ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನಿರ್ಮಿಸಿರುವ ಸರ್ಕಾರಿ ವೈದ್ಯಕೀಯ ಕಾಲೇಜ್ ಕಟ್ಟಡ ವೆಚ್ಚದಲ್ಲಿ ದಿಢೀರ್ ಹೆಚ್ಚಳ ಆಗಿ ಅಕ್ರಮ ನಡೆದಿದೆ ಯೆಂಬ ಆರೋಪದ ಹಿನ್ನಲೆ ಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿ 5 ತಿಂಗಳು ಕಳೆಯುತ್ತಾ ಬಂದರೂ, ವರದಿ ಏನಾಯಿತು ಎಂಬ ಕುತೂಹಲ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹ ಭಾಗಿತ್ವದಲ್ಲಿ ಬರೋಬ್ಬರಿ 525 ಕೋಟಿ ರೂ.ವೆಚ್ಚ ದಲ್ಲಿ ಆಡಳಿತಾತ್ಮಕ ಮಂಜೂ ರಾತಿ ಪಡೆದಿದ್ದ ಜಿಲ್ಲೆಯ ಸರ್ಕಾರಿ ವೈದ್ಯ ಕೀಯ ಕಾಲೇಜು ನಿರ್ಮಾ ಣದ ವೇಳೆ 810 ಕೋಟಿಗೆ ಅದರ ಯೋಜನಾ ಗಾತ್ರ ಏರಿಕೆ ಆಗಿ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು.
ತನಿಖೆಗೆ ಆದೇಶಿಸಿದ್ದ ಸರ್ಕಾರ: ಜಿಲ್ಲೆಯ ಸರ್ಕಾರಿ ವೈದ್ಯ ಕೀಯ ಕಾಲೇಜ್ ನಿರ್ಮಾಣದ ಯೋಜನಾ ವೆಚ್ಚದಲ್ಲಿ ದಿಢೀರನೆ 285 ಕೋಟಿ ರೂ. ಹೆಚ್ಚಳ ಆಗಿರುವ ಬಗ್ಗೆ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್, ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ತೀವ್ರ ಅನುಮಾನ ವ್ಯಕ್ತಪಡಿಸಿ ಈ ಬಗ್ಗೆ ತನಿಖೆಗೆ ವಹಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವರನ್ನು ಕೋರಿತ್ತು. ಸಚಿವರ, ಶಾಸಕರ ಒತ್ತಾಯಕ್ಕೆ ಮಣಿದ ರಾಜ್ಯ ಕಾಂಗ್ರೆಸ್ ಸರ್ಕಾರ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅದರಲ್ಲೂ ಆರೋಗ್ಯ ಮಂತ್ರಿ ಯಾಗಿದ್ದ ಡಾ.ಕೆ.ಸುಧಾಕರ್ ಅಧಿಕಾರ ಅವಧಿಯಲ್ಲಿ ನಿರ್ಮಾಣಗೊಂಡ ಆರೂರು ಸರ್ಕಾರಿ ವೈದ್ಯಕೀಯ ಕಾಲೇಜ್‌ನ ಯೋಜನಾ ಗಾತ್ರದಲ್ಲಿ ದಿಢೀರ್ ಅಂತ ವೆಚ್ಚ ಹೆಚ್ಚಳದ ಬಗ್ಗೆ ತನಿಖೆಗೆ ಆದೇಶಿಸಲಾಗಿತ್ತು.
