Advertisement

ಈ ಜಗದಲ್ಲಿ ಅಮರವಾದ ಕಾರ್ಯ ಯಾವುದು?

07:39 PM May 10, 2019 | Sriram |

ನಾವು ಕಲಿತ ವಿದ್ಯೆ ಕೂಡ ಕಾಲ ಸರಿದಂತೆ ನಿಧಾನವಾಗಿ ಮರೆತು ಹೋಗುತ್ತದೆ. ಈ ಹೆಮ್ಮರ ಯಾವತ್ತಿಗೂ ಸಾಯುವುದೇ ಇಲ್ಲ ಎಂದು ನಾವು ನಂಬಿ, ನೋಡಿಕೊಂಡು ಬರುತ್ತಿರುವ ಮರವೇ, ಕಾಲಕ್ರಮೇಣ ಒಂದಲ್ಲ ಒಂದು ದಿನ ಬುಡಸಮೇತ ಬಿದ್ದು ಹೋಗುತ್ತದೆ. ಎಂದಿಗೂ ಬತ್ತುವುದಿಲ್ಲ ಎಂದು ಹಿರಿಯರು ತೋರಿಸಿದ್ದ ದೊಡ್ಡ ಕೆರೆಯ ನೀರು ಕೂಡ ಎಂದಾದರೂ ಒಣಗಿ ಹೋಗುವ ಸಾಧ್ಯತೆ ಇದೆ.

Advertisement

ಬದುಕಿನಲ್ಲಿ ಒಂದಾದರೂ ಒಳ್ಳೆಯ ಕಾರ್ಯ ಮಾಡಬೇಕು. ಅದು ಅಮರವಾಗಿ ಉಳಿಯಬೇಕು ಎಂಬುದು ಎಲ್ಲರಿಗೂ ಆಗಾಗ ಕಾಡುವ ಆಸೆ. ಸಾವಿರಾರು ಆಸೆಗಳಲ್ಲಿ ಇದು ವಿಶೇಷವಾದ ಆಕಾಂಕ್ಷೆ. ಆಸೆಗಳನ್ನು ಬಿಟ್ಟವ ದೇವರಾಗಿ ಬಿಡುತ್ತಾನೆ. ಅದು ಸುಲಭದ ಕೆಲಸವಂತೂ ಅಲ್ಲ. ಯಾಕೆಂದರೆ, ಲೋಕದ ಎಲ್ಲ ಆಗುಹೋಗುಗಳು ಈ ಆಸೆಗಳ ಕೊಂಡಿಯಿಂದಲೇ ಸುತ್ತಿಕೊಂಡಿವೆ. ಎಲ್ಲರೂ ಎಲ್ಲ ಆಸೆಗಳನ್ನು ತ್ಯಜಿಸಿಬಿಟ್ಟರೆ ಜಗತ್ತು ಅಲ್ಲಿಗೇ ಕೊನೆಗೊಳ್ಳಬಹುದು. ಆಸೆ ದುಃಖದ ಮೂಲ, ಆದರೆ ಆಸೆಯ ಆಯ್ಕೆ ಈ ದುಃಖ ಬಾರದಂತೆ ತಡೆಯುತ್ತದೆ. ಹಾಗಾಗಿ, ಈ ಆಸೆ ದೇವರನ್ನು ಸೇರುವ ಆಕಾಂಕ್ಷೆಯಾಗಿ ಮಾರ್ಪಟ್ಟಾಗ ಧರ್ಮ ಜಾಗ್ರತವಾಗುತ್ತದೆ. ಬದುಕಿಗೊಂದು ನೀತಿ-ನಿಯಮದ ಕಕ್ಷೆ ತಾನಾಗಿಯೇ ಹುಟ್ಟಿಕೊಳ್ಳುತ್ತದೆ. ಈ ಧರ್ಮಕ್ಕೆ ಚ್ಯುತಿಯಾಗದಂತೆ ಆಸೆಗಳನ್ನು ಹೊತ್ತ ಮನುಷ್ಯ ದೇವರಿಗೂ ಪ್ರಿಯನಾಗುತ್ತಾನೆ. ಮತ್ತು ಬದುಕನ್ನು ಬದುಕುತ್ತಾನೆ. ಬದುಕು ಸಾಗುವುದು ಬೇರೆ;  ಬದುಕುವುದೇ ಬೇರೆ. ಇಂಥ ಬದುಕಿನಲ್ಲಿ ಶಾಶ್ವತವಾದ ಕಾರ್ಯ ಒಂದನ್ನು ಮಾಡಬೇಕೆಂಬ ಬಯಕೆ, ಉತ್ಸಾಹ ಮತ್ತು ಅದರಿಂದ ಪಡೆಯುವ ತೃಪ್ತಿ ಎಲ್ಲವೂ ಸಹಜವೇ.

ಈ ಪ್ರಪಂಚದಲ್ಲಿ ಸಾವೇ ಇರದಂಥ ಅಮರವಾಗುವ ಕಾರ್ಯಯಾವುದು? ಇದಕ್ಕೆ ಉತ್ತರವಾಗಿ ಕರ್ಣಭಾರದಲ್ಲಿ ಸಂಸ್ಕೃತ ನುಡಿ ಹೀಗೆ ಹೇಳುತ್ತದೆ.

