ಕೋಲ್ಕತ್ತಾ: ಅತ್ಯಂತ ಜಿದ್ದಾಜಿದ್ದಿನಿಂದ ನಡೆಯುತ್ತಿರುವ ಐಪಿಎಲ್ ಅಂತಿಮ ಹಂತಕ್ಕೆ ಬಂದಕ್ಕೆ. ಇನ್ನು ಕೇವಲ ನಾಲ್ಕು ಲೀಗ್ ಪಂದ್ಯಗಳು ಬಾಕಿ ಉಳಿದಿದ್ದು, ಇನ್ನೂ ಪ್ಲೇ ಆಫ್ ನ ಮೂರು ಸ್ಥಾನಗಳು ಖಾಲಿ ಉಳಿದಿದೆ. ಗುಜರಾತ್ ಟೈಟಾನ್ಸ್ ಮಾತ್ರ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಈಗಾಗಲೇ 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವು ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. 12 ಅಂಕ ಪಡೆದಿರುವ ಕೆಕೆಆರ್ ಏಳನೇ ಸ್ಥಾನದಲ್ಲಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ ಅಂಗಳದಲ್ಲಿ ಎಲ್ಎಸ್ ಜಿ ಮತ್ತು ಕೆಕೆಆರ್ ಪಂದ್ಯಗಳು ನಡೆಯಲಿದೆ. ಆದರೆ ಕೋಲ್ಕತ್ತಾದಲ್ಲಿ ಮಳೆಯಾಗುತ್ತಿದ್ದು, ಪಂದ್ಯಕ್ಕೆ ಕರೆಛಾಯೆ ಮೂಡಿದೆ. ಆದರೆ ಹವಾಮಾನ ಇಲಾಖೆಯ ಪ್ರಕಾರ ಸಂಜೆ ಮೋಡ ಕವಿದ ವಾತಾವರಣವಿದ್ದರೂ, ಮಳೆಯಾಗುವ ಮುನ್ಸೂಚನೆ ಇಲ್ಲ.
ಒಂದು ವೇಳೆ ಮಳೆಯ ಕಾರಣದಿಂದ ಪಂದ್ಯ ರದ್ದಾದರೆ ಇದು ಲಕ್ನೋ ಸೂಪರ್ ಜೈಂಟ್ಸ್ ಗೆ ಲಾಭ ನೀಡದಲಿದೆ. ಯಾಕೆಂದರೆ ಈಗಾಗಲೇ 15 ಅಂಕ ಹೊಂದಿರುವ ಲಕ್ನೋ ಮತ್ತೊಂದು ಹೆಚ್ಚುವರಿ ಅಂಕದೊಂದಿಗೆ ಪ್ಲೇಆಫ್ ಸ್ಥಾನ ಭದ್ರ ಪಡಿಸಿಕೊಳ್ಳುತ್ತಾರೆ. ಆದರೆ ಕೋಲ್ಕತ್ತಾ ನೈಟ್ ರೈಡರ್ಸ್ ಕೇವಲ 13 ಅಂಕಗಳನ್ನು ಪಡೆಯುವ ಕಾರಣ ಮುಂದಿನ ಹಂತಕ್ಕೆ ಹೋಗಲು ಸಾಧ್ಯವಿಲ್ಲ.
ಒಂದು ವೇಳೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಹ ತಮ್ಮ ಅಂತಿಮ ಲೀಗ್ ಪಂದ್ಯದಲ್ಲಿ ಸೋತರೆ, ಎಲ್ ಎಸ್‌ಜಿಗೆ ಎರಡನೇ ಸ್ಥಾನಗಳಲ್ಲಿ ಸ್ಥಾನ ಪಡೆಯುವ ಅವಕಾಶವೂ ಇದೆ.