ಮಂಗಳೂರು/ಉಡುಪಿ: ಮತದಾನಕ್ಕೂ ಮತ ಎಣಿಕೆಗೂ 35 ದಿನಗಳಷ್ಟು ದೀರ್ಘಾವಧಿಯ ಕಾಯುವಿಕೆ ಕರಾವಳಿ ಮತ್ತು ಮಲೆನಾಡು ವ್ಯಾಪ್ತಿಯ ಎರಡು ಮುಖ್ಯ ಲೋಕಸಭಾ ಕ್ಷೇತ್ರಗಳಿಗೆ ಇದೇ ಪ್ರಥಮ. ಗುರುವಾರ ಈ ಕಾಯುವಿಕೆ ಕೊನೆಕಂಡು ಫಲಿತಾಂಶ ಹೊರಬೀಳಲಿದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತ್ತು ಸಾಮಾನ್ಯ ಮತದಾರರಲ್ಲಿ ಕಾತರವಿದ್ದರೆ ಚುನಾವಣೆಯಲ್ಲಿ ಸ್ವತಃ ಸ್ಪರ್ಧಿಸಿದವರ ಮನಸ್ಥಿತಿ ಈಗ ಹೇಗಿರಬಹುದು ಎಂಬುದೂ ಕುತೂಹಲದ ವಿಷಯ.
ನಳಿನ್ ಕುಮಾರ್ ಕಟೀಲು: ಬೆಳಗ್ಗೆ ಚುನಾವಣೆ ಕಚೇರಿಗೆ ತೆರಳಿ ಅಧಿಕಾರಿಗಳೊಂದಿಗೆ ಮಾತುಕತೆ, ಪಕ್ಷದ ಮುಖಂಡರೊಂದಿಗೆ ಸಭೆ, ಕಾರ್ಯಕರ್ತರ ಭೇಟಿ, ಮಧ್ಯಾಹ್ನ ಮದುವೆ, ಕಟೀಲು ದೇವಸ್ಥಾನಕ್ಕೆ ಭೇಟಿ, ಸಂಜೆ ಮತ ಎಣಿಕೆ ಏಜೆಂಟ್‌ಗಳಿಗೆ ತರಬೇತಿ, ರಾತ್ರಿ ಕಟೀಲಿನಲ್ಲಿ ಯಕ್ಷಗಾನ ವೀಕ್ಷಣೆ.
ಮಿಥುನ್ ರೈ: ಬೆಳಗ್ಗೆ ಬೆಳ್ತಂಗಡಿ ಸಿರಿಯಾ ದೇವಸ್ಥಾನ ಭೇಟಿ, ಕಕ್ಕೆಪದವು ಗರೋಡಿಗೆ ಭೇಟಿ ನೀಡಿ ಪ್ರಾರ್ಥನೆ, ಕುತ್ತಾರಪದವು ಕೊರಗಜ್ಜ ಸನ್ನಿಧಿಗೆ ಭೇಟಿ, ಸಂಜೆ ಪಕ್ಷ ಕಚೇರಿಯಲ್ಲಿ ಸಭೆ, ಗುರುಪುರ ಮಸೀದಿಗೆ ಭೇಟಿ.
ಶೋಭಾ ಕರಂದ್ಲಾಜೆ: ಉಡುಪಿ ಕೋರ್ಟ್ ಹಿಂಬದಿ ರಸ್ತೆಯಲ್ಲಿರುವ ಬಿಜೆಪಿ ನಾಯಕ ಕೆ. ಉದಯಕುಮಾರ ಶೆಟ್ಟಿಯವರ ಸಂಸ್ಥೆಯ ನೂತನ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿ, ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆಯವರ ಮನೆಗೆ ಭೇಟಿ. ಬಂಟಕಲ್ಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ. ಸಂಜೆ ಬಿಜೆಪಿ ಕಚೇರಿಯಲ್ಲಿ ನಡೆದ ಮತ ಎಣಿಕೆ ಏಜೆಂಟರ ಸಭೆಯಲ್ಲಿ ಭಾಗಿ.
ಪ್ರಮೋದ್ ಮಧ್ವರಾಜ್: ಬೆಳಗ್ಗೆ ಮನೆಯಲ್ಲಿ ಪೂಜೆ, ಮಧ್ಯಾಹ್ನ ಅತಿಥಿಗಳೊಂದಿಗೆ ಚರ್ಚೆ. ಸಂಜೆ ಮಣಿಪಾಲದ ರಾಯಲ್ ಎಂಬೆಸಿ ಕಚೇರಿಯಲ್ಲಿ ಆಂತರಿಕ ಸಭೆ. ಬಳಿಕ ಕಾಂಗ್ರೆಸ್ ಕಚೇರಿಯಲ್ಲಿ ಮತ ಎಣಿಕೆ ಏಜೆಂಟರ ಸಭೆಯಲ್ಲಿ ಭಾಗಿ. ಪ್ರಮೋದ್ ಮಧ್ವರಾಜ್ ಅವರು ಬುಧವಾರ ಬೆಳಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ‘ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ಹೋಪ್ ಫಾರ್ ದಿ ಬೆಸ್ಟ್ ಆ್ಯಂಡ್ ಪ್ರಿಪೇರ್ ಫಾರ್ ದಿ ವರ್ಸ್ಡ್’ ಎಂದು ಬರೆದುಕೊಂಡಿದ್ದರು.