ಆಗೆಲ್ಲಾ ಈಗಿನಂತೆ ನಿಶ್ಚಿತಾರ್ಥಕ್ಕೆ ನೂರಾರು ಜನರು ಬರುತ್ತಿರಲಿಲ್ಲ. ಮುಖ್ಯವಾದ ಏಳೆಂಟು ಜನರು ಬಂದು, ಹುಡುಗಿಗೆ ಉಂಗುರ ತೊಡಿಸಿ, ಹರಿವಾಣ ವಿನಿಮಯ ಮಾಡುತ್ತಿದ್ದರು. ಆ ದಿನವೂ ವರ ಮಹಾಶಯ ಬಂದಿರಲಿಲ್ಲ. ನಂತರ, ಹುಡುಗನ ಒಂದು ಫೋಟೋ ತರಿಸಿಕೊಟ್ಟರು. ಫೋಟೋ ನೋಡುತ್ತಿದ್ದಂತೆ ಒಮ್ಮೆಲೆ ದಿಗ್ಭ್ರಮೆಯಾಯಿತು…
ಎಂಬತ್ತರ ದಶಕದಲ್ಲಿ ನಡೆದ ಘಟನೆ. ಒಂದು ವರನೊಂದಿಗೆ ನನ್ನ ಜಾತಕದ ಗ್ರಹಗತಿಗಳೆಲ್ಲವೂ ತಾಳೆಯಾಗಿ, ಫೋಟೋ ಕೂಡ ಒಪ್ಪಿಗೆಯಾಗಿ, ಹುಡುಗಿಯನ್ನು ನೋಡಲು ಬರುತ್ತೇವೆಂದೂ, ಬೆಂಗಳೂರಿಗೇ ಬಂದು ತೋರಿಸಿದರೆ ಉತ್ತಮವೆಂದೂ ಪತ್ರ ಬಂದಿತ್ತು. ಹಾಗಾಗಿ, ಬೆಂಗಳೂರಿನಲ್ಲಿದ್ದ ನಮ್ಮ ನೆಂಟರ ಮನೆಗೆ ನನ್ನನ್ನು ಕರೆದುಕೊಂಡು ಹೋದರು. ಆಗಿನ ಕಾಲದಲ್ಲಿ ಹುಡುಗನ ಫೋಟೋ ಮತ್ತು ಜಾತಕವನ್ನು ಹುಡುಗಿಯ ಮನೆಯವರಿಗೆ ನೀಡುತ್ತಿರಲಿಲ್ಲ. ಹಾಗೇನಾದರೂ ಕೊಟ್ಟರೆ ಅವರ ಘನತೆಗೆ ಕುಂದು ಎಂದು ಭಾವಿಸಿದ್ದರು.
ಅಂದಿನ ದಿನಗಳಲ್ಲಿ ವಧೂಪರೀಕ್ಷೆ ಎಂದರೆ, ವರನ ಎದುರು ಹುಡುಗಿ ಪ್ರದರ್ಶನದ ಬೊಂಬೆಯಂತೆ ತಲೆಬಗ್ಗಿಸಿ ಕುಳಿತಳೆಂದರೆ ಮುಗಿಯಿತು. ಎಲ್ಲರೂ ಹೋದ ನಂತರವೇ ತಲೆಯೆತ್ತುತ್ತಿದ್ದುದು. ಮಾತನಾಡಿಸುವುದು ಹೋಗಲಿ, ಹುಡುಗನನ್ನು ಸರಿಯಾಗಿ ನೋಡುವ ಧೈರ್ಯವೂ ಇರಲಿಲ್ಲ. ಪರಿಚಯ ಮಾಡಿಕೊಡುವುದಂತೂ ದೂರದ ಮಾತು ಬಿಡಿ. ಕಾಫಿ, ತಿಂಡಿ ಸಮಾರಾಧನೆಯ ನಂತರ, ಮತ್ತೆ ತಿಳಿಸುತ್ತೇವೆ ಎಂದು ಹೇಳಿ ಹೊರಟುಬಿಟ್ಟರು. ಹುಡುಗ ಒಪ್ಪಿದರೆ ಮುಗಿಯಿತು.ಬಾಯುಪಚಾರಕ್ಕೆ ಹುಡುಗಿಯ ಒಪ್ಪಿಗೆಯನ್ನು ಕೇಳುತ್ತಿದ್ದರು. ಇಬ್ಬರು ಯುವಕರೇನಾದರೂ ಬಂದಿದ್ದರೆ, ಅವರಲ್ಲಿ ಮದುವೆಯಾಗುವ ಹುಡುಗ ಯಾರು ಎಂದು ಕೇಳುವ ಧೈರ್ಯವೂ ನಮಗಿರಲಿಲ್ಲ.
