Advertisement
ನಗರದಾದ್ಯಂತ ಲಕ್ಷಾಂತರ ಗಣಪತಿ ಮೂರ್ತಿಗಳು ಪ್ರತಿಷ್ಠಾಪನೆಯಾಗುತ್ತವೆ. ಅವುಗಳ ಪೈಕಿ ನಿತ್ಯ ಸಾವಿರಾರು ಗಣಪತಿಗಳು ನಗರದ ಕೆರೆಗಳಲ್ಲಿ ವಿಸರ್ಜನೆಯಾಗುತ್ತವೆ. ಆದರೆ, ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮತ್ತಿತರ ರಾಸಾಯನಿಕ ಅಂಶಗಳಿಂದ ನಿರ್ಮಿಸಲ್ಪಟ್ಟ ಗಣೇಶನ ಮೂರ್ತಿಗಳು ಮಾತ್ರ ನೀರಿನಲ್ಲಿ ಕರಗುವುದೇ ಇಲ್ಲ. ಹಾಗಾಗಿ, ಅವುಗಳ ವಿಲೇವಾರಿ ಕಾರ್ಯವು ಅನಿವಾರ್ಯವಾಗಿ ಅತ್ಯಂತ ನಿಕೃಷ್ಟವಾಗಿ ನಡೆಯುತ್ತದೆ.
Related Articles
Advertisement
ಹಾಗಿದ್ದರೆ, ಈ ನಿಟ್ಟಿನಲ್ಲಿ ಜಲಮೂಲಗಳನ್ನು ಕಲುಷಿತ ಮಾಡುತ್ತಿರುವವರು ಯಾರು? ಭಕ್ತರೋ ಅಥವಾ ಬಿಬಿಎಂಪಿಯೋ ಎಂದು ಪ್ರಶ್ನಿಸುತ್ತಾರೆ. ಆದರೆ, ಈ ಆರೋಪವನ್ನು ಬಿಬಿಎಂಪಿಯ ಅಧಿಕಾರಿಗಳು ತಳ್ಳಿಹಾಕುತ್ತಾರೆ. ಹಾನಿಯನ್ನು ತಡೆಯುವ ಉದ್ದೇಶದಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಈ ನೀರನ್ನು ಮತ್ತೆ ಕೆರೆಗಳಿಗೆ ಬಿಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎನ್ನುತ್ತಾರೆ.
ವಾಡಿಕೆಗಿಂತ ಕಡಿಮೆ ಮಳೆ: ಈ ವರ್ಷದ ಮುಂಗಾರಿನಲ್ಲಿ ನಗರದಲ್ಲಿ ವಾಡಿಕೆಗಿಂತ ಶೇ. 28ರಷ್ಟು ಕಡಿಮೆ ಮಳೆಯಾಗಿದೆ. ಬೆಂಗಳೂರು ಗ್ರಾಮಂತರ ಪ್ರದೇಶದಲ್ಲೂ ಶೇ. 31 ಕೊರತೆ ಇದೆ. ಹೀಗಾಗಿ, ಈ ಹಿಂದೆಗಿಂತಲೂ ಈ ಬಾರಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದ ಕೆರೆಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಈಗ ಪಿಒಪಿ ಗಣಪತಿ ಮೂರ್ತಿಯನ್ನು ಇಲ್ಲಿ ವಿರ್ಸಜನೆ ಮಾಡಿದರೆ ನೀರಿನ ಅಭಾವ ಮತ್ತಷ್ಟು ಹೆಚ್ಚಾಗಲಿದೆ ಎಂದು ತಜ್ಞರು ಎಚ್ಚರಿಸುತ್ತಾರೆ.
