Advertisement

ಸೌದಿ: ಪಾಕ್‌ಗೆ ಮುಖಭಂಗ: ಸೇನಾ ಮುಖ್ಯಸ್ಥನ ಭೇಟಿಗೆ ರಾಜಕುಮಾರ ನಿರಾಕರಣೆ

02:52 AM Aug 20, 2020 | Hari Prasad |

ರಿಯಾದ್: ಮುನಿಸಿಕೊಂಡಿರುವ ಸೌದಿ ಅರೇಬಿಯಾವನ್ನು ಸಂತೈಸಲು ಹೋಗಿದ್ದ ಪಾಕಿಸ್ಥಾನಕ್ಕೆ ತೀವ್ರ ಮುಖಭಂಗವಾಗಿದೆ.

Advertisement

ಪಾಕ್‌ ಸೇನಾ ಮುಖ್ಯಸ್ಥ ಕಮರ್‌ ಜಾವೇದ್‌ ಬಜ್ವಾ ರಿಯಾದ್‌ಗೆ ಧಾವಿಸಿ ಬಂದಿದ್ದರೂ ಸೌದಿಯ ರಾಜಕುಮಾರ ಮೊಹ್ಮದ್‌ ಬಿನ್‌ ಸಲ್ಮಾನ್‌ ಭೇಟಿಗೆ ನಿರಾಕರಿಸಿದ್ದಾರೆ.

ಕೊನೆಗೆ ದಾರಿಯಿಲ್ಲದೆ ರಾಜಕುಮಾರನ ಕಿರಿಯ ಸಹೋದರನೂ ಆಗಿರುವ ಉಪರಕ್ಷಣ ಸಚಿವ ಶೇಖ್‌ ಖಲೀದ್‌ ಬಿನ್‌ ಸಲ್ಮಾನ್‌ ಮತ್ತು ಸೌದಿ ಸೇನೆಯ ಮೇಜರ್‌ ಜನರಲ್‌ ಫಾಯದ್‌ ಅಲ್‌ ರುವಾಯಿಲಿ ಜತೆಗೆ ನೆಪ ಮಾತ್ರಕ್ಕೆ ನಿಮಿಷಗಳ ಕಾಲ ಮಾತುಕತೆ ನಡೆಸಿ ಪಾಕ್‌ ಪರವಾಗಿ ಕ್ಷಮೆ ಕೋರಿದ್ದಾರೆ.

ಈ ವೇಳೆ ಬಜ್ವಾಗೆ ಐಎಸ್‌ಐ ಮುಖ್ಯಸ್ಥ ಜನರಲ್‌ ಫೈಜ್‌ ಹಮೀದ್‌ ಸಾಥ್‌ ನೀಡಿದ್ದರು ಎಂದು ತಿಳಿದು ಬಂದಿದೆ. ನಿಷ್ಫಲ ಭೇಟಿಯ ಅನಂತರ ಇಬ್ಬರೂ ಜೆಡ್ಡಾದಿಂದ ಮೆಕ್ಕಾಕ್ಕೆ ಉಮ್ರಾ ಯಾತ್ರೆ ಕೈಗೊಂಡಿದ್ದಾರೆ.

