Advertisement

ಪ್ರಮುಖ ಅಭ್ಯರ್ಥಿಗಳು ಏನೇನು ಮಾಡಿದರು ?

02:21 PM May 14, 2018 | |

ಮೈಸೂರು: ಕಳೆದ ಹಲವು ದಿನಗಳಿಂದ ರಂಗೇರಿದ್ದ ವಿಧಾನಸಭಾ ಚುನಾವಣೆಯ ಅಖಾಡದ ಕಾವು ತಣ್ಣಗಾಗಿದ್ದು, ಮತದಾನದ ಬಳಿಕ ಎಲ್ಲಾ ಅಭ್ಯರ್ಥಿಗಳು ಚುನಾವಣೆಯ ಭರಾಟೆ ಮುಗಿಸಿ ರಿಲ್ಯಾಕ್ಸ್‌ ಮೂಡ್‌ನ‌ಲ್ಲಿದ್ದರೆ, ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರ ಜತೆಗೆ ಎಲ್ಲೆಡೆ ಸೋಲು-ಗೆಲುವಿನ ಲೆಕ್ಕಚಾರ ಆರಂಭವಾಗಿದೆ.

Advertisement

ಬೆಂಗಳೂರಿಗೆ ಹೊರಟ ಸಿಎಂ: ಈ ಬಾರಿಯ ಚುನಾವಣೆ ಆರಂಭದಿಂದಲೂ ಗೆಲುವು ಸಾಧಿಸುವ ವಿಶ್ವಾಸದಿಂದಲೇ ಚುನಾವಣೆ ಎದುರಿಸಿದ ಸಿದ್ದರಾಮಯ್ಯ, ಭಾನುವಾರ ಬೆಳಗ್ಗೆ 11 ಗಂಟೆವರೆಗೂ ಮೈಸೂರಿನ ನಿವಾಸದಲ್ಲಿ ವಿಶ್ರಾಂತಿ ಪಡೆದರು. ಚುನಾವಣೆ ಬಳಿಕ ಸಿದ್ದರಾಮಯ್ಯ ನಗರದಲ್ಲಿ ವಾಸ್ತವ್ಯ ಹೂಡಿದ್ದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಹಲವು ಗ್ರಾಮಗಳ ಜನರು ಬೆಳಗ್ಗೆಯೇ ಸಿದ್ದರಾಮಯ್ಯ ಅವರ ನಿವಾಸದತ್ತ ದೌಡಾಯಿಸಿದರು.

ಸಿದ್ದರಾಮಯ್ಯ ಅವರನ್ನು ನೋಡಲು ಅನೇಕ ಊರುಗಳಿಂದ ನೂರಾರು ಮಂದಿ ಬಂದಿದ್ದರೂ, ಸಿದ್ದರಾಮಯ್ಯ ಅವರು ನಿದ್ರೆಗೆ ಜಾರಿದ್ದ ಕಾರಣ ಯಾರನ್ನು ಭೇಟಿಯಾಗಲಿಲ್ಲ. ನಂತರ 9 ಗಂಟೆಗೆ ಮನೆಯಿಂದ ಹೊರಬಂದ ಸಿದ್ದರಾಮಯ್ಯ, ಮುಖ್ಯವಾಗಿ ಚಾಮುಂಡೇಶ್ವರಿ ಹಾಗೂ ವರುಣಾ ಕ್ಷೇತ್ರದ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿದರು. ನಂತರ 11 ಗಂಟೆಗೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿಗೆ ತೆರಳಿದರು.

ಮಡಿಕೇರಿಗೆ ಜಿಟಿಡಿ: ಹೈವೋಲ್ಟೆಜ್‌ ಕ್ಷೇತ್ರವಾಗಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ವಿರುದ್ಧ ಸ್ಪರ್ಧಿಸಿರುವ ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡ, ಮತದಾನದ ಬಳಿಕ ವಿಶ್ರಾಂತಿಗಾಗಿ ಮೈಸೂರಿನಿಂದ ಮಡಿಕೇರಿಗೆ ತೆರಳಿದರು. ಚುನಾವಣೆಯಲ್ಲಿ ಗೆಲುವು ಸಾಧಿಸಲು ಒಂದೂವರೆ ತಿಂಗಳಿನಿಂದ ಹಗಲು-ರಾತ್ರಿ ಎಂಬಂತೆ ಶ್ರಮಿಸಿದ ಜಿ.ಟಿ.ದೇವೇಗೌಡ ಹಾಗೂ ಆಪ್ತರು, ಮಡಿಕೇರಿಯ ಖಾಸಗಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದು, ಎರಡು ದಿನಗಳ ವಿಶ್ರಾಂತಿ ಬಳಿಕ ಮೇ 14ರಂದು ಸಂಜೆ ಮೈಸೂರಿಗೆ ಹಿಂದಿರುಗಲಿದ್ದಾರೆ.