ನಾನು ಹೋಗಿ ತಂಗಿದ್ದ ಮನೆಯ ಅಡುಗೆ ಮನೆಯ ಕಿಟಕಿಯ ಬಳಿ ನಿಂತರೆ, ಅವರ ಮನೆಗೆ ಬಂದು ಹೋಗುವವರು ಕಾಣುತ್ತಿದ್ದರು. ಅವರಿಗೆ ನಾವು ಕಾಣುತ್ತಿರಲಿಲ್ಲ. ಹಾಗೆ ನಿಂತು ನೋಡುತ್ತಿ¨ªಾಗ, ಇಬ್ಬರು ಯುವಕರು, ಒಬ್ಬ ಗಂಡಸು, ಒಬ್ಬರು ಮಹಿಳೆ ಬಂದರು. ಇಬ್ಬರು ಅಕ್ಕ-ಭಾವ, ಮತ್ತೂಬ್ಬರು ಹುಡುಗನ ದೊಡ್ಡಪ್ಪನ ಮಗ ಅಂತ ಆಮೇಲೆ ಗೊತ್ತಾಯಿತು. ಆಗ ಹುಡುಗನನ್ನು ನೋಡಿದ್ದಷ್ಟೇ.
ಅವರಿಂದ ಒಪ್ಪಿಗೆ ಬಂದ ನಂತರ ನಿಶ್ಚಯ ತಾಂಬೂಲಕ್ಕೆ ಅಣಿಯಾಯಿತು. ಆಗೆಲ್ಲಾ ಈಗಿನಂತೆ ನೂರಾರು ಜನರು ಬರುತ್ತಿರಲಿಲ್ಲ. ಮುಖ್ಯವಾದ ಏಳೆಂಟು ಜನರು ಬಂದು, ಹುಡುಗಿಗೆ ಉಂಗುರ ತೊಡಿಸಿ, ಹರಿವಾಣ ವಿನಿಮಯ ಮಾಡುತ್ತಿದ್ದರು. ಆ ದಿನವೂ ವರ ಮಹಾಶಯ ಬಂದಿರಲಿಲ್ಲ. ನಂತರ ಯಾರಿಗೆ ಏನನ್ನಿಸಿತೋ ಗೊತ್ತಿಲ್ಲ, ಹುಡುಗನ ಒಂದು ಫೋಟೋ ತರಿಸಿಕೊಟ್ಟರು. ಫೋಟೋ ನೋಡುತ್ತಿದ್ದಂತೆ ಒಮ್ಮೆಲೆ ದಿಗ್ಭ್ರಮೆಯಾಯಿತು. ಯಾಟೆಂದರೆ, ನಾನು ವರ ಅಂದುಕೊಂಡಿದ್ದ ಹುಡುಗ ಅವರ ದೊಡ್ಡಪ್ಪನ ಮಗ ಅಂತೆ. ಆದರೆ ಅವರು ಹುಡುಗನ ಬಗ್ಗೆ ಕೊಟ್ಟಿದ್ದ ಮಾಹಿತಿಯೆಲ್ಲವೂ ಸರಿಯಾಗಿದ್ದು, ಇವರು ಕೂಡ ನೋಡಲು ಚೆನ್ನಾಗಿದ್ದುದರಿಂದ ಏನೂ ಸಮಸ್ಯೆಯಾಗದೆ ಮದುವೆ ಸಾಂಗೋಪಾಂಗವಾಗಿ ನಡೆದಿತ್ತು.
ಈಗಿನ ಕಾಲವಾಗಿದ್ದರೆ ಮೋಸ ನಡೆದಿದೆ ಎಂದು ಮದುವೆಯೇ ನಿಂತು ಹೋಗುವ ಸಾಧ್ಯತೆಯಿತ್ತು. ಆದರೆ ಅಂದಿನ ಕಾಲದ ನಾವು, ಹಿರಿಯರು ಹಾಕಿದ ಗೆರೆಯನ್ನು ದಾಟುತ್ತಿರಲಿಲ್ಲ. ಪಾಲಿಗೆ ಬಂದದ್ದೇ ಪಂಚಾಮೃತ’ ಎಂದು ಸ್ವೀಕರಿಸಿದ ಕಾರಣ ನಾವು ದಂಪತಿಗಳು ಚೆನ್ನಾಗಿಯೇ ಇದ್ದೇವೆ.
(ಹೆಣ್ಣು ನೋಡಲು ಗಂಡಿನ ಕಡೆಯವರು ಬರುತ್ತಾರೆಂದರೆ, ಮನೆಮಂದಿಗೆಲ್ಲಾ ಖುಷಿ, ಗಡಿಬಿಡಿ, ಆತಂಕ, ನಿರೀಕ್ಷೆಗಳೆಲ್ಲವೂ ಒಟ್ಟೊಟ್ಟಿಗೇ ಆಗುವ ಸಂದರ್ಭ. ಭಾಮೆಯನ್ನು ನೋಡಲು ಬಂದಾಗ ಮನೆಯಲ್ಲಿ ಏನೇನಾಗಿತ್ತು ಅಂತ 250 ಪದಗಳಲ್ಲಿ uv.avalu@gmail.comಗೆ ಬರೆದು ಕಳಿಸಿ.)
-ಪುಷ್ಪ ಎನ್.ಕೆ. ರಾವ್