Advertisement

ಎಬಿಎಸ್‌, ಇಬಿಡಿ ಅಂದರೆ ಏನು? ನಿಜಕ್ಕೂ  ಅಗತ್ಯವೇ?

01:17 PM Aug 17, 2018 | |

ಆಧುನಿಕ ವಾಹನಗಳ ಬ್ರೇಕಿಂಗ್‌ ವ್ಯವಸ್ಥೆಯಲ್ಲಿ ಎಬಿಎಸ್‌, ಇಬಿಡಿ ವ್ಯವಸ್ಥೆಗಳು ಸಾಮಾನ್ಯವಾಗಿವೆ. ಸುಮಾರು 5 ಲಕ್ಷ ರೂ. ಮೇಲ್ಪಟ್ಟ ವಾಹನಗಳಲ್ಲಿ ಎಬಿಎಸ್‌, ಇಬಿಡಿಗಳು ಇರುತ್ತವೆ. ಇದರಿಂದ ಏನು ಪ್ರಯೋಜನ? ಇಂತಹ ವ್ಯವಸ್ಥೆ ನಿಜಕ್ಕೂ ಕಾರುಗಳಲ್ಲಿ ಬೇಕೇ? ಎಂಬುದು ಪ್ರಶ್ನೆಯಾಗಿರಬಹುದು. ಉತ್ತರ ಇಲ್ಲಿದೆ. ಹಿಂದಿನ ಕಾಲದಲ್ಲಿ ಎಬಿಎಸ್‌, ಇಬಿಡಿಯಂತಹ ವ್ಯವಸ್ಥೆಗಳು ಬ್ರೇಕಿಂಗ್‌ಗೆ ಇರಲಿಲ್ಲ. ಇದರಿಂದ ಬ್ರೇಕ್‌ ಹಾಕಿದ ಸಂದರ್ಭದಲ್ಲಿ ಕಾರು ಸ್ಕಿಡ್‌ ಆಗುವುದು, ನಿಯಂತ್ರಣ ತಪ್ಪಿ, ಇನ್ನೊಂದು ಕಾರಿಗೆ ಢಿಕ್ಕಿ ಹೊಡೆಯುವುದು ಇತ್ಯಾದಿ ಇತ್ತು. ಆದರೆ ಆಧುನಿಕ ವಿಧಾನದಲ್ಲಿ ಎಬಿಎಸ್‌, ಇಬಿಡಿಗಳು ವಾಹನಗಳ ಬ್ರೇಕಿಂಗ್‌ ವ್ಯವಸ್ಥೆಗೆ ಅಗತ್ಯದ್ದಾಗಿವೆ. ಇದರಿಂದ ತುರ್ತು ಸಂದರ್ಭ ಬ್ರೇಕ್‌ ಹಾಕಿದರೂ ಚಾಲಕನ ನಿಯಂತ್ರಣ ತಪ್ಪದಂತೆ ಸಹಾಯ ಮಾಡುತ್ತದೆ.

Advertisement

ಎಬಿಎಸ್‌ ಅಂದರೇನು?
ಆ್ಯಂಟಿ ಲಾಕ್‌ ಬ್ರೇಕಿಂಗ್‌ ಸಿಸ್ಟಂ ಎನ್ನವುದು ಎಬಿಎಸ್‌ನ ವಿಸ್ತೃತ ರೂಪ. 1929ರಲ್ಲಿ ಇದನ್ನು ಗಾಬ್ರೈಲ್‌ ವೋಸಿನ್‌ ಎಂಬಾತ ವಿಮಾನದ ಬ್ರೇಕಿಂಗ್‌ ವ್ಯವಸ್ಥೆಗೆ ಕಂಡುಹಿಡಿದ. ಈ ವ್ಯವಸ್ಥೆಯಲ್ಲಿ ಚಾಲಕ ಬ್ರೇಕ್‌ ಅದುಮಿದಾಗ ಬ್ರೇಕ್‌ ಒಮ್ಮೆಲೆ ಲಾಕ್‌ ಆಗುವುದನ್ನು ತಪ್ಪಿಸುತ್ತದೆ. ಒಂದೇ ಬಾರಿಗೆ ಬ್ರೇಕ್‌ ಪ್ಯಾಡ್‌ ಡಿಸ್ಕ್ ಅದುಮಿ ಹಿಡಿದಾಗ ವೇಗದಲ್ಲಿರುವ ಕಾರು ಓಲಾಡುವ, ನಿಯಂತ್ರಣ ತಪ್ಪುವ ಸಾಧ್ಯತೆ ಇರುತ್ತದೆ. ಏಕಾಏಕಿ ಬ್ರೇಕ್‌ ಪ್ಯಾಡ್‌ ಲಾಕ್‌ ಆಗುವುದರಿಂದ ಹೀಗಾಗುತ್ತದೆ. ಇದನ್ನು ತಪ್ಪಿಸಲು ಎಬಿಎಸ್‌ ವ್ಯವಸ್ಥೆ ಇದೆ. ಇದೊಂದು ಎಲೆಕ್ಟ್ರಾನಿಕ್‌ ವ್ಯವಸ್ಥೆಯಾಗಿದ್ದು, ಎಷ್ಟು ಬಲಯುತವಾಗಿ ಬ್ರೇಕ್‌ ಅದುಮಲಾಗಿದೆ ಎಂಬುದನ್ನು ಸೆನ್ಸರ್‌ಗಳು ಲೆಕ್ಕ ಹಾಕಿ ಬ್ರೇಕ್‌ ಹಾಕುತ್ತವೆ. ಜತೆಗೆ ಬ್ರೇಕ್‌ ಹಾಕುವ ಸಂದರ್ಭದಲ್ಲಿ ಎಬಿಎಸ್‌ ವ್ಯವಸ್ಥೆ ಪ್ರತಿ ಸೆಕೆಂಡ್ ಗೆ ಹಲವು ಬಾರಿ ಬ್ರೇಕ್‌ ಅನ್ನು ಹಿಡಿಯುವುದು, ಬಿಡುವುದು ಮಾಡುತ್ತದೆ. ಇದರಿಂದಾಗಿ ಅತಿ ಹೆಚ್ಚು ವೇಗದಲ್ಲಿದ್ದರೂ ಕಾರು ಸ್ಕಿಡ್‌ ಆಗಲಾರದು. ಬ್ರೇಕ್‌ ಹಾಕಿದಾಗ ಗಕ್ಕನೆ ನಿಲ್ಲಲು ಸಹಾಯ ಮಾಡುತ್ತದೆ.

ಇಬಿಡಿ ಅಂದರೇನು?
ಎಲೆಕ್ಟ್ರಾನಿಕ್‌ ಬ್ರೇಕ್‌ ಫೋರ್ಸ್‌ ಡಿಸ್ಟ್ರಿಬ್ಯೂಷನ್‌ ಎನ್ನುವುದು ಇಬಿಡಿಯ ವಿಸ್ತೃತ ರೂಪ. ಇದೂ ಎಲೆಕ್ಟ್ರಾನಿಕ್‌ ವ್ಯವಸ್ಥೆಯಾಗಿದೆ. ಈ ಮಾದರಿಯಲ್ಲಿ ಮೂರು ವ್ಯವಸ್ಥೆಗಳಿರುತ್ತವೆ. ಸ್ಪೀಡ್‌ ಸೆನ್ಸರ್‌, ಎಲೆಕ್ಟ್ರಾನಿಕ್‌ ಕಂಟ್ರೋಲ್‌ ಯುನಿಟ್‌, ಬ್ರೇಕ್‌ ಫೋರ್ಸ್‌ ಮಾಡ್ಯುಲೇಟರ್‌ ಇರುತ್ತದೆ. ಸ್ಪೀಡ್‌ ಸೆನ್ಸರ್‌ ಕಾರಿನ ವೇಗ, ಎಂಜಿನ್‌ ತಿರುಗುವ ವೇಗ ಲೆಕ್ಕಾಚಾರ ಹಾಕಿ ಚಕ್ರದ ಸ್ಲಿಪ್‌ ಸಾಧ್ಯತೆಯನ್ನು ಇಸಿಯುಗೆ ಹೇಳುತ್ತದೆ. ಅದರಂತೆ ಅಲ್ಲಿರುವ ಸಣ್ಣ ಚಿಪ್‌ ಕಾರಿನ ಸ್ಪೀಡ್‌ ಮತ್ತು ಚಕ್ರ ತಿರುಗುವ ವೇಗ ಅಂದಾಜಿಸಿ ಎಷ್ಟು ಪ್ರಮಾಣದಲ್ಲಿ ಬ್ರೇಕ್‌ ಹಿಡಿಯಬೇಕು ಎಂದು ಲೆಕ್ಕ ಹಾಕುತ್ತದೆ. ಅದರಂತೆ ಬ್ರೇಕ್‌ ಫೋರ್ಸ್‌ ಮಾಡ್ಯುಲೇಟರ್‌ಗಳು ಬ್ರೇಕ್‌ ಆಯಿಲ್‌ ಬಿಡುಗಡೆ ಮಾಡಿ ಚಕ್ರಗಳ ವೇಗಕ್ಕೆ ತಕ್ಕಂತೆ ಬ್ರೇಕ್‌ ಅದುಮಲು ಸಹಾಯ ಮಾಡುತ್ತದೆ. ಚಾಲಕ ಗಟ್ಟಿಯಾಗಿ ಬ್ರೇಕ್‌ ಹಾಕುವ ಆವಶ್ಯಕತೆ ಇರುವುದಿಲ್ಲ. ಎಷ್ಟು ಪ್ರಮಾಣದಲ್ಲಿ ಬ್ರೇಕ್‌ ಬೇಕು ಎಂಬುದನ್ನು ತಂತ್ರಜ್ಞಾನವೇ ನಿರ್ಧರಿಸುತ್ತದೆ. ಇದರಿಂದ ವಾಹನ ನಿಯಂತ್ರಣ ತಪ್ಪುವ ಸಾಧ್ಯತೆ ಕಡಿಮೆ

ಅಗತ್ಯವಿದೆಯೇ?
ಹೈವೇಯಲ್ಲಿ ವೇಗದ ಚಾಲನೆಗೆ, ಸ್ಕಿಡ್‌ ಆಗುವ ಮಾರ್ಗಗಳಲ್ಲಿ, ನೀರಿನಿಂದ ಜಾರುವ ಪ್ರಮೇಯಗಳಿದ್ದಾಗ, ಈ ಎರಡೂ ವ್ಯವಸ್ಥೆಗಳು ಚಾಲಕನ ನೆರವಿಗೆ ಬರುತ್ತವೆ. ಮುಂದಿನ ದಿನಗಳಲ್ಲಿ ಈ ಎರಡೂ ವ್ಯವಸ್ಥೆಗಳನ್ನು ಕೇಂದ್ರ ಸರಕಾರ ಎಲ್ಲ ಕಾರುಗಳಲ್ಲಿ ಕಡ್ಡಾಯ ಮಾಡಲು ಯೋಜನೆ ರೂಪಿಸುತ್ತಿದೆ. ಇದರಿಂದ ಅಪಘಾತ ಪ್ರಮಾಣವನ್ನು ಕಡಿಮೆಮಾಡಬಹುದು.

 ಈಶ

Advertisement
Advertisement

Udayavani is now on Telegram. Click here to join our channel and stay updated with the latest news.

Next