Advertisement

Water: ನಾವೇನು ಪಾಪ ಮಾಡಿದ್ದೇವೆ? ನಾವೂ ಈ ದೇಶದ ಪ್ರಜೆಗಳಲ್ಲವೇ?: ಎಚ್.ಡಿ.ದೇವೇಗೌಡ ಆಕ್ರೋಶ

11:13 PM Jan 12, 2024 | Team Udayavani |

ಬೆಂಗಳೂರು: ನೀತಿ ಆಯೋಗ ರೂಪಿಸಿದ ನಿಯಮಾವಳಿ ಪ್ರಕಾರವೇ ನಮ್ಮ ಜಲಾಶಯಗಳಿಂದ ನೀರೆತ್ತಲು ನಮಗೆ ಬಿಡುವುದಿಲ್ಲ. ಆದರೆ, ನೆರೆಯ ತಮಿಳುನಾಡು ಇಲ್ಲಿಂದ ಹರಿದ ನೀರನ್ನು ಎತ್ತಬಹುದು. ಅಲ್ಲಿನ ಪ್ರತಿ ಹಳ್ಳಿಗಳಿಗೆ ಆನಂದವಾಗಿ ಹರಿಸುತ್ತದೆ. ನಾವೇನು ಪಾಪ ಮಾಡಿದ್ದೇವೆ? ನಾವೂ ಈ ದೇಶದ ಪ್ರಜೆಗಳಲ್ಲವೇ? ಈ ತಾರತಮ್ಯ ಯಾಕೆ?

Advertisement

ರಾಜ್ಯದಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡು ನೀರಾವರಿ ಯೋಜನೆಗಳ ಕುರಿತು ಅಧ್ಯಯನ ನಡೆಸಿದ 31 ಸಂಸದರ ಸಂಸದೀಯ ಸ್ಥಾಯಿ ಸಮಿತಿ ಎದುರು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳಿದ್ದು ಹೀಗೆ.

ಇದನ್ನು ಸ್ವತಃ ದೇವೇಗೌಡ ಅವರು ಅನಂತರ ಸುದ್ದಿಗಾರರಿಗೆ ತಿಳಿಸಿದರು. ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಿತಿ ಸಭೆಯಲ್ಲಿ ಭಾಗವಹಿಸಿ ಅನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಲಕ್ಷ ಹೆಕ್ಟೇರ್‌ಗಿಂತ ಕಡಿಮೆ ಪ್ರದೇಶದ ಯಾವುದೇ ನೀರಾವರಿ ಯೋಜನೆಗಳಿದ್ದರೆ, ಅಂತಹ ಜಲಾಶಯಗಳಿಂದ ನೀರೆತ್ತಬಹುದು ಎಂದು ನೀತಿ ಆಯೋಗ ಹೇಳುತ್ತದೆ. ಕಾವೇರಿ ಜಲಾನಯನದ ಉದ್ದಕ್ಕೂ 20ಕ್ಕೂ ಹೆಚ್ಚು ನೀರಾವರಿ ಯೋಜನೆಗಳಿದ್ದು, ಅವೆಲ್ಲವೂ ಬರೀ ಹತ್ತು ಸಾವಿರ ಹೆಕ್ಟೇರ್‌ ಕೂಡ ಮೀರುವುದಿಲ್ಲ. ಹೀಗಿರುವಾಗ, ಅಲ್ಲಿಂದ ಕುಡಿಯಲು ಮತ್ತು ಕೃಷಿ ಬೆಳೆಗಳಿಗೆ ನೀರೆತ್ತಲು ಯಾಕೆ ಬಿಡುವುದಿಲ್ಲ ಎಂದು ಕೇಳಿದರು.

