Advertisement
ಆದರೆ ಈ ಕಾದಾಟದಲ್ಲಿ ನಾಯಕನಿಗೂ ಗಂಭೀರ ಗಾಯಗಳಾಗಿರುತ್ತವೆ ಮತ್ತು ಅವನನ್ನು ಅರೆಪ್ರಜ್ಞಾವಸ್ಥೆಯಲ್ಲಿ ತರಾತುರಿಯಿಂದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಅಲ್ಲಿ ಅವನನ್ನು ನೇರವಾಗಿ ಆಪರೇಶನ್ ಥಿಯೇಟರ್‌ಗೆ ವರ್ಗಾಯಿಸಲಾಗುತ್ತದೆ. ನಾಯಕನಿರುವ ಸ್ಟ್ರೆಚರ್‌ನ ಹಿಂದೆ ಬಿಳಿ ಕೋಟಿನ ವೈದ್ಯರು ಒಳಕ್ಕೆ ಧಾವಿಸಿ ಅಪಾರದರ್ಶಕ ಗಾಜಿನ ಬಾಗಿಲು ಮುಚ್ಚಿಕೊಳ್ಳುತ್ತದೆ, ಬಾಗಿಲಿನ ಮೇಲೆ ಕೆಂಪು ದೀಪ ಹೊತ್ತಿಕೊಳ್ಳುತ್ತದೆ. ನಾಯಕನ ಗೆಳೆಯರು, ಕುಟುಂಬದವರು ಕಾರಿಡಾರ್‌ನಲ್ಲಿ ಚಿಂತಾಕ್ರಾಂತರಾಗಿ ಶಪಥ ಹಾಕುತ್ತಿರುತ್ತಾರೆ. ನಾಯಕಿಯು ದೇವಾಲಯದಲ್ಲಿ ಕಣ್ಣೀರು ಸುರಿಸುತ್ತ ಕರುಣಾಜನಕ ಹಾಡೊಂದನ್ನು ಹಾಡುತ್ತಿದ್ದಾಳೆ. ಅಂತಿಮವಾಗಿ ನಿರೀಕ್ಷೆಯಂತೆ ನಾಯಕ ಚೇತರಿಸಿಕೊಳ್ಳುತ್ತಾನೆ ಮತ್ತು ನಾಯಕ-ನಾಯಕಿ ಮತ್ತು ಕುಟುಂಬದವರೆಲ್ಲ ಜತೆಯಾಗಿರುವ ದೃಶ್ಯದೊಂದಿಗೆ ಎಲ್ಲವೂ ಸುಖಾಂತ್ಯವಾಗುತ್ತದೆ.
Related Articles
Advertisement
ಈಗ ಗಾಯಾಳುವೊಬ್ಬರು ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗುವ ಅಥವಾ ಅಪೆಂಡಿಸೆಕ್ಟೊಮಿ, ಟಾನ್ಸಿಲೆಕ್ಟೊಮಿ, ಹರ್ನಿಯಾ ಶಸ್ತ್ರಚಿಕಿತ್ಸೆ, ಕ್ಯಾಟರ್ಯಾಕ್ಟ್ ಶಸ್ತ್ರಚಿಕಿತ್ಸೆ, ಮೂಳೆಮುರಿತವಾದ ಕೈ ಅಥವಾ ಕಾಲಿಗೆ ರಾಡ್ ಹಾಕಿಸಿಕೊಳ್ಳುವುದು ಇತ್ಯಾದಿ ಆಯ್ಕೆಯ ಶಸ್ತ್ರಚಿಕಿತ್ಸೆಗೆ ರೋಗಿ ಒಳಗಾಗುವ ಸನ್ನಿವೇಶವನ್ನು ವಿಶ್ಲೇಷಿಸೋಣ.
