ಕೆಲವೊಮ್ಮೆ ಆ್ಯಂಬುಲೆನ್ಸ್‌ಯಾ ಆರೋಗ್ಯ ರಕ್ಷಕ ಸಿಬಂದಿ ಸ್ಥಳಕ್ಕೆ ತಲುಪುವಲ್ಲಿ ವಿಳಂಬವಾಗಬಹುದು. ನಗರ ಪ್ರದೇಶದಿಂದ ದೂರದಲ್ಲಿ ಅಪಘಾತವಾದಾಗ ಈ ರೀತಿಯ ಸಾಧ್ಯತೆಯಿರುತ್ತದೆ. ಆ್ಯಂಬುಲೆನ್ಸ್ ಬರುವಲ್ಲಿ ವಿಳಂಬವಾಗುವ ಸಾಧ್ಯತೆ ಇದ್ದಾಗ ಘಟನೆಯ ಸ್ಥಳದಲ್ಲಿರುವ ಸಾರ್ವಜನಿಕರಲ್ಲಿ ಅಪಘಾತದ ಗಾಯಾಳುಗಳ ಆರೈಕೆಯ ಬಗ್ಗೆ ಪ್ರಾಥಮಿಕ ಮಾಹಿತಿ ಇದ್ದವರು ಪ್ರಥಮ ಚಿಕಿತ್ಸೆಯನ್ನು ಈ ಕೆಳಗಿನಂತೆ ಮಾಡಬಹುದು.
Advertisement
ಚ) ಬಿದ್ದಿರುವ ಗಾಯಾಳುವನ್ನು ಅಪಾಯಕರ ಸ್ಥಳದಿಂದ (ರಸ್ತೆ ಮಧ್ಯ ಇತ್ಯಾದಿ) ಒಂದು ಬದಿಗೆ ಸರಿಸುವುದರಿಂದ ಇನ್ನೊಂದು ಅಪಘಾತವಾಗುವುದು ತಪ್ಪುವುದಲ್ಲದೆ, ರಸ್ತೆ ಸಂಚಾರವೂ ಸುಗಮವಾಗುತ್ತದೆ. ಇಲ್ಲದಿದ್ದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಆ್ಯಂಬುಲೆನ್ಸ್ ತಲುಪಲು ಇನ್ನೂ ತೊಂದರೆಯಾಗುತ್ತದೆ. ಆದರೆ ಗಾಯಾಳುವನ್ನು ಬದಿಗೆ ಸರಿಸುವಾಗ ಬೆನ್ನು ಮೂಳೆಗೆ ಅಥವಾ ಕುತ್ತಿಗೆಯ ಹಿಂಭಾಗಕ್ಕೆ ಏಟು ಬಿದ್ದಿಲ್ಲ ಎಂಬುದನ್ನು ದೃಢಪಡಿಸಿಕೊಳ್ಳಬೇಕು. ಅಂತಹ ಸಂಭಾವ್ಯತೆ ಇದ್ದಲ್ಲಿ ಆಯಾ ಮೂಳೆಗಳು ಅಲುಗಾಡದಂತೆ ಬೆನ್ನು ಮೂಳೆ ನೆಟ್ಟಗೆ ಇರುವಂತೆಯೇ ಗಾಯಾಳುವನ್ನು ಸರಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ಬೆನ್ನು ಮೂಳೆಯ ಕೇಂದ್ರದಲ್ಲಿರುವ ಬೆನ್ನು ಹುರಿ ಘಾಸಿಗೊಳ್ಳಬಹುದು. ಹಾಗೆಯೇ ಕೈಕಾಲಿನ ಮೂಳೆಗಳು ಮುರಿದಿದ್ದರೂ ಹೆಚ್ಚಿನ ಚಾಲನೆಯಿಂದ ಆಂತರಿಕ ರಕ್ತಸ್ರಾವ ಹೆಚ್ಚಾಗಬಹುದು. ಪ್ರಜ್ಞೆ ಇರುವ ಗಾಯಾಳು ಎಲ್ಲೆಲ್ಲಿ ಏಟು ಬಿದ್ದಿದೆ ಎಂಬುದನ್ನು ತಿಳಿಯಲು ಸಹಕರಿಸಬಹುದು. ಏಕೆಂದರೆ ಬಾಹ್ಯ ಗಾಯಗಳಿಲ್ಲದೆ ಬರಿಯ ಮೂಗೇಟಿನಿಂದ ಒಳಗಿನ ಮೂಳೆ ಮುರಿದಿದ್ದರೆ ವೈದ್ಯರಲ್ಲದಿರುವವರಿಗೆ ಅದನ್ನು ಕಂಡುಹಿಡಿಯುವುದು ಕಷ್ಟಸಾಧ್ಯ. ಆದ್ದರಿಂದ ಮೇಲೆ ವಿವರಿಸಿದ ಮಾಹಿತಿ ಇಲ್ಲದೇ ಇದು ಏನು ಮಾಡಬೇಕೆಂದು ತಿಳಿಯದಾದಾಗ ಸುಮ್ಮನೇ ಇರುವುದೇ ಲೇಸು, ಪ್ರಜ್ಞೆ ಇದ್ದು ಕೈಕಾಲು ಅಲುಗಾಡಿಸಲು ಸಾಧ್ಯವಿರುವ ಗಾಯಾಳುವಿಗೆ ತಾನಾಗಿ ಮೆಲ್ಲನೆ ಸರಿದು ರಸ್ತೆಯ ಬದಿಗೆ ಬರುವಂತೆ ಸೂಚಿಸಬಹುದು.ಆರೋಗ್ಯ ರಕ್ಷಕ ಸಿಬಂದಿ ಸ್ಥಳಕ್ಕೆ ತಲುಪಿದಾಗ ರೋಗಿಯನ್ನು ಆ್ಯಂಬುಲೆನ್ಸ್ ಒಳಕ್ಕೆ ಸಾಗಿಸಲು “ಸ್ಪೈನ್ ಬೋರ್ಡ್ (Spine board) ಎಂಬ ಹಲಗೆಯಂತಹ ಸಲಕರಣೆಯನ್ನು ಬಳಸುತ್ತಾರೆ.
Related Articles
Advertisement
ಒಟ್ಟಾರೆ ಹೇಳುವುದಾದರೆ ಮೇಲೆ ವಿವರಿಸಿದ ಕೆಲವು ಸರಳ ವಿಧಾನ/ಕ್ರಿಯೆಗಳಿಂದ ಎಷ್ಟೋ ಜೀವಗಳನ್ನು ಉಳಿಸಲು ಸಾಧ್ಯ. ಅಪಘಾತವಾದ 1 ಗಂಟೆಯ ಒಳಗೆ (golden hour) ವ್ಯಕ್ತಿ ಆಸ್ಪತ್ರೆಗೆ ಸೇರಿದರೆ ಅಪಘಾತದಿಂದ ಮರಣ ಹೊಂದುವವರ ಸಂಖ್ಯೆಯನ್ನು ಶೇ. 50 ಕಡಿಮೆ ಮಾಡಬಹುದು ಎಂದು ಅಂದಾಜಿಸಲಾಗಿದೆ. ನಮ್ಮಲ್ಲಿ ಸಹೃದಯಿ ಸಾರ್ವಜನಿಕರಿಗೇನೂ ಕೊರತೆಯಿಲ್ಲ. ಸಹಾಯ ಮಾಡಲು ಬಯಸುವವರಿಗೆ ಕಾನೂನಿನ ಅಭಯ, ಉಪಯುಕ್ತ ಮಾಹಿತಿ ಮತ್ತು ಸೂಕ್ತ ತರಬೇತಿ (ಸಾಧ್ಯವಿದ್ದಲ್ಲಿ) ದೊರೆತದ್ದೇ ಆದರೆ ಅಪಘಾತದ ಗಾಯಾಳುಗಳು ರಸ್ತೆ ಬದಿಯಲ್ಲಿಯೇ ದುರ್ಮರಣಕ್ಕೀಡಾಗುವುದನ್ನು ತಪ್ಪಿಸಬಹುದು. ಇತ್ತೀಚೆಗೆ ಇಂತಹ ಸಹೃದಯಿ ವ್ಯಕ್ತಿಗಳಿಗೆ (good Samaritan) ಕಾನೂನು ಸಂಪೂರ್ಣ ರಕ್ಷಣೆ ನೀಡಿದ್ದು ಅವರನ್ನು ಕೋರ್ಟ್, ಕಚೇರಿಗಳಿಗೆ ಕರೆಯುವಂತಿಲ್ಲ ಎಂದು ನಿರ್ದೇಶಿಸಿದೆ.
ರಸ್ತೆ ಅಪಘಾತದ ಗಾಯಾಳುಗಳ ಶುಶ್ರೂಷೆಯಲ್ಲಿ ಗಾಯಾಳು ದಾಖಲಾಗುವ ಆಸ್ಪತ್ರೆ ಎಷ್ಟು ಸುಸಜ್ಜಿತ ಎನ್ನುವುದಕ್ಕಿಂತಲೂ ಆತ ಎಷ್ಟು ಬೇಗ ಆಸ್ಪತ್ರೆಗೆ ಸೇರಿಸಲ್ಪಡುತ್ತಾನೆ ಎಂಬುದೇ ಮುಖ್ಯ. ಆಸ್ಪತ್ರೆ ತಲುಪುವವರೆಗೆ ಗಾಯಾಳುವಿನ ಜೀವ ಸಂರಕ್ಷಣೆ ನಮ್ಮಲ್ಲಿ ನಿರ್ಲಕ್ಷ್ಯಕ್ಕೊಳ ಗಾಗಿರುವ ಅಂಶ. ಈ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಲೇಖನ ಒಂದು ಸಣ್ಣ ಪ್ರಯತ್ನ.