Advertisement
“ಊಟವಾಯ್ತಾ?’ ಕೇಳಿದ್ದರು ಪರಿಚಿತ ಗಂಡಸೊಬ್ಬರು.“ಆಗಿದೆ’ ಎಂದುತ್ತರಿಸಿದೆ.
“ಏನಡುಗೆ ಮಾಡಿದ್ರಿ?’ ವಿಚಾರಿಸಿದರು.
ಅಚಾನಕ್ ಪಕ್ಕದಲ್ಲಿದ್ದ ಮಹಿಳೆಯರತ್ತ ನನ್ನ ಗಮನ ಹರಿಯಿತು. ಅವರು ಕಷ್ಟದಿಂದ ನಗುವನ್ನು ತಡೆ ಹಿಡಿಯಲು ಪ್ರಯತ್ನಿಸುತ್ತಿದ್ದರು.
“ಸೈಡ್ ಡಿಶ್ ಏನೂ ಮಾಡಿಲ್ವಾ?’
ಕೊನೆಗಣ್ಣಿನಲ್ಲಿ ಅತ್ತ ನೋಡಿದರೆ, ಗೆಳತಿಯರ ಮುಖದಲ್ಲಿ ಕೀಟಲೆಯ ಛಾಯೆ.
“ಇತ್ತು. ಕಾಡುಮಾವಿನ ಹಣ್ಣಿನ ಪಲ್ಯ’…
“ಅಪರೂಪದ ವ್ಯಂಜನ. ಚೆನ್ನಾಗಿರ್ತದಲ್ವಾ ಅನ್ನದ ಜೊತೆ? ರೋಟಿಗೂ ಹೊಂದಿಕೊಳ್ತದೆ. ತುಂಬಾ ಟೇಸ್ಟಿ…ಸರಿ, ಬರ್ತೀನಮ್ಮ’ ಅವರು ಅತ್ತ ಸರಿಯುವುದೇ ತಡ; ಮಹಿಳಾ ಗುಂಪಿನಿಂದ ನಗೆಬುಗ್ಗೆ ಸಿಡಿಯಿತು. ನಾನು ಮಿಕಿ ಮಿಕಿ ನೋಡಿದೆ. ಕಷ್ಟದಿಂದ ನಗೆಯನ್ನು ನಿಯಂತ್ರಿಸುತ್ತ ಹೇಳಿದರು- “ಒಳ್ಳೆ ಹೆಂಗಸರು ವಿಚಾರಿಸೋ ಹಾಗೆ, ಏನಡುಗೆ ಅಂತ ಕೇಳ್ತಾನಲ್ಲ ಆತ. ಅದೇನೇ ಇದ್ರೂ ಈತನಿಗೆ ವರದಿ ಒಪ್ಪಿಸಬೇಕಾ? ನಾವು ಭೇಟಿಯಾದಾಗ ಅಡುಗೆ ಏನು ಮಾಡಿದ್ರಿ ಅಂತ ವಿಚಾರಿಸೋದು ಸಹಜ. ಈವಯ್ಯನಿಗ್ಯಾಕೆ ಅದೆಲ್ಲ? ಅವರು ಹಾಗೆ ಕೇಳುವಾಗ ಕಷ್ಟದಿಂದಲೇ ನಗೆ ತಡ್ಕೊಂಡೆ. ಇನ್ನೊಂದು ನಿಮಿಷ ತಡೆದಿದ್ರೆ “ಅಡುಗೆ ಏನು ಮಾಡಿದ್ರೆ ನಿಂಗೇನಯ್ನಾ?’ ಅಂತ ಕೇಳ್ಳೋಣಾಂತಿ¨ªೆ’ ಅಂದರು.
Related Articles
Advertisement
“ಅಲ್ವೇ, ಆತ ಗಂಡಸು. ಹೆಂಗಸರು ಪರಸ್ಪರ ಭೇೆಟಿಯಾದಾಗ ವಿಚಾರಿಸೋ ಹಂಗೆ, ಅಡುಗೆ ಬಗ್ಗೆ ಕೇಳ್ತಾರಲ್ಲ?’“ಅದರಲ್ಲೇನು, ನಾವು ಪರಿಚಿತರು. ಹಾಗೆ ನನ್ನ ಬಳಿ ವಿಚಾರಿಸಿದ್ರು’
“ಒಳ್ಳೇ ಹೆಂಗಸರ ಹಾಗೇ ಕೇಳ್ಳೋದಾ? ಅದೆಂಥಾದ್ದು, ಆವಯ್ಯನಿಗ್ಯಾಕೆ ಇಂಟರೆಸ್ಟು?’
