ನವದೆಹಲಿ:ಸ್ಪೀಕರ್ ಆದೇಶ ಪ್ರಶ್ನಿಸಿ ಹದಿನೇಳು ಮಂದಿ ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿ ಕುರಿತು ಸುದೀರ್ಘವಾಗಿ ವಾದ, ಪ್ರತಿವಾದ ಆಲಿಸಿದ್ದ ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು. ಏತನ್ಮಧ್ಯೆ ಆಪರೇಶನ್ ಕಮಲಕ್ಕೆ ಸಂಬಂಧಪಟ್ಟ ಆಡಿಯೋವನ್ನು ಸಾಕ್ಷಿಯಾಗಿ ಪರಿಗಣಿಸಲು ಸುಪ್ರೀಂಕೋರ್ಟ್ ಸೋಮವಾರ ಒಪ್ಪಿಗೆ ಸೂಚಿಸಿರುವುದು ಅನರ್ಹ ಶಾಸಕರ ಕಾನೂನು ಸಮರಕ್ಕೆ ದೊಡ್ಡ ಹಿನ್ನಡೆಯಾದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆಪರೇಶನ್ ಕಮಲ ಆಡಿಯೋ..ಇಂದು ಸುಪ್ರೀಂನಲ್ಲಿ ಏನು ನಡೆಯಿತು?
ಇಂದು ಸುಪ್ರೀಂಕೋರ್ಟ್ ನಲ್ಲಿ ನ್ಯಾ.ರಮಣ್ ನೇತೃತ್ವದ ಪೀಠದ ಮುಂದೆ ವಾದ ಮಂಡಿಸಿದ್ದ ಕಾಂಗ್ರೆಸ್ ಪರ ಹಿರಿಯ ವಕೀಲ ಕಪಿಲ್ ಸಿಬಲ್, ಅನರ್ಹ ಶಾಸಕರ ಪ್ರಕರಣದ ತೀರ್ಪು ಕಾಯ್ದಿರಿಸಿದ ನಂತರ ಮಹತ್ವದ ಬದಲಾವಣೆ ನಡೆದಿದೆ. ಹೀಗಾಗಿ ನಮಗೆ ವಾದ ಮಂಡಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದರು.
ಈ ಸಂದರ್ಭದಲ್ಲಿ ನ್ಯಾ.ರಮಣ್ ಅವರು, ಕಪಿಲ್ ಸಿಬಲ್ ನೀವು ಹಿರಿಯ ವಕೀಲರು, ಈಗಾಗಲೇ ಎಲ್ಲಾ ವಾದ ಮಂಡಿಸಿದ್ದೀರಿ. ಇನ್ನೇನು ಬಾಕಿ ಇದೆ. ತೀರ್ಪು ಕಾಯ್ದಿರಿಸಲಾಗಿದೆ ಎಂದರು. ನಮಗೆ ಮಹತ್ವದ ದಾಖಲೆ ಸಿಕ್ಕಿದೆ. ತೀರ್ಪು ಕಾಯ್ದಿರಿಸಿದ ನಂತರ ತುಂಬಾ ಬೆಳವಣಿಗೆ ನಡೆದಿದೆ. ಹೀಗಾಗಿ ಇದನ್ನು ಪರಿಗಣಿಸಲೇ ಬೇಕು ಎಂದಾಗ. ಆಯ್ತು, ಈ ಬಗ್ಗೆ ನಾಳೆ ಸಿಜೆಐ ಅವರ ಗಮನಕ್ಕೆ ತರುತ್ತೇವೆ. ಅವರು ಒಪ್ಪಿಗೆ ಸೂಚಿಸಿದರೆ ನಾಳೆಯೇ ಪ್ರತ್ಯೇಕ ಪೀಠದಲ್ಲಿ 5 ನಿಮಿಷಗಳ ಕಾಲ ಅದರ ವಿಚಾರಣೆ ನಡೆಯಲಿದೆ ಎಂದು ನ್ಯಾ.ರಮಣ್ ಹೇಳಿದರು.
ಸಿಜೆಐ ಅವರ ಗಮನಕ್ಕೆ ತಂದು ಹೊಸ ಪೀಠ ರಚನೆಗೆ ಮನವಿ ಮಾಡುತ್ತೇವೆ, ಸಿಜೆಐ ಅವರು ಒಪ್ಪಿದರೆ ನಾಳೆಯೇ ವಿಚಾರಣೆಗೆ ಕೈಗೆತ್ತಿಕೊಳ್ಳುತ್ತೇವೆ ಎಂದು ನ್ಯಾ.ರಮಣ್ ಅಭಿಪ್ರಾಯವ್ಯಕ್ತಪಡಿಸಿ, ವಿಚಾರಣೆ ನಾಳೆಗೆ ಮುಂದೂಡಿದರು.