ಹೊಸದಿಲ್ಲಿ/ಬೆಂಗಳೂರು: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಸರಕಾರ ರಚನೆಗೆ ಅವಕಾಶ ನೀಡಿದ ರಾಜ್ಯಪಾಲರ ಕ್ರಮ ಮತ್ತು ತಕ್ಷಣಕ್ಕೆ ವಿಶ್ವಾಸ ಮತ ಯಾಚನೆಗೆ ಸೂಚಿಸಬೇಕೆಂದು ಶಿವಸೇನೆ- ಎನ್ ಸಿಪಿ- ಕಾಂಗ್ರೆಸ್ ಪಕ್ಷಗಳು ಕೋರ್ಟ್ ಮೆಟ್ಟಿಲೇರಿದ್ದವು. ಬುಧವಾರ ಸಂಜೆಯೊಳಗೆ ವಿಶ್ವಾಸಮತ ಯಾಚಿಸುವಂತೆ ಕೋರ್ಟ್ ತೀರ್ಪು ನೀಡಿದೆ.
ಇಂದು ಸುಪ್ರೀಂ ಕೋರ್ಟ್ ನಲ್ಲಿ ಅಂತಿಮ ತೀರ್ಪನ್ನು ಓದುವಾಗ ನ್ಯಾಯಮೂರ್ತಿ ಎನ್ ವಿ ರಮಣ ಅವರು ಕರ್ನಾಟಕದ ಎಸ್ ಆರ್ ಬೊಮ್ಮಾಯಿ ಪ್ರಕರಣವನ್ನು ಉಲ್ಲೇಖಿಸಿದರು. ಹಾಗಾದರೆ ಏನಿದು ಎಸ್ ಆರ್ ಬೊಮ್ಮಾಯಿ ಪ್ರಕರಣ ? ಮುಂದೆ ಓದಿ.
1989ರಲ್ಲಿ ಎಸ್ ಆರ್ ಬೊಮ್ಮಾಯಿ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಎಪ್ರಿಲ್ ತಿಂಗಳಲ್ಲಿ ಕೆಲವು ಶಾಸಕರು ರಾಜ್ಯಪಾಲರನ್ನು ಭೇಟಿಯಾಗಿ ತಾವು ಸರಕಾರಕ್ಕೆ ನೀಡಿದ ಬೆಂಬಲವನ್ನು ಹಿಂಪಡೆದ ಪತ್ರ ನೀಡಿದ್ದರು. ಸರಕಾರದಲ್ಲಿ ಬಿಕ್ಕಟ್ಟು ಸೃಷ್ಟಿಯಾದಾಗ ಎಪ್ರಿಲ್ 20ರಂದು ಮುಖ್ಯಮಂತ್ರಿಯಾಗಿದ್ದ ಎಸ್ ಆರ್ ಬೊಮ್ಮಾಯಿ ಅವರು ರಾಜ್ಯಪಾಲರನ್ನು ಭೇಟಿಯಾಗಿ ವಿಶ್ವಾಸ ಮತ ಯಾಚನೆಗೆ ಒಂದು ವಾರದ ಗಡುವು ಕೇಳಿದ್ದರು.
ಆದರೆ ಅನಿರೀಕ್ಷಿತ ಬೆಳವಣಿಗೆಯಲ್ಲಿ ಮರುದಿನ ರಾಜ್ಯಪಾಲರು ವಿಧಾನಸಭೆಯನ್ನು ವಿಸರ್ಜಿಸಿ ರಾಷ್ಟ್ರಪತಿ ಆಡಳಿತಕ್ಕೆ ಸೂಚಿಸಿ ಕೇಂದ್ರಕ್ಕೆ ಪತ್ರ ಬರೆದಿದ್ದರು. ಅಂದು ಪ್ರಧಾನಿಯಾಗಿದ್ದವರು ರಾಜೀವ್ ಗಾಂಧಿ ಮತ್ತು ರಾಷ್ಟ್ರಪತಿಯಾಗಿದ್ದವರು ಆರ್. ವೆಂಕಟರಾಮನ್.
ಕೆಲವೇ ಗಂಟೆಯಲ್ಲಿ ನಡೆದ ಬೆಳವಣಿಗೆಯಲ್ಲಿ ಆರ್ ವೆಂಕಟರಾಮನ್ ಅವರು ಕರ್ನಾಟಕದ ಎಸ್ ಆರ್ ಬೊಮ್ಮಾಯಿ ಸರಕಾರನ್ನು ವಿಸರ್ಜಿಸಿ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಸಹಿ ಹಾಕಿದ್ದರು.
ಈ ನಡೆಯನ್ನು ಪ್ರಶ್ನಿಸಿ ಎಸ್ ಆರ್ ಬೊಮ್ಮಾಯಿ ಅವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ತ್ವರಿತ ವಿಚಾರಣೆ ನಡೆಸಿದ್ದ ಹೈಕೋರ್ಟ್, ರಾಷ್ಟ್ರಪತಿ ಆಡಳಿತ ಹೇರಿರುವ ಪ್ರಕ್ರಿಯೆ ಸಂವಿಧಾನ ಪ್ರಕಾರವೇ ನಡೆದಿದೆ ಎಂದು ತೀರ್ಪು ನೀಡಿತ್ತು. ಎಸ್ ಆರ್ ಬೊಮ್ಮಾಯಿ ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆಯ ನಂತರ ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠ 1994ರಲ್ಲಿ ಮಹತ್ವದ ತೀರ್ಪು ಪ್ರಕಟಿಸಿತ್ತು.
”ಸರಕಾರವೊಂದಕ್ಕೆ ಬಹುಮತ ಇದೆಯೇ ಇಲ್ಲವೇ ಎಂದು ನಿರ್ಧರಿಸುವ ವೇದಿಕೆ ವಿಧಾನಸಭೆಯ ಅಧಿವೇಶನವೇ ಹೊರತು ರಾಜಭವನವಲ್ಲ. ಇಷ್ಟೇ ಅಲ್ಲದೆ ಆರ್ಟಿಕಲ್ 356 ರಾಷ್ಟ್ರಪತಿಯವರಿಗೆ ನೀಡಿರುವುದು ಷರತ್ತು ಬದ್ಧ ಅಧಿಕಾರವನ್ನೇ ಹೊರತು ಪರಮಾಧಿಕಾರವನ್ನಲ್ಲ” ಎಂದು ಮಹತ್ವದ ತೀರ್ಪು ನೀಡಿತ್ತು. ಇದು ಎಸ್ ಆರ್ ಬೊಮ್ಮಾಯಿ ಪ್ರಕರಣ ಎಂದೇ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.