Advertisement

ಮೋದಿ ಕಡಿದು ಕಟ್ಟಿದ್ದೇನು?

05:24 AM Mar 08, 2019 | Team Udayavani |

ಕಲಬುರಗಿ: ಹಿಂದಿನ ಯುಪಿಎ ಸರ್ಕಾರದ ಯೋಜನೆಗಳ ಹೆಸರುಗಳನ್ನೇ ಬದಲಾಯಿಸಿ ತಮ್ಮದೆಂದು ಹೇಳುತ್ತಾ ಪ್ರಧಾನಿ ನರೇಂದ್ರ ಮೋದಿ ಜನರನ್ನು ನಂಬಿಸುತ್ತಿದ್ದಾರೆ ಎಂದು ಟೀಕಿಸಿದ ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ, ಐದು ವರ್ಷಗಳ ಕಾಲ ಏನು ಕಡಿದು ಕಟ್ಟಿದ್ದಾರೆ ಎಂದು ಪ್ರಶ್ನಿಸಿದರು.

Advertisement

ಗುರುವಾರ ನಗರದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದ ಅವರು, ದೊಡ್ಡ ಶ್ರೀಮಂತರ 3.75 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿರುವುದು, ರೈತರ ಸಾಲ ಮನ್ನಾಕ್ಕೆ ಹಿಂದೇಟು ಹಾಕಿರುವುದು, ಸರ್ಜಿಕಲ್‌ ಸ್ಟ್ರೈಕ್‌ ಮೂಲಕ ದೇಶದ ಜನತೆ ಒಲವು ಗಳಿಸಲು ಮುಂದಾಗಿರುವುದೇ ಇವರ ಸಾಧನೆಯಾಗಿದೆ. ಇದಕ್ಕೆ ಜನತೆ ಕಿವಿಗೊಡಬಾರದು ಎಂದರು.

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ರೈತರಿಗೆ ತಿಂಗಳಿಗೆ 500 ರೂ. ನೀಡಲಾಗುತ್ತಿದೆ. ವಿಧವಾ ವೇತನ, ವೃದ್ಧಾಪ್ಯ ವೇತನವನ್ನೇ ಸಾವಿರ ರೂ. ನೀಡಲಾಗುತ್ತದೆ. ಅದಕ್ಕಿಂತ ರೈತರಿಗೆ ಇದು ಕಡಿಮೆಯಾಗಿದೆ. ಆದರೂ ದೊಡ್ಡದಾಗಿ ಕಡಿದು ಹಾಕಿದ್ದೇನೆ ಎಂಬುದಾಗಿ ಹಾಗೂ ಸರ್ಜಿಕಲ್‌ ಸ್ಟ್ರೈಕ್‌ ನ್ನು ತಾನೇ ಮಾಡಿದ್ದೇನೆ ಎನ್ನುವಂತೆ ಬಿಂಬಿಸುತ್ತಿರುವ ಮತರಾಜಕಾರಣ ನಿಜಕ್ಕೂ ಯಾವುದೇ ಕಾರಣಕ್ಕೂ ಸಲ್ಲದು ಎಂದು ವಾಗ್ಧಾಳಿ ನಡೆಸಿದರು.

ಭಾವನಾತ್ಮಕವಾಗಿ ಮಾತನಾಡಿದರೆ ಸಾಲದು. ಮಾತಿಗೂ-ಕೃತಿಗೂ ಸಂಬಂಧವಿರಬೇಕು. ಆದರೆ ತಾವು ಸಂಸದರಾಗಿ ಯಾವ ಕಾರ್ಯಗಳನ್ನು ಮಾಡಿದ್ದೇವೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆಂದು ಹೇಳಿ ಕೇವಲ 27 ಲಕ್ಷ ಹುದ್ದೆಗಳನ್ನು ನೀಡಿ ಮಗದೊಂದು ಕೈಯಿಂದ 38 ಲಕ್ಷ ಹುದ್ದೆಗಳನ್ನು ಕಡಿತಗೊಳಿಸಿದ್ದಾರೆ. ಇದೇ ಮೋದಿ ಸಾಧನೆಯಾಗಿದೆ ಎಂದು ಟೀಕಿಸಿದರು. 