ಗಾಯಾಳುವಿಗೆ ಶಸ್ತ್ರಚಿಕಿತ್ಸೆಯ ಪ್ರಕ್ರಿಯೆ
ರಸ್ತೆ ಅಪಘಾತವೊಂದರ ಉದಾಹರಣೆಯನ್ನು ತೆಗೆದುಕೊಳ್ಳೋಣ. ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಮೊತ್ತಮೊದಲಿಗೆ ಟ್ರೊಮಾ ಸೆಂಟರ್ ಅಥವಾ ಕ್ಯಾಶುಯಲ್ಟಿ ವಿಭಾಗದಲ್ಲಿ ಸ್ಥಿರ ಸ್ಥಿತಿಗೆ ತರಲಾಗುತ್ತದೆ. ಶ್ವಾಸಾಂಗದ ಆರೈಕೆ, ಉಸಿರಾಟ ನೆರವು, ರಕ್ತ ಮರುಪೂರಣ, ರಕ್ತಸ್ರಾವವಾಗುತ್ತಿರುವಲ್ಲಿಗೆ ಪ್ರಶರ್ ಡ್ರೆಸಿಂಗ್‌ನಂತಹ ಪ್ರಾಣ ಉಳಿಸುವ ಕ್ರಮಗಳನ್ನು ಮೊತ್ತಮೊದಲಿಗೆ ತೆಗೆದುಕೊಳ್ಳಲಾಗುತ್ತದೆ. ಇದಾದ ಬಳಿಕ ಉಂಟಾಗಿರುವ ಗಾಯದ ಸ್ವರೂಪ, ಸ್ವಭಾವವನ್ನು ಆಧರಿಸಿ ತುರ್ತು ಶಸ್ತ್ರಚಿಕಿತ್ಸೆಗೆ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತದೆ. ಶಸ್ತ್ರಚಿಕಿತ್ಸೆ ನಡೆಸುವುದಕ್ಕೆ ಮುನ್ನ ರೋಗಿಯ ಸಾಮಾನ್ಯ ದೇಹಾರೋಗ್ಯವು ಸ್ಥಿರಗೊಂಡಿರುವುದು ಕಡ್ಡಾಯವಾಗಿರುತ್ತದೆ. ಹಾಗೆಯೇ ಶಸ್ತ್ರಕ್ರಿಯೆಗೆ ಮುನ್ನ ಕನಿಷ್ಠ 4-6 ತಾಸುಗಳಿಂದ ರೋಗಿ ಖಾಲಿ ಹೊಟ್ಟೆಯಲ್ಲಿರುವುದು ಕೂಡ ಕಡ್ಡಾಯ. ಇಲ್ಲವಾದರೆ ಆ್ಯಸ್ಪಿರೇಶನ್ ನ್ಯುಮೋನಿಯಾ, ಹೃದಯಾಘಾತದಂತಹ ಇಂಟ್ರಾ ಆಪರೇಟಿವ್ ಅನೆಸ್ಥೆಟಿಕ್ ತೊಂದರೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ. ಶಸ್ತ್ರಕ್ರಿಯೆಯನ್ನು ಆರಂಭಿಸುವುದಕ್ಕೆ ಮುನ್ನ ಶಸ್ತ್ರಕ್ರಿಯೆಯನ್ನು ನಡೆಸುವ ಸ್ಪೆಶಲಿಸ್ಟ್ ಮತ್ತು ಸಂಬಂಧಪಟ್ಟ ಅರಿವಳಿಕೆ ಶಾಸ್ತ್ರಜ್ಞರು ರೋಗಿಯ ಆರೋಗ್ಯ ಸ್ಥಿತಿಗತಿಗಳನ್ನು ಆಮೂಲಾಗ್ರವಾಗಿ ವಿಶ್ಲೇಷಿಸುತ್ತಾರೆ.
