Advertisement

ಈಗಿನಷ್ಟು ದೌರ್ಜನ್ಯ 3000 ವರ್ಷಗಳಲ್ಲೇ ನಡೆದಿರಲಿಲ್ಲ: ರಾಹುಲ್ ಕಿಡಿ

06:25 AM Aug 08, 2018 | Team Udayavani |

ಹೊಸದಿಲ್ಲಿ: ಬಿಹಾರ, ಉತ್ತರಪ್ರದೇಶದ ಆಶ್ರಯಗೃಹಗಳಲ್ಲಿ ಬಾಲಕಿಯರ ಮೇಲೆ ನಡೆದಿರುವ ಅತ್ಯಾಚಾರ ಘಟನೆಗಳಿಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಪ್ರಶ್ನಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ‘ಮೋದಿ ಅವರ ಆಡಳಿತಾವಧಿಯಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವಷ್ಟು ದೌರ್ಜನ್ಯಗಳನ್ನು ದೇಶ ಕಳೆದ 3,000 ವರ್ಷಗಳಲ್ಲಿ ಯಾವತ್ತೂ ಕಂಡಿಲ್ಲ’ ಎಂದು ಹೇಳಿದ್ದಾರೆ. ಮಂಗಳವಾರ ದಿಲ್ಲಿಯಲ್ಲಿ ನಡೆದ ಮಹಿಳಾ ಅಧಿಕಾರ್‌ ಸಮ್ಮೇಳನದಲ್ಲಿ ಮಾತನಾಡಿದ ರಾಹುಲ್‌, ಸರಕಾರದ ಬೇಟಿ ಬಚಾವೋ, ಬೇಟಿ ಪಢಾವೋ ಯೋಜನೆಯ ಬಗ್ಗೆಯೂ ಪ್ರಸ್ತಾವಿಸಿದ್ದು, ‘ಈಗ ಬಿಜೆಪಿ ಶಾಸಕರಿಂದಲೇ ನಮ್ಮ ಹೆಣ್ಣುಮಕ್ಕಳನ್ನು ರಕ್ಷಿಸಬೇಕಾದ ಸ್ಥಿತಿಯಿದೆ’ ಎಂದಿದ್ದಾರೆ.

Advertisement

ಪ್ರಧಾನಿ ಮೋದಿ ಅವರು ಬುಲೆಟ್‌ ರೈಲು, ಏರೋಪ್ಲೇನ್‌, ಟಾಯ್ಲೆಟ್‌ ಹೀಗೆ ಎಲ್ಲದರ ಬಗ್ಗೆಯೂ ಮಾತಾಡುತ್ತಾರೆ. ಆದರೆ, ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆದಾಗ ಅವರು ಸೊಲ್ಲೆತ್ತು ವುದಿಲ್ಲ. ಭಾರತವನ್ನು ಬದಲಿಸುವುದಾಗಿ ಹೇಳು ತ್ತಾರೆ. 70 ವರ್ಷಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ಕಳೆದ 4 ವರ್ಷಗಳಲ್ಲಿ ಮಹಿಳೆಯರ ಮೇಲೆ ನಡೆದಂಥ ದೌರ್ಜನ್ಯಗಳು 3 ಸಾವಿರ ವರ್ಷಗಳಲ್ಲೂ ನಡೆದಿಲ್ಲ ಎಂದೂ ರಾಹುಲ್‌ ಹರಿಹಾಯ್ದಿದ್ದಾರೆ.

ಇದೇ ವೇಳೆ, ಕಾಂಗ್ರೆಸ್‌ ಶೇ.50ರಷ್ಟು ಮಹಿಳೆಯರನ್ನು ಹೊಂದಬೇಕು ಎನ್ನುವುದೇ ನನ್ನ ಗುರಿಯಾಗಿದೆ. ಬಿಜೆಪಿ ಅಂಥ ಧ್ಯೇಯ ಹೊಂದಲು ಸಾಧ್ಯವಿಲ್ಲ. ಏಕೆಂದರೆ, ಅದರ ಮಾತೃಸಂಸ್ಥೆ RSS ಪುರುಷಪ್ರಧಾನ ಸಂಸ್ಥೆಯಾಗಿದೆ. ಯಾವಾಗ ಆ ಸಂಸ್ಥೆಗೆ ಮಹಿಳೆಯರ ಪ್ರವೇಶವಾಗುತ್ತದೋ, ಅಲ್ಲಿಂದ ಅದು RSS ಆಗಿ ಉಳಿಯುವುದಿಲ್ಲ ಎಂದೂ ಹೇಳಿದ್ದಾರೆ.

ದುರಂತದತ್ತ ಸಂಚರಿಸುತ್ತಿರುವ ಭಾರತ
ಪ್ರಧಾನಿ ಮೋದಿ ಅವರು ಅಚ್ಛೇ ದಿನದ ಬೋಗಸ್‌ ಆಶ್ವಾಸನೆಗಳಿಂದ ಜನರು ಇನ್ನು ಮೂರ್ಖರಾಗುವುದಿಲ್ಲ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಸಂಸತ್‌ ಭವನದಲ್ಲಿ ಕಾಂಗ್ರೆಸ್‌ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ರಾಹುಲ್‌, ‘ನಿರಂಕುಶ ಮತ್ತು ಅಸಮರ್ಥ ಚಾಲಕನಿರುವ ರೈಲು ವಿಪತ್ತಿನೆಡೆಗೆ ಸಾಗಿದಂತೆ, ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತವೂ ದುರಂತದತ್ತ ಸಾಗುತ್ತಿದೆ’ ಎಂದಿದ್ದಾರೆ. ಭ್ರಷ್ಟಾಚಾರ, ಆರ್ಥಿಕ ವೈಫ‌ಲ್ಯ, ಅಸಮರ್ಥತೆ ಹಾಗೂ ಸಾಮಾಜಿಕ ಧ್ರುವೀಕರಣ ಈಗ ಉಚ್ಛ್ರಾಯ ಸ್ಥಿತಿ ತಲುಪಿದೆ. ಹಾಗಾಗಿ, ಕಾಂಗ್ರೆಸ್‌ ಸಂಸದರೆಲ್ಲರೂ ಮೋದಿ ಸುಳ್ಳು ಆಶ್ವಾಸನೆಗಳಿಗೆ ಪರ್ಯಾಯ ಹುಡುಕಬೇಕಿದೆ ಎಂದೂ ಕರೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next