ಕುಷ್ಟಗಿ: ಅತಿಥಿ ಉಪನ್ಯಾಸಕರಿಗೆ ಸರ್ಕಾರ ನೀಡಿದ್ದು, ಸಕ್ರಾಂತಿ ಸಿಹಿ ಅಲ್ಲ ಮರಣ ಶಾಸನ, ಅತಿಥಿ ಉಪನ್ಯಾಸಕರ ವೇತನ ಪರಿಷ್ಕರಣೆ ನೆಪದಲ್ಲಿ ತಿಥಿ ಮಾಡಲು ಮುಂದಾಗಿದೆ ಎಂದು ಅತಿಥಿ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ಶಂಕರ ಕರಪಡಿ ಆರೋಪಿಸಿದ್ದಾರೆ.
ಈ ಕುರಿತು ಉದಯವಾಣಿ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ನಾವು ಕೇಳಿರುವುದೇನು? ನೀವು ಕೊಟ್ಟಿರುವುದಾದರೂ ಏನು? ಎಂದು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ಅತಿಥಿ ಉಪನ್ಯಾಸಕರು ಕೇಳಿದ್ದು ವೇತನ ಹೆಚ್ಚಳವಲ್ಲ. 14,500 ರಾಜ್ಯದ ಅತಿಥಿ ಉಪನ್ಯಾಸಕರ ಸೇವಾ ಸಕ್ರಮಾತಿ, ಸೇವಾ ವಿಲೀನತೆ, 12 ತಿಂಗಳ ವೇತನ, 60 ವರ್ಷದವರೆಗೆ ನೀಡಬೇಕೆನ್ನುವುದಾಗಿತ್ತು. 35 ದಿನಗಳ ಕರ್ನಾಟಕ ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರು ನಿರಂತರವಾಗಿ ತರಗತಿಗಳನ್ನು ಬಹಿಷ್ಕರಿಸಿ ಬೀದಿ ಬೀದಿಗಳಲ್ಲಿ ಪ್ರತಿಭಟಿಸಿ, ಚಹಾ ಮಾರಿ, ಮಿರ್ಚಿ ಮಾಡಿ, ಬೂಟ್ ಪಾಲಿಶ್ ಮಾಡಿ, ಉನ್ನತ ಶಿಕ್ಷಣ ಪಡೆದು ಉಪನ್ಯಾಸ ಮಾಡುವಂತ ಅತಿಥಿ ಉಪನ್ಯಾಸಕರ ಕಥೆ ವ್ಯಥೆಯನ್ನು ನೋವನ್ನು ಅನುಭವಿಸಿ, 10/12/2022 ರಿಂದ ಪ್ರಾರಂಭವಾದ ನಮ್ಮ ಸೇವಾ ಭದ್ರತೆ ಹೋರಾಟದಿಂದ ಇಲ್ಲಿವರೆಗೂ 5 ಅತಿಥಿ ವೃತ್ತಿ ಬಾಂಧವ ಸ್ನೇಹಿತರನ್ನು ಕಳೆದುಕೊಂಡಿದ್ದೇವೆ, ಇನ್ನು ಎಷ್ಟು ಜನರ ಬಲಿ ಪಡೆಯಬೇಕೆಂದು ಸರ್ಕಾರ ನಿರ್ಧಾರ ಮಾಡಿದೆ ಗೊತ್ತಿಲ್ಲ ಎಂದರು.
ಸರ್ಕಾರ ಅತಿಥಿ ಉಪನ್ಯಾಸಕರನ್ನು ತುಂಬಾ ವ್ಯವಸ್ಥಿತವಾಗಿ” ಒಡೆದಾಳುವ ನೀತಿಯನ್ನು” ಅನುಸರಿಸುವಲ್ಲಿ ಬಹಳಷ್ಟು ತಂತ್ರಗಾರಿಕೆಯನ್ನು ಕುತಂತ್ರವನ್ನು ಮಾಡಿ, ರಾಜ್ಯದಲ್ಲಿ ಅತಿಥಿ ಉಪನ್ಯಾಸಕರ ಅಂತ್ಯವನ್ನು ಅತಿಥಿ ಉಪನ್ಯಾಸಕರಿಂದ ಮುಗಿಸುವ ಶಕುನಿ ತಂತ್ರವನ್ನು ಉಪಯೋಗಿಸಿದೆ. ಹೇಗೆಂದರೆ, 15,000 ಅತಿಥಿ ಉಪನ್ಯಾಸಕರಿಗೆ ನಾಲ್ಕು ಹಂತದಲ್ಲಿ ವೇತನ ಹೆಚ್ಚು ಮಾಡಿ, ಹಂತ ಹಂತವಾಗಿ ಎಲ್ಲರನ್ನೂ ಮುಗಿಸುವ ಕುತಂತ್ರವನ್ನು ಮಾಡಿದೆ ಎಂದು ಹೇಳಿದರು.