ಹಲವು ಮಂದಿ ತಮ್ಮ ಜೀವಿತಾವಧಿಯಲ್ಲಿ ಕೆಲವೊಂದು ಶಸ್ತ್ರಚಿಕಿತ್ಸೆಗೆ ಒಳಗಾಗಿರುತ್ತಾರೆ. ಈ ಪೈಕಿ ಕೆಲವು ಸಾಮಾನ್ಯ ಶಸ್ತ್ರಚಿಕಿತ್ಸೆಗಳಾಗಿದ್ದರೆ ಮತ್ತೆ ಕೆಲವು ಹೃದಯ ಶಸ್ತ್ರಚಿಕಿತ್ಸೆಯಂತಹ ಕಠಿನ ಶಸ್ತ್ರಚಿಕಿತ್ಸೆಯಾಗಿರುತ್ತದೆ. ತುರ್ತು ಶಸ್ತ್ರಚಿಕಿತ್ಸೆಯ ಮಾದರಿಯಲ್ಲಿಯೇ ಈ ಶಸ್ತ್ರಚಿಕಿತ್ಸೆಗಳನ್ನು ಯೋಜಿತ ರೀತಿಯಲ್ಲಿಯೇ ನಡೆಸಲಾಗುತ್ತದೆ. ಯಾವುದೇ ತೆರನಾದ ಶಸ್ತ್ರಚಿಕಿತ್ಸೆ ನಡೆಸುವಾಗಲೂ ಸಾಕಷ್ಟು ಪೂರ್ವ ತಯಾರಿ ನಡೆಸುವುದು ಅತ್ಯಗತ್ಯವಾಗಿದೆ. ಈ ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ರೋಗಿಯನ್ನು 1-2 ದಿನಗಳಿಗೂ ಮುನ್ನವೇ ಆಸ್ಪತ್ರೆಗೆ ದಾಖಲಿಸಿ, ಅಗತ್ಯ ಆರೋಗ್ಯ ತಪಾಸಣೆ, ಪರೀಕ್ಷೆಗಳನ್ನು ನಡೆಸಿ, ರೋಗಿಯ ದೇಹಸ್ಥಿತಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕವೇ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಗಾಯಾಳುಗಳಿಗೆ ನಡೆಸಲಾಗುವ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಅನುಸರಿಸಲಾಗುವ ವಿಧಾನವನ್ನೇ ಈ ಶಸ್ತ್ರಚಿಕಿತ್ಸೆಗಳ ಸಂದರ್ಭದಲ್ಲೂ ಅನುಸರಿಸಲಾಗುತ್ತದೆ. ಆದರೆ ಈ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಶಸ್ತ್ರಚಿಕಿತ್ಸಕರು ಮತ್ತು ರೋಗಿ ಒಂದಿಷ್ಟು ನಿರಾಳರಾಗಿರುತ್ತಾರೆ. ಈ ಶಸ್ತ್ರಚಿಕಿತ್ಸೆಗಳನ್ನು ನಡೆಸುವ ವೇಳೆ ವಾತಾವರಣವನ್ನು ಶಾಂತ ಮತ್ತು ಆಹ್ಲಾದಕರವನ್ನಾಗಿರಿಸುವ ಸಲುವಾಗಿ ಸರ್ಜನ್‌ಗಳು ಲಘು ಸಂಗೀತವನ್ನು ಆಲಿಸಲು ಇಷ್ಟಪಟ್ಟರೆ, ಮತ್ತೆ ಕೆಲವರು ನಿಶ್ಶಬ್ದ ವಾತಾವರಣದಲ್ಲಿ ಶಸ್ತ್ರಚಿಕಿತ್ಸೆ ನಡೆಸಬಯಸುತ್ತಾರೆ. ಇನ್ನು ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸುವ ವೇಳೆ ಸರ್ಜನ್‌ಗಳು ವಿದ್ಯಾರ್ಥಿಗಳಿಗೆ ಶಸ್ತ್ರಚಿಕಿತ್ಸೆ ನಡೆಸುವ ವಿಧಾನದ ಬಗೆಗೆ ಪ್ರಾಯೋಗಿಕ ಬೋಧನೆ ನಡೆಸುತ್ತಾರೆ.