ಶಿಕ್ಷಾಕ್ಷಯಂ ಗತ್ಛತಿ ಕಾಲಪರ್ಯಾಯತ್‌
ಸುಬದ್ಧಮೂಲಾ ನಿಪತಂತಿ ಪಾದಪಾಃ |
ಜಲಂ ಜಲಸ್ಥಾನಗತಂ ಚ ಶುಷ್ಯತಿ
ಹುತಂ ಚ ದತ್ತಂ ಚ ತಥೈವ ಶಿಷ್ಠತಿ ||
ನಾವು ಕಲಿತ ವಿದ್ಯೆ ಕೂಡ ಕಾಲ ಸರಿದಂತೆ ನಿಧಾನವಾಗಿ ಮರೆತು ಹೋಗುತ್ತದೆ. ಈ ಹೆಮ್ಮರ ಯಾವತ್ತಿಗೂ ಸಾಯುವುದೇ ಇಲ್ಲ ಎಂದು ನಾವು ನಂಬಿ ನೋಡಿಕೊಂಡು ಬರುತ್ತಿರುವ ಮರವೇ, ಕಾಲಕ್ರಮೇಣ ಒಂದಲ್ಲ ಒಂದು ದಿನ ಬುಡಸಮೇತ ಬಿದ್ದು ಹೋಗುತ್ತದೆ. ಎಂದಿಗೂ ಬತ್ತುವುದಿಲ್ಲ ಎಂದು ಹಿರಿಯರು ತೋರಿಸಿದ್ದ ದೊಡ್ಡ ಕೆರೆಯ ನೀರು ಕೂಡ ಎಂದಾದರೂ ಒಣಗಿ ಹೋಗುವ ಸಾಧ್ಯತೆ ಇದೆ. ಆದರೆ, ಯಜ್ಞೆàಶ್ವರನಿಗೆ ಅರ್ಪಿಸಿದ ಆಹುತಿ ಮತ್ತು ಒಳ್ಳೆಯವರಿಗೆ ಕೊಟ್ಟ ದಾನ ಎಂದೆಂದಿಗೂ ನಶಿಸುವುದಿಲ್ಲ.

ಯಜ್ಞೆàಶ್ವರನಿಗೆ ಅರ್ಪಿಸುವ ಆಹುತಿ ಎಂದಿಗೂ ಒಳಿತನ್ನೇ ಮಾಡುತ್ತದೆ. ಒಂದು ಸದುದ್ದೇಶದ ಸಂಕಲ್ಪ ಈ ಆಹುತಿಯ ಜೊತೆಗೆ ಇದ್ದಾಗ, ನಿರ್ಮಲ ಮನಸ್ಸಿನಿಂದ ಇದನ್ನು ಕೈಗೊಂಡಾಗ, ಒಂದು ಅರ್ಪಣಾಭಾವ ಬೆಳೆಯುತ್ತ, ಶಾಶ್ವತವಾದ ಅಭಯ ಅಥವಾ ನಂಬಿಕೆ ನಮ್ಮನ್ನು ಕಾಯುತ್ತದೆ. ಯಾವುದಕ್ಕೆ ಸಾವಿಲ್ಲವೋ, ಯಾವುದು ಜಗತ್ತಿಗೆ ಅನಿವಾರ್ಯವೋ, ಯಾವುದು ಧರ್ಮಕ್ಕೆ ಅನುಸಾರವಾಗಿದೆಯೋ, ಯಾವುದು ಪರರಹಿತಕ್ಕೆ ಕಾರಣವಾಗುವುದೋ, ಯಾವುದು ಅಮೂಲ್ಯವಾದುದೋ ಅಂತಹ ಕಾರ್ಯವನ್ನು ಮಾಡಿದಾಗ ನಮ್ಮ ಮನಸ್ಸಿಗೂ ತೃಪ್ತಿ; ಬದುಕೂ ಸಾರ್ಥಕ. ಒಳ್ಳೆಯವರಿಗೆ ಕೊಡುವ ದಾನವೇ ನಮ್ಮ ಬದುಕನ್ನು ಅಮರವಾಗಿಸುವುದು. ಅಪಾತ್ರದಾನದಿಂದ ಪ್ರಯೋಜನವಿಲ್ಲ. ಉದಾತ್ತ ಮನಸ್ಸಿನಿಂದ ಯೋಗ್ಯರಿಗೆ ಯೋಗ್ಯವಾದುದನ್ನು ದಾನ ಮಾಡುವುದರಿಂದ ಆ ದಾನ ಮಾಡಲ್ಪಟ್ಟ ಸಂಪತ್ತು ಸರಿಯಾಗಿ ಬಳಸಲ್ಪಟ್ಟು ನಾಶವಾಗದೆ ಹಾಗೆಯೇ ಇದ್ದುಬಿಡುತ್ತದೆ. ಅದರ ಜೊತೆಗೆ, ದಾನ ಮಾಡಿದವನು ಸದಾ ಸ್ಮರಣೆಯಲ್ಲಿ ಇರುತ್ತಾನೆ. ಆತ ಸತ್ತ ಬಳಿಕವೂ ಜನಮಾನಸದಲ್ಲಿ ಬದುಕುತ್ತಾನೆ. ಈ ಜಗದಲ್ಲಿ ಯಾವುದೂ ಶಾಶ್ವತವಲ್ಲ. ಅಶಾಶ್ವತವಾದ ಬದುಕು ಇಲ್ಲವಾಗುವುದರೊಳಗೆ, ಮನದುಂಬಿ ಯೋಗ್ಯರಿಗೆ ದಾನ ಮಾಡುವುದು ಉತ್ತಮ.

Advertisement
Advertisement

Udayavani is now on Telegram. Click here to join our channel and stay updated with the latest news.

Next