Advertisement

ಏನೆಂದು ಹೆಸರಿಡಲಿ, ಈ ಚಂದ ಅನುಭವಕೆ?

03:50 AM Jan 27, 2017 | Team Udayavani |

“ನಾನು ಲಕ್ಕಿ …’
– ಹೀಗೆ ಹೇಳಿದ್ದು “ಏನೆಂದು ಹೆಸರಿಡಲಿ’ ನಿರ್ಮಾಪಕ ಶ್ರೀನಿವಾಸ ಕುಲಕರ್ಣಿ. ಅವರು ಹಾಗೆ ಹೇಳ್ಳೋಕೆ ಕಾರಣ. ಸಿನಿಮಾ ವಿತರಣೆಯನ್ನು ವಿತರಕ ಜಾಕ್‌ ಮಂಜು ಪಡೆದಿದ್ದು. “ನಾನು ಈ ರಂಗಕ್ಕೆ ಹೊಸಬ. ಒಳ್ಳೇ ತಂಡ ಕಟ್ಟಿಕೊಂಡು ಒಳ್ಳೇ ಸಿನಿಮಾ ಮಾಡಿದ್ದೇನೆ. ಎಷ್ಟೇ ಒಳ್ಳೆಯ ಸಿನಿಮಾ ಮಾಡಿದರೂ ನಮ್ಮಂತಹ ಹೊಸಬರಿಗೆ ಚಿತ್ರಮಂದಿರಗಳು ಸಿಗೋದು ಕಷ್ಟ. ಒಳ್ಳೆಯ ವಿತರಕರು ಮುಂದೆ ಬರೋದು ಇನ್ನೂ ಕಷ್ಟ. ಆದರೆ, ನಮ್ಮ ಸಿನಿಮಾ ವೀಕ್ಷಿಸಿದ ಜಾಕ್‌ ಮಂಜು, ನಾನು ವಿತರಣೆ ಮಾಡ್ತೀನಿ ಅಂತ ಮುಂದೆ ಬಂದಿದ್ದಾರೆ. ಈ ವಿಷಯದಲ್ಲಿ ನಾನು ಲಕ್ಕಿ’ ಎಂದ ಕುಲಕರ್ಣಿ, ಚಿತ್ರ ಚೆನ್ನಾಗಿ ಮೂಡಿಬಂದಿದೆ.ಇದು ಕುಟುಂಬ ಸಮೇತ ಬಂದು ನೋಡುವಂತಹ ಚಿತ್ರ. ನಮಗೆ ಪ್ರೋತ್ಸಾಹ ಬೇಕು. ಮಾಧ್ಯಮ ಮಿತ್ರರ ಸಹಕಾರ ಸಿಕ್ಕರೆ ಮುಂದೆಯೂ ಹೊಸತನದ ಚಿತ್ರ ಕೊಡುವುದಾಗಿ’ ಹೇಳಿಕೊಂಡರು ಶ್ರೀನಿವಾಸ ಕುಲಕರ್ಣಿ.

Advertisement

ನಿರ್ದೇಶಕ ರವಿ ಬಸಪ್ಪನದೊಡ್ಡಿಗೆ ಸೆನ್ಸಾರ್‌ ಮಂಡಳಿ ಕೊಟ್ಟಿರುವ “ಯು’ ಸರ್ಟಿಫಿಕೆಟ್‌ನಿಂದಾಗಿ ಇನ್ನಷ್ಟು ಖುಷಿಯಾಗಿದೆಯಂತೆ. “ನಾನು ಅದೃಷ್ಟವಂತ. ಮೊದಲ ಚಿತ್ರಕ್ಕೇ ಒಳ್ಳೇ ನಿರ್ಮಾಪಕರು ಸಿಕ್ಕಿದ್ದಾರೆ. ಗೆಳೆಯ ಪೂರ್ಣೇಶ್‌ ಸಾಗರ ಒಂದೊಳ್ಳೆಯ ಕಥೆ ಕೊಟ್ಟಿದ್ದರಿಂದಲೇ, ನಾವಂದುಕೊಂಡಂತೆ ಚಿತ್ರ ಮೂಡಿಬಂದಿದೆ. ಕಥೆಗೆ ಪೂರಕವಾಗಿಯೇ ಸಾಹಿತ್ಯ ಮತ್ತು ಸಂಗೀತವಿದೆ. ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾ. ಅಮ್ಮ ಮಗಳು ಹಾಗು ಅವನು ಈ ಮೂರು ಪಾತ್ರಗಳ ಸುತ್ತವೇ ಚಿತ್ರ ಸಾಗುತ್ತದೆ ಎಂದರು ರವಿ ಬಸಪ್ಪದೊಡ್ಡಿ.

ನಾಯಕ ಅರ್ಜುನ್‌ಗೆ ಇದು ಮೊದಲ ಸಿನಿಮಾ. “ಮೊದಲ ಚಿತ್ರದಲ್ಲೇ ಒಳ್ಳೇ ಕಥೆ, ಪಾತ್ರ, ನಿರ್ದೇಶಕರು, ನಿರ್ಮಾಪಕರು ಮತ್ತು ತಂಡ ಸಿಕ್ಕಿದೆ. ಅಭಿನಯಕ್ಕೆ ಹೆಚ್ಚು ಅವಕಾಶವಿದೆ. ದ್ವಿತಿಯಾರ್ಧ ಪಾತ್ರದಲ್ಲಿ ಚಾಲೆಂಜ್‌ ಇದೆ. ನಾಯಕಿಗಿಂತ, ಅವರ ತಾಯಿ ಜತೆಯಲ್ಲೇ ಹೆಚ್ಚು ಮಾತುಕತೆಗಳಿವೆ. ಭಾವನೆಗಳೇ ಚಿತ್ರದ ಜೀವಾಳ’ ಅಂದರು ಅರ್ಜುನ್‌.

ನಾಯಕಿ ರೋಜಾಗೆ ಇದು ಮೂರನೇ ಸಿನಿಮಾ. ಅವರು ಒಳ್ಳೇ ಕಥೆಗಾಗಿ ಹುಡುಕಾಟ ನಡೆಸಿದ್ದರಂತೆ. ಆ ಸಮಯದಲ್ಲಿ ಸಿಕ್ಕ ಈ ಚಿತ್ರ, ಅವರಿಗೊಂದು ಹೊಸ ಇಮೇಜ್‌ ಕೊಡುತ್ತೆ ಎಂಬ ನಂಬಿಕೆ ಅವರದು. ಇನ್ನು, ಸಂಗೀತ ನಿರ್ದೇಶಕ ಸುರೇಂದ್ರನಾಥ್‌ ಇಲ್ಲಿ ಆರು ಹಾಡುಗಳಿಗೆ ಸಂಗೀತ ನೀಡಿದ್ದಾರಂತೆ. ಜಯಂತ ಕಾಯ್ಕಿಣಿ, ನಾಗೇಂದ್ರಪ್ರಸಾದ್‌, ಕವಿರಾಜ್‌, ದೊಡ್ಡರಂಗೇಗೌಡ ಗೀತೆ ರಚಿಸಿದ್ದಾರೆ. ಚಿತ್ರಕ್ಕೆ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಜೋಗಿ ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ಚಿತ್ಕಳಾ ಬಿರಾದಾರ್‌, ಮಿಲಿಂದ್‌ ಗುಣಾಜಿ, ಸಂಕೇತ್‌ ಕಾಶಿ, ಸುನೇತ್ರ ಪಂಡಿತ್‌, ಉಮೇಶ್‌ ಇತರರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next