Advertisement

ಶಾಸಕರ ಅನುದಾನದಲ್ಲಿ ಕೊರೆಸಿದ ಕೊಳವೆಬಾವಿಗಳೆಷ್ಟು?

11:24 AM Jul 20, 2017 | Team Udayavani |

ಚಿತ್ರದುರ್ಗ: ನಗರದ ವಿವಿಧ ಬಡಾವಣೆಗಳಲ್ಲಿ 8.5 ಕೋಟಿ ರೂ. ವೆಚ್ಚದಲ್ಲಿ ಕೊಳವೆಬಾವಿ ಕೊರೆಸಿ ಜನತೆಗೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂಬ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿಯವರು ಹೇಳಿಕೆ ನೀಡುತ್ತಿದ್ದಾರೆ. ಆ ಕೊಳವೆಬಾವಿಗಳು ಎಲ್ಲಿವೆ ಎಂಬ ಮಾಹಿತಿ ನೀಡಬೇಕು. ಇಲ್ಲವೇ ಅವೆಲ್ಲವನ್ನೂ ವಶಕ್ಕೆ ಪಡೆದು ಜನಸಾಮಾನ್ಯರಿಗೆ ನೀರು ಪೂರೈಕೆ ಮಾಡಬೇಕು ಎಂದು ನಗರಸಭೆ
ಸದಸ್ಯ ಬಿ. ಕಾಂತರಾಜ್‌ ಪಟ್ಟು ಹಿಡಿದರು.

Advertisement

ನಗರದ ಹಳೆ ನಗರಸಭೆ ಸಭಾಂಗಣದಲ್ಲಿ ಪ್ರಭಾರಿ ಅಧ್ಯಕ್ಷ ಕೆ. ಮಲ್ಲೇಶಪ್ಪ ಅಧ್ಯಕ್ಷತೆಯಲ್ಲಿ ನಡೆದ ತುರ್ತುಸಭೆಯಲ್ಲಿ ಅವರು
ಮಾತನಾಡಿದರು. ನಗರದಾದ್ಯಂತ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಶಾಸಕರು ಶ್ರಮಿಸುತ್ತಿರುವುದು ಅಭಿನಂದನೀಯ. ಆದರೆ ಅವರು ತಮ್ಮ ಅನುದಾನದಲ್ಲಿ ಕೊಳವೆಬಾವಿಗಳನ್ನು ಕೊರೆಸಲಾಗಿದೆ ಎಂದು ಹೇಳಿಕೆ ನೀಡುತ್ತಲೇ ಇದ್ದಾರೆ. ನಾನು ಈ ವಿಷಯ ಪ್ರಸ್ತಾಪಿಸಿ ಕಳೆದ ಸಭೆಯಲ್ಲೇ ಮಾಹಿತಿ ಕೇಳಿದ್ದೆ. ಇದುವರೆಗೂ ಪೌರಾಯುಕ್ತರು ಮಾಹಿತಿ ನೀಡಿಲ್ಲ
ಎಂದು ಆಕ್ಷೇಪಿಸಿದರು. ಕೊಳವೆಬಾವಿಗಳ ಲೆಕ್ಕ ಕೊಡಿ ಎಂದು ಶಾಸಕರನ್ನು ಪ್ರಶ್ನಿಸುವ ಅಧಿಕಾರ ನಮಗಿಲ್ಲ. ನಗರಸಭೆಯಿಂದ ವಿದ್ಯುತ್‌ ಸಂಪರ್ಕಕ್ಕೆ ಎನ್‌ ಒಸಿ ನೀಡಬೇಕು. ಆದರೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ
ಕೊಳವೆಬಾವಿ ಕೊರೆಸಿದ ತಕ್ಷಣ ಜನರಿಗೆ ನೀರು ಪೂರೈಸಬೇಕು. ವಿದ್ಯುತ್‌ ಸಂಪರ್ಕ ವಿಚಾರವಾಗಿ ಸಬೂಬು ಹೇಳುವ ಹಾಗಿಲ್ಲ. ಈ ಕುರಿತು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದ್ದರಿಂದ ಎಲ್ಲೆಲ್ಲಿ ಕೊಳವೆಬಾವಿ ಕೊರೆಸಿದ್ದಾರೆ ಎಂಬ ಬಗ್ಗೆ ತಿಳಿದುಕೊಳ್ಳಲು ನಗರಸಭೆ ಅಧಿಕಾರಿಗಳು ಹೋಗಿಲ್ಲ. ಆ ಕೊಳವೆಬಾವಿಗಳಿಂದ ಜನರಿಗೆ ನೀರು ಪೂರೈಸಲಾಗುತ್ತಿದೆ ಎಂದು ಪೌರಾಯುಕ್ತ
ಚಂದ್ರಪ್ಪ ಸ್ಪಷ್ಟಪಡಿಸಿದರು.