“ತಪ್ಪೇನಿಲ್ಲವಲ್ಲ’…
“ಊಹೂಂ, ಹೀಗೆಲ್ಲಾ ಕೇಳ್ಳೋದು ಚೆನ್ನಾಗಿರಲ್ಲ. ಅಡುಗೆ ಏನು ಅಂತ ಹೆಂಗಸರು ಪರಸ್ಪರ ವಿಚಾರಿಸಿದ್ರೇ ಚಂದ. ಅದು ನಮ್ಮ ಡಿಪಾರ್ಟ್‌ಮೆಂಟ್. ಅಷ್ಟೇನಾ? ಒಂದೇ ವ್ಯಂಜನಾನಾ? ಸೈಡ್ ಡಿಶ್ ಮಾಡಿಲ್ವಾ ಅಂತಲೂ ತನಿಖೆ ಮಾಡ್ತಾನೆ ಮನೆ ಯಜಮಾನ್ರೆ ಹಾಗೆ…’ ಅವರು ಮೂದಲಿಸಿದರು. “ಸಹಜವಾಗಿ ಕೇಳಿದ್ದಷ್ಟೇ. ಅದರಲ್ಲಿ ತಪ್ಪೇನಿದೆ? ನಾವು ನಾವು ಕೇಳಲ್ವಾ? ತಿಂಡಿ ಏನ್ಮಾಡಿದ್ರಿ; ರಾತ್ರೆಗೆ ಯಜಮಾನ್ರಿಗೆ ರೊಟ್ಟಿನಾ? ಉಪ್ಪಿಟ್ಟು ಉದುರುದುರಾಗಲು ಏನು ಹಾಕಬೇಕು ಅಂತೆಲ್ಲಾ ಕೇಳಿ ತಿಳ್ಕೊಳ್ತೀವಲ್ಲ…’ ನಾನು ವಾದಿಸಿದೆ. “ನಿಮಗೆ ನಾವು ಹೇಳಿದ್ದು ಅರ್ಥವಾಗಿಲ್ಲ. ನಾವು ನಾವು ಅಡಿಗೆ, ಊಟ, ಸಾರು, ಪಲ್ಯ ಏನು, ಹ್ಯಾಗೆ ಮಾಡಿದ್ರಿ, ಮಸಾಲೆ ಏನು ಹಾಕಬೇಕು ಅಂತ ಮಾತಾಡ್ಕೊಳ್ಳಬಹುದು. ಗಂಡಸರು ಹೀಗೆಲ್ಲ ಮಾತಾಡುವುದನ್ನು ನಾವೆಲ್ಲೂ ಕೇಳಿಲ್ಲ… ಆ ಗಂಡಸು ಬರೇ ಹೆಣ್ಣಪ್ಪಿ ಇರಬೇಕು…’ ಅವರ ಮಾತು ಮುಂದುವರಿಯಿತು. ಅವರೊಂದಿಗೆ ವಾದಿಸಲು ನನ್ನ ತಾಳ್ಮೆ ಮುಗಿದುಹೋಗಿತ್ತು. ಆ ಹಿರಿಯರು ಗೌರವಾನ್ವಿತರು. ನನ್ನ ಬಳಿ ಮಾತಾಡುವಾಗ ಸಹಜವಾಗಿ ವಿಚಾರಿಸಿದ್ದರು. ಅದರಲ್ಲಿ ನನಗೆ ತಪ್ಪೇನೂ ಕಾಣಲಿಲ್ಲ. ಅಷ್ಟಕ್ಕೂ, ಅಡುಗೆ ಏನು ಅಂತ ನಮ್ಮ ನಮ್ಮ ಮನೆಯ ಗಂಡಸರು ವಿಚಾರಿಸುವುದಿಲ್ವಾ? ಅಡುಗೆಯಲ್ಲಿ ಸಹಾಯ ಮಾಡಲ್ವಾ? ರಜಾದಿನವಂತೂ ಇವತ್ತೇನು ಸ್ಪೆಷಲ್ ಅಂತ ಮುಂಚೇನೇ ಖಾತರಿ ಪಡಿಸ್ಕೊಳ್ತಾರೆ. ತಿಂಗಳ ರಜಾ ಎಂದು ಮೂರು ದಿನ ಪ್ರತ್ಯೇಕವಾಗಿ ಹೆಣ್ಮಕ್ಕಳು ಕೂರಬೇಕಾದಾಗ, ಈಗಲೂ ಕೆಲವು ಸಂಪ್ರದಾಯಸ್ಥ ಮನೆಗಳಲ್ಲಿ ಗಂಡಸರದ್ದೇ ಅಡುಗೆ. ಅಂಥ ದಿನಗಳಲ್ಲಿ ಅವರು, “ಏನಡುಗೆ ಮಾಡ್ಲೆ? ಸೂಪರ್ ಆಗಿ ಮಾಡ್ತೀನಿ. ಏನು