ಮೇಕೆದಾಟು ಯೋಜನೆಗೂ ತಕರಾರು ಮಾಡುತ್ತಾರೆ. ಆದರೆ, ಅಲ್ಲಿ ಹೊಗೇನಕಲ್‌ನಿಂದ ಪ್ರತಿ ಹಳ್ಳಿಗಳಿಗೆ ನೀರು ಹರಿಸುತ್ತಾರೆ. ಇದನ್ನು ನಾನು ಕಣ್ಣಾರೆ ನೋಡಿದ್ದೇನೆ. ಹಾಗಿದ್ದರೆ, ನಾವೇನು ಪಾಪ ಮಾಡಿದ್ದೇವೆ? ಇದೇ ಪ್ರಶ್ನೆಯನ್ನು ನಾವು ಸಮಿತಿ ಎದುರು ಇಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.

ಹೆಚ್ಚುವರಿ ಅನುದಾನಕ್ಕೆ ಬೇಡಿಕೆ
ಇದಲ್ಲದೆ, ರಾಜ್ಯದಲ್ಲಿ ಪ್ರಸ್ತುತ ವಿವಿಧ ಹಂತದಲ್ಲಿರುವ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಕೇಂದ್ರ ಸಾಧ್ಯವಾದಷ್ಟು ಹೆಚ್ಚು ಅನುದಾನ ನೀಡಬೇಕು. ಉದಾಹರಣೆಗೆ ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ 5,300 ಕೋಟಿ ರೂ. ನೀಡಲಾಗಿತ್ತು. ಆದರೆ, ಇದು ಸಾಕಾಗುವುದಿಲ್ಲ. ಸಾವಿರಾರು ಕೋಟಿ ಮೊತ್ತದ ಪ್ರಾಜೆಕ್ಟ್ಗಳಿಗೆ ಅನುದಾನದ ತುರ್ತು ಅವಶ್ಯಕತೆ ಇದೆ. ಈ ಬಗ್ಗೆ ಸಮಿತಿ ಗಮನಕ್ಕೆ ತರಲಾಯಿತು. ಗುಜರಾತಿನ ಮಾಜಿ ನೀರಾವರಿ ಸಚಿವ ಪರ್ವತಭಾಯಿ ಪಟೇಲ್‌ ನೇತೃತ್ವದಲ್ಲಿ ಸಮಿತಿ ರಾಜ್ಯಕ್ಕೆ ಎರಡು ದಿನಗಳು ಭೇಟಿ ನೀಡಿತ್ತು. ರಾಜ್ಯದ ನೀರಾವರಿ ಸಮಸ್ಯೆಗಳ ಬಗ್ಗೆ ಗಮನಸೆಳೆಯಲಾಗಿದ್ದು, ಪೂರಕ ಸ್ಪಂದನೆ ಸಿಕ್ಕಿದೆ ಎಂದೂ ಹೇಳಿದರು.

Advertisement

ಸಿದ್ದು-ಅವರ ಶ್ರೀಮತಿ ಇಬ್ಬರೂ ಭಕ್ತರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ವೈಯಕ್ತಿಕವಾಗಿ ನನಗೆ ಗೊತ್ತು. ಅವರೂ ರಾಮನ ಭಕ್ತರು ಮತ್ತು ಅವರ ಶ್ರೀಮತಿಯವರಂತೂ ಎಲ್ಲ ದೇವಸ್ಥಾನಗಳಿಗೂ ಹೋಗುತ್ತಾರೆ. ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಹೋಗುವುದಿಲ್ಲ, ಅನಂತರ ಹೋಗುವುದಾಗಿ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಎಚ್‌.ಡಿ. ದೇವೇಗೌಡ ಪ್ರತಿಕ್ರಿಯೆ ಇದು. ರಿಪೋರ್ಟ್‌ ಮಾಡಲಿಕ್ಕಾಗಿ ಇದನ್ನು ನಾನು ಹೇಳುತ್ತಿಲ್ಲ. ಸಿದ್ದರಾಮಯ್ಯ ಭಕ್ತರು. ಚಾಮುಂಡೇಶ್ವರಿಗೆ ಕೂಡ ಯಾವಾಗಲೂ ಹೋಗುತ್ತಾರೆ. ಅವರ ಶ್ರೀಮತಿಯವರಂತೂ ಎಲ್ಲ ದೇವಸ್ಥಾನಗಳಿಗೂ ಹೋಗುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next