Advertisement

ಡ್ರೈ ಕ್ಲಚ್/ ವೆಟ್ ಕ್ಲಚ್ ವ್ಯತ್ಯಾಸಗಳೇನು?

01:20 AM Jul 05, 2019 | mahesh |

ಗೇರ್‌ ಇರುವ ವಾಹನಗಳಲ್ಲಿ ಕ್ಲಚ್ ಇರುವುದು ಸಾಮಾನ್ಯ. ಬೈಕ್‌ಗಳಲ್ಲೂ ಕ್ಲಚ್‌ಗಳಿರುತ್ತವೆ. ಎಂಜಿನ್‌ ಮತ್ತು ಚಕ್ರದ ನಡುವಿನ ಸಂಪರ್ಕವನ್ನು ತಪ್ಪಿಸಿ, ಎಂಜಿನ್‌ ವೇಗಕ್ಕೆ ತಕ್ಕಂತೆ ಶಕ್ತಿಯನ್ನು ಚಕ್ರಕ್ಕೆ ವರ್ಗಾಯಿಸುವುದು ಇದರ ಕೆಲಸ. ಬೈಕ್‌ಗಳಲ್ಲಿ ವೆಟ್ಕ್ಲಚ್ ಮತ್ತು ಡ್ರೈ ಕ್ಲಚ್ ಎಂಬ ಎರಡು ಮಾದರಿಗಳಿದ್ದು, ಬಳಕೆಯ ಸಂದರ್ಭಗಳು ಪ್ರತ್ಯೇಕವಾಗಿವೆ. ಈ ಮಾದರಿಯ ಕ್ಲಚ್ ವಿಶೇಷತೆಗಳೇನು ನೋಡೋಣ.

Advertisement

ವೆಟ್ ಕ್ಲಚ್
ಇದೊಂದು ಸಾಂಪ್ರಾದಯಿಕ ಕ್ಲಚ್. ಈ ಮಾದರಿಯಲ್ಲಿ ಕ್ಲಚ್ ಎಂಜಿನ್‌ ಒಳಗಿದ್ದು, ಆಯಿಲ್ನಲ್ಲಿ ಮುಳುಗಿರುತ್ತದೆ. ಹೆಚ್ಚಿನ ಎಲ್ಲ ಬೈಕ್‌ಗಳು ಇದೇ ಮಾದರಿಯ ಕ್ಲಚ್‌ಗಳನ್ನು ಹೊಂದಿರುತ್ತವೆ. ಕ್ಲಚ್‌ನ ಪ್ರಶರ್‌ ಪ್ಲೇಟ್‌ಗಳು ಆಯಿಲ್ನಲ್ಲಿ ಮುಳುಗಿರುವುದರಿಂದ ಗಡುಸಾಗಿರದೆ, ಸುಲಭವಾಗಿ ಕ್ಲಚ್ ಬಳಕೆ ಮಾಡಬಹುದು. ಜತೆಗೆ ಹೆಚ್ಚಿನ ನಿರ್ವಹಣೆ ಬೇಕಾಗಿರುವುದಿಲ್ಲ. ಯಾವುದೇ ವಾತಾವರಣದಲ್ಲೂ ಇದಕ್ಕೆ ಹೆಚ್ಚಿನ ಸಮಸ್ಯೆಯಾಗದು. ಒಂದು ವೇಳೆ ಎಂಜಿನ್‌ ಆಯಿಲ್ ಕಡಿಮೆಯಾದರೆ, ಫ್ರೆಶರ್‌ ಪ್ಲೇಟ್ ಸವೆದಿದ್ದರೆ ಮಾತ್ರ ವೆಟ್ ಕ್ಲಚ್‌ನಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ಬೈಕ್‌ನ ಎಂಜಿನ್‌ ಆಯಿಲ್ ಖಾಲಿಮಾಡಿ ಎಂಜಿನ್‌ ಕವರ್‌ ತೆರೆದು, ಕ್ಲಚ್ ಅನ್ನು ಬದಲಾಯಿಸಬೇಕಾಗುತ್ತದೆ.

ಲಾಭ/ನಷ್ಟ
ಕ್ಲಚ್‌ನಲ್ಲಿ ಹೆಚ್ಚಿನ ಶಾಖ ಉತ್ಪಾದನೆಗೆ ಅವಕಾಶವಿಲ್ಲ. ಫ್ರಿಕ್ಷನ್‌ ಚೆನ್ನಾಗಿ ಇರುತ್ತದೆ. ಇದರಿಂದ ಗಿಯರ್‌ ಹಾಕುವುದು, ನಯವಾಗಿರುತ್ತದೆ. ಸ್ಲಿಪ್ಪಿಂಗ್‌ ಸಮಸ್ಯೆಯೂ ಕಡಿಮೆ. ನಿರ್ವಹಣೆ ವೆಚ್ಚ ಕಡಿಮೆ. ಆದರೆ ಸಮಸ್ಯೆ ಕಂಡುಬಂದರೆ ಎಂಜಿನ್‌ ಒಂದು ಭಾಗವನ್ನೇ ತೆರೆದು ನೋಡಬೇಕಾಗುತ್ತದೆ. ಹೊಸ ಕ್ಲಚ್ ಅಳವಡಿಸಬೇಕಾದರೆ ಹೆಚ್ಚು ಸಮಯ ಬೇಕಾಗುತ್ತದೆ.

