Advertisement

ಚುನಾವಣೆಗಳನ್ನು ಗೆಲ್ಲಲು ಯಾವ ಸೂತ್ರಗಳು ಮುಖ್ಯ? 

07:35 AM Nov 23, 2017 | |

ಜನತೆ ಹೇಗೆ ಮತ್ತು ಯಾವ ಕಾರಣಕ್ಕಾಗಿ ಒಬ್ಬ ವ್ಯಕ್ತಿಗೆ ಅಥವಾ ಪಕ್ಷಕ್ಕೆ ಮತ ನೀಡುತ್ತಾರೆ? ಅಥವಾ ಒಂದು ರಾಜಕೀಯ ಪಕ್ಷ ಯಾವ ಕಾರಣಗಳಿಗಾಗಿ ಗೆಲುವು ಸಾಧಿಸುತ್ತದೆ ಎನ್ನುವುದನ್ನು ಅರಿಯಲು ಪ್ರಯತ್ನಿಸುವುದು ಚುನಾವಣೆಯ ಬಿಸಿ ಏರುತ್ತಿರುವ ಈ ಸಂದರ್ಭದಲ್ಲಿ ತುಂಬ ಪ್ರಸ್ತುತವಾದುದು. ರಾಜಕೀಯ ಬಿರುಗಾಳಿ ಅಥವಾ ದೊಡ್ಡ ಪ್ರಮಾಣದ ಭಾವನಾತ್ಮಕ ಅಲೆ ಇರುವ ಸಂದರ್ಭದಲ್ಲಿ ಉತ್ತರಗಳು ಸ್ಪಷ್ಟವಾಗಿರುತ್ತವೆ. ಉದಾಹರಣೆಗೆ ಇಂದಿರಾ ಹತ್ಯೆಯ ನಂತರ ಯಾವ ಪಕ್ಷ ಗೆಲ್ಲಬಹುದು ಎಂದು ಹೇಳಲು ಜ್ಯೋತಿಷಿಯ ಅಗತ್ಯವಿರಲಿಲ್ಲ. ಅಲ್ಲದೇ ಕೆಲವು ಸಂದರ್ಭಗಳಲ್ಲಿ ಒಂದು ಸಮುದಾಯದ ಕುದಿಯುತ್ತಿರುವ ಒಳಗಿನ ಧ್ವನಿಗೆ ಬಾಹ್ಯ ಸ್ವರೂಪ ನೀಡಬಲ್ಲ, ಜನರ ಜತೆ ಒಂದು ಭಾರೀ ಭಾವನಾತ್ಮಕ ಬಂಧ ಸೃಷ್ಟಿಸಬಹುದಾದ ಕಾರಣವನ್ನು ಎತ್ತಿ ಹಿಡಿಯಬಲ್ಲ ನಾಯಕ ಕೂಡ ಭಾರೀ ಜನಮನ್ನಣೆಗೆ ಪಾತ್ರನಾಗಿ ಚುನಾವಣೆಗಳಲ್ಲಿ ಬಹುಮತ ಪಡೆಯಬಹುದು. ಉದಾಹರಣೆಗೆ ಜರ್ಮನಿಯಲ್ಲಿ ಹಿಟ್ಲರ್‌ ಮೇಲೆ ಬಂದಿದ್ದು ಹೀಗೆ. ಜರ್ಮನಿ ಒಂದನೆಯ ಮಹಾಯುದ್ಧದ ಸೋಲಿನ ಅವಮಾನದಲ್ಲಿ ಕುದಿ ಯುತ್ತಿತ್ತು. ಭಾರೀ ಸೋಲಿನ ಹಿನ್ನೆಲೆಯಲ್ಲಿ ಜನರ ಹೃದಯದೊಳಗೆ ಒಂದು ಕೆಂಡ ಇತ್ತು. ಸಮಷ್ಠಿಯ ಸಾಕ್ಷಿಪ್ರಜ್ಞೆಯೊಳಗೆ  ಅಡಗಿದ್ದ ಇಂತಹ ಭಾವನೆಯ ನೇತಾರನಾಗಿ ಮುಂದೆ ನಿಂತವನು ಹಿಟ್ಲರ್‌. “ಗರೀಬೀ ಹಠಾವೋ’ ಎನ್ನುವ ಮತ್ತು ಸ್ವಾಭಿಮಾನಿ ಭಾರತದ ಭಾವನೆಗಳ ಮೇಲೆ ಅರಳಿ ಪ್ರಚಂಡ ನಾಯಕಿಯಾದವರು ಇಂದಿರಾ. ಹಿಂದು ತ್ವದ ಭಾವನೆಯ ಕೇಂದ್ರಬಿಂದುಗಳಾಗಿ ಹೊರಹೊಮ್ಮಿದ್ದು ವಾಜ ಪೇಯಿ ಮತ್ತು ಆಡ್ವಾಣಿ. ಜಾಗತಿಕ ಸೂಪರ್‌ ಪವರ್‌ ಆಗಿ ಭಾರತ ವನ್ನು ಕಟ್ಟುವ ಕನಸುಗಳ ಮೇಲೆ ತೇಲಿ ಬಂದವರು ಮೋದಿ.  