ಸರ್ಕಾರ ವರದಿ ಸಲ್ಲಿಕೆ: ರಾಜ್ಯದ ಲೋಕೋಪಯೋಗಿ ಇಲಾಖೆ ಹಿರಿಯ ಎಂಜನಿಯರ್‌ಗಳ ನೇತೃತ್ವದಲ್ಲಿ ತಂಡ ವೊಂದು ಕಳೆದ ಆಗಸ್ಟ್ ತಿಂಗಳಲ್ಲಿ ಆರೂರು ಬಳಿ ನಿರ್ಮಾ ಣವಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜ್ ಗೆ ಭೇಟಿ ನೀಡಿ ವೆಚ್ಚದ ಬಗ್ಗೆ ಇಂಚಿಂಚು ಮಾಹಿತಿ ಕಲೆ ಹಾಕಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ ತನಿಖಾ ತಂಡ ತನ್ನ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರೂ ತನಿಖಾ ವರದಿದಲ್ಲಿ ಏನಿದೆ? ನಿಜ ವಾಗಿಯು ಅಕ್ರಮ ನಡೆದಿದೆಯೆ? ವೆಚ್ಚದಲ್ಲಿ ದಿಢೀರ್ ಹೆಚ್ಚಳ ಆಗಿದ್ದರೆ ಏನೆಲ್ಲಾ ಅಕ್ರಮ ಆಗಿದೆ ಎಂಬುದರ ಬಗ್ಗೆ ವರದಿಯಲ್ಲಿ ಉಲ್ಲೇಖ ಮಾಡ ಲಾಗಿದೆಯೆ? ಅಥವಾ ತನಿಖಾ ವೇಳೆ ವೆಚ್ಚ ಹೆಚ್ಚಳದಲ್ಲಿ ಏನು ಅಕ್ರಮ ನಡೆದಿಲ್ಲವೇ ಎಂಬುದರ ಕುತೂಹಲ ಕ್ಷೇತ್ರದ ಜನರದಾಗಿದ್ದು, ಸರ್ಕಾರಕ್ಕೆ ವರದಿ ಸಲ್ಲಿಕೆಯಾದರೂ ಅದರ ಬಗ್ಗೆ ಸರ್ಕಾರ ಮೌನ ವಹಿಸಿರುವುದು ಏಕೆ ಎಂಬ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಪ್ರಮುಖ ಪ್ರಶ್ನೆಯಾಗಿದೆ.
ಡಾ.ಕೆ.ಸುಧಾಕರ್ ಅವಧಿಯಲ್ಲಿ ಆರೂರು ಬಳಿ ಮೆಡಿಕಲ್ ಕಾಲೇಜು ನಿರ್ಮಾಣ: ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಆರೂರು ಗ್ರಾಮದ ಬಳಿ ಯಾವ ಖಾಸಗಿ ಮೆಡಿಕಲ್ ಕಾಲೇಜ್‌ಗೆ ಕಡಿಮೆ ಇಲ್ಲದಂತೆ ಸರ್ಕಾರಿ ವೈದ್ಯಕೀಯ ಕಾಲೇಜ್ ಅತ್ಯಾಧುನಿಕವಾಗಿ ಆಕರ್ಷಕ ವಿನ್ಯಾಸದೊಂದಿಗೆ ಸುಮಾರು 70 ಎಕೆರೆ ಪ್ರದೇಶದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್‌ನ್ನು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಡಾ.ಕೆ.ಸುಧಾಕರ್ ರವರ ಅವಧಿಯಲ್ಲಿ ಮಂಜೂರು ಮಾಡಿ ನಿರ್ಮಿಸಲಾಗಿತ್ತು. ಕಾಮಗಾರಿ ಅಪೂರ್ಣವಾಗಿದ್ದಾಗಲೇ ಚುನಾವಣೆ ಘೋಷಣೆಗೂ ಮುನ್ನ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದ್ದರು. ಇನ್ನೂ ವೆಚ್ಚ ಹೆಚ್ಚಳದ ಕುರಿತು ಸರ್ಕಾರದ ತನಿಖೆ ನಡೆಸುವ ಬಗ್ಗೆಯಾವುದೇ ತನಿಖೆ ಬೇಕಾದರೂ ಸರ್ಕಾರ ನಡೆಸಲಿ. ಎಲ್ಲಾವೂ ಪಾರದರ್ಶಕವಾಗಿ ನಡೆದಿದೆಯೆಂದು ತನಿಖೆಗೆ ಆದೇಶಿಸಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಮಾಜಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸವಾಲು ಕೂಡ ಹಾಕಿದ್ದರು.
