಾ ಸಾಲದ ಮೇಲಿನ ಶಿಸ್ತು ಕಡಿಮೆಯಾಗುತ್ತದೆ. ಬ್ಯಾಂಕುಗಳು ನಷ್ಟಕ್ಕೆ ಈಡಾಗಬೇಕಾಗುತ್ತದೆ ಎಂಬುದು ಅವರ ಆತಂಕ.

ಕೇವಲ ಅರುಂಧತಿ ಭಟ್ಟಾಚಾರ್ಯ ಅವರಷ್ಟೇ ಅಲ್ಲ, ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ… ಕೂಡ ಇದೇ ಮಾತನ್ನು ಹೇಳಿದ್ದಾರೆ. ಸಾಲ ಮನ್ನಾ ಎಂಬುದು ರೈತರಿಗೆ ಲಾಭವಾಗುತ್ತದೆ ಎಂಬುದಕ್ಕಿಂತ, ಆರ್ಥಿಕತೆಯಲ್ಲಿನ ಶಿಸ್ತೇ ಹಾಳಾಗಿ ಹೋಗುತ್ತದೆ. ದೇಶದ ಜಿಡಿಪಿ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ಆತಂಕವನ್ನೂ ಪಟೇಲ್‌ ವ್ಯಕ್ತಪಡಿಸುತ್ತಾರೆ. 

ಆದರೆ ದೇಶ ಕಂಡ ಅತ್ಯಂತ ಶ್ರೇಷ್ಠ ಕೃಷಿ ಪತ್ರಕರ್ತ ಪಿ. ಸಾಯಿನಾಥ್‌ ಹೇಳುವುದೇ ಬೇರೆ. ಸಾಲ ಮನ್ನಾ ಮಾಡುವುದು ಸಮಸ್ಯೆಗೆ ಸದ್ಯಕ್ಕೆ ನೀಡುವ ಪರಿಹಾರವಷ್ಟೇ. ಆದರೆ ದೀರ್ಘಾ ವಧಿಯಲ್ಲಿ ಇದು ಯಾವುದೇ ನಿವಾರಣೆಯಲ್ಲ. ಇದಕ್ಕೆ ಬದಲಾಗಿ ಕೇಂದ್ರ ಸರ್ಕಾರ ಸ್ವಾಮಿನಾಥನ್‌ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಬೇಕಷ್ಟೇ ಎನ್ನುತ್ತಾರವರು. ಅಲ್ಲದೆ 2014ರ ಚುನಾವಣಾ ಪ್ರಣಾಳಿಕೆಯಲ್ಲಿ ಸ್ವಾಮಿನಾಥನ್‌ ಆಯೋಗದ ಶಿಫಾರಸುಗಳನ್ನು ಜಾರಿಗೆ ತಂದೇ ತರುತ್ತೇವೆ ಎಂದಿದ್ದ ಬಿಜೆಪಿ ಈಗ ಸಂಪೂರ್ಣವಾಗಿ ಮರೆತು ಬಿಟ್ಟಿದೆ. ದೇಶದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಗಳಿಗೂ, ರೈತರ ಆಕ್ರೋಶಕ್ಕೂ ಇದೇ ಕಾರಣ ಎಂದೂ ಸಾಯಿನಾಥ್‌ ಅವರು ಹೇಳುತ್ತಾರೆ.

ಇದರ ಜತೆಗೆ, ಪ್ರತಿಭಟನೆ ಮಾಡುತ್ತಿರುವ ರೈತರ ಜತೆಗೆ ನೇರವಾಗಿ ಮಾತನಾಡಿ, ಅವರ ಸಮಾಧಾನ ಮಾಡಿ. ಆದರೆ ಪ್ರತಿಭಟನೆ ಮಾಡುವವರು ರೈತರೇ ಅಲ್ಲ, ಇವರ ಜತೆ ಮಾತನಾಡುವುದಿಲ್ಲ ಎಂದು ಹೇಳುವುದು ತಪ್ಪು ಎಂದು ಹೇಳುವ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಮತ್ತು ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಟಾಂಗ್‌ ನೀಡಿದ್ದಾರೆ. 
 
