Advertisement

ಭಾರತದಲ್ಲಿ ಮೂರು ಬಾರಿ ಆರ್ ಎಸ್ ಎಸ್ ಅನ್ನು ನಿಷೇಧಿಸಲಾಗಿತ್ತು… ಅಂದು ಏನಾಗಿತ್ತು?

06:01 PM Sep 28, 2022 | Team Udayavani |

ದೇಶಾದ್ಯಂತ ರಾಷ್ಟ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ಜಂಟಿಯಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಚೇರಿಗಳ ಮೇಲೆ ದಾಳಿ ನಡೆಸಿದ ತರುವಾಯ ಕೇಂದ್ರ ಗೃಹಸಚಿವಾಲಯ ಪಿಎಫ್ ಐ ಹಾಗೂ ಸಹವರ್ತಿ ಸಂಘಟನೆಗಳ ಮೇಲೆ ಐದು ವರ್ಷಗಳ ಕಾಲ ನಿಷೇಧ ಹೇರಿದೆ. ಏತನ್ಮಧ್ಯೆ ಲಾಲುಪ್ರಸಾದ್ ಯಾದವ್, ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನೂ ನಿಷೇಧಿಸಬೇಕೆಂದು ಆಗ್ರಹಿಸಿದ್ದಾರೆ. ಕುತೂಹಲಕಾರಿ ಸಂಗತಿ ಏನೆಂದರೆ ಈ ಹಿಂದೆ ಮೂರು ಬಾರಿ ಆರ್ ಎಸ್ ಎಸ್ ಅನ್ನು ಕೇಂದ್ರ ಸರ್ಕಾರ ನಿಷೇಧಿಸಿದಾಗ ಏನಾಯಿತು? ಎಂಬ ಕುರಿತು ಪತ್ರಕರ್ತ ರಶೀದ್ ಕಿದ್ವಾಯಿ ಲೇಖನದ ಮುಖ್ಯಾಂಶವನ್ನು ಇಂಡಿಯಾ ಟುಡೇ ಪ್ರಕಟಿಸಿದೆ.

Advertisement

ಯಾವಾಗ ಆರ್ ಎಸ್ ಎಸ್ ಗೆ ನಿಷೇಧ ಹೇರಲಾಗಿತ್ತು:

ಮಾಧ್ಯಮದ ವರದಿ ಪ್ರಕಾರ, 1925ರಲ್ಲಿ ಭ್ರಮನಿರಸನಗೊಂಡ ಕಾಂಗ್ರೆಸ್ಸಿಗ ಡಾ.ಕೇಶವ ಬಲಿರಾಮ್ ಹೆಡಗೇವಾರ್ ಅವರು ಆರ್ ಎಸ್ ಎಸ್ ಅನ್ನು ಸಾಂಸ್ಕೃತಿಕ ಸಂಘಟನೆ ಎಂದು ಬಿಂಬಿಸುವ ಮೂಲಕ ಸ್ಥಾಪಿಸಿದ್ದು, ಈ ಸಂಘಟನೆ 1948, 1975 ಮತ್ತು 1992ರಲ್ಲಿ ನಿಷೇಧಿಸಲ್ಪಟ್ಟಿತ್ತು.

1948ರಲ್ಲಿ ಮಹಾತ್ಮಗಾಂಧಿ ಅವರ ಹತ್ಯೆ ನಡೆದ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಸ್ಥೆಯನ್ನು ನಿಷೇಧಿಸುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. 1948ರ ಫೆಬ್ರುವರಿ 4ರಂದು ಸರ್ದಾರ್ ವಲ್ಲಭಭಾಯ್ ಪಟೇಲ್ ನೇತೃತ್ವದ ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ, ದೇಶದಲ್ಲಿ ದ್ವೇಷ ಮತ್ತು ಹಿಂಸಾಚಾರದ ಶಕ್ತಿಗಳನ್ನು ಬೇರುಸಹಿತ ಕಿತ್ತೆಸೆಯುವ ನಿಟ್ಟಿನಲ್ಲಿ ದೇಶದ ಸ್ವಾತಂತ್ರ್ಯಕ್ಕೆ ಗಂಡಾಂತರ ತರಲು ಯತ್ನಿಸುತ್ತಿರುವ ಆರ್ ಎಸ್ ಎಸ್ ಅನ್ನು ನಿಷೇಧಿಸಿರುವುದಾಗಿ ತಿಳಿಸಿತ್ತು.