ಡ್ರೈ ಕ್ಲಚ್
ಡ್ರೈ ಕ್ಲಚ್‌ನ ಕಾರ್ಯಾಚರಣೆ ಸಂಪೂರ್ಣ ಭಿನ್ನ. ಇದು ವಾತಾವರಣಕ್ಕೆ ತೆರೆದು ಕೊಂಡಿರುತ್ತವೆ. ಅರ್ಥಾತ್‌ ಬೈಕ್‌ ಎಂಜಿನ್‌ ಹೊರಭಾಗದಲ್ಲಿ ಕಾಣುವಂತೆ ಇರುತ್ತದೆ. ಇದು ಆಯಿಲ್ನಲ್ಲಿ ಮುಳುಗಿರುವುದಿಲ್ಲ. ಯಾವುದೇ ರೀತಿಯ ಆಯಿಲ್ ಕೂಡ ಇದಕ್ಕೆ ಅಗತ್ಯವಿಲ್ಲ, ಸೀಲಿಂಗ್‌ ಕೂಡ ಬೇಡ. ಡ್ರೈ ಕ್ಲಚ್‌ಗಳನ್ನು ಹೆಚ್ಚಾಗಿ ರೇಸಿಂಗ್‌ ಬೈಕ್‌ಗಳಲ್ಲಿ ಬಳಸಲಾಗುತ್ತದೆ. ರೇಸ್‌ ನಡೆಯುವ ವೇಳೆ ಕ್ಲಚ್ ಹಾಳಾಗಿದ್ದಲ್ಲಿ, ಡ್ರೈ ಕ್ಲಚ್‌ಗಳ ನಿರ್ವಹಣೆ ಮತ್ತು ತೆಗೆದು ಹಾಕುವುದು ತುಂಬ ಸುಲಭವಾಗುತ್ತದೆ. ಅತಿ ಕಡಿಮೆ ಸಮಯದಲ್ಲಿ ರಿಪೇರಿಯಾಗಬೇಕಿರುವುದರಿಂದ ವೆಟ್ ಕ್ಲಚ್ ಆದರೆ ಆಯಿಲ್, ಎಂಜಿನ್‌ ಕವರ್‌ ತೆರೆಯಬೇಕಿರುವುದರಿಂದ ಡ್ರೈ ಕ್ಲಚ್ ನಿರ್ವಹಣೆ ಅತ್ಯಂತ ಸುಲಭವಾಗಿರುತ್ತದೆ. ಈ ಮಾದರಿಯ ಕ್ಲಚ್‌ನಲ್ಲಿ ಕ್ಲಚ್ ಪ್ಲೇಟ್‌ಗಳು ತಿರುಗುವುದು, ಸ್ಪ್ರಿಂಗ್‌ಗಳ ಚಲನೆ ಕಣ್ಣಿಗೆ ಕಾಣಿಸುತ್ತದೆ.

ಲಾಭ/ನಷ್ಟ
ರಿಪೇರಿಗೆ ಸುಲಭ. ಎಂಜಿನ್‌ನ ಭಾಗ ತೆಗೆಯ ಬೇಕೆಂದೇನಿಲ್ಲ. ರೇಸಿಂಗ್‌ ತಂಡಗಳಿಗೆ ನಿರ್ವಹಣೆ ಅತ್ಯಂತ ಸುಲಭ. ಎಂಜಿನ್‌ ಆಯಿಲ್ ಹೆಚ್ಚು ಬಿಸಿಯಾಗುವುದಿಲ್ಲ. ಆದರೆ ದೊಡ್ಡ ಶಬ್ದ ಕೇಳಿಸುತ್ತದೆ. ಟ್ರ್ಯಾಕ್ಟರ್‌ ರೀತಿ ಬೈಕ್‌ ಶಬ್ದ ಕೇಳಬಹುದು. ನಿರ್ವಹಣೆ ಅತಿ ದುಬಾರಿ. ವಾತಾವರಣಕ್ಕೆ ತೆರೆದು ಕೊಂಡಿರುವುದರಿಂದ ಸ್ಪ್ರಿಂಗ್‌ ಇತ್ಯಾದಿಗಳು ಸಮಸ್ಯೆ ತಂದುಕೊಡುವ ಸಾಧ್ಯತೆಗಳು ಇರುತ್ತವೆ.

Advertisement

ಈಶ

Advertisement

Udayavani is now on Telegram. Click here to join our channel and stay updated with the latest news.

Next