ಹೌದು, ಮೇಲಿನ ಎಲ್ಲ ಸಂಗತಿಗಳನ್ನು ನೋಡಿದಾಗ, ಸಾಲ ಮನ್ನಾ ಎಂಬುದು ಸಮಸ್ಯೆಗೆ ಸದ್ಯದ ಪರಿಹಾರವೆಂದರೂ, ದೀರ್ಘಾವಧಿಗೆ ಯಾವುದೇ ಪರಿಹಾರ ನೀಡುವುದಿಲ್ಲವೆಂಬುದು ಗೊತ್ತಾಗುತ್ತದೆ. ಬಹಳಷ್ಟು ತಜ್ಞರ ಪ್ರಕಾರ, ಸಾಲ ಮನ್ನಾ ಯೋಜನೆ ಎಂಬುದೇ ಇತ್ತೀಚಿನ ಚುನಾವಣಾ ವಿಷಯವಾಗಿದೆ. ಹೀಗಾಗಿ ರಾಜ್ಯ ಸರ್ಕಾರಗಳು ಅನಿವಾರ್ಯವಾಗಿ ಸಾಲ ಮನ್ನಾ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿಬಿಟ್ಟಿವೆ ಎಂದು ವಿಶ್ಲೇಷಕರು ಹೇಳುತ್ತಾರೆ.
 
ಯಾರಿಗೆ ಲಾಭ?
ಪ್ರತಿಬಾರಿಯೂ ಸಾಲ ಮನ್ನಾ ಮಾಡಿದಾಗ ಇದರಿಂದ ಯಾರಿಗೆ ಹೆಚ್ಚು ಲಾಭವಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆ ಸಿಗುವ ಉತ್ತರವೂ ಕುತೂಹಲಕಾರಿಯಾಗಿದೆ. ಏಕೆಂದರೆ, ನಮ್ಮ ದೇಶದಲ್ಲಿ ರೈತರು ಸರ್ಕಾರಗಳ ಅಡಿಯಲ್ಲೇ ಬರುವ ಸಹಕಾರಿ ಸಂಘಗಳಿಂದ ಸಾಲ ಪಡೆಯುವುದು ಕಡಿಮೆ. ಇದಕ್ಕೆ ಕಾರಣ, ರೈತರು ಹೊಂದಿರುವ ಭೂಮಿಯ ಪ್ರಮಾಣ. ಕುಟುಂಬಗಳು ಒಡೆದು, ಜಮೀನುಗಳು ಹಂಚಿಕೆಯಾಗಿ ಉಳಿಯುವುದೇ ಅತ್ಯಲ್ಪ. ಇಂಥ ಭೂಮಿಯೇ ಹೆಚ್ಚಿರುವಾಗ ಸಹಕಾರಿ ಸಂಘಗಳಾಗಲಿ, ವಾಣಿಜ್ಯ ಬ್ಯಾಂಕುಗಳಾಗಲಿ ರೈತರಿಗೆ ನೀಡುವ ಸಾಲದ ಮೊತ್ತ ಕಡಿಮೆಯೇ. ಅಂದರೆ, ಇಂಥ ಆರ್ಥಿಕ ಸಂಸ್ಥೆಗಳಿಂದ ರೈತರು ಪಡೆದ ಒಟ್ಟಾರೆ ಸಾಲದ ಮೊತ್ತ ಶೇ. 40.2ರಷ್ಟು ಮಾತ್ರ. ಇನ್ನು ಖಾಸಗಿಯಾಗಿ ರೈತರು ಮಾಡುವ ಸಾಲದ ಮೊತ್ತ ಶೇ. 59.8. ಹೀಗಾಗಿ ಸಾಲ ಮನ್ನಾ ಎಂಬುದು ರೈತರಿಗಿಂತ ರಾಜಕಾರಣಿಗಳಿಗೇ ಹೆಚ್ಚಿನ ಲಾಭ ಎಂದು ತಜ್ಞರು ವಿಶ್ಲೇಷಿಸುತ್ತಾರೆ.