ಅಷ್ಟೇ ಅಲ್ಲ ಸಂಘ ಪರಿವಾರದ ಕಾರ್ಯಕರ್ತರು ಅನಪೇಕ್ಷಿತ ಮತ್ತು ಅಪಾಯಕಾರಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ದೇಶಾದ್ಯಂತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ದರೋಡೆ, ಕೊಲೆ, ಹಿಂಸಾಚಾರ ಪ್ರಕರಣದಲ್ಲಿ ಶಾಮೀಲಾಗಿರುವುದು ಪತ್ತೆಯಾಗಿದ್ದು, ಅಕ್ರಮ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಸಂಗ್ರಹಿಸಿ ಇಟ್ಟಿರುವುದಾಗಿ ಕೇಂದ್ರದ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

Advertisement

ಗಾಂಧಿ ಹತ್ಯೆಯ ನಂತರ ಎಲ್ಲೆಡೆ ಅಶಾಂತಿ ನೆಲೆಸಿತ್ತು. ಮಹಾತ್ಮ ಗಾಂಧಿ ಹತ್ಯೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಆರ್ ಎಸ್ ಎಸ್ ಮುಖಂಡರನ್ನು ಖುಲಾಸೆಗೊಳಿಸಿತ್ತು. ನಂತರ ಆರ್ ಎಸ್ ಎಸ್ ಮೇಲಿನ ನಿಷೇಧವನ್ನು ರದ್ದುಪಡಿಸಬೇಕೆಂದು ಗೋಲ್ವಾಲ್ಕರ್ ಪ್ರಧಾನಿ ಜವಾಹರಲಾಲ್ ನೆಹರೂಗೆ ಪತ್ರ ಬರೆದಿದ್ದರು. ಆದರೆ ಇದು ಗೃಹ ಸಚಿವಾಲಯದ ಹೊಣೆಗಾರಿಕೆ ಎಂದು ನೆಹರು ಪ್ರತ್ಯುತ್ತರ ನೀಡಿದ್ದರು. ಕೊನೆಗೆ ಗೋಲ್ವಾಲ್ಕರ್ ವಲ್ಲಭಭಾಯ್ ಪಟೇಲ್ ಅವರನ್ನು ಭೇಟಿಯಾಗಿದ್ದರು. ನಂತರ ಪಟೇಲ್ 1949 ಜುಲೈ 11ರಂದು ಆರ್ ಎಸ್ ಎಸ್ ಮೇಲಿನ ನಿಷೇಧವನ್ನು ರದ್ದುಪಡಿಸಿದ್ದರು ಎಂದು ವರದಿ ವಿವರಿಸಿದೆ. ಅನೇಕ ಶಿಕ್ಷಣ ತಜ್ಞರು ಮತ್ತು ರಾಜಕೀಯ ವಿಶ್ಲೇಷಕರ ಪ್ರಕಾರ, ಭಾರತೀಯ ಜನತಾ ಪಕ್ಷದ ಹಿಂದಿನ ಅವತಾರ ಎಂದು ಪರಿಗಣಿಸಲಾದ ಭಾರತೀಯ ಜನ ಸಂಘವನ್ನು ಆರ್ ಎಸ್ ಎಸ್ ಹುಟ್ಟುಹಾಕಿತ್ತು ಎಂದು ತಿಳಿಸಿದೆ.

