Advertisement

ಕೇಂದ್ರದ ವಿರುದ್ಧ ಜಮ್ಮು-ಕಾಶ್ಮೀರದ 6 ಪಕ್ಷಗಳ ಮೈತ್ರಿ ಹೋರಾಟ;ಏನಿದು ಗುಪ್ಕಾರ್ ಡಿಕ್ಲರೇಷನ್?

04:01 PM Oct 26, 2020 | Nagendra Trasi |

ಮಣಿಪಾಲ:ಕೇಂದ್ರ ಸರ್ಕಾರ ಕಳೆದ ವರ್ಷ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ 370ನೇ ವಿಧಿಯನ್ನು ರದ್ದುಪಡಿಸಿದ್ದ ನಂತರ ಫಾರೂಖ್ ಅಬ್ದುಲ್ಲಾ, ಮೆಹಬೂಬ ಮುಫ್ತಿ ಸೇರಿದಂತೆ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಇತ್ತೀಚೆಗಷ್ಟೇ 14 ತಿಂಗಳ ಗೃಹ ಬಂಧನದ ಬಳಿಕ ಮುಫ್ತಿ ಬಿಡುಗಡೆಗೊಂಡಿದ್ದರು. ಏತನ್ಮಧ್ಯೆ ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಹೊರತುಪಡಿಸಿ ಉಳಿದೆಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಿ ಮೈತ್ರಿಕೂಟ ರಚಿಸಿಕೊಂಡಿದ್ದು ಅದಕ್ಕೆ “ಗುಪ್ಕಾರ್” ಡಿಕ್ಲರೇಷನ್ ಎಂದು ಹೆಸರಿಟ್ಟಿವೆ. ಏನಿದು ಗುಪ್ಕಾರ್ ಡಿಕ್ಲರೇಷನ್ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Advertisement

ಶನಿವಾರ(ಅಕ್ಟೋಬರ್ 24, 2020) ಜಮ್ಮು-ಕಾಶ್ಮೀರದ ಏಳು ಪ್ರಮುಖ ರಾಜಕೀಯ ಪಕ್ಷಗಳು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿಯನ್ನು ಶ್ರೀನಗರದ ನಿವಾಸದಲ್ಲಿ ಭೇಟಿಯಾಗಿದ್ದು, ಪೀಪಲ್ ಅಲೈಯನ್ಸ್ ಫಾರ್ ಗುಪ್ಕಾರ್ ಡಿಕ್ಲರೇಷನ್(ಪಿಎಜಿಡಿ)ಗೆ ಪ್ರಾಥಮಿಕ ರೂಪರೇಶೆ ನೀಡಿದ್ದವು. ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರು ಜಾರಿಗೊಳಿಸುವಂತೆ ಒತ್ತಾಸುವುದೇ “ಗುಪ್ಕಾರ್ ಡಿಕ್ಲರೇಷನ್” ನ ಮುಖ್ಯ ಉದ್ದೇಶವಾಗಿದೆ.

ಈ ಸಭೆಯ ನಂತರ ಮಾತನಾಡಿದ್ದ ಫಾರುಖ್ ಅಬ್ದುಲ್ಲಾ, ನಮ್ಮ ಈ ಮೈತ್ರಿಕೂಟ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಮರಳಿ ಪಡೆಯುವುದಕ್ಕಾಗಿ ಹೋರಾಡಲಿದೆ. ನಮ್ಮದು ಬಿಜೆಪಿ ವಿರೋಧಿ ಮೈತ್ರಿಕೂಟವೇ ವಿನಃ, ದೇಶವಿರೋಧಿ ಕೂಟವಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ:ರಾಜಸ್ಥಾನದ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಕೂಟದಿಂದಲೇ ಔಟ್

ಏನಿದು ಮೈತ್ರಿಕೂಟ?

Advertisement

ಜಮ್ಮು-ಕಾಶ್ಮೀರದ ನಿವಾಸದಲ್ಲಿ ಎಲ್ಲಾ ಪಕ್ಷಗಳ ಜತೆಗೆ ಅಕ್ಟೋಬರ್ 15ರಂದು ನ್ಯಾಷನಲ್ ಕಾನ್ಫರೆನ್ಸ್ ವರಿಷ್ಠ ಫಾರೂಖ್ ಅಬ್ದುಲ್ಲಾ ಸಭೆ ನಡೆಸಿದ ನಂತರ “ಪೀಪಲ್ ಅಲೈಯನ್ಸ್ ಫಾರ್ ಗುಪ್ಕಾರ್ ಡಿಕ್ಲರೇಷನ್” ಮೈತ್ರಿಕೂಟದ ಬಗ್ಗೆ ಘೋಷಿಸಿದ್ದರು.

ನ್ಯಾಷನಲ್ ಕಾನ್ಫರೆನ್ಸ್ (ಎನ್ ಸಿ), ಪಿಡಿಪಿ, ಸಿಪಿಐ, ಸಿಪಿಎಂ, ಪಿಸಿ, ಜೆಕೆಪಿಎಂ ಮತ್ತು ಎಎನ್ ಸಿ ಜತೆಯಾಗಿ ಕಾರ್ಯನಿರ್ವಹಿಸುವ ಮೂಲಕ ಜಮ್ಮು ಕಾಶ್ಮೀರಕ್ಕೆ ಮತ್ತೆ ವಿಶೇಷ ಸ್ಥಾನಮಾನ ತಂದು ಕೊಡುವುದು ಮೈತ್ರಿಯ ಮುಖ್ಯ ಉದ್ದೇಶವಾಗಿದೆ.

