ಪುರಾಣ ಎಂದರೆ ಹಿಂದೆ ನಡೆದಿದ್ದು. ಈಗ ನಮಗೆ ಸಿಕ್ಕಿರುವ ಈ ಪುರಾಣಗಳನ್ನು ರಮ್ಯ ಕಲ್ಪನೆಗಳಾಗಿ, ಕಾವ್ಯಾತ್ಮಕ ಬಳಕೆಗಳಿಗಾಗಿ ಸ್ವೀಕರಿಸಬಹುದು ಅಷ್ಟೇ. ಅವನ್ನು ಯಥಾವತ್ ನಂಬಲು ಸಾಧ್ಯವೇ ಇಲ್ಲ. ಈಗ ನಮಗೆ ದಕ್ಕಿರುವ ಪುರಾಣಗಳು ಇತಿಹಾಸವೇ ಆಗಿದ್ದರೂ, ಅವು ಪಡೆದುಕೊಂಡಿರುವ ರೂಪಗಳು, ಅಲ್ಲಿನ ಪವಾಡಸ್ವರೂಪಿ ಜೀವನ, ಈಗಿನ ಕಾಲಘಟ್ಟದಲ್ಲಿ ಸಂಪೂರ್ಣ ಅಸಹಜವಾಗಿ ಕಾಣುವ ಘಟನೆಗಳು, ವ್ಯಕ್ತಿಚಿತ್ರಗಳು, ತಂತ್ರಗಾರಿಕೆ…ಇವೆಲ್ಲದರ ಪರಿಣಾಮ ಅಲ್ಲಿ ಸತ್ಯ ಯಾವುದು, ಕಲ್ಪನೆ ಯಾವುದು ಎನ್ನುವುದನ್ನು ತಿಳಿಯಲು ಆಗದಂತೆ ಮಾಡಿಬಿಟ್ಟಿವೆ. ಮಹಾಭಾರತ ಅದಕ್ಕೊಂದು ಸ್ಪಷ್ಟ ಉದಾಹರಣೆ. ಹಾಗೆ ನೋಡಿದರೆ ರಾಮಾಯಣ ಈ ಪವಾಡಸದೃಶ ರೂಪದ ತೀವ್ರ ಪ್ರಭಾವಕ್ಕೆ ಒಳಗಾಗಿಲ್ಲ. ಅಲ್ಲಲ್ಲಿ ಅತಿಮಾನುಷತೆ ಕಾಣಿಸಿದರೂ, ಬಹುತೇಕ ಕಡೆ ವ್ಯಕ್ತಿಸಹಜ ಜೀವನವೇ ಇದೆ.
ಅತಿಮಾನುಷತೆಗಳೇನೆ ಇದ್ದರೂ, ಹಿಂದೆ ಏನಾಗಿದ್ದಿರಬಹುದು ಎಂಬುದನ್ನು ಭೂತಗನ್ನಡಿಯ ಮೂಲಕ ನೋಡಲು ಈ ಪುರಾಣಗಳು ನೆರವಾಗುತ್ತವೆ. ಮಹಾಭಾರತವನ್ನು ಅತೀಸೂಕ್ಷ್ಮ ಕಣ್ಣುಗಳಿಂದ ನಿರುಕಿಸಿದರೆ, ಅಲ್ಲೊಂದು ಅಸಾಮಾನ್ಯ ಇತಿಹಾಸ ತೆರೆದುಕೊಳ್ಳುತ್ತದೆ. ಅದರ ಅಕ್ಕಪಕ್ಕಗಳನ್ನು ಬದಿಗೆ ಸರಿಸಿಕೊಳ್ಳಬೇಕಷ್ಟೇ. ಗಾಂಧಾರಿ ಮಹಾಭಾರತದಲ್ಲಿ ನಮಗೆ ಸಿಗುವ ಅಮೂಲ್ಯ ಪಾತ್ರ. ಆಕೆಯನ್ನು ಒಪ್ಪಿಕೊಳ್ಳುವುದು, ತಿರಸ್ಕರಿಸುವುದು ಅವರವರ ವಿವೇಚನೆ. ಆಕೆ ಬದುಕು ಹೆಚ್ಚು ವಿಮರ್ಶೆ, ವಿಚಕ್ಷಣೆಗೊಳಪಡಲಿಲ್ಲ. ಕುಂತಿಗೆ ಹೋಲಿಸಿದರೆ ಬಹಳ ಜನಪ್ರಿಯವೂ ಅಲ್ಲ. ಅವಳ ಬದುಕಿನ ರೀತಿ ಅಸಾಮಾನ್ಯ ತ್ಯಾಗ, ಹಠಸಾಧನೆಯ ಕಥೆ ಹೇಳುತ್ತದೆ. ಆದರೆ ಈಕೆಯ ಮನಸ್ಸಿನಾಳದಲ್ಲಿ ಏನು ನಡೆಯುತ್ತಿತ್ತು ಎನ್ನುವುದನ್ನು ಬಿಚ್ಚಿ ಹೇಳಿಲ್ಲ. ಆಕೆಯ ಸ್ಥಿತಿಯಲ್ಲಿ ಅಂತರಂಗದ ಆಂದೋಲನಗಳು ಮಹಾಪರ್ವತದ ರೂಪ ತಾಳಿದ್ದರೇ ಅದನ್ನು ಸುಳ್ಳೆನ್ನಲು ಸಾಧ್ಯವಿಲ್ಲ. ಅದರ ರೂಪವೇನೆಂದು ಮಹಾಭಾರತದಲ್ಲಿ ಚರ್ಚೆಯಾಗಿಲ್ಲ.
ಈಕೆಯ ಮದುವೆಗೆ ಮುನ್ನ ಗಾಂಧಾರ (ಈಗಿನ ಅಫ್ಘಾನಿಸ್ತಾನ) ಮತ್ತು ಹಸ್ತಿನಾಪುರದ ನಡುವೆ ಘೋರಯುದ್ಧವಾಗಿತ್ತು. ಗಾಂಧಾರದಲ್ಲಿ ಧರ್ಮ ಸ್ಥಾಪಿಸುವುದು ನಮ್ಮ ಉದ್ದೇಶ ಎಂದು ಕುರುವಂಶಜರು ಹೇಳಿದರೂ, ಇದು ಕೇವಲ ಅಧಿಕಾರದಾಹ ಎಂದು ಗಾಂಧಾರದ ಯುವರಾಜ ಶಕುನಿ ಹೇಳುತ್ತಾನೆ. ಈ ಯುದ್ಧದಲ್ಲಿ ಸೆರೆಸಿಕ್ಕ 99 ಜನ ಸಹೋದರರು ಹಸ್ತಿನಾಪುರದ ಸೆರೆಮನೆಯಲ್ಲಿ ಸಾಯುತ್ತಾರೆ. ಉಳಿದಿದ್ದು ಶಕುನಿ ಮಾತ್ರ. ಇದೆಲ್ಲ ಮುಗಿದ ಮೇಲೆ ಭೀಷ್ಮ ಹೋಗಿ, ಗಾಂಧಾರಿಯನ್ನು ಧೃತರಾಷ್ಟ್ರನಿಗೆ ಮದುವೆ ಮಾಡಿಕೊಡಬೇಕೆಂದು ಸುಬಲನಿಗೆ ಕೇಳಿಕೊಳ್ಳುತ್ತಾನೆ. ಹುಟ್ಟುಕುರುಡನಿಗೆ ಮದುವೆ ಮಾಡಿಕೊಡುವುದಕ್ಕೆ ಆಕೆಯ ಅಣ್ಣ ಶಕುನಿ ಪೂರ್ಣ ವಿರೋಧಿಸುತ್ತಾನೆ! ತನ್ನ ಪತಿ ಕುರುಡ ಎಂದು ಗೊತ್ತಾದಾಗ ಅವಳು ತನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುತ್ತಾಳೆ, ಗಂಡನಿಗಿಲ್ಲದ ಸೌಭಾಗ್ಯ ತನಗೂ ಬೇಡವೆಂದು ದೂರವುಳಿಯುತ್ತಾಳೆ. ವಿಮರ್ಶಕರು ಅಂತಹ ಕುರುಡನನ್ನು ಮದುವೆಯಾಗುವಂತೆ ಒತ್ತಡ ಹೇರಿದ ಭೀಷ್ಮನ ವಿರುದ್ಧ ಇದು ಪ್ರತಿಭಟನೆ ಎನ್ನುತ್ತಾರೆ.