ಸಂಘದ ಸಿದ್ಧಾಂತವಾದಿ ಮತ್ತು ರಾಜಕೀಯ ವಿಮರ್ಶಕ ಎಸ್.ಗುರುಮೂರ್ತಿ ಅವರು, ರಾಜಕೀಯದಿಂದ ದೂರ ಇರಬೇಕು ಸೇರಿದಂತೆ ಹಲವು ಷರತ್ತಿನ ಮೇಲೆ ಆರ್ ಎಸ್ ಎಸ್ ವಿರುದ್ಧದ ನಿಷೇಧ ರದ್ದುಪಡಿಸಲಾಗಿತ್ತು ಎಂಬ ಹೇಳಿಕೆಯನ್ನು ತಿರಸ್ಕರಿಸಿದ್ದರು. ಯಾಕೆಂದರೆ 1949ರ ಸೆಪ್ಟೆಂಬರ್ 14ರಂದು ಮೊರಾರ್ಜಿ ದೇಸಾಯಿಯವರು ಬಾಂಬೆ ಶಾಸನ (ವಿಧಾನ)ಸಭೆಯಲ್ಲಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಲಿನ ನಿಷೇಧವನ್ನು ಬೇಷರತ್ತಾಗಿ ತೆಗೆದುಹಾಕಲಾಗಿತ್ತು ಮತ್ತು ಯಾವುದೇ ಭರವಸೆಯನ್ನು ನೀಡಿಲ್ಲ ಎಂಬುದಾಗಿ ಒಪ್ಪಿಕೊಂಡಿದ್ದರು ಎಂದು ತಿಳಿಸಿದ್ದರು.

1975ರಲ್ಲಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳ ಮೇಲೆ ಎರಡನೇ ಬಾರಿ ನಿಷೇಧ ಹೇರಿದ್ದ ವೇಳೆ ತೀವ್ರ ರಾಜಕೀಯ ಸ್ವರೂಪ ಪಡೆದುಕೊಂಡಿತ್ತು. ಬಳಿಕ 1992ರಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದಾಗ ಮೂರನೇ ಬಾರಿ ಆರ್ ಎಸ್ ಎಸ್ ನಿಷೇಧಿಸಲ್ಪಟ್ಟಿತ್ತು. ಅಂದು ಪ್ರಧಾನಿ ಪಿ.ವಿ.ನರಸಿಂಹ ರಾವ್ ಮತ್ತು ಅವರ ಸಂಪುಟದ ಗೃಹ ಸಚಿವ ಶಂಕರ್ ರಾವ್ ಬಲವಂತ ರಾವ್ ಚವಾಣ್ ಆರ್ ಎಸ್ ಎಸ್ ಅನ್ನು ನಿಷೇಧಿಸಿದ್ದರು.

ಅಯೋಧ್ಯೆಯಲ್ಲಿನ ರಾಮಜನ್ಮಭೂಮಿಯಲ್ಲಿದ್ದ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ ಘಟನೆ ನಂತರ ಪಿವಿ ನರಸಿಂಹ ರಾವ್ ಮತ್ತು ಗೃಹ ಸಚಿವ ಚವಾಣ್, ಆರ್ ಎಸ್ ಎಸ್ ಹಾಗೂ ಸಹವರ್ತಿ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಜಮಾತ್ ಇ ಇಸ್ಲಾಮಿ ಹಿಂದ್ ಮತ್ತು 1977ರಲ್ಲಿ ರಚನೆಗೊಂಡಿದ್ದ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆಗಳನ್ನು ನಿಷೇಧಿಸಿತ್ತು. ಆದರೆ ಸೆಂಟ್ರಲ್ ಟ್ರಿಬ್ಯುನಲ್ ಎದುರು ಆರ್ ಎಸ್ ಎಸ್ ಮೇಲೆ ನಿಷೇಧ ಹೇರಿದ್ದನ್ನು ಸಮರ್ಥಿಸಿಕೊಳ್ಳುವಲ್ಲಿ ರಾವ್ ಸರ್ಕಾರ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ 1993ರಲ್ಲಿ ಕೇಂದ್ರ ಸರ್ಕಾರ ಆರ್ ಎಸ್ ಎಸ್ ಮೇಲಿನ ನಿಷೇಧವನ್ನು ರದ್ದುಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next