Advertisement

Covid19 ವೈರಸ್ ರೋಗಿಯ ಚಿಕಿತ್ಸೆಗೆ ತಗಲುವ ವೆಚ್ಚ ಎಷ್ಟು ಗೊತ್ತಾ? ಬೊಕ್ಕಸಕ್ಕೆ ಎಷ್ಟು ಹೊರೆ!

08:10 AM Apr 23, 2020 | Nagendra Trasi |

ಮಣಿಪಾಲ: ಇಡೀ ಜಗತ್ತನ್ನೇ ಮಹಾಮಾರಿ ಕೋವಿಡ್ 19 ವೈರಸ್ ಕಂಗೆಡಿಸಿಬಿಟ್ಟಿದೆ. ಈವರೆಗೆ ಕೋವಿಡ್ 19 ಸೋಂಕು ಹೇಗೆ ಹರಡುತ್ತದೆ, ಯಾವುದರಿಂದ ಹರಡುತ್ತದೆ ಎಂಬ ಚರ್ಚೆ ನಡೆಯುತ್ತಿದ್ದು, ಇದೀಗ ದೇಶದಲ್ಲಿ ಶೇ.80ರಷ್ಟು ಕೋವಿಡ್ 19 ಸೋಂಕು ಪೀಡಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಂದು ವೇಳೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದರೆ ಅಥವಾ ಆರೋಗ್ಯ ಇಲಾಖೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಶಿಫಾರಸು ಮಾಡಿದರೆ ಅದಕ್ಕೆ ತಗಲುವ ವೆಚ್ಚ ಎಷ್ಟು ಎಂಬ ವಿವರದ ಬಗ್ಗೆ ದ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

Advertisement

ಕೋವಿಡ್ 19 ರೋಗಿಗಳ ಚಿಕಿತ್ಸೆಗೆ ಸರ್ಕಾರಕ್ಕೆ ಎಷ್ಟು ಖರ್ಚಾಗಲಿದೆ?
ಕೋವಿಡ್ 19 ರೋಗಿಗಳ ಚಿಕಿತ್ಸೆಗೆ ಎಷ್ಟು ವೆಚ್ಚವಾಗಲಿದೆ ಎಂಬ ಪ್ರಶ್ನೆಗೆ ಇದು ವಿವಿಧ ರೋಗಿಗಳ ಮೇಲೆ ಅವಲಂಬಿತವಾಗಿದೆ. ವೈರಸ್ ಎಫೆಕ್ಟ್, ಸಂಬಂಧಿತ ರೋಗಗಳು, ವಯಸ್ಸು ಹೀಗೆ ಹಲವು ಅಂಶಗಳ ಮೇಲೆ ಖರ್ಚು ನಿರ್ಧಾರವಾಗುತ್ತದೆ. ಒಂದು ವೇಳೆ ಸಾಮಾನ್ಯ ಪ್ರಕರಣಗಳಲ್ಲಿ ಸರ್ಕಾರದ ಬೊಕ್ಕಸಕ್ಕೆ ಎಷ್ಟು ಖರ್ಚಾಗಲಿದೆ ಎಂಬ ವಿವರ ಇಲ್ಲಿದೆ.

ಕೋವಿಡ್ 19 ಸಾಮಾನ್ಯ ರೋಗಿಗೆ ಅದು ವೆಂಟಿಲೇಟರ್ ಸಪೋರ್ಟ್ ಇಲ್ಲದೆ ಚಿಕಿತ್ಸೆ ನೀಡಿದರೆ, ಅಂದಾಜು ದಿನಂಪ್ರತಿ 20ರಿಂದ 25 ಸಾವಿರ ರೂಪಾಯಿ ಖರ್ಚು ಬರಲಿದೆ ಎಂದು ತಿರುವನಂತಪುರಂ ಮೆಡಿಕಲ್ ಕಾಲೇಜಿನ ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.

ಅಂದರೆ ಕೋವಿಡ್ 19 ಸೋಂಕು ಪೀಡಿತ ಒಬ್ಬ ವ್ಯಕ್ತಿಗೆ 14 ದಿನಗಳ ಚಿಕಿತ್ಸೆಗೆ 2,80,000 ದಿಂದ 3,50,000 ಸಾವಿರದವರೆಗೆ ಖರ್ಚಾಗಲಿದೆ. ಸಾಮಾನ್ಯವಾಗಿ ಕೋವಿಡ್ 19 ಪೀಡಿತ ರೋಗಿಗಳಿಗೆ ಸತತ ಮೂರರಿಂದ ಐದು ಪರೀಕ್ಷೆ ನಡೆಸಿ ಅದು ನೆಗೆಟೀವ್ ಎಂದು ಫಲಿತಾಂಶ ಬಂದ ನಂತರವೇ ಡಿಸ್ ಚಾರ್ಜ್ ಮಾಡುವುದು.

