Advertisement

ಕೋವಿಡ್  ಅಬ್ಬರ ಏನಾಗುತ್ತಿದೆ ಚೀನದಲ್ಲಿ? ಇಲ್ಲಿದೆ ಮಾಹಿತಿ….

12:06 AM Dec 22, 2022 | Team Udayavani |

ಇಡೀ ಜಗತ್ತಿಗೇ ಕೊರೊನಾ ಹಂಚಿದ್ದ ಚೀನ ಈಗ ಅದೇ ಸಾಂಕ್ರಾಮಿಕದ ಸುಳಿಗೆ ಸಿಲುಕಿ ಒದ್ದಾಡುತ್ತಿದೆ. ಮೊದಲಿನಿಂದಲೂ “ಝೀರೋ ಕೋವಿಡ್‌’ ನೀತಿ ಅನುಸರಿಸುತ್ತಿದ್ದ ಅದು, ಈಗ ಜನರ ಪ್ರತಿಭಟನೆಯಿಂದಾಗಿ ಈ ಕಠಿನ ನೀತಿಯನ್ನು ಸಡಿಲಿಸಿದೆ. ಇದರ ಬೆನ್ನಲ್ಲೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದು, ಆಸ್ಪತ್ರೆಗಳು ತುಂಬಿ ತುಳುಕುತ್ತಿರುವುದು ಮತ್ತು ಶವಾಗಾರಗಳಲ್ಲಿ ಕ್ಯೂ ಹೆಚ್ಚಾಗಿರುವುದು ಆತಂಕ ಮೂಡಿಸಿದೆ. ಹಾಗಾದರೆ ಏನಾಗುತ್ತಿದೆ ಚೀನದಲ್ಲಿ? ಈಗಿನ ಸ್ಥಿತಿಗೆ ಕಾರಣವಾದರೂ ಏನು? ಇಲ್ಲಿದೆ ಮಾಹಿತಿ.

Advertisement

ಡಿಸೆಂಬರ್‌ ಮೊದಲ ವಾರದಿಂದ ಚೀನದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ. ಒಂದು ಅಂದಾಜಿನ ಪ್ರಕಾರ, ಚೀನದ ಶೇ.60ರಷ್ಟು ಮಂದಿಗೆ ಕೊರೊನಾ ತಗಲಲಿದೆ. ಅಂದರೆ ಜಗತ್ತಿನ ಶೇ.10ರಷ್ಟು ಜನಸಂಖ್ಯೆಗೆ ಒಂದೇ ಬಾರಿಗೆ ಕೊರೊನಾ ಬರಲಿದೆ. 2023ರ ಅಂತ್ಯದ ವೇಳೆಗೆ 16 ಲಕ್ಷ ಮಂದಿ ಚೀನವೊಂದರಲ್ಲೇ ಕೊರೊನಾದಿಂದ ಸಾವನ್ನಪ್ಪಲಿದ್ದಾರೆ. ಇದುವರೆಗಿನ ಎಲ್ಲ ದಾಖಲೆಗಳನ್ನು ಚೀನ ಮುರಿಯಲಿದೆ ಜಗತ್ತಿನ ತಜ್ಞ ವೈದ್ಯರು ಅಂದಾಜಿಸಿದ್ದಾರೆ.

ವಿಫ‌ಲವಾಯಿತೇ ಝೀರೋ ಕೋವಿಡ್‌?
ಮೊದಲೇ ಹೇಳಿದ ಹಾಗೆ 2020ರ ಆರಂಭದಿಂದಲೂ ಚೀನ ಝೀರೋ ಕೋವಿಡ್‌ ನೀತಿ ಅನುಸರಿಸಿಕೊಂಡು ಬರುತ್ತಿದೆ. ಅಂದರೆ ಒಂದೆರಡು ಕೊರೊನಾ ಪ್ರಕರಣ ಕಂಡು ಬಂದರೂ ತತ್‌ಕ್ಷಣವೇ ಇಡೀ ನಗರ ಅಥವಾ ಪ್ರಾಂತಕ್ಕೇ ಲಾಕ್‌ಡೌನ್‌ ಹೇರಿಕೊಂಡು ಚೀನ, ಕೊರೊನಾ ನಿಯಂತ್ರಣ ಮಾಡುತ್ತಿತ್ತು. ಈಗಲೂ ಇಂಥ ಲಾಕ್‌ಡೌನ್‌ ಜಾರಿಯಲ್ಲಿದೆ. ಆದರೆ ಇಡೀ ನಗರ ಅಥವಾ ಪ್ರಾಂತಕ್ಕೆ ಹಾಕುವುದಿಲ್ಲ. ಬದಲಾಗಿ ಪ್ರಕರಣ ಪತ್ತೆಯಾದ ಅಪಾರ್ಟ್‌ಮೆಂಟ್‌, ಮನೆಗಳಿಗೆ ಮಾತ್ರ ಬೀಗ ಹಾಕಲಾಗುತ್ತಿದೆ.