Advertisement

ಮೇಲ್ಕಾಣಿಸಿದ ಅಸಾಧಾರಣ ಭಾವನಾತ್ಮಕ ಅಲೆ ಇಲ್ಲವಾದಂತೆ ಕಂಡುಬರುತ್ತಿರುವ ಸನ್ನಿವೇಶದಲ್ಲಿ ಮೇಲ್ಕಾಣಿಸಿದ ಪ್ರಶ್ನೆಗೆ ಉತ್ತರ ಕಂಡು ಹಿಡಿಯುವುದು ದೊಡ್ಡ ಬೌದ್ಧಿಕ ಸವಾಲು. ಇಂತಹ ಸಾಧಾರಣ ಸನ್ನಿವೇಶಗಳಲ್ಲಿ ಚುನಾವಣಾ ಸಾಮಗ್ರಿ ಎಂದು ಕರೆಸಿಕೊಳ್ಳಬಲ್ಲ ಎರಡು ಮೂರು ವಿಷಯಗಳಿವೆ. ಒಂದನೆಯದು ಅಭಿವೃದ್ಧಿಯ  ರಾಜಕೀಯ. ಅಭಿವೃದ್ಧಿ ಸಾಧಿಸದೆ ಯಾವ ರಾಜಕಾರಣಿಯೂ ಅಥವಾ ಪಕ್ಷವೂ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ಸ್ಥೂಲವಾಗಿ ಹೇಳಬಹುದಾದರೂ ಕುತೂಹಲದ, ವಿಷಯವೆಂದರೆ ಅಭಿವೃದ್ಧಿ ನಮ್ಮ ದೇಶದಲ್ಲಿ ತುಂಬ ಸೂಕ್ಷ್ಮವಾದ, ವಿವಾದಾತ್ಮಕವಾದ ಶಬ್ದ.  ಏಕೆಂದರೆ ನಮ್ಮ ದೇಶದಲ್ಲಿ ಅಭಿವೃದ್ಧಿ ಎಂದರೇನು ಎನ್ನುವುದರ ಕುರಿತಾಗಿ ಒಪ್ಪಿತವಾದ ವ್ಯಾಖ್ಯಾನವಿಲ್ಲ. ಭಾರತದಲ್ಲಿ ಧರ್ಮ/ ಜಾತಿ ಆಧರಿತವಾಗಿ  ಬಲವಾದ ಮೂರು ರಾಜಕೀಯ ಗುಂಪು ಗಳಿವೆ. ಈ ಮೂರು ಗುಂಪುಗಳು ಯಾವಾಗಲೂ  ಒಂದನ್ನೊಂದು ಸಂಶಯಿಸುತ್ತಲೇ ಇರುವಂಥವುಗಳು. ಉದಾ -ಅಲ್ಪ ಸಂಖ್ಯಾತರ ಅಭಿವೃದ್ಧಿಯಂತೆ ತೋರುವ ರೀತಿಯ ಅಥವಾ ಅಂತಹ ಪ್ರದೇಶಗಳ ಅಭಿವೃದ್ಧಿಯ ಮಾತಿನ ಮೇಲೆ ಉಳಿದವರ ಕೆಂಗಣ್ಣು ಬೀಳುತ್ತದೆ. ಹಿಂದುಳಿದ ವರ್ಗಗಳ ಅಭಿವೃದ್ಧಿಯ ಮಾತು ಪದೇ ಪದೆ ಆಡಿದರೆ ಮೇಲ್ವರ್ಗಕ್ಕೆ ಹಾಗೂ ಬಹುಶಃ ಮೈನಾರಿಟಿಗಳಿಗೆ ಕೂಡ ಬೇಸರವಾಗುತ್ತದೆ. ಜಾಗತೀಕರಣ, ಪ್ರತಿಭೆ ಇತ್ಯಾದಿಗಳ ಮಾತನಾಡಿದರೆ ಕೆಲವು ವರ್ಗಗಳಿಗೆ ಮತ್ತೆ ಸಂಶಯ ಆರಂಭವಾಗುತ್ತದೆ. ಇನ್ನು ಸಾಮಾಜಿಕ ದೃಷ್ಟಿಯಿಂದ ನೋಡಿದರೆ ಗ್ರಾಮೀಣ ಮತ್ತು ಪಟ್ಟಣಗಳ ನಡುವೆ ಬಹಳ ದೊಡ್ಡ ಡಿವೈಡ್‌ ಇದೆ. ಕರ್ನಾಟಕದ ಮಾಜಿ ಮುಖ್ಯ ಮಂತ್ರಿಯೊಬ್ಬರು ಬೆಂಗಳೂರನ್ನು “ಹಾಂಕಾಂಗ್‌’ ಮಾಡುವ ಮಾತನಾಡಿದಾಗ ಅವರನ್ನು “ಹಳ್ಳಿಗಳ ಅಭಿವೃದ್ಧಿಯ ವಿರೋಧಿ’ ಎಂದು ಬ್ರಾಡ್‌ ಮಾಡಿ ಮಾಜಿ ಪ್ರಧಾನಿಯೊಬ್ಬರು ಗ್ರಾಮೀಣ ಆಧರಿತವಾದ, ಗ್ರಾಮೀಣ ಸಂಕೇತಗಳನ್ನು ಹೊಂದಿದ ಪಕ್ಷ ಮತ್ತು ರಾಜಕೀಯ ಶಕ್ತಿಯೊಂದನ್ನು ಬಲಪಡಿಸಿಬಿಟ್ಟಿದ್ದರು. ಹೀಗೆ ಹಳ್ಳಿ ಮತ್ತು ಪಟ್ಟಣಗಳ ಅಭಿವೃದ್ಧಿಯ ಮಾತು ಕೂಡ ವಿರುದ್ಧಾರ್ಥಕ ಶಬ್ದ ಎಂದು ಅನ್ನಿಸುವಂತಹುದೇ. ಅಭಿವೃದ್ಧಿ ರಾಜಕೀಯದಲ್ಲಿ ಇತ್ತೀಚೆಗೆ ಹೊಸದಾಗಿ ಸೇರ್ಪಡೆಯಾದ ಬಲವಾದ ಗುಂಪು ಪರಿಸರವಾದಿಗಳದು ಮತ್ತು ಪ್ರಾಣಿಪ್ರಿಯರದು. ಈ ಗುಂಪುಗಳಿಗೆ ಎಡಪಂಥೀಯ ಸ್ವರೂಪ ಇದೆ. ಭಾರೀ ನೀರಾವರಿ ಯೋಜನೆಗಳ ವಿರುದ್ಧ, ಭಾರೀ ಕೈಗಾರಿಕೆಗಳ ವಿರುದ್ಧ, ಬಂದರುಗಳು, ರಸ್ತೆಗಳು, ವಿಮಾನ ನಿಲ್ದಾಣಗಳು ಇತ್ಯಾದಿ ಬೃಹತ್‌ ಅಭಿವೃದ್ಧಿ ಯೋಜನೆಗಳ ವಿರುದ್ಧ ಹೊರಾಡುವ ಶಕ್ತಿ ಇದು. ಈ ರಾಜಕೀಯ ಶಕ್ತಿಗೆ ವ್ಯಾಪಕ ಪ್ರಚಾರ ಗಿಟ್ಟಿಸುವ ಬಲ ಇದೆ.  