ಅದೇನೆ ಇರಲಿ, ಆಕೆ ಕೊನೆಯವರೆಗೂ ತನ್ನ ಕಣ್ಣಿಗೆ ಕಟ್ಟಿದ ಬಟ್ಟೆ ತೆರೆಯುವುದಿಲ್ಲ. ಒಂದೇ ಒಂದು ಬಾರಿ ಹೊರತುಪಡಿಸಿ. ಅದೂ ಮಗ ದುರ್ಯೋಧನ ಮೇಲಿನ ಪ್ರೀತಿಗೆ. ಇದರ ಪರಿಣಾಮವೇ ದುರ್ಯೋಧನ ಹಾಳಾಗಿದ್ದು ಎಂಬ ಟೀಕೆಗಳಿವೆ. ಕಣ್ಣೇ ಕಾಣದ ಅಪ್ಪ, ಕಂಡರೂ ಕಾಣಲು ಬಯಸದ ತಾಯಿ…ಮಗ ಹೇಗೆ ಸರಿದಾರಿಯಲ್ಲಿ ನಡೆಯಲು ಸಾಧ್ಯ? ಅಂತಹ ದುರ್ಯೋಧನನನ್ನು ಕೊಲ್ಲಲು ಸಾಧ್ಯವಾಗದಂತೆ, ತನ್ನ ತಪಶ್ಶಕ್ತಿಯನ್ನು ಆಕೆಧಾರೆಯೆರೆಯುತ್ತಾಳೆ. ಒಂದು ದಿನ ಆಕೆ ಬೆತ್ತಲೆಯಾಗಿ ಬರುವಂತೆ ದುರ್ಯೋಧನನಿಗೆ ತಿಳಿಸುತ್ತಾಳೆ. ಆದರೆ ದುರ್ಯೋಧನ ನಾಚಿಕೆಯಿಂದ ಸೊಂಟಕ್ಕೆ ಮಾತ್ರ ಬಾಳೆಯೆಲೆ ಕಟ್ಟಿರುತ್ತಾನೆ. ಗಾಂಧಾರಿ ತನ್ನ ದೃಷ್ಟಿಯನ್ನು ಪೂರ್ಣವಾಗಿ ಮಗನ ಶರೀರದ ಮೇಲೆ ಬೀರುತ್ತಾಳೆ. ಸೊಂಟ ಮಾತ್ರ ಆ ಭಾಗ್ಯದಿಂದ ವಂಚಿತವಾಗುತ್ತದೆ. ಮುಂದೆ ಭೀಮ, ದೃಷ್ಟಿ ತಾಕದ ತೊಡೆಗೆ ಹೊಡೆದು ಕೊಲ್ಲುತ್ತಾನೆ.
ಗಾಂಧಾರಿ ಮಹಾನ್ ತಪಸ್ವಿನಿ. ಆಕೆಯ ತಪಸ್ಸಿಗೆ ಮೆಚ್ಚಿ ಶಿವ ಅವಳಿಗೆ ನೂರು ಮಕ್ಕಳನ್ನು ಹೆರುವ ಶಕ್ತಿ ಬರಲಿ ಎಂದು ವರ ನೀಡುತ್ತಾನೆ. ಭೀಷ್ಮ ಈಕೆಯನ್ನು ತನ್ನ ವಂಶಕ್ಕೆ ತಂದುಕೊಳ್ಳಲು ಇದೇ ಕಾರಣ. 100 ಮಕ್ಕಳನ್ನು ಹೆರುವುದಾದರೆ ಕುರುವಂಶದ ಉಳಿವಿಗೆ ಧಕ್ಕೆಯೇ ಇಲ್ಲವಲ್ಲ?
-ನಿರೂಪ