Advertisement

ಅವಳಿ ನಗರ ಅಭಿವೃದ್ಧಿಗೆ ಹೊರಟ್ಟಿ ಕೊಡುಗೆ ಏನು?

12:49 PM Nov 22, 2017 | Team Udayavani |

ಹುಬ್ಬಳ್ಳಿ: ಶಿಕ್ಷಕರ ಮತಕ್ಷೇತ್ರದಿಂದ ಕಳೆದ 30 ವರ್ಷಗಳಿಂದ ಆಯ್ಕೆಯಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದ ಬಸವರಾಜ ಹೊರಟ್ಟಿ ಅವರು ಹು-ಧಾ ಅಭಿವೃದ್ಧಿಗೆ ತಮ್ಮ ಕೊಡುಗೆ ಏನೆಂಬುದನ್ನು ಮೊದಲು ತಿಳಿಸಲಿ. ಇನ್ನುಳಿದವರು ಅವಳಿ ನಗರಕ್ಕೆ ಏನು ಮಾಡಿದ್ದಾರೆಂಬುದರ ಬಗ್ಗೆ ಧ್ವನಿಸುರುಳಿ ಹರಿಬಿಡುವ ಮನಸ್ಥಿತಿಯಿಂದ ಹೊರಬರಲಿ ಎಂದು ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ ಹೇಳಿದ್ದಾರೆ. 

Advertisement

ಹು-ಧಾ ಸಮಸ್ಯೆಗಳ ಕುರಿತು ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ, ಸಂಸದ ಪ್ರಹ್ಲಾದ ಜೋಶಿ ಬಗ್ಗೆ ಅದೇ ರಾಗ ಅದೇ ಹಾಡನ್ನೇ ಹೊರಟ್ಟಿ ಅವರು ಸದನದಲ್ಲೂ ಹಾಡುತ್ತಿದ್ದಾರೆ. ಅವರಿಬ್ಬರ ಸತತ ಪ್ರಯತ್ನದಿಂದಲೇ ನಗರದಲ್ಲಿ ಯುಜಿಡಿ, ಕುಡಿಯುವ ನೀರಿನ 24/7 ವ್ಯವಸ್ಥೆ ಯೋಜನೆಗಳಿಗೆ ಚಾಲನೆ ದೊರೆತು ಪ್ರಸ್ತುತ ನಗರದ 26 ವಾರ್ಡ್‌ಗಳಲ್ಲಿ ನಿರಂತರ ನೀರಿನ ವ್ಯವಸ್ಥೆ ಕಾರ್ಯಗತವಾಗುತ್ತಿದೆ.

ಅಲ್ಲದೇ ಜೋಶಿ ಅವರ ವಿಶೇಷ ಪ್ರಯತ್ನದಿಂದ ಅವಳಿ ನಗರಗಳ ರಸ್ತೆಗಳ ಸುಧಾರಣೆಗಾಗಿ ಕೇಂದ್ರ ಸರಕಾರದಿಂದ ಸಿಆರ್‌ಎಫ್‌ ನಿಧಿಯಡಿ 442 ಕೋಟಿ ರೂ. ಅನುದಾನ ದೊರೆತಿದೆ. ಇದು ಬಂದು 2 ವರ್ಷಗಳಾದರೂ ರಾಜ್ಯ ಸರಕಾರ ಮಂಜೂರಾದ ರಸ್ತೆಗಳ ಸುಧಾರಣಾ ಕಾಮಗಾರಿಗಳಿಗೆ ಟೆಂಡರ್‌ ಕರೆಯುತ್ತಿಲ್ಲ.

ಜೊತೆಗೆ ಜಿಲ್ಲಾ ಉಸ್ತುವಾರ ಸಚಿವ ವಿನಯ ಕುಲಕರ್ಣಿ ಪಾಲಿಕೆಗೆ ಬೇರೆ ಬೇರೆ ಯೋಜನೆಗಳಿಗಾಗಿ ನೆಲ ಹಾಗೂ ರಸ್ತೆ ಅಗೆದು ಗುಂಡಿ ಮುಚ್ಚಲು ಇರುವ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲಾಗಿದೆ ಎಂದು ಹೇಳುವ  ಮೂಲಕ ತಮ್ಮ ಅಸಾಮರ್ಥ್ಯ ತೋರಿಸಿದ್ದಾರೆ ಎಂದರು. 

ಕಳೆದ 4 ವರ್ಷಗಳಿಂದ ಪಾಲಿಕೆಯ ನಿವೃತ್ತ ನೌಕರರ 150 ಕೋಟಿ ರೂ. ಮಂಜೂರು ಆಗಿಲ್ಲ. ಹೀಗಾಗಿ ನಿವೃತ್ತ ನೌಕರರ ಜೀವನಾಂಶವಾದ ಪಿಂಚಣಿಯನ್ನು ಅನಿವಾರ್ಯವಾಗಿ ಬೇರೆ ಮೂಲಗಳಿಂದ ಪಾವತಿ ಮಾಡಲಾಗುತ್ತಿದೆ. ಈ ವಿಷಯ ಗೊತ್ತಿದ್ದರೂ ಹೊರಟ್ಟಿ ಹಾಗೂ ಸಚಿವ ಕುಲಕರ್ಣಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಸರಕಾರದಿಂದ ಆ ಹಣ ತರುವ ಕಾರ್ಯವೇಕೆ ಮಾಡಿಲ್ಲವೆಂಬ ಬಗ್ಗೆ ಜನರಿಗೆ ಸಮಜಾಯಿಷಿ ನೀಡಲಿ.

Advertisement

ಇವರಿಬ್ಬರು ಸಿಎಂ ಬಳಿ ಕುಳಿತು ಪಿಂಚಣಿ ಹಣ ಮಂಜೂರು ಮಾಡಿಸಲಿ. ಆನಂತರವಷ್ಟೇ ಶೆಟ್ಟರ ಹಾಗೂ ಪ್ರಹ್ಲಾದ ಜೋಶಿ ಬಗ್ಗೆ ಮಾತನಾಡುವ ನೈತಿಕತೆ ಪಡೆಯಲಿ ಎಂದು ಪ್ರದೀಪ ಶೆಟ್ಟರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next