ಇನ್ನೊಂದು ಕುತೂಹಲದ, ಅಚ್ಚರಿಯ ವಿಷಯವೆಂದರೆ ದೇಶ ದಲ್ಲಿ ಹಳ್ಳಿ ಅಥವಾ ಪಟ್ಟಣದಲ್ಲಿ ಸಮದಾಯದ ಬಳಕೆಗಾಗಿ ಟಾಯ್ಲೆಟ್‌ಗಳನ್ನು ಕಟ್ಟಿಸುವುದರಂತಹ ಅಭಿವೃದ್ಧಿ ಕೂಡ ಸುಲಭ ಸಾಧ್ಯವಲ್ಲ. ಎಲ್ಲರಿಗೂ ಟಾಯ್ಲೆಟ್‌ ಬೇಕು. ಆದರೆ ಅದು ಯಾರ ಮನೆಗಳ/ಓಣಿಗಳ ಹತ್ತರವೂ ಇರಬಾರದು. ಇಂತಹ ಕಾಮಗಾರಿ ಗಳಿಗೆ ಸ್ಥಳ ಹುಡುಕುವುದು ಸುಲಭದ ಕೆಲಸವಲ್ಲ. ಹೀಗಾಗಿ ಬೇಸತ್ತು ಅಲ್ಲದೆ ಅದೆಲ್ಲ ಮೈಮೇಲೆ ಬರುವ ಕಷ್ಟವನ್ನರಿತ ರಾಜ ಕಾರಣಿಗಳು, ಅಧಿಕಾರಿಗಳು ಕ್ರಮೇಣ ಇವೆಲ್ಲ ಬೇಡವೆ ಬೇಡ ಎಂದು ಸುಮ್ಮನಾಗಬೇಕಾದ ಸಾಧ್ಯತೆ ಇರುತ್ತದೆ. ಇದೆಲ್ಲ ಗೋಜಲಿನಲ್ಲಿ ಅಭಿವೃದ್ಧಿ ರಾಜಕೀಯ ತುಂಬ ಸೂಕ್ಷ್ಮವಾದುದು. ಇವೆಲ್ಲ ವಿರೋಧಾಭಾಸಗಳು ಅಭಿವೃದ್ಧಿ ಪರ ರಾಜಕಾರಣಿ ಯೊಬ್ಬನ್ನು, ಪಕ್ಷವೊಂದನ್ನು ಜನ ವಿರೋಧಿಯಾಗಿ ಸಬಹುದಾದ ಸಾಧ್ಯತೆ ಇರುತ್ತದೆ. ವಿಚಿತ್ರ ವಾತಾವರಣವೆಂದರೆ ಜನತೆಗೆ ಉದ್ಯೋಗ ಸೃಷ್ಟಿ ಬೇಕು. ಆದರೆ ಉದ್ಯೋಗ ಸೃಷ್ಟಿಯ ಪ್ರಕ್ರಿಯೆ ಯಲ್ಲಿ ತಮ್ಮ ಊರು, ಪರಿಸರ, ಒಂದಿಂಚೂ ಬದಲಾಗ ಬಾರದು. ತಮ್ಮ ಹಿಂದಿನ ಜೀವನ ವಿಧಾನಕ್ಕೆ ಕುತ್ತು ಬರಬಾರದು. ಅಷ್ಟೇ ಅಲ್ಲದೆ ನಮ್ಮ ದೇಶದಲ್ಲಿರುವ ಕೆಲಸದ ವಾತಾವರಣದಲ್ಲಿ ಎಲ್ಲರಿಗೂ ಬಿಳಿ ಕಾಲರ್‌ನ ಉದ್ಯೋಗವೇ ಬೇಕು. ಇವೆಲ್ಲ ಸಂಕೀರ್ಣತೆಗಳಲ್ಲಿ ಬಹುಶಃ ಅಭಿವೃದ್ಧಿ ರಾಜಕೀಯ ಮತ್ತು ಚುನಾವಣೆ ರಾಜಕೀಯ ಜೊತೆ ಜೊತೆ ಸಾಗುವುದಿಲ್ಲ ಎಂದೇ ಅನಿಸುತ್ತದೆ. ಅಭಿವೃದ್ಧಿಯ ಬೇಡಿಕೆ ನೂರಾರು ಇರುತ್ತದೆ. ಆದರೆ ಅಭಿವೃದ್ಧಿ ಸಾಧಿಸಲು ಪಣತೊಟ್ಟ ಧೀರ ಬಹಳ ಬೇಗ ಜನಪದದಲ್ಲಿ ಅಪ್ರಿಯನಾಗಿ ಹೋಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಚುನಾವಣಾ ರಾಜಕೀಯದಿಂದ ಬಹಳ ಬೇಗ ನಿರ್ಗಮಿಸುವ ಸಾಧ್ಯತೆ ಇರುತ್ತದೆ. ಅಭಿವೃದ್ಧಿಯ ವಿಷಯದಲ್ಲಿ ಗಟ್ಟಿ ನಿರ್ಣಯಗಳನ್ನು ತೆಗೆದುಕೊಳ್ಳು ವುದು ಚುನಾವಣಾ ರಾಜಕೀಯ ದೃಷ್ಟಿಯಿಂದ ಸುಲಭದ ಮಾತಲ್ಲ. ದೊಡ್ಡ ಪ್ರಮಾಣದ ಅಭಿವೃದ್ಧಿ ರಾಜಕಾರಣದಲ್ಲಿ ನಾಯಕ ದೊಡ್ಡ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ. ರಾಜಕಾರಣಿ ಯೊಬ್ಬನಿಗೆ ಇರುವ ಅತ್ಯಂತ ಕಠಿಣ ಸವಾಲು ಇದು. ಒಂದು ಕಡೆ ಅಭಿವೃದ್ಧಿ ಕೈಗೊಳ್ಳದಿದ್ದರೆ ಜನರ ಸಿಟ್ಟು ಎದುರಿಸಬೇಕಾಗುತ್ತದೆ. ಇನ್ನೊಂದು ಕಡೆ ಅಭಿವೃದ್ಧಿ ದೊಡ್ಡ ಪ್ರಮಾಣದಲ್ಲಿ ಕೈಗೊಂಡರೂ ಜನರ ವಿರೋಧ ಎದುರಿಸಬೇಕಾಗುತ್ತದೆ. ಹಾಗೆಯೇ ಜನಪ್ರಿಯ ರಾಜಕಾರಣಕ್ಕೆ ಕೂಡ ಚುನಾವಣೆಗಳ ಯಶಸ್ಸಿನಲ್ಲಿ ಇರುವ ಪಾಲು ಬಹಳ ದೊಡ್ಡದಲ್ಲ ಎಂದೇ ಹೇಳಬೇಕು. ಏಕೆಂದರೆ ಜನಪ್ರಿಯ ರಾಜಕೀಯ ತಲುಪುವುದು ಸಮಾಜದ ಕೆಲವೇ ಕೆಲವು ವರ್ಗಗಳನ್ನು ಮಾತ್ರ. ತಾವು ನೀಡಿದ ತೆರಿಗೆಯ ಹಣ ಜನಪ್ರಿಯ ಕಾರ್ಯಕ್ರಮಗಳಿಗೆ ಹೋಗುವುದಕ್ಕೆ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿರುವ ಮಧ್ಯಮ ವರ್ಗದ ತೀವ್ರ ವಿರೋಧವಿದೆ. ಅಲ್ಲದೆ ಪಾಶ್ಚಾತ್ಯೀಕರಣಗೊಳ್ಳುತ್ತಿರುವ ಯುವ ಜನತೆಯದ್ದಂತೂ ಗಟ್ಟಿಯಾದ ವಿರೋಧವಿದೆ. ಅವರು ಜನಪ್ರಿಯ ರಾಜಕೀಯವನ್ನು ಅಭಿವೃದ್ಧಿ ರಾಜಕೀಯದ ವಿರುದ್ಧಾರ್ಥಕ ಪದವೆಂದೇ ಗ್ರಹಿಸು ತ್ತಾರೆ. ಮಾಜಿ ಪ್ರಧಾನಿ ಮನ್‌ಮೋಹನ್‌ ಸಿಂಗ್‌ ಒಂದು ಕಾಲದಲ್ಲಿ ಮಧ್ಯಮ ವರ್ಗದ ಪ್ರೀತಿಯ ರಾಜಕಾರಣಿಯಾಗಿದ್ದವರು. ಕಾರಣ ವೆಂದರೆ ಅವರು ಜನಪ್ರಿಯ ಸಬ್ಸಿಡಿ ರಾಜಕೀಯಕ್ಕೆ ವಿರುದ್ಧವಾಗಿದ್ದ ನೀತಿಗಳನ್ನು ಆರಂಭಿಸಿದ್ದು. ಆದರೆ ನಂತರ ತಮ್ಮದೇ ಮೊದಲಿನ ನೀತಿಗಳಿಂದ ಮನ್‌ಮೋಹನ್‌ ಸಿಂಗ್‌ ದೂರ ಸರಿಯುತ್ತ ಹೋದಂತೆ ಮಧ್ಯಮ ವರ್ಗ ಸಿಂಗ್‌ ಅವರಿಂದ ಭ್ರಮನಿರಸನ ಗೊಂಡು ಅವರ ವಿರುದ್ಧ ನಿಲ್ಲುತ್ತಾ ಹೋಯಿತು.  

ಉಳಿದಂತೆ ಇರುವುದು ಸಂಪನ್ಮೂಲಗಳ ರಾಜಕೀಯ. ಅದಕ್ಕೂ ಚುನಾವಣಾ ರಾಜಕೀಯದಲ್ಲಿ ಒಂದು ಹಂತದವರೆಗಿನ ಮಹತ್ವ ಇದೆ ಎಂದೇ ಅನಿಸುತ್ತದೆ. ಏಕೆಂದರೆ ಕೊನೆಗೂ ತನಗೇನು ಸಿಕ್ಕಿತು ಎಂದು ಪ್ರಶ್ನೆ ಮಾಡುವ ವರ್ಗವನ್ನೂ ರಾಜಕಾರಣಿಗಳು ಎದುರಿಸಲೇಬೇಕಾಗುವುದು ವಾಸ್ತವ. ಆದರೆ ಬಹುಶಃ ಒಂದು ರಾಜಕೀಯ ಗಾಳಿಯ ಅಥವಾ ಭಾವನಾತ್ಮಕ ವಾತಾವರಣದಲ್ಲಿ ಇಂತಹ ರಾಜಕೀಯದ ಶಕ್ತಿ ಕಡಿಮೆಯಾಗುತ್ತಲೇ ಹೋಗುತ್ತದೆ. ಅಂತಹ ಸಂದರ್ಭಗಳಲ್ಲಿ ನೀರಿನಂತೆ ಹಣ ಖರ್ಚು ಮಾಡಿದರೂ ಆ ಅಭ್ಯರ್ಥಿ ಅಥವಾ ಪಕ್ಷಕ್ಕೆ ಯಶಸ್ಸು ಸಿಕ್ಕಿ ಬಿಡುತ್ತದೆ ಎಂದು ಹೇಳಲಾಗುವುದಿಲ್ಲ. ಸಂಪನ್ಮೂಲ ಒಂದನ್ನೇ ಆಧರಿಸಿ ಗೆಲ್ಲಲು ಪ್ರಯತ್ನಿಸಿದವರು ಸೋತು ಸುಣ್ಣವಾಗಿದ್ದನ್ನೂ ಗಮನಿಸಬೇಕು. 

