Advertisement

ಏನಿದು ಎನ್‌ ಆರ್ ಸಿ? ವರದಿಯಲ್ಲಿ ಹೆಸರಿಲ್ಲದವರ ಮುಂದಿನ ದಾರಿಯೇನು?

09:19 AM Sep 01, 2019 | keerthan |

ಅಸ್ಸಾಂನ ಎನ್‌ ಆರ್ ಸಿ ಅಥವಾ ರಾಷ್ಟ್ರೀಯ ಪೌರತ್ವ ನೋಂದಣಿಯ ಪಟ್ಟಿಯನ್ನು ಅಂತಿಮ ಮಾಡಿ ಕೇಂದ್ರ ಸರಕಾರ ಇಂದು ಬಿಡುಗಡೆ ಮಾಡಿದೆ.  ಇದರಿಂದಾಗಿ 19 ಲಕ್ಷ ಜನ ನಿವಾಸಿಗಳು ಅಸ್ಸಾಂ ರಾಜ್ಯದ ನಿವಾಸಿಗಳಲ್ಲ ಎಂದು ಸರಕಾರ ತಿಳಿಸಿದೆ. ಹಾಗಾದರೆ ಏನಿದು ಎನ್‌ ಆರ್‌ ಸಿ., ಯಾಕಿಷ್ಟು ಜನರು ನಿರಾಶ್ರಿತರಾಗುತ್ತಿದ್ದಾರೆ ? ಹಾಗಾದರೆ ಇನ್ನು ಮುಂದೆ ಇವರಿಗೆ ನೆಲೆ ಎಲ್ಲಿ? ವಿಸ್ತ್ರತ ವರದಿ ಇಲ್ಲಿದೆ.

Advertisement

ಏನಿದು ಎನ್‌ ಆರ್‌ ಸಿ
ರಾಷ್ಟ್ರೀಯ ಪೌರತ್ವ ನೋಂದಣಿ ಎಂದರೆ ಭಾರತೀಯರು  ಮತ್ತು ವಲಸಿಗರನ್ನು  ಪ್ರತ್ಯೇಕಿಸುವ ಪಟ್ಟಿ. 1951ರ ಜನಸಂಖ್ಯೆಯ ವರದಿಯನ್ನು ಆಧರಿಸಿ ಮೊದಲ ಬಾರಿಗೆ ಎನ್‌ ಆರ್‌ ಸಿ ಯನ್ನು ಸರಕಾರ ಜಾರಿ ಮಾಡಿತ್ತು. ಆದರೆ ನಂತರದ ದಿನಗಳಲ್ಲಿ ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬರುವವರ ಸಂಖ್ಯೆ ಹೆಚ್ಚಳವಾದಾಗ ತೊಡಗಿತ್ತು.

ಬಾಂಗ್ಲಾದೇಶದಿಂದ ಜನರು ಅಕ್ರಮವಾಗಿ  ರಾಜ್ಯದ ಒಳ ನುಸುಳುವುದರಿಂದ ಅಸ್ಸಾಂನ ಮೂಲ ಸಂಸ್ಕೃತಿ ಹಾಳಾಗುತ್ತಿದೆ, ಮೂಲನಿವಾಸಿಗಳ ಜನಜೀವನದ ಮೇಲೆ ಈ ಅಕ್ರಮ ವಲಸಿಗರ ಪ್ರಭಾವ ಬೀರುತ್ತಿದೆ ಎಂದು ವಲಸಿಗರನ್ನು ರಾಜ್ಯದಿಂದ ಹೊರಹಾಕಲು ಕೂಗು ಎದ್ದಿತ್ತು. ಬಾಂಗ್ಲಾದಿಂದ ಅಕ್ರಮ ವಲಸೆ  ತೀರಾ ಜಾಸ್ತಿಯಾದಾಗ ಅಸ್ಸಾಂ ರಾಜ್ಯದಲ್ಲಿ ಹೋರಾಟಗಳು ನಡೆದವು. ಆ ಸಮಯದಲ್ಲಿ ಹುಟ್ಟಿಕೊಂಡ ಅಸ್ಸಾಂ ವಿದ್ಯಾರ್ಥಿ ಪರಿಷತ್‌ ನೇತೃತ್ವದಲ್ಲಿ ಅಸ್ಸಾಂ ರಾಜ್ಯದಲ್ಲಿ ವಲಸಿಗರ ಗಡಿಪಾರು ಮಾಡುವಂತೆ ಒತ್ತಾಯಿಸಿ ಕ್ರಾಂತಿ ನಡೆದಿತ್ತು. ಈ ವಿವಾದ ದೊಡ್ಡದಾಗಿ ನಂತರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ಅಸ್ಸಾಂ ರಾಜ್ಯದಲ್ಲಿ ಮೂಲ ನಿವಾಸಿಗಳು ಯಾರು ಮತ್ತು ವಲಸಿಗರು ಯಾರು ಎಂದು ವಿಂಗಡಿಸಿಲು ಕೇಂದ್ರ ಸರಕಾರಕ್ಕೆ  2013ರಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು. ಅದರಂತೆ ಆರು ವರ್ಷಗಳ  ನಂತರ ಶನಿವಾರ ಕೇಂದ್ರ ಸರಕಾರ ಪಟ್ಟಿ ಬಿಡುಗಡೆ ಮಾಡಿದೆ.