ಕ್ಷಮೆ ಕೇಳಿದರೆ ಸಾಕಾ?
ಬಜ್ವಾ ಕ್ಷಮೆ ಯಾಚನೆಯಿಂದ ಸೌದಿ ತಣ್ಣಗಾಗಿಲ್ಲ. ಕೇವಲ ಕ್ಷಮೆ ಕೋರಿದರೆ ಎಲ್ಲ ಸರಿಹೋಗುತ್ತದೆಯೇ? ಎಂದು ಸೌದಿ ಖಡಕ್ಕಾಗಿ ಪ್ರಶ್ನಿಸಿದೆ. ವೈಮನಸ್ಸು ತಣಿಸಲು ಸ್ವತಃ ಸಲ್ಮಾನ್‌ ಆಡಳಿತಕ್ಕೆ ಇಷ್ಟವಿಲ್ಲ ಎಂದು ತಿಳಿದುಬಂದಿದೆ.
ಇಸ್ಲಾಮಿಕ್‌ ಸಹಕಾರ ಸಂಘಟನೆ (ಐಒಸಿ) ನಾಯಕತ್ವ ವಹಿಸಿರುವ ಸೌದಿ, ಕಾಶ್ಮೀರ ವಿಚಾರದಲ್ಲಿ ಮೌನವಾಗಿದೆ ಎಂದು ಪಾಕ್‌, ಇಸ್ಲಾಂ ರಾಷ್ಟ್ರಗಳ ಮುಂದೆ ಬಹಿರಂಗವಾಗಿ ಆರೋಪಿಸಿತ್ತು. ಇದನ್ನು ಕೇಳಿ ಸಿಡಿದಿರುವ ಸೌದಿ, ‘ನಿಮಗೆ ಸಾಲವೂ ಇಲ್ಲ, ತೈಲವೂ ಇಲ್ಲ’ ಎಂದು ಗರಂ ಆಗಿ ಹೇಳಿತ್ತು. ಸಾಲ ಮತ್ತು ರಫ್ತು ಒಪ್ಪಂದವನ್ನೇ ರದ್ದುಗೊಳಿಸಿತ್ತು. ಸೌದಿಯ ಈ ನಿಲುವು ಪಾಕ್‌ಗೆ ನುಂಗಲಾರದ ತುತ್ತಾಗಿದೆ.

Advertisement

ಚೀನದ ಕಾಲು ಹಿಡಿಯುವುದೇ ಪಾಕ್‌?
ಈಗಾಗಲೇ ಸೌದಿ ಜತೆಗೆ 2018ರ 6.2 ಬಿಲಿಯನ್‌ ಡಾಲರ್‌ ಪ್ಯಾಕೇಜ್‌ ಸೇರಿದಂತೆ ಸಾಕಷ್ಟು ಸಾಲಗಳನ್ನು ಪಾಕ್‌ ಬಾಕಿ ಉಳಿಸಿಕೊಂಡಿದೆ. ಅವುಗಳನ್ನು ಹಂತಹಂತವಾಗಿ ಮರಳಿಸಬೇಕೆನ್ನುವ ಒತ್ತಡವೂ ಈಗ ಇಮ್ರಾನ್‌ ಸರಕಾರದ ಮೇಲಿದೆ. ಮತ್ತೆ ಚೀನದ ಕಾಲು ಹಿಡಿದು, ಪಾಕ್‌ ಆ ಹಣವನ್ನು ಸೌದಿಗೆ ಮರಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಮೋದಿ ಬಾಂಧವ್ಯಕ್ಕೆ ಸಂದ ಜಯ
ಕಳೆದ 6 ವರ್ಷಗಳಲ್ಲಿ ಅರಬ್‌ ರಾಷ್ಟ್ರ ಗಳೊಂದಿಗೆ ನರೇಂದ್ರ ಮೋದಿ ನಾಯಕತ್ವದ ಭಾರತ ಉತ್ತಮ ಸಂಬಂಧ ಕಾಯ್ದುಕೊಂಡಿದೆ. ಈ ಅವಧಿಯಲ್ಲಿ ಪಾಕ್‌, ಟರ್ಕಿಯೊಂದಿಗೆ ಸಖ್ಯ ಸಾಧಿಸುತ್ತಾ ಮೈಮರೆತಿತ್ತು. ಟರ್ಕಿ ಅಧ್ಯಕ್ಷ ಎರ್ಡೋಗನ್‌ ತಾಳಕ್ಕೆ ತಕ್ಕಂತೆ ಪಾಕ್‌ ಕುಣಿದಿತ್ತು. ಪಾಕನ್ನು ಸೌದಿ ದೂರ ತಳ್ಳಲು ಇದೂ ಒಂದು ಪ್ರಮುಖ ಕಾರಣ ಎಂದು ರಾಜತಾಂತ್ರಿಕರು ವಿಶ್ಲೇಷಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next