ಡಿ.7ರಂದು ಚೀನದಲ್ಲಿ ಝೀರೋ ಕೋವಿಡ್‌ ನೀತಿ ವಿರೋಧಿಸಿ ದೊಡ್ಡ ಪ್ರತಿಭಟನೆಯೇ ನಡೆಯಿತು. ವಿಶೇಷವೆಂದರೆ ಚೀನದಲ್ಲಿ ಇಂಥ ಪ್ರತಿಭಟನೆಗಳು ಅತ್ಯಂತ ವಿರಳ. ಇದಕ್ಕೆ ಹೆದರಿದ ಚೀನ ಲಾಕ್‌ಡೌನ್‌ ಸಡಿಲ ಮಾಡಿತು.

ಪರಿಸ್ಥಿತಿ ಹೇಗಿದೆ?
ಸದ್ಯ ಚೀನದಲ್ಲಿ ಸಾರ್ಸ್‌-ಕೋವಿಡ್‌-2 ವೈರಸ್‌ನ ಹೊಸ ತಳಿ ಪತ್ತೆಯಾಗಿದೆ. ಇಲ್ಲಿನ ಜನರಲ್ಲಿ ಪತ್ತೆಯಾಗುತ್ತಿರುವುದು ಇದೇ ತಳಿ. ಚೀನದ ಆರೋಗ್ಯ ಆಯೋಗದ ಪ್ರಕಾರ, ನವೆಂಬರ್‌ ಮಧ್ಯಭಾಗದಲ್ಲಿ ದಿನಂಪ್ರತಿ 2 ಸಾವಿರ ಕೇಸುಗಳು ಪತ್ತೆಯಾಗುತ್ತಿದ್ದವು. ನವೆಂಬರ್‌ ಅಂತ್ಯದ ವೇಳೆಗೆ ಇದು 4 ಸಾವಿರಕ್ಕೆ ಏರಿಕೆಯಾಯಿತು. ಡಿಸೆಂಬರ್‌ ಮೊದಲ ವಾರಕ್ಕೆ 5 ಸಾವಿರ ಪತ್ತೆಯಾಯಿತು. ಇವು ಕೇವಲ ರೋಗ ಲಕ್ಷಣ ಇರುವಂಥ ಕೇಸುಗಳು. ರೋಗ ಲಕ್ಷಣಗಳು ಇಲ್ಲದೇ ಇರುವಂಥವರನ್ನು ಸೇರಿಸಿದರೆ, ನವೆಂಬರ್‌ ಕಡೆಯಲ್ಲಿ ದಿನಕ್ಕೆ 40 ಸಾವಿರ ಕೇಸುಗಳು ಪತ್ತೆಯಾಗುತ್ತಿದ್ದವು.

Advertisement

ಆದರೆ ಡಿ.14ರ ಬಳಿಕ ಯಾವುದೇ ರೋಗ ಲಕ್ಷಣಗಳು ಇಲ್ಲದೇ ಇರುವಂಥ ಸೋಂಕಿತರ ಲೆಕ್ಕ ಹಾಕುವುದನ್ನು ಚೀನ ಬಿಟ್ಟಿದೆ. ಹೀಗಾಗಿ ಈಗ ಅಲ್ಲಿ ಎಷ್ಟು ಪ್ರಕರಣ ಪತ್ತೆಯಾಗುತ್ತಿವೆ ಎಂಬುದು ಖಚಿತವಾಗಿ ಗೊತ್ತಾಗುತ್ತಿಲ್ಲ. ಅಲ್ಲದೆ ಸಾವಿನ ಪ್ರಕರಣವೂ ಹೆಚ್ಚಳವಾಗುತ್ತಿದ್ದು, ಇದರ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಅಂತಾರಾಷ್ಟ್ರೀಯ ಮಾಧ್ಯಮಗಳು ಹೇಳುವ ಪ್ರಕಾರ, ಚೀನ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿದೆ. ಆದರೆ ಆಸ್ಪತ್ರೆಗಳು ಮತ್ತು ಶವಾಗಾರಗಳು ಅಥವಾ ಶ್ಮಶಾನಗಳನ್ನು ನೋಡಿದರೆ ಸಾವಿನ ಸಂಖ್ಯೆ ಹೆಚ್ಚಾಗಿಯೇ ಇದೆ ಎಂದು ಹೇಳುತ್ತವೆ.

