Advertisement

ಹಾಸನ ಭೂ ಒತ್ತುವರಿ ಬಗ್ಗೆ ಸಿಎಂ ಮೌನವೇಕೆ?: ಬಿಎಸ್‌ವೈ

06:00 AM Sep 19, 2018 | Team Udayavani |

ಬೆಂಗಳೂರು: ಹಾಸನದಲ್ಲಿ ನಡೆದಿರುವ ಭೂ ಒತ್ತುವರಿ ಆರೋಪದ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಯಾಕೆ ಮೌನವಾಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪ ಪ್ರಶ್ನಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ದೇವೇಗೌಡರ ಕುಟುಂಬದಿಂದ ಹಾಸನದಲ್ಲಿ ಭೂ ಒತ್ತುವರಿಯಾಗಿದೆ ಎಂದು ಮಾಜಿ ಸಚಿವ ಎ.ಮಂಜು ಆರೋಪಿಸಿದ್ದಾರೆ. ಯಾರ್ಯಾರೋ ಜೂಜುಕೋರರು, ಇಸ್ಪೀಟು ದಂಧೆಕೋರರ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಈಗೇಕೆ ಮೌನ ವಹಿಸಿದ್ದಾರೆ.

Advertisement

ದೇವೇಗೌಡರದ್ದು ದಂಧೆಕೋರರ ಕುಟುಂಬ. ಈ ಕುಟುಂಬ ಆವತ್ತಿನಿಂದ ಇವತ್ತಿನವರೆಗೆ ಆಸ್ತಿ, ಪಾಸ್ತಿ ಕಬಳಿಸಿಕೊಂಡು ಬಂದಿದೆ. ಹೇಗೋ ಸಿಎಂ ಆಗಿದ್ದೇನೆ ಎಂದು ಕುಮಾರಸ್ವಾಮಿ ದರ್ಪದಿಂದ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. “ಬಿಜೆಪಿ ಬಗ್ಗೆ ಟೀಕೆ ಮಾಡುವ ನೀವು ಭ್ರಷ್ಟಾಚಾರ ಮಾಡುವುದರಲ್ಲಿ ಯಾರಿಗೆ ಕಡಿಮೆ ಇದ್ದೀರಿ. ಭೂ ಹಗರಣ ಬಗ್ಗೆ ನಾವು ಆರೋಪ ಮಾಡಿಲ್ಲ. ಮಾಜಿ ಸಚಿವ ಎ.ಮಂಜು ಆರೋಪ ಮಾಡಿದ್ದಾರೆ. ನಾಚಿಕೆಯಾಗಬೇಕು ನಿಮ್ಮ ನಡವಳಿಕೆಗೆ’ ಎಂದು ಸಿಎಂ ವಿರುದ್ಧ ಗುಡುಗಿದರು.

ಜಮೀನು ಕಬಳಿಕೆ: ತನಿಖೆಗೆ ಆಗ್ರಹ ಬೆಂಗಳೂರು: ಹಾಸನದಲ್ಲಿ ಸಚಿವ ಎಚ್‌.ಡಿ.ರೇವಣ್ಣ ಕುಟುಂಬದವರು ಸರ್ಕಾರಿ ಭೂಮಿ ಕಬಳಿಸಿರುವ ಕುರಿತು
ಮಾಜಿ ಸಚಿವ ಎ.ಮಂಜು ಮಾಡಿರುವ ಆರೋಪದ ಕುರಿತು ತನಿಖೆ ನಡೆಸಿ ಭೂಮಿ ಯನ್ನು ಸರ್ಕಾರ ವಶಕ್ಕೆ ಪಡೆಯಬೇಕೆಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿ ಅವರನ್ನು ಬಿಜೆಪಿ ಆಗ್ರಹಿಸಿದೆ. ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ
ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌, ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳದಿದ್ದಲ್ಲಿ ಪಕ್ಷದ ವತಿಯಿಂದ ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ ಹೇಳಿದರು. ಹಾಸನ ನಗರದ ಹೊರ ವಲಯದ ಗೌರಿಪುರ ಮತ್ತು ಸೋಮನ ಹಳ್ಳಿ ಕಾವಲ್‌ನಲ್ಲಿ ಸರ್ಕಾರಿ ಭೂಮಿಯ ದಾಖಲೆಗಳನ್ನು ತಿರುಚಿ 54.29 ಎಕರೆಯನ್ನು ಸಚಿವ ರೇವಣ್ಣ ಅವರು ವ್ಯಕ್ತಿಯೊಬ್ಬರಿಗೆ ಕಡಿಮೆ ಬೆಲೆಗೆ ಕೊಡಿಸಿದ್ದರು. ಬಳಿಕ ಈ ಭೂಮಿಯನ್ನು ರೇವಣ್ಣ ಪುತ್ರ ಪ್ರಜ್ವಲ್‌ ಹೆಸರಿಗೆ ಖರೀದಿಸ ಲಾಯಿತು ಎಂದು ಎ.ಮಂಜು ಆರೋಪಿ ಸಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಹಾಗೂ ಹಾಸನ ಡೀಸಿ ಮಧ್ಯಪ್ರವೇಶಿಸಿ ಪ್ರಕರಣದ ತನಿಖೆ ನಡೆಸಬೇಕು. ಜತೆಗೆ ಭೂಮಿಯನ್ನು ಮತ್ತೆ ಸರ್ಕಾರದ ವಶಕ್ಕೆ ಪಡೆಯಬೇಕೆಂದು ಆಗ್ರಹಿಸಿದರು.

ನಾವೇನೂ ಸನ್ಯಾಸಿಗಳಲ್ಲ. ಸಮ್ಮಿಶ್ರ ಸರ್ಕಾರ ಬಿದ್ದ ಮೇಲೆ ನಾವು ಸರ್ಕಾರ ಮಾಡ್ತೇವೆ. ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುವ ಲಕ್ಷಣಗಳಿವೆ. ಯಾರು ವಿಲನ್‌ ಎಂಬುದನ್ನು ಕುಮಾರಸ್ವಾಮಿಯವರೇ ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್‌ ನಾಯಕರಿಂದಲೇ ಸರ್ಕಾರ ಬೀಳುತ್ತದೆ. ಯಾರು ವಿದೇಶದಿಂದ, ಯಾರು ಸ್ವದೇಶದಿಂದ ಆಟ ಆಡಿದರು ಎಂಬುದು ಗೊತ್ತಿದೆ.
● ಆರ್‌.ಅಶೋಕ್‌, ಮಾಜಿ ಉಪ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next