ನಂಗೆ ತಿಳಿದಿಲ್ಲ ಅಂದ್ಕೊಂಡ್ಯಾ? ಒಂದ್ಸಾರಿ ಉಂಡರೆ ಮೂರು ಮೂರು ದಿನ ಕೈಯಲ್ಲಿ ಪರಿಮಳ ಇರುತ್ತೆ. ಹಾಗ್ಮಾಡಿ ಬಡಿಸ್ತೇನೆ ನೋಡು…’ ಅಂತೆಲ್ಲಾ ಹೇಳುತ್ತಾ ಅಡುಗೆಮನೆಗೆ ನುಗ್ಗಿ, ಕೈಗೆ ಸಿಕ್ಕಿದ ತರಕಾರಿ ಕತ್ತರಿಸಿ ಹಾಕಿ, ಪ್ರೀತಿಯಿಂದ ನಳಪಾಕ ಮಾಡಿ ಬಡಿಸುವವರಿದ್ದಾರೆ. ಹೆಣ್ಮಕ್ಕಳು ಹಾಯಾಗಿ ಕೂತು ಅವರಿಷ್ಟದ ಅಡುಗೆ, ತಿಂಡಿ ಹೇಳಿ ಹೇಳಿ ಮಾಡಿಸ್ಕೊಳ್ಳುವುದು ಸುಳ್ಳೇ? ನಮ್ಮಲ್ಲಿಗೆ ಮಧ್ಯಾಹ್ನ ಊಟದ ಸಮಯಕ್ಕೆ ಅನಿರೀಕ್ಷಿತವಾಗಿ ಅತಿಥಿಗಳಾಗಿ ಬಂದಾಗ, ಮೊದಲು ಕೇಳುವ ಪ್ರಶ್ನೆ- “ಏನಡುಗೆ ಮಾಡಿದ್ದೀರಿ’ ಎಂದೇ. ಮಾವಿನಮಿಡಿ ಉಪ್ಪಿನಕಾಯಿ ಚಪ್ಪರಿಸುತ್ತ, “ಅದು ಹೇಗೆ ಯಾವ ಪ್ರಿಸರ್ವೇಟಿವ್ ಇಲ್ಲದೆ ವರ್ಷ, ಎರಡು ವರ್ಷ ಘಮಘಮಿಸ್ತಾ ಇರ್ತದೆ ಇದು? ಸ್ವಲ್ಪ ನಮಗೂ ಹೇಳ್ಕೊಡಿ ಇದರ ಗುಟ್ಟು’ ಅಂತ ಕೇಳಿ ತಿಳಿದುಕೊಳ್ತಾರೆ. ಕೆಲವೊಮ್ಮೆ, ತಮಗೆ ತಿಳಿಯದ ರಸಂ, ಪಲ್ಯ, ಸಾರು, ಕರಾವಳಿಯ ಕೊರೆಲ್ ಸವಿಯುವಾಗ “ಹೇಗೆ ಮಾಡ್ತೀರಿ? ಸ್ವಲ್ಪ ನಮಗೂ ಹೇಳಿಕೊಡಿ. ನಮ್ಮಲ್ಲೂ ಮಾಡ್ತೀವಿ’ ಅಂತಾರೆ. ಕೇಳಿದ ಅವರಿಗಾಗಲೀ, ಹೇಳಿದ ನಮಗಾಗಲೀ ಅದು ಹಾಸ್ಯಾಸ್ಪದ ಎಂಬ ಭಾವ ಯಾವತ್ತೂ ಬರಲಿಲ್ಲ. ಏನಡುಗೆ? ತಿಂಡಿ ಏನು ಮಾಡಿದ್ರಿ? ಎಂದು ಪರಿಚಿತ ಮಹಿಳೆಯರ ಬಳಿ ಸಹಜವಾಗಿ ವಿಚಾರಿಸುವ ಗಂಡಸರನ್ನು ನಗೆಪಾಟಲಿಗೀಡು ಮಾಡುವುದು ಒಪ್ಪತಕ್ಕ ಮಾತೇ? ತಮ್ಮ ಮನೆಯ ಗಂಡಸರು ಅಡುಗೆಮನೆಗೆ ಕಾಲಿಡುವುದೇ ಇಲ್ಲ, ಬೇಳೆ ಯಾವುದು, ಕಾಳು ಯಾವುದು ಅಂತ ಗೊತ್ತೇ ಇಲ್ಲ ಎಂದು ಸಿಡಿಮಿಡಿ ಮಾಡುವ ಸ್ತ್ರೀಯರು, ಅನ್ಯರೊಬ್ಬರು ಆತ್ಮೀಯತೆಯಿಂದ ವಿಚಾರಿಸಿದರೆ ಮುಖ ಮುಖ ನೋಡಿ ಅಪಹಾಸ್ಯದ ನಗು ಬೀರುವುದು ಸರಿಯೇ? -ಕೃಷ್ಣವೇಣಿ ಕಿದೂರು