ಇನ್ನು ಕೆಲವು ಪ್ರಕರಣಗಳಲ್ಲಿ ಪರೀಕ್ಷೆ ಸುಮಾರು 8ರಿಂದ ಹತ್ತು ಬಾರಿ ನಡೆಸಬೇಕಾಗುತ್ತದೆ. ಅಂದರೆ ಸೋಂಕು ಇಲ್ಲ ಎಂಬುದು ಖಚಿತವಾಗಲು ಹೀಗೆ ಪರೀಕ್ಷೆ ನಡೆಸಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಬಾಲಿವುಡ್ ಗಾಯಕಿ ಕಾನಿಕಾ ಕಪೂರ್ ಗೆ ಆರು ಬಾರಿ ಪರೀಕ್ಷೆ ನಡೆಸಿದ ನಂತರ ನೆಗೆಟೀವ್ ಎಂದು ವರದಿ ಬಂದಿತ್ತು ಎಂದು ವಿವರಿಸಿದ್ದಾರೆ.

Advertisement

ಶಂಕಿತ ವ್ಯಕ್ತಿಯ ಗಂಟಲು ದ್ರವದ ಪರೀಕ್ಷೆ ನಡೆಸಲು 4,500 (ಖಾಸಗಿ ಪ್ರಯೋಗಾಲಯದಲ್ಲಿ ನಡೆಸುವ ಪರೀಕ್ಷೆಗೆ ಈ ದರ ತೆಗೆದುಕೊಳ್ಳಬೇಕೆಂದು ಸುಪ್ರೀಂಕೋರ್ಟ್ ನಿಗದಿಪಡಿಸಿತ್ತು) ರೂಪಾಯಿಯಾಗಲಿದೆ. ಟೆಸ್ಟ್ ಕಿಟ್ ನ ಬೆಲೆಯೇ 3000 ಸಾವಿರ ರೂಪಾಯಿ. ಒಂದು ವೇಳೆ ವ್ಯಕ್ತಿಗೆ ಕೋವಿಡ್ 19ನ ರೋಗ ಲಕ್ಷಣ ಇದ್ದರೆ ಆಗ ಆ್ಯಂಬುಲೆನ್ಸ್ ನಲ್ಲಿಯೇ ಪ್ರಯಾಣಿಸಬೇಕಾಗುತ್ತದೆ. ಸಾಮಾನ್ಯವಾಗಿ ರೋಗಿಯನ್ನು ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಯ ವೆಚ್ಚದಲ್ಲಿಯೇ ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ.

ಒಂದು ಬಾರಿ ಐಸೋಲೇಶನ್ ವಾರ್ಡ್ ಗೆ ಹೋದ ಮೇಲೆ ಅಂತಹ ರೋಗಿಗಳಿಗೆ ಕೆಲವು ವಿಶಿಷ್ಟ ಕ್ರಮ ಅನುಸರಿಸಬೇಕಾಗುತ್ತದೆ. ಪ್ರತಿಯೊಂದು ಕೋಣೆ ಬೇರೆ ಇರಬೇಕು, ಪ್ರತ್ಯೇಕ ಶೌಚಾಲಯ, ಇನ್ನೊಬ್ಬರು ಉಪಯೋಗಿಸಿದ ಬೆಡ್ ಉಪಯೋಗಿಸಬಾರದು. ಒಂದು ವೇಳೆ ರೋಗಿ ವಯಸ್ಕರಾಗಿದ್ದರೆ ಅಥವಾ ಹಲವು ವಿಧದ ರೋಗಗದಿಂದ ಬಳಲುತ್ತಿದ್ದರೆ ಅವರಿಗೆ ವೆಂಟಿಲೇಟರ್ ಅತ್ಯಗತ್ಯ ಎಂದು ವರದಿ ವಿವರಿಸಿದೆ.

