ತೆಕ್ಕಟ್ಟೆ : ರಾಜ್ಯ ಸರಕಾರದ ಒಂದು ಧೋರಣೆಯನ್ನು ವಿರೋಧಿಸುವುದು ಹಾಗೂ ಜನರ ಸಮಸ್ಯೆಗೆ ಸ್ಪಂದಿಸಬೇಕು ಎನ್ನುವ ಉದ್ಧೇಶದಿಂದ ಪಾದಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು ಇದರಿಂದಾಗಿ ಜನ ಜಾಗೃತರಾಗಬೇಕಾಗಿದೆ ಎಂದು ಮಾಜಿ ಸಂಸದ, ಬಿಜೆಪಿ ಮುಖಂಡ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.
ಅವರು ಬುಧವಾರದಂದು ರಾಜ್ಯ ಕಾಂಗ್ರೆಸ್ ಸರಕಾರದ ವೈಫಲ್ಯದ ವಿರುದ್ಧ ಮಾಬುಕಳದಿಂದ ಕುಂದಾಪುರದೆಡೆಗೆ ಪಾದಾಯಾತ್ರೆಯ ಮೂಲಕ ಗಮನ ಸೆಳೆಯುವ ನಿಟ್ಟಿನಿಂದ ಕುಂದಾಪುರ ವಿಧಾನ ಸಭಾ ಕ್ಷೇತ್ರದ ಕುಂದಾಪುರ ತಾಲೂಕಿನ ತೆಕ್ಕಟ್ಟೆಗೆ ಆಗಮಿಸಿದ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ಧೇಶಿಸಿ ಮಾತನಾಡಿದರು.
ಮರಳು ನೀತಿಗೆ ಸಂಬಂಧಿಸಿದಂತೆ ಕಳೆದ ಎರಡು ವರ್ಷದ ಹಿಂದೆ ಕಾನೂನು ಇಲಾಖೆಯ ಅಧಿಕಾರಿಯೊಬ್ಬರು ಸಣ್ಣ ತಿದ್ದುಪಡಿ ಮಾಡಬಹುದು ಎಂದು ಹೇಳಿದ್ದರು. ಆದರೆ ಅಂದಿನಿಂದ ಇಂದಿನವರೆಗೂ ಆ ತಿದ್ದುಪಡಿಯನ್ನು ಜಾರಿಗೆ ತರಲಿಲ್ಲ . ಕರಾವಳಿಯ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳು ತೆಗೆಯುವ ವಿಚಾರದ ಬಗ್ಗೆ ಬ್ರಹ್ಮಾವರದವರು ಸಂಬಂಧಪಟ್ಟ ಹಸಿರು ಪೀಠಕ್ಕೆ ದೂರು ನೀಡುವ ಮೂಲಕ ಇಂದಿಗೂ ತಡೆ ಹಿಡಿದ್ದಾರೆ ಅದನ್ನು ಕೂಡಾ ವಾದ ಮಾಡಿ ತೆರವುಗೊಳಿಸಿದ್ದೇವೆ . ಇಷ್ಟೆಲ್ಲಾ ಆದರೂ ಕೂಡಾ ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆಯನ್ನು ಕೇಳುತ್ತಿರುವುದು ಬಿಟ್ರೆ ಬೇರೆನನ್ನು ನೋಡುತ್ತಿಲ್ಲ ಅಲ್ಲದೆ ಇದುವರೆಗೆ ಆದೇಶ ಬಂದಿದ್ದನ್ನು ನೋಡಲಿಲ್ಲ . ಇದೇ ತಿಂಗಳ ಒಂದನೇ ತಾರೀಕಿಗೆ ಮರಳು ತೆಗೆಯಲು ಬಿಡುತ್ತೇವೆ ಎಂದು ಹೇಳಿದರು ಆದರೆ ಇದು ವರೆಗೂ ಕೂಡಾ ಆಗಲಿಲ್ಲ . ಈ ಮೂಲಕ ಮಂತ್ರಿಗಳ ಹಾಗೂ ಶಾಸಕರ ಗಮನಕ್ಕೆ ತರುವ ಇಚ್ಛಿಸುವುದೇನೆಂದರೆ ಯಾರು ತಮ್ಮ ಜನರಿಗೆ ಕೊಡಿಸಬೇಕು ಎಂದು ಹೋರಾಟ ಮಾಡುತ್ತಿದ್ದಾರೆ ಅವರ ವಿರುದ್ಧ ನ್ಯಾಯಾಂಗ ಮೊರೆ ಹೋಗಬೇಕಾಗುತ್ತದೆ . ಮಂತ್ರಿಗಳಿಗೆ ಮರಳು ಸಿಗುವುದಾದರೆ ಬೇರೆಯವರಿಗೆ ಯಾಕೆ ಸಿಗುವುದಿಲ್ಲ ? ಇಂತಹ ಮರಳಿನ ಸಮಸ್ಯೆಯನ್ನು ಪರಿಹಾರ ಮಾಡದೆ ಇದ್ರೆ ಕಳೆದ ಎರಡುಮೂರು ವರ್ಷದಿಂದಲೂ ಆಗದಿದ್ದನ್ನು ಚುನಾವಣೆ ಸಮೀಪಿಸುತ್ತಿದೆ ಎಂದು ಬೇಗ ಬೇಗ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಉಸ್ತುವಾರಿ ಮಂತ್ರಿಗಳ ವಿರುದ್ಧ ತೀವ್ರವಾಗಿ ವಾಗ್ಧಾಳಿ ನಡೆಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ತೆಕ್ಕಟ್ಟೆ ಬಿಜೆಪಿ ಸ್ಥಾನೀಯ ಸಮಿತಿಯ ಅಧ್ಯಕ್ಷ ಮಲ್ಯಾಡಿ ರಾಜೀವ ಶೆಟ್ಟಿ , ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ರಾಜೇಶ್ ಕಾವೇರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿಶೋರ್ ಕುಮಾರ್ , ಉದ್ಯಮಿ ಬೇಳೂರು ರಾಘವೇಂದ್ರ ಶೆಟ್ಟಿ, ಓಬಿಸಿ ಮೋರ್ಚಾ ಕುಂದಾಪುರ ಕ್ಷೇತ್ರಾಧ್ಯಕ್ಷ ರವೀಂದ್ರ ತಿಂಗಳಾಯ , ತಾ.ಪಂ ಅಧ್ಯಕ್ಷೆ ನಳಿನಿ ರಾವ್, ಜಿ.ಪಂ.ಸದಸ್ಯ ರಾಘವೇಂದ್ರ ಬಾರಿಕೆರೆ ಪ್ರಧಾನ ಕಾರ್ಯದರ್ಶಿ ಶಂಕರ ಅಂಕದಕಟ್ಟೆ , ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಬೇಳೂರು ಪ್ರವೀಣ ಕುಮಾರ್ ಶೆಟ್ಟಿ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಜೈಶೀಲ್ ಶೆಟ್ಟಿ , ಗ್ರಾ.ಪಂ.ಸದಸ್ಯ ವಿನೋದ್ ದೇವಾಡಿಗ, ಶ್ರೀನಾಥ ಶೆಟ್ಟಿ , ಅವಿನಾಶ್ ಶೆಟ್ಟಿ, ಹರೀಶ್ ಕುಲಾಲ್, ಸುರೇಶ್ ಮೊಗವೀರ ಶಾನಾಡಿ ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.