ಏಕೆ ಹೀಗಾಗುತ್ತಿದೆ?
ಕೊರೊನಾದ ಆರಂಭದಿಂದಲೂ ತನ್ನ ಝೀರೋ ಕೋವಿಡ್‌ ನೀತಿ ಬಗ್ಗೆ ಚೀನ ಎದೆ ತಟ್ಟಿಕೊಂಡು ಹೇಳುತ್ತಿತ್ತು. ಈ ನೀತಿಯಿಂದಲೇ ನಾವು ಕೊರೊನಾ ಗೆದ್ದಿದ್ದೇವೆ. ಶೇ.90ರಷ್ಟು ಮಂದಿಗೆ ಲಸಿಕೆ ಹಾಕಿಸಿದ್ದೇವೆ. ಹೀಗಾಗಿ ನಮಗೆ ಕೊರೊನಾ ಆತಂಕವಿಲ್ಲ ಎಂದು ಹೇಳುತ್ತಿತ್ತು. ಏಕೆಂದರೆ ಅಮೆರಿಕದಲ್ಲಿ ಇದುವರೆಗೆ 11 ಲಕ್ಷ ಮಂದಿ ಕೊರೊನಾದಿಂದಲೇ ಸಾವನ್ನಪ್ಪಿದ್ದಾರೆ. ಇಡೀ ಜಗತ್ತಿನಲ್ಲೇ ಇದು ಅತ್ಯಂತ ಹೆಚ್ಚು.

ಈ ಬಗ್ಗೆಯೂ ಪರೋಕ್ಷವಾಗಿ ಎದೆಯುಬ್ಬಿಸಿ ಹೇಳಿದ್ದ ಚೀನ, ನಾವು ಕೊರೊ­ನಾವನ್ನು ಯಶಸ್ವಿ­ಯಾಗಿ ಹಿಮ್ಮೆ­­ಟ್ಟಿಸಿದ್ದೇವೆ ಎಂದಿತ್ತು. ಆದರೆ ಈಗ ಕಾಲ ಬದಲಾಗಿದೆ. ಇದಕ್ಕೆ ಕಾರಣಗಳೇನು ಎಂಬುದನ್ನು ನೋಡುವುದಾದರೆ ಚೀನದ ಜನಸಂಖ್ಯೆಯಲ್ಲಿ ರೋಗ ನಿರೋಧಕತೆ ಬೆಳೆಯದೇ ಇರುವುದಾಗಿದೆ. ಅಂದರೆ ಚೀನ ಜನಸಂಖ್ಯೆ, ಇದುವರೆಗೆ ಕೊರೊನಾಗೆ ತೆರೆದುಕೊಂಡಿಲ್ಲ. ಹೀಗಾಗಿ ಹರ್ಡ್‌ ಇಮ್ಯೂನಿಟಿಯ ಕೊರತೆಯಿಂದ ಈಗ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ.

ಅಲ್ಲದೆ ಪೂರ್ಣವಾಗಿ ಲಸಿಕೆ ಹಾಕಿಸಲಾಗಿದ್ದರೂ ಹರ್ಡ್‌ ಇಮ್ಯೂನಿಟಿ ಇಲ್ಲದ ಕಾರಣ, ಲಸಿಕೆಯೂ ಕೆಲಸ ಮಾಡಿಲ್ಲ ಎಂದು ತಜ್ಞ ವೈದ್ಯರು ಹೇಳಿದ್ದಾರೆ.