ಕೊಟ್ಟಾಯಂನ 94 ವರ್ಷದ ಅಜ್ಜ ಮತ್ತು 88 ವರ್ಷದ ಪತ್ನಿಗೆ ಸುಮಾರು ಒಂದು ವಾರಗಳ ಕಾಲ ವೆಂಟಿಲೇಟರ್ ನಲ್ಲಿ ಇರಿಸಲಾಗಿತ್ತು. ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ನಲ್ಲಿ ರೋಗಿಯನ್ನು ಇಟ್ಟರೆ ಒಂದು ದಿನಕ್ಕೆ 25ಸಾವಿರದಿಂದ 50 ಸಾವಿರ ರೂಪಾಯಿವರೆಗೆ ದರ ಇದೆ. ಆಸ್ಪತ್ರೆ ವಾರ್ಡ್ ದರ ಕೂಡ ಆಯಾಯ ಆಸ್ಪತ್ರೆ ಮೇಲೆ ಹೊಂದಿಕೊಂಡಿರುತ್ತದೆ. ಆದರೆ ಅತೀ ಕಡಿಮೆ ಎಂದರೆ ಕೆಲವು ಆಸ್ಪತ್ರೆಗಳಲ್ಲಿ ದಿನಂಪ್ರತಿ 1000ದಿಂದ 1,500 ರೂ.ವರೆಗೆ ದರ ಇದೆ.

ಕೋವಿಡ್ 19 ಆಸ್ಪತ್ರೆಗಳಿಗೆ 100 ಬೆಡ್ ಗಳಿಗೆ ಕನಿಷ್ಠ 200 ಪಿಪಿಇ (ಪರ್ಸನಲ್ ಪ್ರೊಟೆಕ್ಷನ್ ಉಪಕರಣ) ಕಿಟ್ಸ್ ಅಗತ್ಯವಿದೆ. ವೈದ್ಯರು ಮತ್ತು ನರ್ಸ್ ಗಳು ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ ಅವರ ಕಿಟ್ಸ್ ಗಳನ್ನು ಬದಲಿಸುತ್ತಿರುತ್ತಾರೆ. ಒಂದು ವೇಳೆ ವೈರಸ್ ತುಂಬಾ ಉಲ್ಬಣಗೊಂಡಿದ್ದರೆ, ನರ್ಸ್ ಗಳು ಆಗಾಗ್ಗೆ ಕಿಟ್ಸ್ ಬದಲಿಸುತ್ತಿರುತ್ತಾರೆ ಎಂದು ಕೋವಿಡ್ 19 ಆಸ್ಪತ್ರೆಯ ನರ್ಸಿಂಗ್ ಸೂಪರಿಟೆಂಡೆಂಟ್ ತಿಳಿಸಿದ್ದಾರೆ.

ಸ್ಟ್ಯಾಂಡರ್ಡ್ ಪಿಪಿಇ ಕಿಟ್ಸ್ ಒಂದರ ಬೆಲೆ 750ರಿಂದ 1000 ಸಾವಿರ ರೂಪಾಯಿವರೆಗೆ ಇದೆ. ಮೆಡಿಸಿನ್ ಕೂಡಾ ರೋಗಿಯಿಂದ ರೋಗಿಗೆ ಬದಲಾಗುತ್ತದೆ. ಆ್ಯಂಟಿಬಯೋಟಿಕ್ಸ್, ಆ್ಯಂಟಿ ವಿಟ್ರಿಯೋಲ್ ಮತ್ತು ಇತರ ಔಷಧದ ವೆಚ್ಚ ದಿನಂಪ್ರತಿ ಒಬ್ಬ ರೋಗಿಗೆ 500ರಿಂದ 1000 ರೂಪಾಯಿಯಾಗುತ್ತದೆ.

ಕೋವಿಡ್ 19 ಸೋಂಕಿನ ವಿರುದ್ಧದ ಹೋರಾಟದಲ್ಲಿ ಹಣವೇ ನಿರ್ಬಂಧವಲ್ಲ. ನಮಗೆ ಮುಖ್ಯಮಂತ್ರಿ ಈ ಬಗ್ಗೆ ವಿಶೇಷ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ನಾವು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಬಗ್ಗೆ ಗಮನಹರಿಸಿದ್ದೇವೆ. ಕೆಲವು ವಿದೇಶಿಯರು ಕೂಡಾ ನಮ್ಮಲ್ಲಿ ಉತ್ತಮ ಚಿಕಿತ್ಸೆ ಪಡೆದಿದ್ದಾರೆ ಎಂದು ಆರೋಗ್ಯ ಸಚಿವ ಕೆಕೆ ಶೈಲಜಾ ತಿಳಿಸಿದ್ದಾರೆ. ಈವರೆಗೆ ಸರ್ಕಾರ ಧೈರ್ಯದಿಂದ ಕೋವಿಡ್ ಪ್ರಕರಣ ಎದುರಿಸಿದೆ. ಆದರೆ ಇದು ಸರ್ಕಾರದ ಬೊಕ್ಕಸಕ್ಕೆ ಅಪಾರ ಹೊರೆ ತರಲಿದೆ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next