ಕೆಲವು ಬಾರಿ ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ವೈದ್ಯರು ಮತ್ತು ಸರ್ಜನ್ ಗಳ ನಿರ್ಲಕ್ಷ್ಯದಿಂದ ಶಸ್ತ್ರಚಿಕಿತ್ಸೆಗೊಳಗಾಗುವ ರೋಗಿಯು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿರುತ್ತವೆ. ವೈದ್ಯರಿಂದಾಗುವ ಇಂತಹ ಕೆಲವು ಎಡವಟ್ಟುಗಳು:
- ಶಸ್ತ್ರಚಿಕಿತ್ಸೆ ನಡೆಸುವುದಕ್ಕೂ ಮುನ್ನ ಶಸ್ತ್ರಚಿಕಿತ್ಸೆಯ ವಿಧ, ನಡೆಸುವ ವಿಧಾನ ಮತ್ತು ಇತರ ವಿವರಗಳನ್ನು ರೋಗಿಗೆ ತಿಳಿಸದೇ ಇರುವುದು.
- ಕೌಶಲರಹಿತ ಶಸ್ತ್ರಚಿಕಿತ್ಸೆಯು ರೋಗಿಯನ್ನು ಮತ್ತಷ್ಟು ಸಮಸ್ಯೆಗೆ ಗುರಿಯಾಗಿಸಬಹುದಾಗಿದೆ.
- ಶಸ್ತ್ರಚಿಕಿತ್ಸೆಯ ಬಳಿಕದ ಸಮಸ್ಯೆಗಳನ್ನು ಗುರುತಿಸುವಲ್ಲಿ ವೈಫಲ್ಯ, ಇಂಥ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆಯ ಬಗೆಗೆ ಅರಿವಿಲ್ಲದಿರುವುದು.
- ಯಾವುದೇ ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ಬಳಸಲಾಗುವ ವೈದ್ಯಕೀಯ ಸಾಧನ, ಸಲಕರಣೆಗಳನ್ನು ಶಸ್ತ್ರಚಿಕಿತ್ಸೆಯ ಬಳಿಕ ಸುರಕ್ಷಿತವಾಗಿ ಶಸ್ತ್ರಚಿಕಿತ್ಸೆ ನಡೆಸಲಾದ ಭಾಗದಿಂದ ಹೊರಗೆ ಎತ್ತಿಡದೆ, ಗಾಯಕ್ಕೆ ಹೊಲಿಗೆ ಹಾಕಿ ಮುಚ್ಚುವಂತಹ ಗಂಭೀರ ಪ್ರಮಾದದ ಪರಿಣಾಮವಾಗಿ ಪ್ರಮುಖ ರಕ್ತನಾಳಗಳು ಮತ್ತು ನರಗಳಿಗೆ ಹಾನಿಯುಂಟಾಗುವ ಸಂಭವವಿರುತ್ತದೆ.
- ಶಸ್ತ್ರಚಿಕಿತ್ಸೆ ಎನ್ನುವುದು ಎಂದಿಗೂ ಕಟ್ಟಕಡೆಯ ಹೆಜ್ಜೆಯಲ್ಲ. ರೋಗಿಯ ಚಿಕಿತ್ಸಾ ವಿಧಾನಗಳಲ್ಲಿ ಶಸ್ತ್ರಚಿಕಿತ್ಸೆ ಕೂಡ ಒಂದು ಭಾಗವೇ ಹೊರತು ಇದೇ ಅಂತಿಮ ಮಾರ್ಗವಲ್ಲ.
- ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಎಲ್ಲ ಪ್ರಕ್ರಿಯೆಗಳು ಕೂಡ ಸುಲಲಿತವಾಗಿ ಮತ್ತು ಪೂರ್ವಯೋಜನೆಯಂತೆ ಕ್ರಮಬದ್ಧವಾಗಿ ನಡೆಯಬೇಕು. ಈ ಪ್ರಕ್ರಿಯೆಯ ಯಾವುದೇ ಸಂದರ್ಭದಲ್ಲಿ ಎಲ್ಲಾದರೂ ಎಡವಿದರೆ ಅಥವಾ ಸಮಸ್ಯೆ ಸೃಷ್ಟಿಯಾದರೆ ಅದನ್ನು ನಿಭಾಯಿಸಲು ಸಂಪೂರ್ಣ ಸಜ್ಜಾಗಿರಬೇಕು.