ಈ ಮೈತ್ರಿಕೂಟಕ್ಕೆ ನ್ಯಾಷನಲ್ ಕಾನ್ಫರೆನ್ಸ್ ನ ಫಾರೂಖ್ ಅಬ್ದುಲ್ಲಾ ಅವರನ್ನು ಅಧ್ಯಕ್ಷರನ್ನಾಗಿ, ಪಿಡಿಪಿ ವರಿಷ್ಠೆ ಮೆಹಬೂಬಾ ಮುಫ್ತಿಯನ್ನು ಉಪಾಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದ್ದರು. ಸಿಪಿಎಂ ಹಿರಿಯ ಮುಖಂಡ ಎಂವೈ ತಾರಿಗಾಮಿ ಅವರನ್ನು ಸಂಚಾಲಕರನ್ನಾಗಿ ಆಯ್ಕೆ ಮಾಡಲಾಗಿದೆ.  ದಕ್ಷಿಣ ಕಾಶ್ಮೀರದ ಸಂಸದ ಮಸೂದಿ ಅವರನ್ನು ಮೈತ್ರಿಕೂಟದ ಕೋ ಆರ್ಡಿನೇಟರ್ ಆಗಿ ಆಯ್ಕೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಸಜ್ಜಾದ್ ಗನಿ ಲೋನ್ ಮೈತ್ರಿಕೂಟದ ವಕ್ತಾರರನ್ನಾಗಿ ಮಾಡಲಾಗಿದೆ.

ಇದನ್ನೂ ಓದಿ:ಕಲ್ಲಿದ್ದಲು ಹಗರಣ: ಕೇಂದ್ರ ಮಾಜಿ ಸಚಿವ ದಿಲೀಪ್ ರೇಗೆ ಮೂರು ವರ್ಷ ಜೈಲುಶಿಕ್ಷೆ

ಏನಿದು ಗುಪ್ಕಾರ್ ಡಿಕ್ಲರೇಷನ್?

2019ರ ಆಗಸ್ಟ್ 4ರಂದು ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವುದಾಗಿ ಘೋಷಿಸುವ ಒಂದು ದಿನದ ಮೊದಲು ಕಾಶ್ಮೀರದಲ್ಲಿನ ರಾಜಕೀಯ ಪಕ್ಷಗಳು (ಬಿಜೆಪಿ ಹೊರತುಪಡಿಸಿ) ಶ್ರೀನಗರದ ಗುಪ್ಕಾರ್ ರಸ್ತೆಯಲ್ಲಿರುವ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ನಿವಾಸದಲ್ಲಿ ಸಭೆ ಸೇರಿದ್ದವು. ಅಲ್ಲದೇ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ ಅಗತ್ಯವಿದೆ ಎಂಬುದನ್ನು ಸಮರ್ಥಿಸಿಕೊಂಡು ಜಂಟಿ ಹೇಳಿಕೆ ನೀಡಿದ್ದವು. ಅಲ್ಲಿಂದ ಈ ಜಂಟಿ ಹೇಳಿಕೆ “ಗುಪ್ಕಾರ್ ಡಿಕ್ಲರೇಷನ್ “ ಎಂದು ಕರೆಯಲಾಗುತ್ತಿದೆ.

ಏತನ್ಮಧ್ಯೆ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ಅನ್ನು ರದ್ದುಪಡಿಸಿ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿತ್ತು. 370ನೇ ವಿಧಿ ರದ್ದುಗೊಂಡು ಒಂದು ವರ್ಷದ ನಂತರ ಮತ್ತೆ ಆರು ರಾಜಕೀಯ ಪಕ್ಷಗಳ ಮುಖಂಡರು ಸಭೆ ಸೇರಿ, ಗುಪ್ಕಾರ್ ಡಿಕ್ಲರೇಷನ್ ಗೆ ಸಹಿ ಹಾಕಿದ್ದವು.

2019ರ ಆಗಸ್ಟ್ 5ರ ಮೊದಲು ಜಮ್ಮು ಕಾಶ್ಮೀರದ ಜನರಿಗೆ ನೀಡಿದ್ದ ಹಕ್ಕುಗಳನ್ನು ಕೇಂದ್ರ ಸರ್ಕಾರ ವಾಪಸ್ ನೀಡಬೇಕು ಎಂದು ಅಕ್ಟೋಬರ್ 15ರಂದು ಫಾರೂಖ್ ಅಬ್ದುಲ್ಲಾ ಮೈತ್ರಿಕೂಟ ರಚನೆ ವೇಳೆ ಘೋಷಿಸಿದ್ದರು.

ಗುಪ್ಕಾರ್ ಡಿಕ್ಲರೇಷನ್ ನ ಪ್ರಮುಖ ಅಂಶಗಳೇನು?

*ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್ ಸೇರಿದಂತೆ ಒಟ್ಟು ಆರು ಪಕ್ಷಗಳ ಮೈತ್ರಿಕೂಟ ಇದಾಗಿದ್ದು, ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ್ದು ಅಸಾಂವಿಧಾನಿಕವಾಗಿದ್ದು, ಇದರ ವಿರುದ್ಧ ಹೋರಾಡಲು ಆರು ಪಕ್ಷಗಳ ಮೈತ್ರಿಯಾಗಿದೆ.

*370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಜಮ್ಮು-ಕಾಶ್ಮೀರವನ್ನು ಇಬ್ಭಾಗ ಮಾಡಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದ್ದು, ಸಾಂವಿಧಾನಿಕ ಆಶಯಕ್ಕೆ ಧಕ್ಕೆ.

*ನವೆಂಬರ್ 17ರಂದು ಮತ್ತೆ ಶ್ರೀನಗರದಲ್ಲಿ ಸಭೆ ಸೇರುವ ಮೂಲಕ ಮುಂದಿನ ಹೋರಾಟದ ರೂಪರೇಷೆ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next