ಅರ್ಹತೆ ಇಲ್ಲದವರು ಹೊರಗೆ ಆದರೆ, ಮುಂದೆ ಸರ್ಕಾರದಿಂದ ಕಾಯಂ ಉಪನ್ಯಾಸಕರು ಬಂದಾಗ ಅರ್ಹತೆ ಇರುವಂತ ಉಪನ್ಯಾಸಕನ್ನ ಮುಗಿಸುವ ವ್ಯವಸ್ಥಿತ ತಂತ್ರಗಾರಿಕೆಯನ್ನು ಮಾಡಿ, ಅತಿಥಿ ಉಪನ್ಯಾಸಕರ ತಿಥಿ ಮಾಡುವ ವ್ಯವಸ್ಥಿತ ಕುತಂತ್ರ ಮಾಡಿದೆ. ಅದಕ್ಕಾಗಿ, ಸರ್ಕಾರದ ಒಡೆದಾಳುವ ನೀತಿಯನ್ನು ಧಿಕ್ಕರಿಸಿ, ನಾವೆಲ್ಲರೂ ಒಂದಾಗಿ ಒಗ್ಗಟ್ಟಾಗಿ ಸೇವಾ ಸಕ್ರಮಾತಿ,ಸೇವಾ ವಿಲೀನತೆ ಸರ್ಕಾರದಿಂದ ಅಧಿಕೃತ ಆದೇಶ ಬರುವವರಿಗೆ ಹೋರಾಟ ಮುಂದುವರಿಯಲಿದೆ ಎಂದರು.
ಹೊಸ ತಂತ್ರಗಾರಿಕೆಯಿಂದ ಗಟ್ಟಿಗೊಳಿಸಿ ಉಗ್ರ ಪ್ರತಿಭಟನೆಯನ್ನು ಹೊಸ ರೂಪರೇಶೆಗಳನ್ನು ಮಾಡಿಕೊಂಡು ಸರ್ಕಾರಕ್ಕೆ ಪಾಠ ಕಲಿಸುವಂತೆ ಕಾರ್ಯ ಮಾಡಲು ಯೋಚಿಸಿದ್ದೇವೆ. ಇಂಥ ಸಂದರ್ಭ ನಮ್ಮ ಭವಿಷ್ಯದ ಜೀವನದಲ್ಲಿ ಎಂದಿಗೂ ಬರಲು ಸಾಧ್ಯವಿಲ್ಲ. ಏಕೆಂದರೆ, ನಮ್ಮ ಸೇವಾ ಸಕ್ರಮಕ್ಕೇ, ಹಾಗೂ ವಿಲೀನತೆಗೆ ಕಾಲ ಈಗ ಪರಿಪಕ್ವವಾಗಿದೆ. ಏಕೆಂದರೆ, ವಿದ್ಯಾರ್ಥಿಗಳಿಗೆ 35 ದಿನಗಳಿಂದ ತರಗತಿ ನಡೆದಿಲ್ಲ, ಮುಂದಿನ ತಿಂಗಳು ಪರೀಕ್ಷೆ ಮಾಡಬೇಕಾಗಿದೆ. ಸಿಲೆಬಸ್ ಗೊತ್ತಿಲ್ಲ, ವಿದ್ಯಾರ್ಥಿಗಳ ಪಠ್ಯಕ್ರಮ ಮುಗಿದಿಲ್ಲ, ನಮ್ಮ ಹೋರಾಟ ಹೇಗೆ ಉಗ್ರವಾಗುತ್ತದೆ. ಹಾಗೆಯೆ ವಿದ್ಯಾರ್ಥಿಗಳು ಉಗ್ರ ಪ್ರತಿಭಟನೆಗೆ ಮುಂದಾಗಲಿದ್ದಾರೆ ಎಂದರು.
ಮುಂಬರುವ ತಕ್ಕಂತಹ ಪರೀಕ್ಷೆಯನ್ನು ಬಹಿಷ್ಕಾರ ಮಾಡಲು ತಯಾರಾಗುತ್ತಾರೆ. ಅನಿವಾರ್ಯವಾಗಿ, ನಮ್ಮ ಬೇಡಿಕೆಗಳಿಗೆ ಸರ್ಕಾರ ಬಾಗಲೇ ಬೇಕು, ಅಲ್ಲಿವರೆಗೆ ಅತಿಥಿ ಉಪನ್ಯಾಸಕರ ಹೋರಾಟವನ್ನು ತರಗತಿ ಬಹಿಷ್ಕಾರ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.