- ಶಸ್ತ್ರಚಿಕಿತ್ಸೆಯ ಬಳಿಕ ರೋಗಿಗೆ ಅಗತ್ಯ ಆರೋಗ್ಯ ಸೇವೆ ಒದಗಿಸುವುದು ಸರ್ಜನ್ ರ ಕರ್ತವ್ಯವಾಗಿದೆ. ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರೋಗಿಯ ಬಗೆಗೆ ತೋರುವ ಕಾಳಜಿಯನ್ನು ಆ ಬಳಿಕವೂ ತೋರುವ ಮೂಲಕ ರೋಗಿ ಸಂಪೂರ್ಣ ಗುಣಮುಖಹೊಂದುವುದನ್ನು ಖಾತರಿಪಡಿಸುವುದು ವೈದ್ಯರ ಕರ್ತವ್ಯ.
- ಶಸ್ತ್ರಚಿಕಿತ್ಸೆ ಎಂದಿಗೂ ರೋಗಿಯ ಮುಖದಲ್ಲಿ ಮಂದಹಾಸ ಮೂಡಿಸಬೇಕೇ ವಿನಾ ಕಣ್ಣೀರನ್ನಲ್ಲ
- ಗಾಯಾಳುಗಳಿಗೆ ಮೊದಲು ಆವಶ್ಯಕ ತುರ್ತು ಚಿಕಿತ್ಸೆ ನೀಡಿದ ಬಳಿಕ ಶಸ್ತ್ರಚಿಕಿತ್ಸ ಕೊಠಡಿಯೊಳಗೆ ಕರೆದೊಯ್ಯಬೇಕು.
- ಗಾಯಾಳುವಿಗೆ ಶಸ್ತ್ರಕ್ರಿಯೆ ನಡೆಸುವುದಕ್ಕೂ ಮುನ್ನ ಆತನ ಆರೋಗ್ಯ ಸ್ಥಿತಿಯ ಸಂಪೂರ್ಣ ಮಾಹಿತಿ ಕಲೆಹಾಕುವುದರ ಜತೆಯಲ್ಲಿ ಹಾಲಿ ಗಾಯದ ತೀವ್ರತೆ ಮತ್ತು ನಡೆಸಬೇಕಿರುವ ಶಸ್ತ್ರಚಿಕಿತ್ಸೆ ಕುರಿತಂತೆ ಅರಿವಳಿಕೆ ತಜ್ಞರೊಂದಿಗೆ ಸವಿವರವಾಗಿ ಸಮಾಲೋಚಿಸಿ, ಶಸ್ತ್ರಚಿಕಿತ್ಸೆ ನಡೆಸಲು ಸ್ಪಷ್ಟ ಯೋಜನೆಯನ್ನು ರೂಪಿಸುವುದು ಸಂಬಂಧಿತ ವೈದ್ಯರ ಕರ್ತವ್ಯವಾಗಿದೆ.
- ರೋಗಿಗೆ ಶಸ್ತ್ರಚಿಕಿತ್ಸೆ ನಡೆಸುವುದಕ್ಕೂ ಮುನ್ನ ಆತನಿಗೆ ಅಥವಾ ಆತನ ಸಂಬಂಧಿಕರಿಗೆ ನಡೆಸಲಾಗುವ ಶಸ್ತ್ರಚಿಕಿತ್ಸೆಯ ಸಮಗ್ರ ವಿವರಗಳನ್ನು ಒದಗಿಸುವುದು ಅತ್ಯಗತ್ಯ. ಶಸ್ತ್ರಚಿಕಿತ್ಸೆಯ ಸಂಕೀರ್ಣತೆ, ಎದುರಾಗಬಹುದಾದ ಅಸ್ವಸ್ಥತೆ ಮತ್ತು ಮರಣ ಸಾಧ್ಯತೆಗಳ ಕುರಿತಂತೆಯೂ ಅವರಿಗೆ ಮಾಹಿತಿ ನೀಡಬೇಕು.