Advertisement

ಸಾಲ ಮನ್ನಾ ಮತ್ತು ಚುನಾವಣೆ
ಪ್ರತಿ ಬಾರಿಯೂ ರೈತರ ಸಾಲ ಮನ್ನಾ ವಿಷಯ ಸುದ್ದಿಗೆ ಬರು ವುದು ಚುನಾವಣಾ ಕಾಲದಲ್ಲಿಯೇ. ಉತ್ತರ ಪ್ರದೇಶದಲ್ಲಿ ಗೆದ್ದ ಬಿಜೆಪಿ ತನ್ನ ಪ್ರಣಾಳಿಕೆಯಲ್ಲೇ ಸಾಲ ಮನ್ನಾ ಬಗ್ಗೆ ಘೋಷಣೆ ಮಾಡಿತ್ತು. ಅದರಂತೆ, ಗೆದ್ದು ಸರ್ಕಾರ ರಚಿಸಿದ ಕೂಡಲೇ ಮಾಡಿದ ಮೊದಲ ಕೆಲಸವೇ ರೈತರ ಸಾಲ ಮನ್ನಾ ಮಾಡಿದ್ದು. ಒಂದು ರೀತಿಯಲ್ಲಿ ಸಾಲ ಮನ್ನಾಕ್ಕಾಗಿ ಹೋರಾಟ ರೂಪುಗೊಂಡಿದ್ದು ಇಲ್ಲಿಯೇ ಎಂದು ಹೇಳಬಹುದು.

ಉತ್ತರ ಪ್ರದೇಶದಲ್ಲಿ ರೈತರ ಸಾಲ ಮನ್ನಾ ಆದ ಕೂಡಲೇ ನಿಧಾನಗತಿಯಲ್ಲಿ ಉಳಿದ ರಾಜ್ಯಗಳಲ್ಲೂ ಹೋರಾಟ ಶುರು ವಾದವು. ಅದು ಮಹಾರಾಷ್ಟ್ರವಾಗಿರಬಹುದು ಅಥವಾ ಮಧ್ಯ ಪ್ರದೇಶವಾಗಿರಬಹುದು ಅಥವಾ ದೆಹಲಿಯಲ್ಲಿ ತಮಿಳುನಾಡಿನ ರೈತರು ಪ್ರತಿಭಟಿಸಿದ್ದು ಇರಬಹುದು. ಇವೆಲ್ಲವೂ ಉತ್ತರ ಪ್ರದೇಶದಲ್ಲಿನ ಮನ್ನಾ ಯೋಜನೆಗೆ ಹುಟ್ಟಿಕೊಂಡ ಪರ್ಯಾಯ ಹೋರಾಟಗಳು. ಮಧ್ಯಪ್ರದೇಶದಲ್ಲಂತೂ ರೈತರ ಹೋರಾಟ ತಾರಕಕ್ಕೇರಿ ಎಂಟು ಮಂದಿ ರೈತರು ಬಲಿಯಾದರು. ಇದಾದ ಮೇಲೆ ಶಿವರಾಜ್‌ ಸಿಂಗ್‌ ಚೌಹಾಣ್‌ ವಿಧಿ ಇಲ್ಲದೇ ಸಾಲ ಮನ್ನಾ ಘೋಷಿಸಿದ್ದಾರೆ. 

ರಾಜ್ಯಗಳ ವಿಚಾರಕ್ಕೆ ಬಂದರೆ ಉತ್ತರ ಪ್ರದೇಶದಲ್ಲಿ ಒಟ್ಟು ಸಾಲದ ಮೊತ್ತ 4 ಲಕ್ಷ ಕೋಟಿ ರೂ.ಗಳಿದ್ದರೆ ಇದರಲ್ಲಿ 36 ಸಾವಿರ ಕೋಟಿಯಷ್ಟು ಮನ್ನಾ ಮಾಡಲಾಗಿದೆ. ಅದೇ ರೀತಿ ಮಹಾರಾಷ್ಟ್ರದಲ್ಲಿ 3.5 ಲಕ್ಷ ಕೋಟಿ ಒಟ್ಟಾರೆ ಸಾಲವಿದ್ದರೆ ಇದರಲ್ಲಿ 35 ಸಾವಿರ ಕೋಟಿ ರೂ.ಗಳಷ್ಟು ಮನ್ನಾ ಮಾಡಲಾಗಿದೆ. ತಮಿಳುನಾಡಿನಲ್ಲಿ 2.1 ಲಕ್ಷ ಕೋಟಿ ಸಾಲವಿದ್ದರೆ, 8 ಸಾವಿರ ಕೋಟಿ ರೂ.ಮನ್ನಾ, ಮಧ್ಯ ಪ್ರದೇಶದಲ್ಲಿ ಒಟ್ಟು 1.24 ಲಕ್ಷ ಕೋಟಿ ರೂ. ಸಾಲವಿದ್ದರೆ 6 ಸಾವಿರ ಕೋಟಿ ರೂ ಮನ್ನಾ, ಛತ್ತೀಸ್‌ಗಢದಲ್ಲಿ 38 ಸಾವಿರ ಕೋಟಿಯಲ್ಲಿ 3.2 ಸಾವಿರ ಕೋಟಿ ಮನ್ನಾ ಮಾಡಲಾಗಿದೆ. ಅದರಂತೆ ಕರ್ನಾಟಕದಲ್ಲಿ 52 ಸಾವಿರ ಕೋಟಿ ರೂ.ಗಳ ಒಟ್ಟಾರೆ ಸಾಲದಲ್ಲಿ 8 ಸಾವಿರ ಕೋಟಿ ರೂ.ಗಳಷ್ಟು ಮನ್ನಾ ಮಾಡಲಾಗಿದೆ. ರಾಜ್ಯದಲ್ಲಿ ಇದರಿಂದ 22 ಲಕ್ಷ ಮಂದಿ ರೈತರು ಅನುಕೂಲ ಪಡೆಯುತ್ತಾರೆ ಎಂದು ಸರ್ಕಾರವೇ ಹೇಳಿದೆ. 

ಇನ್ನು ಪಂಜಾಬ್‌ನಲ್ಲಿ ಅತಿ ಹೆಚ್ಚು, ಅಂದರೆ, ಪ್ರತಿ ರೈತ ಹೊಂದಿರುವ 2 ಲಕ್ಷ ರೂ.ಗಳ ವರೆಗೆ ಸಾಲ ಮನ್ನಾ ಮಾಡಲಾ ಗಿದೆ. ಇಲ್ಲಿ ಒಟ್ಟಾರೆಯಾಗಿ 1.3 ಲಕ್ಷ ಕೋಟಿ ರೂ.ಗಳಷ್ಟು ಒಟ್ಟಾರೆ ಸಾಲವಿದೆ. ಮಹಾರಾಷ್ಟ್ರದಲ್ಲಿಯೂ 1.5 ಲಕ್ಷದವರೆಗೆ ರೈತರ ಸಾಲ ಮನ್ನಾ ಮಾಡಲಾಗಿದೆ. ಈ ನಡುವೆಯೇ ರಾಜಸ್ಥಾನ, ಹರ್ಯಾಣ ಸೇರಿದಂತೆ ಇನ್ನೂ ಹಲವಾರು ರಾಜ್ಯಗಳಲ್ಲಿ ಸಾಲ ಮನ್ನಾಕ್ಕಾಗಿ ಪ್ರತಿಭಟನೆಗಳು ನಡೆಯುತ್ತಲೇ ಇವೆ.
 