ಸಾಗಣೆ ಸಾಧ್ಯವೇ?: ಬಿಬಿಎಂಪಿ ಗಣೇಶ ಚತುರ್ಥಿ ಸಮಯದಲ್ಲಿ ಬಳಸುವ ಮೊಬೈಲ್ ಟ್ಯಾಂಕರ್ ಮತ್ತು ತಾತ್ಕಾಲಿಕ ಕಲ್ಯಾಣಿಗಳಲ್ಲಿನ ನೀರನ್ನು ಕೊಳಚೆನೀರು ಸಂಸ್ಕರಣಾ ಘಟಕ (ಎಸ್‌ಟಿಪಿ)ಗಳಿಗೆ ಕಳುಹಿಸಿ ಶುದ್ಧೀಕರಣ ಮಾಡುವುದು ಅಸಾಧ್ಯದ ಮಾತು. ನಗರದಲ್ಲಿ ಒಟ್ಟಾರೆ 24 ಘಟಕಗಳಿದ್ದು, ಇವು ನಾನಾ ಭಾಗಗಳಲ್ಲಿವೆ. ಗಣೇಶ ಮೂರ್ತಿಗಳು ಮತ್ತು ನೀರು ತುಂಬಿದ ಟ್ರ್ಯಾಕ್ಟರ್ ತೆಗೆದುಕೊಂಡು ಘಟಕದವರೆಗೆ ಹೋಗಬೇಕು. ಅದಕ್ಕೂ ಮುನ್ನ ಘಟಕಕ್ಕೆ ಕಳುಹಿಸಲು ಸೂಕ್ತವೇ ಎಂಬುದನ್ನು ಪರೀಕ್ಷಿಸಬೇಕಾಗುತ್ತದೆ. ಅಲ್ಲದೆ, ಟ್ಯಾಂಕರ್ ಚಾಲಕರು ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತಾರೆ.
ಎಸ್‌ಟಿಪಿ ಘಟಕಕ್ಕೂ ಟ್ಯಾಂಕರ್‌ಗಳನ್ನು ನಿಲ್ಲಿಸಿರುವ ಸ್ಥಳಕ್ಕೂ ಹಲವು ಕಿ.ಮೀ ದೂರದಲ್ಲಿರುತ್ತದೆ. ಮೊಬೈಲ್ ಟ್ಯಾಂಕರ್‌ಗಳಲ್ಲಿ ಕೆರೆಯಿಂದಲೇ ನೀರು ತುಂಬಿಕೊಂಡು ಬಂದಿರುತ್ತಾರೆ. ನಂತರ ಬಹುತೇಕರು ಪುನಃ ಅದೇ ಕೆರೆ ಅಥವಾ ಕಲ್ಯಾಣಿಗಳಿಗೆ ಸುರಿಯುತ್ತಾರೆ. ಟ್ಯಾಂಕರ್ ನೀರನ್ನು ಎಸ್‌ಟಿಪಿಗಳಿಗೆ ಸಾಗಿಸಿ ಶುದ್ಧ ಮಾಡಲಾಗುತ್ತದೆ ಎನ್ನುವುದು ಅನುಮಾನ ಎಂದು ಫ್ರೆಂಡ್ ಆಫ್ ಲೇಕ್ ಸಂಘಟನೆ ರಾಮ್‌ಪ್ರಸಾದ್ ದೂರುತ್ತಾರೆ.
ಈ ಬಾರಿ ಬಹುತೇಕ ಮಣ್ಣಿನ ಗಣಪತಿಗಳಿಗೆಮಾತ್ರ ಅವಕಾಶ ಮಾಡಿಕೊಟ್ಟಿರುವುದರಿಂದ ಟ್ಯಾಂಕರ್‌ಗಳಲ್ಲಿ ನೀರು ಕಲುಷಿತವಾಗುವ ಸಾಧ್ಯತೆಕಡಿಮೆ. ಕಲುಷಿತವಾಗುವ ನೀರನ್ನು ಎಸ್‌ಟಿಪಿಗೆ ಕಳುಹಿಸಲಾಗುವುದು. -ಸರ್ಫರಾಜ್ ಖಾನ್, ಜಂಟಿ ಆಯುಕ್ತ (ಘನತ್ಯಾಜ್ಯ) ಪಿಒಪಿ ಗಣೇಶ ಮಾರಾಟ ಮತ್ತು ಪ್ರತಿಷ್ಠಾಪನೆಗೆ ಬಿಬಿಎಂಪಿ ಯಾವುದೇ ಕಾರಣಕ್ಕೂ ಉತ್ತೇಜನ ನೀಡುವುದಿಲ್ಲ. ತಾತ್ಕಾಲಿಕ ಕಲ್ಯಾಣಿಗಳಲ್ಲೂ ಪಿಒಪಿ ಗಣೇಶನ ವಿಸರ್ಜನೆಗೆ ಅವಕಾಶ ನೀಡುವುದಿಲ್ಲ. ಇದನ್ನು ಬಿಬಿಎಂಪಿ ಸ್ಪಷ್ಟವಾಗಿ ಹೇಳಿದೆ.
-ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ(ನಿರ್ಗಮಿತ) * ಹಿತೇಶ್ ವೈ