ಬೆಳಗಾವಿ: ಚುನಾವಣೆಯಲ್ಲಿ ನಾವು ಗೆದ್ದಿದ್ದು, ನಮ್ಮ ಸರಕಾರವೂ ಅಧಿಕಾರಕ್ಕೆ ಬಂದಿದೆ. ಆದರೆ ಕ್ಷೇತ್ರ ದಲ್ಲಿ ಮತದಾರರಿಗೆ ಮುಖ ತೋರಿಸಲು ಆಗುತ್ತಿಲ್ಲ. ಅವರು ಏನು ಕೇಳಿದರೂ ನಾವು ಸ್ಪಂದಿಸಲಾಗದ ಸ್ಥಿತಿಯಲ್ಲಿದ್ದೇವೆ. ಆರು ತಿಂಗ ಳಾದರೂ ಅನುದಾನ ಕೊಡದಿದ್ದರೆ, ಕ್ಷೇತ್ರದಲ್ಲಿ ಓಡಾಡುವುದು ಹೇಗೆ? – ಇದು ಬುಧವಾರ ರಾತ್ರಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಅಳಲು ತೋಡಿಕೊಂಡ ಬಗೆ. ಸಚಿವರು ಮತ್ತು ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆಯೂ ಆಡಳಿತ ಪಕ್ಷದ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ.
ಯಾವುದೇ ಸಚಿವರು ಹಾಗೂ ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ. ಈ ಬಗ್ಗೆ ಸ್ಪಷ್ಟ ಸೂಚನೆ ಕೊಡಬೇಕೆಂದು ಸಿಎಂಗೆ ಶಾಸಕರು ಮನವಿ ಮಾಡಿದ್ದಾರೆ.
ಅನುದಾನ ಕೊರತೆ, ಸಚಿವರ ಕಾರ್ಯವೈಖರಿ ಮತ್ತು ಕೆಲವೊಂದು ಸ್ಥಳೀಯ ವಿಷಯಗಳ ಬಗ್ಗೆ ಹೆಚ್ಚಿನ ಶಾಸಕರು ಮಾತನಾಡಲು ಬಯಸಿದ್ದರಿಂದ ಮುಂದಿನ ವಾರ ಮತ್ತೂಮ್ಮೆ ಶಾಸಕರ ಸಭೆ ಕರೆಯಲಾಗುತ್ತದೆ. ಆಗ ಎಲ್ಲರಿಗೂ ಅವಕಾಶ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿರುವ ಸಿಎಂ, ‘ನೀವು ಕೇಳಿದಷ್ಟು ಹಣ ಕೊಡಲು ಆಗುವುದಿಲ್ಲ. ಸಾಧ್ಯವಾದಷ್ಟು ಕೊಡುತ್ತೇನೆ’ ಎಂದು ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.
ಇನ್ನೊಂದು ಮೂಲದ ಪ್ರಕಾರ, ಪ್ರತಿ ಶಾಸಕರಿಗೆ 25 ಕೋಟಿ ರೂ. ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.