ಆರ್ಥಿಕ ಶಿಸ್ತಿನ ಬಗ್ಗೆ ಮಾತನಾಡುತ್ತಾ ಕುಳಿತು ಸಾಲ ಮನ್ನಾ ಮಾಡದೇ ಇದ್ದರೆ ಪ್ರತಿಪಕ್ಷಗಳಿಗೆ ಲಾಭವಾಗುತ್ತದೆ ಎಂಬುದು ಈ ಎಲ್ಲಾ ರಾಜ್ಯಗಳ ಅಭಿಪ್ರಾಯ. “”ಇಂದು ನಾವು ಮಾಡದಿದ್ದರೆ, ನಾಳೆ ಅವರು ಮಾಡುತ್ತಾರೆ” ಇದು ಈ ರಾಜ್ಯಗಳ ಒಕ್ಕೊರಲ ಹೇಳಿಕೆ.

ಅಲ್ಲದೆ ಕೇಂದ್ರ ಸರ್ಕಾರ ಕೂಡ ಸಾಲ ಮನ್ನಾ ಮಾಡಲು ಸುತಾರಾಂ ಒಪ್ಪುತ್ತಿಲ್ಲ. ಆದರೆ ಎನ್‌ಡಿಎ ಸರ್ಕಾರಗಳೇ ಇರುವ ಕಡೆಗಳಲ್ಲಿ ಸಾಲ ಮನ್ನಾ ಮಾಡಲಾಗುತ್ತಿದೆ. ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟಿÉ ಅವರಂತೂ ಸಾಲ ಮನ್ನಾಕ್ಕೆ ಬೆಂಬಲವಿಲ್ಲ. ಬೇಕಾದರೆ, ರಾಜ್ಯಗಳೇ ಸಂಪನ್ಮೂಲ ಕ್ರೋಢೀಕರಿಸಿಕೊಂಡು ಮನ್ನಾ ಮಾಡಲಿ ಎಂದು ಹೇಳಿದ್ದಾರೆ. 

ಅಲ್ಲದೆ 2008ರಲ್ಲಿ ಯುಪಿಎ 1 ಸರ್ಕಾರ ಸಾಲ ಮನ್ನಾ ಮಾಡಿದ ಮೇಲೆ ಆರ್ಥಿಕತೆ ಮೇಲೆ ಬೀರಿದ ಪರಿಣಾಮ ಕೇಂದ್ರ ಸರ್ಕಾರಕ್ಕೆ ಗೊತ್ತಿದೆ. ಹೀಗಾಗಿಯೇ ಜನಪ್ರಿಯವಾದ ಸಾಲ ಮನ್ನಾ ಯೋಜನೆ ಘೋಷಿಸಲು ಹಿಂದೇಟು ಹಾಕುತ್ತಿದೆ. ಆದರೆ ಈ ವರ್ಷಾಂತ್ಯಕ್ಕೆ ಮತ್ತು ಮುಂದಿನ ವರ್ಷ ಕೆಲವು ರಾಜ್ಯಗಳ ಚುನಾವಣೆ ಇರುವುದರಿಂದ ಅನಿವಾರ್ಯವಾಗಿ ಸಾಲ ಮನ್ನಾ ಮಾಡಲೇಬೇಕು. ಸಾಲ ಮನ್ನಾ ಮಾಡದಿದ್ದರೆ ವಿರೋಧ ಪಕ್ಷಗಳಿಗೆ ಇದೇ ಚುನಾವಣಾ ವಿಷಯವಾಗಬಹುದು ಅಥವಾ ಸಾಲ ಮನ್ನಾ ಮಾಡಿದರೂ, ಆಡಳಿತ ಪಕ್ಷಕ್ಕೆ ಇದೇ ಚುನಾವಣೆಗೆ ಪ್ರಮುಖ ವಿಷಯವಾಗಿ ಬಿಡುತ್ತದೆ. ಹೀಗಾಗಿ ಸಂಪನ್ಮೂಲದ ಕ್ರೋಢೀಕರಣ ಕಷ್ಟವಾದರೂ ಸಾಲ ಮನ್ನಾ ಮಾಡಲೇಬೇಕು. 