1985ರಲ್ಲಿ ನಡೆದ ಒಪ್ಪಂದದ ಪ್ರಕಾರ ಕೆಲವು ನಿಯಮಗಳನ್ನು ರೂಪಿಸಲಾಗಿದ್ದು, ಅದರಲ್ಲಿ 1971 ಮಾರ್ಚ್‌  24ರ ಮಧ್ಯರಾತ್ರಿಯವರೆಗೆ ಅಸ್ಸಾಂ ರಾಜ್ಯದ ಒಳಗೆ ಪ್ರವೇಶಿಸಿದವರು ಅಸ್ಸಾಂನ ನಿವಾಸಿಗಳು ಎಂದು ಪರಿಗಣಿಸಲಾಗಿದೆ. ಯಾಕೆಂದರೆ 1971 ಮಾರ್ಚ್‌ 22ರ ನಂತರ ಬಾಂಗ್ಲಾದಲ್ಲಿ ಸ್ವಾತಂತ್ರ್ಯದ ಹೋರಾಟ ಅರಂಭವಾದ ಕಾರಣ ನಂತರದ ದಿನಗಳಲ್ಲಿ ವಲಸಿಗರ ಸಂಖ್ಯೆ ತೀವ್ರ ಹೆಚ್ಚಿತ್ತು.

Advertisement

ಜನವರಿ ಒಂದು 1966ರ ನಂತರ ಮತ್ತು ಮಾರ್ಚ್‌ 25 1971ರ ಒಳಗೆ ಅಸ್ಸಾಂ ರಾಜ್ಯವನ್ನು ಪ್ರವೇಶಿಸಿದವರು ಪ್ರಾದೇಶಿಕ ವಿದೇಶಿ ನೋಂದಣಿ ಅಧಿಕಾರಿಯ ಬಳಿಯಲ್ಲಿ ಅಕ್ರಮ ವಲಸಿಗರಲ್ಲ ಎಂದು ಪತ್ರ ಪಡೆದಿರಬೇಕು. 1971ರ ಮೊದಲು ಅಸ್ಸಾಂ ರಾಜ್ಯ ನಿವಾಸಿಗಳೆಂದು ಸರಕಾರಿ ದಾಖಲೆ ಹೊಂದಿರುವವರು ಮತ್ತು ಅವರ ಮುಂದಿನ ಪೀಳಿಗೆಯವರನ್ನು ಅಸ್ಸಾಂ ಪ್ರಜೆಗಳೆಂದು ಪರಿಗಣಿಸಲಾಗುತ್ತದೆ.

ಅಂತಿಮ ಪಟ್ಟಿಯಲ್ಲಿ ಏನಿದೆ ?
ಶನಿವಾರ ಕೇಂದ್ರ ಸರಕಾರ ಅಂತಿಮ ಎನ್ ಆರ್‌ ಸಿ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಒಟ್ಟು 3,11,21,004 ಜನ ಅಸ್ಸಾಂ ಮೂಲ ನಿವಾಸಿಗಳೆಂದು ಪಟ್ಟಿ ಮಾಡಿದೆ. ಉಳಿದ 19,06,657 ಜನರನ್ನು ಈ ಪಟ್ಟಿಯಿಂದ ಹೊರಗಿಟ್ಟಿದ್ದು, ಅವರು ತಾವು ಅಸ್ಸಾಂ ನಿವಾಸಿಗಳೆಂದು ಸಮರ್ಪಕ ದಾಖಲೆ ಸಲ್ಲಿಸದೇ ಇರುವುದರಿಂದ ಈ ಪಟ್ಟಿಯಿಂದ ಹೊರಗಿಡಲಾಗಿದೆ.  ಈ ವರದಿಗಾಗಿ ರಾಜ್ಯದಲ್ಲಿ 2500 ಎನ್‌ ಆರ್‌ ಸಿ ಸೇವಾ ಕೇಂದ್ರಗಳನ್ನು ತೆರೆಯಲಾಗಿತ್ತು.  2017ರಲ್ಲಿ ಸರಕಾರ ಒಂದು ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ 1.9 ಕೋಟಿ ಮಂದಿ ನೋಂದಣಿ ಆಗಿದ್ದರು. ಸರಕಾರ ಮತ್ತೊಮ್ಮೆ ಅವಕಾಶ ನೀಡಿದಾಗ 3.29 ಕೋಟಿ ಜನ ಅಸ್ಸಾಂ ನಾಗರಿಕತ್ವ ಸಾಬೀತುಪಡಿಸಲು ಅರ್ಜಿ ಸಲ್ಲಿಸಿದ್ದರು.

ಮುಂದೇನು ?
ಎನ್‌ ಆರ್‌ ಸಿ ಪಟ್ಟಿಯಲ್ಲಿ ಹೆಸರು ವಂಚಿತರಾದವರು ಮುಂದೆ ವಿದೇಶಿ ನ್ಯಾಯ ಮಂಡಳಿಯಲ್ಲಿ 120 ದಿನಗಳ ಒಳಗೆ ಸೂಕ್ತ ದಾಖಲೆಗಳೊಂದಿಗೆ  ಮೇಲ್ಮನವಿ ಸಲ್ಲಿಸಬಹುದು. ಮನವಿ ಸಲ್ಲಿಸಿದ ಆರು ತಿಂಗಳೊಳಗೆ ನ್ಯಾಯ ಮಂಡಳಿ ತೀರ್ಪು ನೀಡಬೇಕು. ವಿದೇಶಿ  ನ್ಯಾಯ ಮಂಡಳಿಯ ತೀರ್ಪನ್ನು ಹೈಕೋರ್ಟ್‌ ನಲ್ಲಿ ಮೇಲ್ಮನವಿ ಸಲ್ಲಿಸಲು ಕೂಡಾ ಅವಕಾಶ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next