ಈ ಹಿಂದಿನ ಯುಪಿಎ ಸರ್ಕಾರದಲ್ಲಿ ಉದ್ದು ಮತ್ತು ಹೆಸರು ಬೇಳೆಗೆ ನೀಡುತ್ತಿದ್ದ ಕನಿಷ್ಠ ಬೆಂಬಲ ಬೆಲೆ ರೀತಿಯಲ್ಲಿ ತೊಗರಿಗೂ ಬೆಂಬಲ ಬೆಲೆ ಪ್ರಾರಂಭಿಸಲಾಗಿತ್ತು. ತೊಗರಿ ಮಂಡಳಿ ಪ್ರಾರಂಭಿಸುವ ಮೂಲಕ ರೈತರ ಅನುಕೂಲಕ್ಕಾಗಿ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಎಲ್ಲರೂ ಒಗ್ಗೂಡಿ ಸಂವಿಧಾನ ಮತ್ತು ಪ್ರಜಾತಂತ್ರದ ಉಳುವಿಗಾಗಿ ಹೋರಾಡಬೇಕಾಗಿದೆ.

Advertisement

ಪ್ರಜಾಪ್ರಭುತ್ವದಿಂದಲೇ ಎಲ್ಲರಿಗೂ ಸಮಾನ ಅವಕಾಶ ದೊರೆತ್ತಿದ್ದು, ಬಡತನ ಕುಟುಂಬದವರೂ ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಿದೆ. ಕಲಬುರಗಿ ಜಿಲ್ಲೆಯ ಮತದಾರರ ಆಶೀರ್ವಾದ, ಬೆಂಬಲದಿಂದ ಲೋಕಸಭೆ ಸದಸ್ಯನಾಗಿ, ಕೇಂದ್ರದಲ್ಲಿ ಸಚಿವನಾಗಿ ಒಳ್ಳೆಯ ಕೆಲಸ ಮಾಡಿದ್ದೇನೆ. ಕಲಬುರಗಿ ಜಿಲ್ಲೆಯ ಮತದಾರರ ಆಶೀರ್ವಾದ ಒಳ್ಳೆಯದಕ್ಕೆ ಬಳಸಿಕೊಂಡಿದ್ದೇನೆ. ಎಂದೂ ಜನರ ಆಶೀರ್ವಾದವನ್ನು ದುರುಪಯೋಗ ಮಾಡಿಕೊಂಡಿಲ್ಲ ಹಾಗೂ ಯಾರಿಗೂ ಸುಳ್ಳು ಹೇಳಿ ಮೋಸ ಮಾಡಿಲ್ಲ ಎಂದು ಹೇಳಿದರು.

ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಪ್ರಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ, ಮಹಾಪೌರರಾದ ಮಲ್ಲಮ್ಮ ಎಸ್‌. ವಳಕೇರಿ, ಮುಖಂಡರಾದ ಜಗದೇವ ಗುತ್ತೇದಾರ, ಎಕ್ಬಾಲ್‌ ಅಹ್ಮದ್‌ ಸರಡಗಿ, ಭೀಮಣ್ಣ ಸಾಲಿ, ಮಾರುತಿರಾವ ಡಿ.ಮಾಲೆ, ಉಪ ಮೇಯರ್‌ ಆಲಿಯಾ ಶೀರಿನ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣ ಹಣಮಂತರಾಯ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಶರಣಕುಮಾರ ಮೋದಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ರಾಜಾ ಪಿ., ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ರಾಗಪ್ರಿಯಾ, ಪಾಲಿಕೆ ಆಯುಕ್ತ ಬಿ. ಫೌಜಿಯಾ ತರನ್ನುಮ್‌, ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಪಾಲಿಕೆ, ಜಿಲ್ಲಾ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಹಾಗೂ ಗಣ್ಯರು ಪಾಲ್ಗೊಂಡಿದ್ದರು. 

ನೂರು ಜನರ ಕುತಂತ್ರ ಎದುರಿಸಬಲ್ಲೆ ನನ್ನ ಮೇಲೂ ಹಲವರು ಕಣ್ಣಿಟ್ಟಿದ್ದಾರೆ. ಸೋಲಿಸಬೇಕೆಂಬ ನಿಟ್ಟಿನಲ್ಲಿ ಮಗ್ನರಾಗಿದ್ದಾರೆ. ಮುಂದೆ ಏನ್‌ ಕುತಂತ್ರ ಮಾಡ್ತಾರೋ ನೋಡೋಣ. ಕಲಬುರಗಿಗೆ ಒಬ್ಬೊಬ್ಬರಾಗಿ ಬರ್ತಾರೆ. ಆದರೆ ಕಲಬುರಗಿ ಜಿಲ್ಲೆಯ ಜನತೆ ಆಶೀರ್ವಾದ ಇರುವವರೆಗೆ ಇಂತಹ 100 ಜನರ ಕುತಂತ್ರ ಎದುರಿಸಬಲ್ಲೆ. 10 ವರ್ಷ ಸಂಸದನಾಗಿ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಏನಾದರೂ ನ್ಯೂನತೆಗಳಿದ್ದರೆ ತೋರಿಸಿ.
 ಡಾ| ಮಲ್ಲಿಕಾರ್ಜುನ ಖರ್ಗೆ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next