ಕಾಂತರಾಜ್‌ ಸೇರಿದಂತೆ ಕೆಲವು ಸದಸ್ಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿ ಕೊಳವೆಬಾವಿಗಳ ಮೇಲೆ ನೀರಗಂಟಿಗಳಿಗೆ ನಿಗಾ
ಇಡುವಂತೆ ತಿಳಿಸಬೇಕು ಎಂದು ಸೂಚಿಸಿದರು. ಸದಸ್ಯರಾದ ಛಾಯಾ ಸುರೇಶ್‌, ಚಂದ್ರಕಲಾ, ಎಂ. ಮಲ್ಲಿಕಾರ್ಜುನ್‌, ಖಾದರ್‌ ಖಾನ್‌ ಮಾತನಾಡಿ, ನಗರದಲ್ಲಿ ಕುಡಿಯವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಈಗಾಗಲೇ ಟ್ಯಾಂಕರ್‌ ಮೂಲಕ ಪೂರೈಸುತ್ತಿದ್ದರೂ ಸಾಕಾಗುತ್ತಿಲ್ಲ. ಪ್ರತಿ ವಾರ್ಡ್‌ಗೂ ಒಂದೊಂದು ಟ್ಯಾಂಕರ್‌ ಒದಗಿಸಬೇಕು ಎಂದು ಒತ್ತಾಯಿಸಿದರು.

ಕೊಳವೆಬಾವಿ ವಶಪಡಿಸಿಕೊಳ್ಳಿ 
ಸಾರ್ವಜನಿಕರ ಸಲುವಾಗಿ ಯಾರೇ ಕೊಳವೆಬಾವಿಗಳನ್ನು ಕೊರೆಸಿದರೂ ನಗರಸಭೆ ಸಿಬ್ಬಂದಿಯೇ ನಿರ್ವಹಣೆ ಮಾಡಬೇಕು. ವಿದ್ಯುತ್‌ ಸಂಪರ್ಕಕ್ಕೆ ಎನ್‌ಒಸಿ ನೀಡಬೇಕು. ನಿರಾಕ್ಷೇಪಣಾ ಪತ್ರ ನೀಡುವಾಗಲಾದರೂ ಎಲ್ಲಿ ಕೊರೆಸಲಾಗಿದೆ ಎಂಬ ಮಾಹಿತಿ
ಅ ಧಿಕಾರಿಗಳಿಗೆ ಸಿಗುವುದಿಲ್ಲವೇ ಎಂದು ಕಾಂತರಾಜ್‌ ಪ್ರಶ್ನಿಸಿದರು. ಎಲ್ಲ ಕೊಳವೆ ಬಾವಿಗಳನ್ನು ಮೊದಲು ವಶಕ್ಕೆ
ಪಡೆದುಕೊಳ್ಳಿ. ಆಗಲಾದರೂ ಲೆಕ್ಕ ಸಿಗುತ್ತದೆ. ನಂತರ ನಮಗೆ ಮಾಹಿತಿ ನೀಡಿ ಎಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next