ಕುತೂಹಲ ಮೂಡಿಸಿರುವ ತನಿಖಾ ವರದಿ!: ಮೊದಲು ಸರ್ಕಾರಿ ವೈದ್ಯಕೀಯ ಕಾಲೇಜ್‌ನ್ನು 525 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಕ್ಕೆ ಅಂದಾಜು ಪಟ್ಟಿ ಸಿದ್ದಪಡಿಸಲಾಗಿತ್ತು. ಆದರೆ ಕಾಮಗಾರಿ ಬಹುಪಾಲು ಮುಗಿಯುವ ವೇಳೆಗೆ ಕಾಮಗಾರಿ ಯೋಜನಾ ಗಾತ್ರ 810 ಕೋಟಿಗೆ ಸರ್ಕಾರ ಏರಿಸಿತ್ತು. ಆದರೆ ರಾಜ್ಯದಲ್ಲಿ ಸರ್ಕಾರ ಬದಲಾದ ಕೂಡಲೇ ಕಾಂಗ್ರೆಸ್ ಸರ್ಕಾರ ಯೋಜನಾ ವೆಚ್ಚದಲ್ಲಿ ದಿಢೀರ್ ಹೆಚ್ಚಳ ಆಗಿರುವ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತಪಡಿಸಿ ಹೆಚ್ಚಳ ಆಗಿರುವ 285 ಕೊಟಿ ರೂ.ಅನುದಾನದ ಮೂಲ ಪತ್ತೆ ಮಾಡುವ ನಿಟ್ಟಿನಲ್ಲಿ ತನಿಖೆಗೆ ಆದೇಶಿಸಿತ್ತು. ಜಿಲ್ಲೆಯ ರಾಜಕೀಯ ವಲಯದಲ್ಲಿ ಸರ್ಕಾರದ ನಡೆ ತೀವ್ರ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿತ್ತು.
ಜಿಲ್ಲಾ ಉಸ್ತುವಾರಿ ಸಚಿವರ ತನಿಖೆಗೆ ಒತ್ತಾಯಿಸಿದ್ದು ಏಕೆ?: ಸರ್ಕಾರಿ ವೈದ್ಯಕೀಯ ಕಾಲೇಜ್ ಕಟ್ಟಡ ನಿರ್ಮಾಣ ಯೋಜನಾ ವೆಚ್ಚದಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ಪಾರದರ್ಶಕವಾಗಿ ನಿಯಮಾನುಸಾರ ಟೆಂಡರ್ ಕರೆದಿಲ್ಲ. ಸಚಿವ ಸಂಪುಟದ ಒಪ್ಪಿಗೆ ಇಲ್ಲದೇ 525 ಕೋಟಿ ಇದ್ದ ಯೋಜನಾ ವೆಚ್ಚವನ್ನು 810 ಕೋಟಿಗೆ ಏರಿಸಲಾಗಿದೆಯೆಂದು ಜಿಲ್ಲೆಯ ಕಾಂಗ್ರೆಸ್ ಶಾಸಕರು ಅದರಲ್ಲೂ ಈಗಿನ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಆರೋಪಿಸಿ ಸರ್ಕಾರದಿಂದ ತನಿಖೆ ನಡೆಸುವುದಾಗಿ ಹೇಳಿದ್ದರು.
525 ಕೋಟಿಯಿಂದ 810 ಕೋಟಿ ರೂ.ಗೆ ಯೋಜನಾ ವೆಚ್ಚ ಹೆಚ್ಚಳದ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಿತ್ತು. ಈ ಬಗ್ಗೆ ಲೋಕೋ ಪಯೋಗಿ ಇಲಾಖೆ ಹಿರಿಯ ಎಂಜನಿಯರ್‌ಗಳ ತಂಡ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಈಗಾಗಲೇ ವರದಿ ಸಲ್ಲಿಸಿದೆ.ಇತ್ತೀಚೆಗೆ ಇದರ ಸಂಬಂಧ ವಿಕಾಸ ಸೌಧಕ್ಕೆ ನಾನು ಹೋಗಿ ಬಂದೆ. ವರದಿ ಪರಿಶೀಲನೆ ಸರ್ಕಾರದ ಮಟ್ಟದಲ್ಲಿ ಆಗಬೇಕಿದೆ.
-ಡಾ.ಮಂಜುನಾಥ, ನಿರ್ದೇಶಕರು, ಸರ್ಕಾರಿ ವೈದ್ಯಕೀಯ ಕಾಲೇಜು ಚಿಕ್ಕಬಳ್ಳಾಪುರ.
-ಕಾಗತಿ ನಾಗರಾಜಪ್ಪ