ಬೀದರ್ : ಕೊಳೆತ ಶವ ಇದ್ದ ಓವರ್ ಹೆಡ್ ಟ್ಯಾಂಕ್ ನಲ್ಲಿನ ನೀರು ಸೇವಿಸಿ ಅನಾರೋಗ್ಯದ ಭೀತಿ ಎದುರಿಸುತ್ತಿದ್ದ ತಾಲೂಕಿನ ಆಣದೂರ ಗ್ರಾಮಕ್ಕೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮತ್ತು ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿ, ಗ್ರಾಮಸ್ಥರಲ್ಲಿ ಧೈರ್ಯ ತುಂಬಿದ್ದಾರೆ.
ಗ್ರಾಮದ ಕ್ರಿಶ್ಚಿಯನ್ ಬಡಾವಣೆಯಲ್ಲಿ ನೀರಿನ ಟ್ಯಾಂಕ್ ನಲ್ಲಿ ಶುಕ್ರವಾರ ಗ್ರಾಮದ ರಾಜಕುಮಾರ ದಾಸ್ ಎಂಬ ಯುವಕನ ಕೊಳೆತ ಶವ ಪತ್ತೆಯಾಗಿತ್ತು. ನೀರಿನಲ್ಲಿ ವಾಸನೆ ಬಂದ ಹಿನ್ನಲೆ ಟ್ಯಾಂಕರ್ ಪರಿಶೀಲಿಸಿದಾಗ ಶವ ಸಿಕ್ಕಿತ್ತು. ಮೂರು ದಿನಗಳ ಕಾಲ ಬಡಾವಣೆಯ ೫೦ಕ್ಕೂ ಹೆಚ್ಚು ಕುಟುಂಬಗಳು ಆ ಟ್ಯಾಂಕರ್‌ನ ನೀರು ಸೇವಿಸಿದ್ದರಿಂದ ಆತಂಕಗೊಂಡಿದ್ದರು. ಎಚ್ಚೆತ್ತ ಆರೋಗ್ಯ ಇಲಾಖೆ ಸ್ಥಳಕ್ಕೆ ಧಾವಿಸಿ, ಪ್ರತಿ ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿ, ಔಷದೋಪಚಾರ ಮಾಡಿತ್ತು. ಯಾವುದೇ ಆತಂಕ ಬೇಡ ಎಂದು ಅಭಯ ನೀಡಿತ್ತು.
ಮುಂಜಾಗ್ರತಾ ಕ್ರಮವಾಗಿ ಗ್ರಾಮದ ಪಂಚಾಯತ ಕಚೇರಿ ಮತ್ತು ಅಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ಕ್ಯಾಂಪ್ ಹಾಕಿದ್ದು, ಯಾರದೇ ಆರೋಗ್ಯದಲ್ಲಿ ಏರುಪೇರಾದರೆ ಚಿಕಿತ್ಸೆಗೆ ವೈದ್ಯರು, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ತುರ್ತು ಚಿಕಿತ್ಸೆಗಾಗಿ ಅಂಬುಲೆನ್ಸ್‌ಗಳು ಸನ್ನದ್ಧ ಸ್ಥಿತಿಯಲ್ಲಿವೆ. ಇನ್ನೂ ಬಡಾವಣೆಯ ಜನರಿಗೆ ಶುದ್ಧ ನೀರಿನ ಕ್ಯಾನ್‌ಗಳ ಮೂಲಕ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಮಾಡಲಾಗಿದೆ.
ಬಡಾವಣೆಯ ಪ್ರತಿ ಮನೆಗಳಿಗೆ ಸಚಿವರು ಮತ್ತು ಶಾಸಕರು ಭೇಟಿ ಕೊಟ್ಟು ಟ್ಯಾಂಕ್ ನೀರು ಕುಡಿದವರ ಆರೋಗ್ಯ ವಿಚಾರಿಸಿ, ಅವರಿಗೆ ಧೈರ್ಯ ತುಂಬಿದ್ದಾರೆ. ಓವರ್ ಹೆಡ್ ಟ್ಯಾಂಕ್ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ಟ್ಯಾಂಕ್ ಪರಿಸರಕ್ಕೆ ಫೆನ್ಸಿಂಗ್ ಅಳವಡಿಸಬೇಕು. ಮೇಲೆ ಟ್ಯಾಂಕ್‌ಗೆ ಮುಚ್ಚಳ ಹಾಕಿ, ಬೀಗ ಹಾಕಬೇಕು. ಎಂಟು ದಿನ ಈ ಟ್ಯಾಂಕ್ ಬಳಕೆ ಮಾಡಬಾರದು. ಟ್ಯಾಂಕ್ ಸಂಪೂರ್ಣವಾಗಿ ವೈಜ್ಞಾನಿಕ ರೀತಿಯಲ್ಲಿ ಶುದ್ಧೀಕರಣ ಮಾಡಬೇಕು. ಕೆಲ ದಿನಗಳ ಕಾಲ ಶುದ್ಧ ಕುಡಿಯುವ ನೀರಿನ ಕ್ಯಾನ್ ಮನೆಗೆ ತಲಪಿಸಬೇಕು. ಪರ್ಯಾಯ ವ್ಯವಸ್ಥೆಗಾಗಿ ಕೂಡಲೇ ಒಂದು ಬೋರ್‌ವೆಲ್ ಕೊರೆಯಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಡಿ-ಕಂಪೋಸ್ ಆಗಿಲ್ಲ….ಭಯ ಬೇಡ
ಎರಡು ದಿನದ ಹಿಂದೆ ಈತ ಮೃತಪಟ್ಟ ಕಾರಣ ಮೃತದೇಹ ಡಿ-ಕಂಪೋಸ್ ಆಗಿಲ್ಲ. ನಲ್ಲಿಗೆ ಬರುವ ನೀರು ವಾಸನೆಯಾದ ಬಗ್ಗೆ ಗ್ರಾಮಸ್ಥರು ಗಮನಕ್ಕೆ ಬರುತ್ತಲೇ ಗ್ರಾಪಂನವರಿಗೆ ತಿಳಿಸಿದ ಕಾರಣ ಬೇಗ ವಿಷಯ ಗೊತ್ತಾಗಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಮೃತದೇಹ ಡಿ-ಕಂಪೋಸ್ ಆಗದಿದ್ದರಿಂದ ನೀರು ಬಳಸಿದ ಜನರು ಸಹ ಭಯಪಡುವ ಅಗತ್ಯವಿಲ್ಲ ಎಂದು ತಜ್ಞ ವೈದ್ಯರು ಹೇಳಿದ್ದಾರೆ. ಸದ್ಯ ಯಾರಲ್ಲಿಯೂ ಆರೋಗ್ಯ ಸಮಸ್ಯೆ ಕಾಣದಿರುವುದು ಸಮಾಧಾನಕರ ಸಂಗತಿ. ನಿಮಗೆ ಏನೇ ಆರೋಗ್ಯ ಸಮಸ್ಯೆ ಆದರೆ ಅದಕ್ಕೆ ಸರ್ಕಾರದಿಂದ ಸೂಕ್ತವಾದ ಚಿಕಿತ್ಸೆ ಕೊಡಿಸಲಾಗುವುದು. ವಿನಾಕಾರಣ ಯಾರೂ ಭಯಭೀತರಾಗದೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಿರಾಳ ತೊಡಗಬೇಕು ಎಂದು ಶಾಸಕರ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದ್ದಾರೆ.