ರಂಗಪ್ಪನಿಗೆ ಕಾಲು ನೋವು: ನಗರದ ಚಾಮರಾಜ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಪೊ›.ಕೆ.ಎಸ್‌.ರಂಗಪ್ಪ ಅವರ ಪಾರಂಹೌಸ್‌ ಮನೆಯಲ್ಲಿ ಮುಖಂಡರ ದಂಡು ಜಮಾಯಿಸಿತ್ತು. ಚುನಾವಣೆಗಾಗಿ ನಿರಂತರ ಪ್ರಚಾರದಲ್ಲಿ ತೊಡಗಿದ್ದ ಕಾರಣ ರಂಗಪ್ಪ ಅವರಿಗೆ ಕಾಲು ನೋವು ಕಾಣಿಸಿಕೊಂಡಿದೆ. ಹೀಗಾಗಿ ಭಾನುವಾರ ಮನೆಯಲ್ಲಿ ವಿಶ್ರಾಂತಿ ಪಡೆದರು.

Advertisement

ಆದರೆ ನಿನ್ನೆ ನಡೆದ ಮತದಾನದ ಅಂಕಿಅಂಶಗಳ ಬಗ್ಗೆ ಚರ್ಚಿಸಲು ಮುಖಂಡರು ರಂಗಪ್ಪಅವರ ಮನೆಯತ್ತ ಆಗಮಿಸಿದ ಕಾರಣ ವಿಶ್ರಾಂತಿಯ ಜತೆಗೆ ಕೆಲಕಾಲ ಸೋಲು-ಗೆಲುವಿನ ಲೆಕ್ಕಾಚಾರದ ಬಗ್ಗೆ ಚರ್ಚೆ ನಡೆಸುವುದರೊಂದಿಗೆ ಕಾಲ ಕಳೆದರು. ಉಳಿದಂತೆ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರು ವಿಜಯನಗರದ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆದರೆ, ಮಾಜಿ ಸಚಿವ ಎಸ್‌.ಎ.ರಾಮದಾಸ್‌ ಕೆಲಕಾಲ ತಮ್ಮ ಕಚೇರಿಗೆ ತೆರಳಿ ಆಪ್ತರು

ಹಾಗೂ ಬೆಂಬಲಿಗರೊಂದಿಗೆ ರಾಜಕೀಯ ಲೆಕ್ಕಾಚಾರದ ಬಗ್ಗೆ ಮಾತುಕತೆ ನಡೆಸಿದರು. ಕೆ.ಆರ್‌.ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ಕೆ.ಸೋಮಶೇಖರ್‌ ಮನೆಯಲ್ಲಿ ಉಳಿದುಕೊಂಡು ಕುಟುಂಬದವರೊಂದಿಗೆ ಕಾಲ ಕಳೆದರು. ಇದಲ್ಲದೆ ನಗರದಲ್ಲಿ ಚುನಾವಣಾ ಕಣಕ್ಕಿಳಿದಿರುವ ಬಹುತೇಕ ಅಭ್ಯರ್ಥಿಗಳು, ಭಾನುವಾರ ದಿನವಿಡಿ ವಿಶ್ರಾಂತಿ ಪಡೆಯುವ ಮೂಲಕ ಮೇ 15ರಂದು ಪ್ರಕಟಗೊಳ್ಳಲಿರುವ ಚುನಾವಣಾ ಫ‌ಲಿತಾಂಶದ ಕುರಿತು ಆಪ್ತರೊಂದಿಗೆ ವಿಶ್ಲೇಷಣೆ ಮಾಡಿದರು.

ತಣ್ಣಗಾದ ಕಾರ್ಯಕರ್ತರು: ಚುನಾವಣೆಯಲ್ಲಿ ಅಭ್ಯರ್ಥಿಗಳೊಂದಿಗೆ ಹಗಲಿರುಳು ಕೆಲಸ ಮಾಡಿದ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಭಾನುವಾರ ರಿಲ್ಯಾಕ್ಸ್‌ ಮೂಡ್‌ಗೆ ಸರಿದರು. ಕಳೆದ ಒಂದು ತಿಂಗಳಿಂದಲೂ ದಿನವಿಡಿ ರಾಜಕೀಯ ಜಂಜಾಟದಲ್ಲಿ ತೊಡಗಿದ್ದ ಅಭ್ಯರ್ಥಿಗಳು ಮನೆಯಲ್ಲಿ ಉಳಿದುಕೊಂಡು ವಿಶ್ರಾಂತಿ ಪಡೆದರೆ, ಅವರಿಗಾಗಿ ಕೆಲಸ ಮಾಡಿದ ಪ್ರಮುಖರು ಹಾಗೂ ಕಾರ್ಯಕರ್ತರು ಸಹ ಕುಟುಂಬದವರೊಂದಿಗೆ ಬೆರೆತು ವಿಶ್ರಾಂತಿ ಪಡೆದರು.

ಮತ್ತೂಂದೆಡೆ ಕೆಲವು ಕಾರ್ಯಕರ್ತರು ಮೇ 15ರಂದು ಹೊರಬೀಳಲಿರುವ ಚುನಾವಣಾ ಫ‌ಲಿತಾಂಶದ ಕುರಿತು ಆಪ್ತರ ಜತೆ ಚರ್ಚೆ ನಡೆಸಿದರು. ಹೀಗಾಗಿ ಶುಕ್ರವಾರದವರೆಗೂ ಸದಾ ಕಾರ್ಯಕರ್ತರಿಂದ ತುಂಬಿರುತ್ತಿದ್ದ ರಾಜಕೀಯ ಪಕ್ಷದ ಕಚೇರಿಗಳು ಬಿಕೋ ಎನ್ನುತ್ತಿದ್ದ ದೃಶ್ಯ ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next