ವೈದ್ಯಕೀಯ ಗರ್ಭಪಾತ ಕಾಯ್ದೆ, 1971 ರಲ್ಲಿ ಜಾರಿಯಾಯಿತು. ಈ ಕಾಯ್ದೆಯ ಮೂಲಕ ಭಾರತದಲ್ಲಿ ಗರ್ಭಪಾತವನ್ನು ಕಾನೂನು ಬದ್ಧಗೊಳಿಸಲಾಯಿತು. ಅದಕ್ಕೂ ಮೊದಲು ಮಹಿಳೆಯರು ಬೇಡವಾದ ಗರ್ಭವನ್ನು ತೆಗೆಸಲು ಅಸುರಕ್ಷಿತವಾಗಿ ಕಾನೂನು ಬಾಹಿರ ಗರ್ಭಪಾತಕ್ಕೆ ಒಳಗಾಗುತ್ತಿದ್ದರು. ಇದರಿಂದ ಸೋಂಕು, ತೀವ್ರ ಅಸ್ವಸ್ಥತೆ ಮತ್ತು ಇತರೆ ಕಾರಣಗಳಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಕೆಲವೊಮ್ಮೆ ಮರಣ ಹೊಂದುತ್ತಿದ್ದರು. ಇದನ್ನು ತಡೆಯಲೆಂದೇ ವೈದ್ಯಕೀಯಗರ್ಭಪಾತ ಕಾಯ್ದೆಯನ್ನು ಜಾರಿಗೆ ತರಲಾಯಿತು. ಅದರಂತೆ-
- ತಾಯಿಯ ಜೀವಕ್ಕೆ ಅಪಾಯವಿದ್ದರೆ,
- ತಾಯಿಯ ದೈಹಿಕ ಅಥವಾ ಮಾನಸಿಕ ಆರೋಗ್ಯಕ್ಕೆ ಧಕ್ಕೆ ಉಂಟಾಗುತ್ತಿದ್ದರೆ,
- ಹುಟ್ಟಿದ ಮಗು ದೈಹಿಕ ಅಥವಾ ಮಾನಸಿಕ ನ್ಯೂನತೆಗಳಿಗೆ ಒಳಗಾಗಿದ್ದರೆ,
- ಆತ್ಯಾಚಾರಕ್ಕೆ ಒಳಗಾಗಿ ಗರ್ಭಣಿಯಾಗಿದ್ದರೆ,
- ಗರ್ಭ ನಿರೋಧಕದ ವಿಫಲತೆಯಿಂದ ಗರ್ಭಿಣಿಯಾದರೆ-ಗರ್ಭಪಾತ ಮಾಡಿಸಬಹುದು ಎಂದು ಸ್ಪಷ್ಟವಾಗಿ ಹೇಳಲಾಯಿತು.
ಹೀಗೊಂದು ಹೊಸ ಕಾಯ್ದೆ ಜಾರಿಯಾದ ನಂತರ ಹಲವು ಬಗೆಯ ಅನುಕೂಲಗಳು ಆದವೆಂದೇ ಹೇಳಬೇಕು. ಈ ಮಾತಿಗೆ ಒಂದೆರಡು ಉದಾಹರಣೆಗಳನ್ನೂ ಕೊಡಬಹುದು.
ನಗರವೊಂದರಲ್ಲಿ ವಾಸವಿದ್ದ ರಿಯಾ ಅವಿವಾಹಿತೆ. ಸ್ನೇಹಿತನೊಂದಿಗೆ ಆಕೆಗೆ ಸಂಬಂಧವಿತ್ತು. ಆಕೆ ಸುರಕ್ಷಿತ ಕ್ರಮಗಳನ್ನು ಅನುಸರಿಸಿದರೂ ದೇಹದಲ್ಲಿ ಏನೋ ಬದಲಾದಂತೆ ಅನ್ನಿಸತೊಡಗಿತು. ಕೆಲವು ದಿನಗಳ ನಂತರ ಆಸ್ಪತ್ರೆಯಲ್ಲಿ ಚೆಕ್ ಮಾಡಿಸಿದಾಗ, 2 ತಿಂಗಳ ಗರ್ಭಿಣಿ ಎಂದು ತಿಳಿಯಿತು. 1971ರಲ್ಲಿ ಜಾರಿಯಾಗಿದ್ದ ಕಾಯ್ದೆಯ ಪ್ರಕಾರ ಅವಳು ಗರ್ಭಪಾತ ಮಾಡಿಸಿಕೊಳ್ಳುವಂತಿಲ್ಲ. ಯಾಕೆಂದರೆ ಅವಳು ವಿವಾಹಿತಳಲ್ಲ. ಆದರೆ ಈಗ ಕಾಯ್ದೆ ತಿದ್ದುಪಡಿಯಲ್ಲಿ ವಿವಾಹಿತ ಮಹಿಳೆ ಎಂಬ ಕರಾರನ್ನು ತೆಗೆಯಲಾಗಿದೆ. ಹೀಗಾಗಿ ಗರ್ಭ ನಿರೋಧಕದ ವೈಫಲ್ಯದಿಂದ ಗರ್ಭಿಣಿಯಾದ ಯವುದೇ ಮಹಿಳೆ ಕಾನೂನು ಬದ್ಧವಾಗಿ ಗರ್ಭಪಾತ ಮಾಡಿಸಿಕೊಳ್ಳಬಹುದು.
ಶಾಂತಾ ಎಂಬ 16 ವರ್ಷದ ಹುಡುಗಿ, ತಾಯಿಯ ಜೊತೆ ಉಪನಗರದಲ್ಲಿ ವಾಸಿಸುತ್ತಿದ್ದಳು. ತಾಯಿ ಕೆಲಸಕ್ಕೆ ಹೊರಗೆ ಹೋದಾಗ ದುರಾದೃಷ್ಟವಶಾತ್ ಆಕೆ ಅತ್ಯಾಚಾರಕ್ಕೆ ಒಳಗಾದಳು. ಕೆಲವು ತಿಂಗಳುಗಳ ನಂತರ ಶಾಂತಾಳ ತಾಯಿ ಮಗಳಲ್ಲಾಗುವ ದೈಹಿಕ ಬದಲಾವಣೆಗಳನ್ನು ಗಮನಿಸಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದಾಗ ಆವಳು 22 ವಾರಗಳ ಗರ್ಭಿಣಿ ಎಂದು ಗೊತ್ತಾಯಿತು. ಹಳೆಯ ಕಾಯ್ದೆಯ ಪ್ರಕಾರ ಆಕೆಗೆ ಗರ್ಭಪಾತ ಮಾಡಲು ಸಾಧ್ಯವಿಲ್ಲ. ಆದರೆ, ಈಗ ಆ ಕಾಯ್ದೆಗೆ ತಿದ್ದುಪಡಿ ಆಗಿರುವುದರಿಂದ, ಕಾನೂನುಬದ್ಧವಾಗಿಯೇ ಸುರಕ್ಷಿತ ಗರ್ಭಪಾತ ಸೇವೆಯನ್ನು ಪಡೆಯಬಹುದು.
ಡಾ, ರತ್ನಮಾಲಾ ಎಮ್. ದೇಸಾಯಿ,
ಸುಜಾತಾ ಎಸ್. ಆನಿಶೆಟ್ಟರ