ಈ ಅನುಭವ ನಿಮಗೆ ವಿಚಿತ್ರ ಎನಿಸಬಹುದು. ಆದರೆ ನನ್ನ ಪಾಲಿಗೆ ಅದು ಅಧ್ಯಾತ್ಮ ಎನಿಸಿದೆ ಈಗ.
ದ್ವಿತೀಯ ಪಿಯುಸಿಗೆ ಹೋಗುತ್ತಿದ್ದ ಸಂದರ್ಭ. ನನ್ನ ಅಪ್ಪನಿಗೆ ಮೊಸರು ಕಡೆಯುವುದೆಂದರೆ ವಿಶೇಷ ಖುಷಿ. ಅದನ್ನು ಆಸಕ್ತಿ ಎಂದುಕೊಂಡಿದ್ದೆ ಚಿಕ್ಕವನಾಗಿದ್ದಾಗ. ಆದರೆ ಅದು ಖುಷಿ ಎಂದು ಅರ್ಥವಾಗಿದೆ.
ಬೆಳಗ್ಗೆ ಪೂಜೆ ಮುಗಿಸಿಕೊಂಡು ಸಣ್ಣದೊಂದು ಪಾತ್ರೆಯ ಮೊಸರನ್ನು ಕಡೆಯಲು ಆರಂಭಿಸಿದರೆಂದರೆ ಸುಮಾರು ಅರ್ಧಗಂಟೆ ಬೆನ್ನನ್ನು ನೆಟ್ಟಗೆ ಮಾಡಿಕೊಂಡು ಕುಳಿತುಕೊಂಡು ಕಡಗೋಲಿನಲ್ಲಿ ಕಡೆಯುತ್ತಿದ್ದರು. ನಿತ್ಯವೂ ಅವರೇ ಕಡೆಯುತ್ತಿದ್ದುದು, ಹುಷಾರಿಲ್ಲದಿದ್ದಾಗಲೂ ಅದನ್ನು ತಪ್ಪಿಸಿದವರಲ್ಲ. ಹಾಗೆ ತಪ್ಪಿಸಬೇಕೆಂದರೆ ಮೇಲೆ ಏಳದ ಪರಿಸ್ಥಿತಿ ಆಗಿರಬೇಕು.
ಇದನ್ನು ನೋಡುತ್ತಿದ್ದ ನನಗೆ ವಿಚಿತ್ರವೆನಿಸಿದ್ದಿದೆ. ಮೊಸರು ಕಡೆಯುವಾಗ ಅಪ್ಪನ ಮುಖದಲ್ಲಿ ಒಂದು ಬಗೆಯ ಮುಗುಳ್ನಗು ಸದಾ ತೇಲುತ್ತಿತ್ತು. ನನಗೆ ಅದರ ಆರ್ಥ ಆಗ ಆಗಿರಲಿಲ್ಲ.
ಒಂದು ದಿನ ಹೀಗೆ, ಅಪ್ಪನಲ್ಲಿ ಪ್ರಶ್ನೆ ಕೇಳಲು ಅವಕಾಶ ಸಿಕ್ಕಿತು. ಆಗ ನನನ್ನಲ್ಲಿ ಕುತೂಹಲಕ್ಕೆ ಕಾರಣವಾಗಿದ್ದ ಮೊಸರು ಕಡೆಯುವ ಕಥೆಯನ್ನು ಕೇಳಿದೆ. ನಿಮಗೇಕೆ ಮೊಸರು ಕಡೆಯಲು ಅಷ್ಟೊಂದು ಇಷ್ಟ? ಎಂದು ಕೇಳಿದ್ದೆ. ಅದಕ್ಕೆ ಅವರು, ಮೊಸರು ಕಡೆಯುವುದೆಂದರೆ ಬದುಕನ್ನು ಅನುಭವಿಸುವುದು ಎಂದರ್ಥ. ಈಗ ಅದು ನಿಜವೆನಿಸುತ್ತಿದೆ. ಮೊನ್ನೆಯಷ್ಟೇ ಒಬ್ಬರ ಮನೆಗೆ ಹೋಗಿದ್ದೆ. ಅಜ್ಜಿಯೊಬ್ಬರು ಈ ದಿನಗಳಲ್ಲೂ ಮೊಸರು ಕಡೆಯುತ್ತಿದ್ದರು. ಅವರನ್ನು ಮಾತನಾಡಿಸುವ ಸಲುವಾಗಿ ಪಕ್ಕದಲ್ಲಿ ಕುಳಿತೆ. ಮಾತಿನ ಭರದಲ್ಲೂ ಅವರ ಮೊಸರು ಕಡೆಯುವ ಲಯ ತಪ್ಪಲಿಲ್ಲ. ಇಡೀ ಕಡೆಯುವ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ನನ್ನಪ್ಪನ ಮಾತು ನಿಜ ಎನಿಸಿತು. ಬದುಕನ್ನು ಅನುಭವಿಸುವ ಕ್ರಮದಲ್ಲಿ ಯಾವ ಕ್ಷಣವನ್ನೂ ಪೋಲಾಗಲು ಬಿಡುತ್ತಿರಲಿಲ್ಲ.
ಹಾಗಾದರೆ ಹಳೆಯ ತಲೆಮಾರಿನಲ್ಲೂ ಪ್ರತಿ ಕ್ಷಣದ ಬದುಕನ್ನೂ ನಿಜವಾಗಲೂ ಅನುಭವಿಸುತ್ತಿದ್ದರು ; ನಾವೀಗ ಅನುಭವಿಸಬೇಕೆಂಬ ಉತ್ಕಟ ಬಯಕೆಯಲ್ಲಿ ಸ್ಮಾರ್ಟ್ ಫೋನ್ ನಲ್ಲಿ ಎಲ್ಲವನ್ನೂ ಸೆರೆ ಹಿಡಿದಿಟ್ಟುಕೊಳ್ಳುತ್ತಿದ್ದೇವೆ. ಎಷ್ಟೊಂದು ವಿಚಿತ್ರ ?!
-ವಸಂತ, ಉಡುಪಿ