ಈ ವರ್ಷಾಂತ್ಯಕ್ಕೆ ಗುಜರಾತ್‌, ಮುಂದಿನ ವರ್ಷ ಕರ್ನಾಟಕ ಮತ್ತು ಮಧ್ಯಪ್ರದೇಶ ಚುನಾವಣೆ ನಡೆಯಲಿದೆ. ಅಲ್ಲದೆ 2019ಕ್ಕೆ ಲೋಕಸಭೆ ಚುನಾವಣೆ ಜತೆ ಜತೆಗೇ ಮಹಾರಾಷ್ಟ್ರ ಚುನಾವಣೆಯೂ ಇದೆ. ಹೀಗಾಗಿ ಅನಿವಾರ್ಯವಾಗಿ ಸಾಲ ಮನ್ನಾ ಮಾಡಲೇಬೇಕು. 

2008ರಲ್ಲಿ ರೈತರ ಸಾಲ ಮನ್ನಾ ಮಾಡಿದ್ದ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ, 2009ರ ಲೋಕಸಭೆ ಚುನಾವಣೆಯಲ್ಲಿ ಅನಾಯಾಸವಾಗಿ ಗೆದ್ದಿತ್ತು. ಹೀಗಾಗಿ ಕರ್ನಾಟಕ, ಮಹಾರಾಷ್ಟ್ರ ಕೂಡ ಇದೇ ಹಾದಿಯಲ್ಲಿ ಸಾಲ ಮನ್ನಾ ಮಾಡಿವೆ. ಏಕೆಂದರೆ, ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ರಾಜ್ಯ ಸರ್ಕಾರವನ್ನು ಟೀಕಿಸಲು, ಅದರ ವಿರುದ್ದ ಹೋರಾಟ ನಡೆಸಲು ಇದನ್ನೇ ಅಸ್ತ್ರ ಮಾಡಿಕೊಂಡಿದ್ದವು. ಇದೀಗ ಸಾಲ ಮನ್ನಾ ಮಾಡಿರುವುದರಿಂದ ಸಿಎಂ ಸಿದ್ದರಾಮಯ್ಯ ಒಂದರ್ಥದಲ್ಲಿ ಪ್ರತಿಪಕ್ಷಗಳ ಹೋರಾಟದ ಅಸ್ತ್ರವನ್ನು ಕಸಿದುಕೊಂಡಿದ್ದಾರೆ. 

ಇನ್ನು ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವೆ ಸಂಬಂಧ ಅಷ್ಟೇನೂ ಚೆನ್ನಾಗಿಲ್ಲ. ಇತ್ತೀಚೆಗಷ್ಟೇ ಮುಂಬೈಗೆ ತೆರಳಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ಸಿಎಂ ದೇವೇಂದ್ರ ಫ‌ಡ್ನವೀಸ್‌ ಪಕ್ಷದ ಸ್ಥಳೀಯ ನಾಯಕರಿಗೆ ಮಧ್ಯಂತರ ಚುನಾವಣೆಗೆ ಸಿದ್ಧರಾಗಿ ಎಂದಿದ್ದರಲ್ಲದೇ, ಮುಂದೆ ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಾಗಬೇಕು ಎಂದಿದ್ದರು. ಹೀಗಾಗಿ ಮಹಾರಾಷ್ಟ್ರದಲ್ಲಿ ಈಗ ಮಾಡಿರುವ ಸಾಲ ಮನ್ನಾ ಯೋಜನೆಯ ಲಾಭ ಪಡೆವ ಆಲೋಚನೆ ಇದರದ್ದು.

– ಸೋಮಶೇಖರ ಸಿ.ಜೆ.

Advertisement

Udayavani is now on Telegram. Click here to join our channel and stay updated with the latest news.

Next