ಹರಿದಾಡುತ್ತಿವೆ ವೀಡಿಯೋಗಳು
ತನ್ನ ದೇಶದಲ್ಲಿನ ಕೊರೊನಾ ಬಗ್ಗೆ ಚೀನ ಏನನ್ನು ಹೇಳದಿದ್ದರೂ ಜನರೇ ಸಾಮಾಜಿಕ ಮಾಧ್ಯಮಗಳ ಮೂಲಕ ಅಲ್ಲಿನ ಆಸ್ಪತ್ರೆಗಳ ಸ್ಥಿತಿ ಬಗ್ಗೆ ಹೊರಜಗತ್ತಿಗೆ ತೋರಿಸುತ್ತಿದ್ದಾರೆ. ಬುಧವಾರವೂ ಒಂದು ವೀಡಿಯೋ ಬಹಿರಂಗವಾಗಿದ್ದು, ವೈದ್ಯರೊಬ್ಬರು, ರೋಗಿಗಳಿಗೆ ಚಿಕಿತ್ಸೆ ನೀಡುತ್ತಲೇ ಕುಸಿದು ಬಿದ್ದಿದ್ದಾರೆ. ಅಂದರೆ ಒಬ್ಬರಾದ ಮೇಲೆ ಒಬ್ಬರನ್ನು ದಿನವಿಡೀ ನೋಡಿ ಸುಸ್ತಾಗಿ ಬಿದ್ದಿದ್ದಾರೆ. ಈ ಮೂಲಕ ಅಲ್ಲಿನ ಪರಿಸ್ಥಿತಿ ದಯನೀಯವಾಗಿದೆ ಎಂದು ಹೇಳಲಾಗುತ್ತಿದೆ.

ಆರ್ಥಿಕತೆ ಮೇಲೆ ಪರಿಣಾಮವೇನು?
ಕಳೆದ ಎರಡು ವರ್ಷಗಳಿಂದಲೂ ಆಗಾಗ ಲಾಕ್‌ಡೌನ್‌ ಹೇರಿಕೆ ಮಾಡಿರುವುದರಿಂದ ಚೀನ ದಲ್ಲಿ ಆರ್ಥಿಕತೆ ಕುಸಿತದ ಹಾದಿಯಲ್ಲಿದೆ. ಜತೆಗೆ ಉತ್ಪಾದನೆ ಮೇಲೂ ಅಡ್ಡ ಪರಿಣಾಮ ಬೀರಿದೆ. ಹೀಗಾಗಿ ಚೀನದ ಪ್ರತೀ ಐವರಲ್ಲಿ ಒಬ್ಬರು ನಿರುದ್ಯೋಗದ ಸಮಸ್ಯೆ ಎದುರಿಸುತ್ತಿದ್ದಾರೆ. ಮುಂದಿನ ವರ್ಷ 11 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ಕಾಲೇಜಿನಿಂದ ಹೊರಬರಲಿದ್ದು, ಇವರ ಮೇಲೂ ಭಾರೀ ಸಮಸ್ಯೆಗಳಾಗಲಿವೆ.

ಸದ್ಯ ಚೀನ ಜಗತ್ತಿನಲ್ಲೇ ಎರಡನೇ ದೊಡ್ಡ ಆರ್ಥಿಕತೆಯಾಗಿದ್ದು, ಜಗತ್ತು ಕೂಡ ಉತ್ಪಾದನೆಗಾಗಿ ಈ ದೇಶದ ಮೇಲೆಯೇ ಅವಲಂಬಿತವಾಗಿದೆ. ಇಲ್ಲಿ ಉತ್ಪಾದನೆಗೆ ಸಮಸ್ಯೆಯಾದರೆ ಉಳಿದ ದೇಶಗಳಿಗೂ ಸಮಸ್ಯೆಯಾಗುತ್ತದೆ.

ಮೂರು ಅಲೆಗಳಲ್ಲಿ ಮೊದಲು
ಚೀನದ ಸಾಂಕ್ರಾಮಿಕ ತಜ್ಞರ ಪ್ರಕಾರ, ಈಗ ಶುರುವಾಗಿರುವ ಚಳಿಗಾಲದಲ್ಲೇ ಚೀನ ಕೊರೊನಾದ ಮೂರು ಅಲೆ ಕಾಣಲಿದೆ. ಈಗ ಮೊದಲ ಅಲೆ ಕಂಡು ಬಂದಿದೆ. ಅಲ್ಲದೆ ಮುಂದಿನ ಮೂರು ತಿಂಗಳಲ್ಲಿ ಸುಮಾರು ಶೇ.60ರಷ್ಟು ಚೀನದ ಜನತೆಗೆ ಕೊರೊನಾ ಕಾಡಲಿದೆ. ಸಾವಿನ ಸಂಖ್ಯೆಯೂ ಲಕ್ಷಗಳ ಸಂಖ್ಯೆಯಲ್ಲಿ ದಾಖಲಾಗಬಹುದು. ಅಮೆರಿಕದ ವೈದ್ಯರೊಬ್ಬರು ಹೇಳಿದ ಪ್ರಕಾರ, ಮುಂದಿನ ಕೆಲವು ದಿನಗಳಲ್ಲಿ ಚೀನದಲ್ಲಿ ಕೊರೊನಾ ಸ್ಫೋಟವಾಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next