ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ಶನಿವಾರ (ಆಗಸ್ಟ್ 15,2020)ದಂದು 74ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ನಂತರ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಯೋಜನೆ ಘೋಷಿಸಿದ್ದಾರೆ.
ಈ ಯೋಜನೆ ಸಂಪೂರ್ಣವಾಗಿ ತಂತ್ರಜ್ಞಾನ ಆಧಾರಿತವಾಗಿದ್ದು, ಇದು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನು ಹುಟ್ಟು ಹಾಕಲಿದೆ ಎಂದು ಪ್ರಧಾನಿ ಹೇಳಿದರು.
ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಯೋಜನೆ ಕುರಿತು ವಿವರಿಸಿದ ಅವರು, ಪ್ರತಿಯೊಬ್ಬ ಭಾರತೀಯನಿಗೂ ಆರೋಗ್ಯ ಕಾರ್ಡ್ ಲಭ್ಯವಾಗಲಿದೆ. ಈ ಕಾರ್ಡ್ ನಲ್ಲಿ ಆತನ/ಆಕೆಯ ಎಲ್ಲಾ ಆರೋಗ್ಯ ಸಂಬಂಧಿ ವಿವರಗಳು ದಾಖಲಾಗಿರುತ್ತದೆ. ಈ ಕಾರ್ಡ್ ಅನ್ನು ಆರೋಗ್ಯ ಸೇವೆ ಮತ್ತು ಔಷಧ ಪಡೆಯಲು ಉಪಯೋಗಿಸಬಹುದಾಗಿದೆ ಎಂದರು.
ಇಂದು ನಾನು ದೇಶದ ಜನತೆಗೆ ಹೊಸ ಯೋಜನೆಯನ್ನು ಘೋಷಿಸುತ್ತಿದ್ದೇನೆ. ಇದು ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಯೋಜನೆಯಾಗಿದೆ. ಇದು ಆರೋಗ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಲಿದೆ ಎಂದು ಹೇಳಿದರು.
ಏನಿದು ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಯೋಜನೆ?
ನ್ಯಾಷನಲ್ ಹೆಲ್ತ್ ಮಿಷನ್ ಯೋಜನೆಯ ನೀಲನಕ್ಷೆಯನ್ನು ಕಳೆದ ವರ್ಷವೇ ಬಿಡುಗಡೆಗೊಳಿಸಲಾಗಿತ್ತು. ದತ್ತಾಂಶ ಮತ್ತು ಮೂಲಸೌಕರ್ಯ ಸೇವೆಗಳ ಮೂಲಕ ದಕ್ಷ ಮತ್ತು ಅಗ್ಗದ ದರದಲ್ಲಿ ಆರೋಗ್ಯ ಸೇವೆ ನೀಡುವ ಉದ್ದೇಶ ಹೊಂದಿತ್ತು. ಈ ಯೋಜನೆಯ ಮೂಲ ಉದ್ದೇಶ ತಂತ್ರಜ್ಞಾನ ಆಧಾರಿತವಾಗಿರುವುದು. ಡಿಜಿಟಲ್ ವ್ಯವಸ್ಥೆ ಮೂಲಕ ಪ್ರತಿಯೊಬ್ಬರಿಗೂ ಉನ್ನತ ಗುಣಮಟ್ಟದ ಆರೋಗ್ಯ ಸೇವೆ ನೀಡುವುದು ಮುಖ್ಯ ಉದ್ದೇಶವಾಗಿತ್ತು. ಇದು ಹಲವಾರು ಡಿಜಿಟಲ್ ಆರೋಗ್ಯ ಸೇವೆಯನ್ನು ಒಳಗೊಂಡಿದ್ದು, ಈ ಮೂಲಕ ಎಲ್ಲಾ ಆರೋಗ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ. ಅಷ್ಟೇ ಅಲ್ಲ ಭದ್ರತೆ ಮತ್ತು ಖಾಸಗಿ ಮಾಹಿತಿ ಗೌಪ್ಯತೆಯನ್ನು ಕಾಪಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಏನಿದು ಆರೋಗ್ಯ ಕಾರ್ಡ್?
ಪ್ರತಿಯೊಬ್ಬ ಭಾರತೀಯನೂ ಡಿಜಿಟಲ್ ಆರೋಗ್ಯ ಕಾರ್ಡ್ ಪಡೆದುಕೊಳ್ಳಲಿದ್ದಾರೆ ಎಂದು ಮೋದಿ ಘೋಷಿಸಿದ್ದಾರೆ. ಈ ಕಾರ್ಡ್ ನಲ್ಲಿ ಮುಖ್ಯವಾಗಿ ನಮ್ಮೆಲ್ಲಾ(ಆಕೆ/ಆತ) ಆರೋಗ್ಯ ಮಾಹಿತಿಯ ದಾಖಲೆ ಡಿಜಿಟಲ್ ಫಾರ್ಮೆಟ್ ನಲ್ಲಿ ಇರುತ್ತದೆ. ಈ ದಾಖಲೆ ದೇಶಾದ್ಯಂತ ಇರುವ ವೈದ್ಯರುಗಳು ಮತ್ತು ಆರೋಗ್ಯ ಸೌಲಭ್ಯಕ್ಕೆ ಲಿಂಕ್ ಆಗಿರುತ್ತದೆ.