ಹಾಗಾದರೆ ಚುನಾವಣೆಗಳಲ್ಲಿ ಜನ ಮತ ಹಾಕುವುದು ಏನನ್ನು ನೋಡಿ? ಈ ಪ್ರಶ್ನೆಗೆ ಉತ್ತರ ತುಂಬ ಸಂಕೀರ್ಣವಾದುದು. ಬಹುಶಃ ಹಲವು ಸಂಕೀರ್ಣವಾದ ಉತ್ತರಗಳನ್ನು ಕಂಡುಕೊಳ್ಳ ಬೇಕಾಗು ತ್ತದೆ. ಬಹುಶಃ ಈ ಪ್ರಶ್ನೆಗೆ ನಾಲ್ಕು ರೀತಿಯ ಉತ್ತರಗಳಿವೆ. ಒಂದನೆಯದು ರಾಷ್ಟ್ರೀಯ ಅಥವಾ ರಾಜ್ಯ ಮಟ್ಟದ ನಾಯಕತ್ವದ ಸಕಾರಾತ್ಮಕ ಶಕ್ತಿ. ಏಕೆಂದರೆ ಭಾರತದಲ್ಲಿ ಚುನಾವಣೆಗಳನ್ನು ಗೆಲ್ಲುವುದರಲ್ಲಿ ನಾಯಕನ ವ್ಯಕ್ತಿತ್ವಕ್ಕೆ ಮತ್ತು ಆತ ಪ್ರತಿನಿಧಿಸುವ ತತ್ವಗಳಿಗೆ ದೊಡ್ಡ ಪ್ರಮಾಣದ ಪ್ರಾಮುಖ್ಯತೆ ಇದೆ. ಭಾರತೀಯ ಚುನಾವಣೆಗಳು ನೆಹರು, ಇಂದಿರಾ, ಮೋದಿಯಂತಹ ನಾಯ ಕರುಗಳಿಂದ ನಿರೂಪಿತಗೊಳ್ಳುವ ಚುನಾವಣೆಗ‌ಳು. ಹೆಚ್ಚು ಕಡಿಮೆ ಇಂತಹ ನಾಯಕರುಗಳು ಸಿದ್ಧಾಂತಗಳನ್ನು ರೂಪಿಸುತ್ತಾರೆ. ಗೆಲುವನ್ನು ನಿರ್ಧರಿಸುವುದರಲ್ಲಿ ಇಂತಹ ಬೃಹತ್‌ ನಾಯಕತ್ವಗಳಿಗೆ ದೊಡ್ಡ ಪಾತ್ರವಿದೆ. ಎರಡನೆಯ ಗೆಲುವಿನ ಸೂತ್ರ ಬಹುಶಃ ಒಂದು ಪಕ್ಷ ಉಳಿದ ಪ್ರಾದೇಶಿಕ ನಾಯಕರುಗಳು, ಜಾತಿ, ಧರ್ಮಗಳು ಇತ್ಯಾದಿಗಳೊಡನೆ ಹೇಗೆ ಮಿಳಿತವಾಗಿ ಕೆಲಸ ಮಾಡುತ್ತ ನಾಯಕ ನಿಗೆ ಬೆನ್ನೆಲು ಬಾಗಿ ನಿಲ್ಲುತ್ತವೆ ಎನ್ನುವುದು. ಅಂದರೆ ಮಹಾ ನಾಯಕನ ವ್ಯಕ್ತಿತ್ವವನ್ನು, ಸಿದ್ಧಾಂತಗಳನ್ನು ಅವು ಜನತೆಯ ಜತೆ ಹೇಗೆ ಜೊತೆಗೂಡಿ ಸಂವಹಿಸುತ್ತವೆ ಎನ್ನುವುದು. ಮೂರನೆಯ ಅಂಶವೆಂದರೆ ಪ್ರಾದೇಶಿಕವಾದ ಮೈಕ್ರೊ ಅಂಶಗಳು. ಅಂದರೆ, ಒಂದು ಚುನಾವಣಾ ಕ್ಷೇತ್ರ ಯಾವುದು, ಅಲ್ಲಿಯ ಜನ ಜೀವನ ಸಂಸ್ಕೃತಿ ವರ್ಗ ಎಂತಹುದು, ಇತ್ಯಾದಿಗಳನ್ನು ಗಮನಿಸಿ ಅವುಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವುದು. ನಾಲ್ಕನೆಯದೆಂದರೆ ವಿರೋಧ ಪಕ್ಷದ ವಿಚಾರ ಧಾರೆಗಳ ಕುರಿತಾಗಿ ನೇತ್ಯಾತ್ಮಕ ಶಕ್ತಿಯನ್ನು ಜಾಗೃತಗೊಳಿಸಲು ಯಶಸ್ವಿಯಾಗುವುದು. ಹೀಗೆ ಸ್ಥೂಲವಾಗಿ ಚುನಾವಣಾ ಗೆಲುವಿನ ಸೂತ್ರ ಅಡಗಿರುವುದು ಒಂದು ಪಕ್ಷ ಅಥವಾ ನಾಯಕ ಹೇಗೆ ಸಂಕೀರ್ಣ ರೀತಿಗಳಲ್ಲಿ ಅಭಿವೃದ್ಧಿ ರಾಜಕೀಯ  ಹಾಗೂ ಜನಪ್ರಿಯ ರಾಜಕೀಯದ ಹದವಾದ ಮಿಶ್ರಣ ಮಾಡಿ, ಪ್ರಾದೇಶಿಕ ಭಾವನೆಗಳನ್ನೂ ಕೂಡಿಸಿ ಜನರ ಭಾವನೆಗಳಿಗೆ ಯಾವುದೋ ಭಾವನಾತ್ಮಕ ಹಿನ್ನೆಲೆಯಲ್ಲಿ ಮಿಡಿದಾಗ ಆ ವ್ಯಕ್ತಿಗೆ ಅಥವಾ ಪಕ್ಷಕ್ಕೆ ಚುನಾವಣೆಗಳಲ್ಲಿ ಯಶಸ್ಸು ಬರುತ್ತದೆ. ಎಲ್ಲಕ್ಕಿಂತ‌ ಮಿಗಿಲಾದ ಅತಿ ಮುಖ್ಯ ವಿಷಯವೆಂದರೆ ಒಬ್ಬ ನಾಯಕ ಅಥವಾ ಒಂದು ಪಕ್ಷ ಒಂದು  ಸಮಾಜದಲ್ಲಿ ಜನತೆಯೊಂದಿಗೆ ಹೇಗೆ ಮತ್ತು ಯಾವ ದಿಸೆಯಲ್ಲಿ ಮಾನಸಿಕವಾಗಿ ಬೆರೆತುಕೊಳ್ಳುತ್ತದೆ ಎನ್ನುವುದು.  ಅಭಿವೃದ್ಧಿ ರಾಜಕೀಯ ಅಥವಾ ಜನಪ್ರಿಯ ರಾಜಕೀಯ, ಹಣಕಾಸಿನ ರಾಜಕೀಯ ಇವೆಲ್ಲವೂ ಮಾಧ್ಯಮಗಳು. ನಿಜವಾದ ಚುನಾವಣೆಯ ಯಶಸ್ಸು ಕೊನೆಗೂ ಅಡಗಿರುವುದು ಹೇಗೆ ಇವೆಲ್ಲವನ್ನೂ ರಾಜಕೀಯ ನಾಯಕ ಅಥವಾ ಪಕ್ಷ ಒಂದು ಭಾವನಾತ್ಮಕ ಅಲೆಯ ಸೃಷ್ಟಿಗೆ ಬಳಸಿಕೊಳತ್ತಾನೆ/ತ್ತದೆ ಎನ್ನುವುದನ್ನು ಆಧರಿಸಿಯೇ ಎಂದೇ ತೋರುತ್ತದೆ. ಅಂದರೆ ಕೊಟ್ಟ ಕೊನೆಗೆ ರಾಜಕೀಯ  ಪಕ್ಕವೊಂದಕ್ಕೆ ಅಥವಾ ನಾಯಕನಿಗೆ ಚುನಾವಣೆ ಗೆಲ್ಲಲು ಮುಖ್ಯವಾದದ್ದೆಂದರೆ ಸಮ್ಮೊಹನಗೊಳಿಸುವಂತಹ, ಮೋಡಿ ಮಾಡುವಂತಹ ಸಂವಹನ ಶಕ್ತಿ.

Advertisement

ಡಾ| ರಾಮಚಂದ್ರ ಜಿ. ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next